ಸೆಂಟ್ರಲ್ ವಿಸ್ತಾ: ಪಾರಂಪರಿಕ ಕಟ್ಟಡಗಳ ಅಳಿವು-ಉಳಿವಿನ ಭವಿಷ್ಯ ದಿಲ್ಲಿ ಹೈಕೋರ್ಟ್ ಅಂಗಳದಲ್ಲಿ

ಒಂದೆಡೆ ಕೊರೋನಾದ ಎರಡನೇ ಅಲೆಯಿಂದ ದೇಶ ತತ್ತರಿಸುತ್ತಿದೆ. ಏಪ್ರಿಲ್ ನಿಂದೀಚೆಗೆ 1.2 ಕೋಟಿಗೂ ಅಧಿಕ ಕೋವಿಡ್ 19 ನ ಹೊಸ ಪ್ರಕರಣಗಳು ಪತ್ತೆಯಾಗಿವೆ. ಸುಮಾರು 1 ಲಕ್ಷ ಜನ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ.

ಇನ್ನೊಂದೆಡೆ, ದೇಶ ಕಂಡ ಅತಿ ದೊಡ್ಡ ಬಿಕ್ಕಟ್ಟಿನ ನಡುವೆಯೂ ದಿಲ್ಲಿಯ ‘ಸೆಂಟ್ರಲ್ ವಿಸ್ತಾ’ದ ಜೀರ್ಣೋದ್ಧಾರ ಯೋಜನೆಗೆ ಕೇಂದ್ರ ಸರಕಾರ ಆದ್ಯತೆ ನೀಡುತ್ತ 20 ಸಾವಿರ ಕೋಟಿ ರೂ. ಸುರಿಯುತ್ತಿದೆ. ಕೊರೋನಾ ಪೀಡಿತ ರೋಗಿಗಳಿಗೆ ಹಾಸಿಗೆಗಳು, ಆಮ್ಲಜನಕ, ವೈದ್ಯಕೀಯ ಅವಶ್ಯಕತೆಗಳನ್ನು ನೀಡಲು ಹಾಗೂ ಸ್ಮಶಾನಗಳಲ್ಲಿ ಅಂತಿಮ ಸಂಸ್ಕಾರ ವ್ಯವಸ್ಥೆಗಳನ್ನು ಸರಿಪಡಿಸುವ ಬದಲು ಸೆಂಟ್ರಲ್ ವಿಸ್ತಾ ಯೋಜನೆಯನ್ನು ಪೂರ್ಣಗೊಳಿಸಲು ಕೇಂದ್ರ ಸರಕಾರ ಆದ್ಯತೆ ನೀಡುತ್ತಿದೆ ಎಂಬ ಪ್ರತಿಪಕ್ಷಗಳ ಆಕ್ಷೇಪ. ಆದರೆ ಮೋದಿ ಸರಕಾರ ವಿಪಕ್ಷಗಳ ಸಲಹೆ, ಟೀಕೆಗಳಿಗೆ ಸೊಪ್ಪು ಹಾಕುತ್ತಿಲ್ಲ.

ಮತ್ತೊಂದೆಡೆ, ಕೋವಿಡ್ ಪಿಡುಗು ಇಡೀ ದೇಶವನ್ನೇ ವ್ಯಾಪಿಸಿದ್ದರೂ ದೇಶದ ರಾಜಧಾನಿಯಲ್ಲಿ ಸೆಂಟ್ರಲ್ ವಿಸ್ತಾದ ಕಾಮಗಾರಿ ಮುಂದುವರಿದಿದೆ. ಇದರಿಂದ ಇಲ್ಲಿ ಪ್ರತಿದಿನ ಕೆಲಸ ಮಾಡುವ ಕಾರ್ಮಿಕರ ಪ್ರಾಣವನ್ನು ಪಣಕ್ಕಿಡಲಾಗುತ್ತಿದೆ. ಅವರಿಗೂ ಕೋವಿಡ್ ಹರಡುವ ಸಂಭವಗಳಿವೆ. ಹೀಗಾಗಿ ‘ಸೆಂಟ್ರಲ್ ವಿಸ್ತಾ’ದ ಜೀರ್ಣೋದ್ಧಾರ ಯೋಜನೆಗೆ ತಡೆ ನೀಡಬೇಕು ಎಂದು ಹೈಕೋರ್ಟ್ ಗೆ ಎರಡನೇ ಬಾರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯೂ ನಡೆದಿದೆ. ತೀರ್ಪನ್ನೂ ಕಾಯ್ದಿರಿಸಿದೆ.

ನಿರ್ಮಾಣ ಕಾರ್ಯಗಳಿಗೆ ಮಧ್ಯಂತರ ತಡೆಗೆ ಕೋರಿಕೆ:

ಸೆಂಟ್ರಲ್ ವಿಸ್ತಾ ಜೀರ್ಣೋದ್ಧಾರ ಯೋಜನೆಯು ನೂತನ ಸಂಸತ್ ಭವನದ ನಿರ್ಮಾಣ, ಪ್ರಧಾನಿ ಮತ್ತು ಉಪರಾಷ್ಟ್ರಪತಿಗಳ ನಿವಾಸ ಮತ್ತು ಕಚೇರಿಗಳ ನಿರ್ಮಾಣ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ತನಕದ ಮೂರು ಕಿಮೀ ಉದ್ದದ ರಾಜಪಥದ ನವೀಕರಣವನ್ನು ಒಳಗೊಂಡಿದ್ದು, ಇದನ್ನು ಕೇಂದ್ರ ಸರಕಾರವು ‘ಅಗತ್ಯ ವಸ್ತುಗಳ ಕಾಯಿದೆ’ಯಡಿ ತಂದು ಕೊರೋನಾ ಕಾಲದಲ್ಲೂ ಕಾಮಗಾರಿ ಮುಂದುವರಿಸಿದೆ. ಇದರ ವಿರುದ್ಧ ದಿಲ್ಲಿ ನಿವಾಸಿಗಳಾದ ಭಾಷಾಂತರಕಾರರಾದ ಆನ್ಯಾ ಮಲ್ಹೋತ್ರಾ ಹಾಗೂ ಇತಿಹಾಸಜ್ಞ ಹಾಗೂ ಸಾಕ್ಷ್ಯಚಿತ್ರಕಾರ ಸೋಹೈಲ್ ಹಶ್ಮಿ ಎಂಬವರು ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿ, ಸೆಂಟ್ರಲ್ ವಿಸ್ತಾ ಯೋಜನೆಯ ನಿರ್ಮಾಣ ಕಾರ್ಯಗಳಿಗೆ ತಡೆ ನೀಡುವಂತೆ ಕೋರಿದ್ದರು.

ಮೂರು ಪಾರಂಪರಿಕ ಕಟ್ಟಡಗಳು ನೆಲಸಮ, ತೀವ್ರ ವಿರೋಧ:
ಸೆಂಟ್ರಲ್ ವಿಸ್ತಾ ಯೋಜನೆಯು ರಾಜಪಥದ ಹಸಿರು ಹಾಸುಗಳನ್ನು ಕಾಂಕ್ರೀಟ್ ಮಯವಾಗುವುದಕ್ಕೆ ಅವಕಾಶ ನೀಡುತ್ತದೆ ಎಂಬ ಟೀಕೆಗಳ ನಡುವೆಯೇ ದೇಶದ ರಾಜಧಾನಿಯ ಪ್ರಮುಖ ಸ್ಥಳಗಳಲ್ಲಿರುವ ಮೂರು ಪಾರಂಪರಿಕ ಕಟ್ಟಡಗಳನ್ನೂ ನೆಲಸಮ ಮಾಡಲಿದೆ. ನ್ಯಾಶನಲ್ ಮ್ಯೂಸಿಯಂ (ರಾಷ್ಟ್ರೀಯ ವಸ್ತುಸಂಗ್ರಹಾಲಯ), ನ್ಯಾಷನಲ್ ಆರ್ಕೆವ್ಸ್ ಆಫ್ ಇಂಡಿಯಾ (ಮುಖ್ಯ ಕಟ್ಟಡವಲ್ಲ, ಅನೆಕ್ಸ್ ಗಳನ್ನು ಮಾತ್ರ) (ಭಾರತದ ರಾಷ್ಟ್ರೀಯ ದಾಖಲೆಗಳ ಸಂಗ್ರಹಾಗಾರ) ಮತ್ತು ಇಂದಿರಾ ಗಾಂಧಿ ನ್ಯಾಶನಲ್ ಸೆಂಟರ್ ಫಾರ್ ಆರ್ಟ್ಸ್ (ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ) ಗಳ ಪಾರಂಪರಿಕ ಕಟ್ಟಡಗಳು ಕೂಡ ಇತಿಹಾಸದ ಪುಟಗಳನ್ನು ಸೇರಲಿವೆ.

ಇದಲ್ಲದೆ ಶಾಸ್ತ್ರೀ ಭವನ , ಕೃಷಿ ಭವನ, ವಿಜ್ಞಾನ ಭವನ, ಜವಾಹರ್ ಭವನ, ನಿರ್ಮಾಣ ಭವನ, ಉದ್ಯೋಗ ಭವನ, ರಕ್ಷಾ ಭವನ ಹಾಗೂ ಉಪರಾಷ್ಟ್ರಪತಿಗಳ ನಿವಾಸವೂ ಸೆಂಟ್ರಲ್ ವಿಸ್ತಾ ನಿರ್ಮಿಸಲು ಬಳಸಲಾಗುವ 4,58,820 ಚದರ ಮೀಟರ್ ಗಳ ಪ್ರದೇಶದಲ್ಲಿದ್ದು, ಅವುಗಳು ಕೂಡ ನೆಲಸಮವಾಗಲಿದೆ ಎಂದು ವರದಿಗಳು ತಿಳಿಸಿವೆ.

ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ 3800 ಪ್ರಾಜ್ಞರ ಕೋರಿಕೆ:

‘ಸೆಂಟ್ರಲ್ ವಿಸ್ತಾ’ದ ಜೀರ್ಣೋದ್ಧಾರ ಯೋಜನೆಗೆ ನ್ಯಾಶನಲ್ ಆರ್ಕೆವ್ಸ್ ಆಫ್ ಇಂಡಿಯಾದ (ಎನ್.ಎ.ಐ) ಮುಖ್ಯ ಕಟ್ಟಡ ಹೊರತುಪಡಿಸಿದ ಅನೆಕ್ಸ್ ಗಳನ್ನು ನೆಲಸಮ ಮಾಡುವ ಯೋಜನೆ ಅನುಷ್ಠಾನದ ಸಂದರ್ಭ ಪಾರದರ್ಶಕತೆ ಇರುವಂತೆ ನೋಡಿಕೊಳ್ಳಬೇಕೆಂದು ಎಂದು ದಾಖಲೆಗಳ ಸಂಗ್ರಾಹಕರು, ಬುದ್ಧಿಜೀವಿಗಳು, ಇತಿಹಾಸಜ್ಞರು, ವಿದ್ಯಾರ್ಥಿಗಳು ಮತ್ತಿತರರು ಕೇಂದ್ರ ಸರಕಾರವನ್ನು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದಾರೆ.

ಈ ಆನ್ ಲೈನ್ ಅರ್ಜಿಯಲ್ಲಿ ಜಗತ್ತಿನೆಲ್ಲೆಡೆಯ 3800 ಕ್ಕೂ ಆಧಿಕ ಬುದ್ಧಿಜೀವಿಗಳು, ಚಳವಳಿಗಾರರು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಮಹನೀಯರು ಸಹಿ ಹಾಕಿದ್ದು, ಆನ್ ಲೈನ್ ನಲ್ಲಿ ಸಾರ್ವಜನಿಕರಿಗೂ ಮುಕ್ತವಾಗಿದೆ.

ಸಾಂಕ್ರಾಮಿಕ ಪಿಡುಗಿನಿಂದ ದೇಶ ನಲುಗುತ್ತಿದ್ದರೂ ಕೇಂದ್ರ ಸರಕಾರವು ಯೋಜನೆಯನ್ನು ಮುಂದುವರಿಸುವುದೇ ಆದರೆ, ಆ ಪಕ್ರಿಯೆಯಲ್ಲಿ ಪಾರದರ್ಶಕತೆ ಇರುವುದು ಅಗತ್ಯ. ಜತೆಗೆ ಈ ಐತಿಹಾಸಿಕ ಉಗ್ರಾಣವನ್ನು ನೆಲಸಮ ಮಾಡುವಾಗ ಉದ್ಭವಿಸುವ ಅಸಂಖ್ಯ ಪ್ರಶ್ನೆಗಳಿಗೆ ಸರಕಾರ ಉತ್ತರಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಭಾರತದ ಕೆಲವು ಶತಮಾನಗಳ ದಾಖಲೆಗಳ ಆಗರ:

ನ್ಯಾಶನಲ್ ಆರ್ಕೆವ್ಸ್ ಆಫ್ ಇಂಡಿಯಾದಲ್ಲಿ ದೇಶದ ಕೆಲವು ಶತಮಾನಗಳ ದಾಖಲೆಗಳಿವೆ. 4.5 ಲಕ್ಷ ಕಡತಗಳು, 25 ಸಾವಿರ ಅಪರೂಪದ ಹಸ್ತಪ್ರತಿಗಳು, 1 ಲಕ್ಷಕ್ಕೂ ಅಧಿಕ ನಕ್ಷೆಗಳು, ಒಪ್ಪಂದಗಳು, 2.80 ಲಕ್ಷ ಆಧುನಿಕತೋತ್ತರ ದಾಖಲೆಗಳು, ಹಲವಾರು ಸಾವಿರ ಖಾಸಗಿ ಪತ್ರಗಳು ಕೂಡ ಅದರಲ್ಲಿವೆ. ಈ ದಾಖಲೆಗಳು ಸಹಜವಾಗಿಯೂ ನಾಜೂಕಾಗಿರುವಂಥದ್ದಾಗಿದ್ದು, ತಜ್ಞರು ಮಾತ್ರ ಇವುಗಳನ್ನು ಮುಟ್ಟಬಹುದು. ಈ ಪ್ರಕ್ರಿಯೆಯಲ್ಲಿ ಒಂದು ಸಣ್ಣ ವಸ್ತು ಅಥವಾ ದಾಖಲೆಗೆ ಹಾನಿ ಅಥವಾ ತೊಂದರೆ ಅದನ್ನು ಮತ್ತೆ ಸರಿ ಮಾಡಲಾಗದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ತಾತ್ಕಾಲಿಕ ಆರ್ಕೆವ್ಸ್ ಅನ್ನು ಎಲ್ಲಿ ಸ್ಥಾಪಿಸಲಾಗುತ್ತದೆ? ಅದು ಅಲ್ಲಿ ಪರಿಣತರಿಗಾಗಲಿ ಸಾಮಾನ್ಯರಿಗಾಗಲಿ ಲಭ್ಯವಾಗಲಿದೆ? ಈ ಎಲ್ಲ ಪ್ರಕ್ರಿಯೆಗಳನ್ನು ನಿರ್ವಹಿಸುವವರು ಯಾರು? ದಾಖಲೆಗಳಿಗೆ ಹಾನಿಯಾದರೆ ಅದಕ್ಕೆ ಯಾರು ಉತ್ತರದಾಯಿಗಳಾಗುತ್ತಾರೆ? ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನೂ ಅರ್ಜಿಯಲ್ಲಿ ಕೋರಲಾಗಿದೆ.

ಇತಿಹಾಸಜ್ಞರಾದ ಇಂದ್ರಾಣಿ ಚಟರ್ಜಿ, ಲಕ್ಷ್ಮಿ ಸುಬ್ರಮಣಿಯನ್, ಮೊಯಿದಿನ್ ಥೊಟ್ಟಸೆರಿ, ಪ್ರಸನ್ನನ್ ಪಾರ್ಥಸಾರಥಿ ಮುಂತಾದ 3800 ಕ್ಕೂ ಅಧಿಕ ಮಂದಿ ಈ ಅರ್ಜಿಗೆ ಸಹಿ ಹಾಕಿದ್ದಾರೆ.

ತೀರ್ಪು ಕಾದಿರಿಸಿದ ಹೈಕೋರ್ಟ್ :

ಸೆಂಟ್ರಲ್ ವಿಸ್ತಾ ಕಾಮಗಾರಿ ತಡೆಗೆ ಆನ್ಯಾ ಮಲ್ಹೋತ್ರಾ ಹಾಗೂ ಸೋಹೈಲ್ ಹಶ್ಮಿ ಅವರು ಸಲ್ಲಿಸಿದ್ದ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿರುವ ದಿಲ್ಲಿ ಹೈಕೋರ್ಟ್, ತೀರ್ಪನ್ನು ಸೋಮವಾರ ಕಾಯ್ದಿರಿಸಿದ್ದು, ಪ್ರಕರಣವು ಕುತೂಹಲ ಮೂಡಿಸಿದೆ. ಸೆಂಟ್ರಲ್ ವಿಸ್ತಾದ ಕಾಮಗಾರಿಯನ್ನು ಪ್ರಸ್ತುತ ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂದುವರಿಯಲು ಹೈಕೋರ್ಟ್ ಅನುವು ಮಾಡಿಕೊಡುವುದೆ ಇಲ್ಲವೇ ಎಂಬುದು ಭಾರಿ ನಿರೀಕ್ಷೆ ಮೂಡಿಸಿದೆ.
ಹೈಕೋರ್ಟ್ ವಿಚಾರಣೆ ವೇಳೆ ಪರ, ವಿರೋಧಗಳ ಚರ್ಚೆ ಬಿಸಿಯೇರಿತ್ತು. ಅರ್ಜಿದಾರರ ಪರ ವಾದ ಮಾಡುವ ಸಂದರ್ಭ, ಪೊಲೆಂಡ್ ನಲ್ಲಿನ ನಾಜಿಗಳ ಕಾನ್ಸಟ್ರೇಶನ್ ಕ್ಯಾಂಪ್ ಇದ್ದ ಆಶ್ವಿಟ್ಝ್ ಪಟ್ಟಣದ ಹೆಸರು ಕೂಡ ಪ್ರಸ್ತಾಪವಾಗಿತ್ತು ಮತ್ತು ಸೆಂಟ್ರಲ್ ವಿಸ್ತಾ ಯೋಜನೆಯನ್ನು ಸಾವಿನ ಕೋಟೆಯ ಕೇಂದ್ರ ಎಂದೂ ಹೇಳಲಾಯಿತು.

ನಿರ್ದಿಷ್ಟ ವ್ಯಕ್ತಿಗಳ ತಲೆಯಲ್ಲಿರುವ ಕೆಲವು ವಿಧದ ಅಹಂಗಳನ್ನು ತೃಪ್ತಿಪಡಿಸಲು ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಕೇಂದ್ರ ಸರಕಾರದ ಪರ ವಾದಕ್ಕೆ, ಸರಕಾರವು ಸಂದೇಶಕಾರರನ್ನು ಗುರಿಮಾಡುತ್ತಿದೆ, ಆದರೆ ಸಾರ್ವಜನಿಕ ಆರೋಗ್ಯದ ಸಂದೇಶದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅರ್ಜಿದಾರರ ಪರ ಉತ್ತರ ಸಿಕ್ಕಿತ್ತು.

ದೇಶದ ರಾಜಧಾನಿಯಲ್ಲಿ ಸೆಂಟ್ರಲ್ ವಿಸ್ತಾದ ಕಾಮಗಾರಿ ನಿತ್ಯವೂ ನಡೆಯುತ್ತಿರುವುದರಿಂದ ಇಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸೋಂಕು ತಗಲುವ ಅವಕಾಶಗಳು ಹೆಚ್ಚುತ್ತಿವೆ. ಹೀಗಾಗಿ ಈ ಯೋಜನೆಗೆ ತಡೆ ನೀಡಬೇಕು ಎಂಬ ಅರ್ಜಿದಾರರ ಬೇಡಿಕೆಗೆ ಉತ್ತರಿಸಿರುವ ಕೇಂದ್ರ ಸರಕಾರ, ಅರ್ಜಿದಾರರು ಕಾನೂನಿನ ಪ್ರಕ್ರಿಯೆಯ ನಿಂದನೆ ಮಾಡುತ್ತಿರುವುದರಿಂದ ಅರ್ಜಿಯನ್ನು ವಜಾ ಮಾಡುವಂತೆ ಆಗ್ರಹಿಸಿತ್ತು.
ಇದೀಗ ಕೋರ್ಟ್ ತೀರ್ಪು ಕಾಯ್ದಿರಿಸಿರುವುದರಿಂದ ಪ್ರಕರಣವು ಕುತೂಹಲ ಮೂಡಿಸಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...