ಬೆಳಗಾವಿ: ನಗರ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ ಸಭೆಯಲ್ಲಿ ಕಾರ್ಯಕರ್ತರ ನಡುವೆ ಗಲಾಟೆ ನಡೆದ ಘಟನೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆದಿದೆ.

ಎಐಸಿಸಿ ವೀಕ್ಷಕ ಮನೋಜ್ ಚವ್ಹಾಣ್ ನೇತೃತ್ವದಲ್ಲಿ ನೂತನ ಮಹಾನಗರ ಅಧ್ಯಕ್ಷರ ಆಯ್ಕೆಗಾಗಿ ಅಭಿಪ್ರಾಯ ಸಂಗ್ರಹಣೆ ಸಭೆ ನಡೆಯುತ್ತಿತ್ತು. ಈ ವೇಳೆ ಮಾಜಿ ಶಾಸಕ ರಮೇಶ್ ಕುಡಚಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಂದಾದಾಗ, ಶಾಸಕ ಆಸೀಫ್ ಸೇಠ್ ಹಾಗೂ ರಮೇಶ್ ಕುಡಚಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ಆರಂಭವಾಯಿತು.

ಮಾತಿನ ವಾಗ್ವಾದ ತೀವ್ರಗೊಂಡು ಕಾರ್ಯಕರ್ತರು ಕೈಕೈ ಮಿಲಾಯಿಸಿದರು. ಈ ವೇಳೆ ರಮೇಶ್ ಕುಡಚಿ ಬೆಂಬಲಿಗ ಹೇಮಂತ್ ಲಿಂಗಾಡೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಎಐಸಿಸಿ ನಾಯಕರು ಮನವಿ ಮಾಡಿದರೂ ಕಾರ್ಯಕರ್ತರು ಗಲಾಟೆ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾರ್ಕೆಟ್ ಠಾಣೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.







