ಲಸಿಕೆ ಬಿಕ್ಕಟ್ಟು: ಕಾಲದ ವಿರುದ್ಧದ ಸಮರದಲ್ಲಿ ಸೋಲುತ್ತಿದೆ ಭಾರತ..!

ಕರ್ನಾಟಕದಲ್ಲಿ ಲಸಿಕೆ ಹಾಹಾಕಾರ ಎಷ್ಟು ಗಂಭೀರವಾಗಿದೆ ಎಂದರೆ; ಮೇ 1ರಿಂದ ಮುಖ್ಯಮಂತ್ರಿ ಯಡಿಯೂರಪ್ಪ ತರಾತುರಿಯಲ್ಲಿ ಚಾಲನೆ ನೀಡಿದ್ದ 18-44 ವಯೋಮಾನದವರಿಗೆ ಲಸಿಕೆ ನೀಡುವ ಅಭಿಯಾನವನ್ನೇ ಸ್ಥಗಿತಗೊಳಿಸಲಾಗಿದೆ.

ಕಳೆದ ಒಂದು ವಾರದಿಂದ ರಾಜ್ಯದ ಮೂಲೆಮೂಲೆಯಲ್ಲಿ ಲಸಿಕೆ ಕೊರತೆಯಿಂದ ಬಹುತೇಕ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿಲ್ಲ ಎಂಬ ಬೋರ್ಡುಗಳು ನೇತಾಡುತ್ತಿದ್ದವು. ಕೇಂದ್ರ ಭರವಸೆ ನೀಡಿದ ಲಸಿಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಒಂದು ವಾರ ಕಾದುನೋಡಿದ ಸರ್ಕಾರ, ಕೊನೆಗೂ ಕೇಂದ್ರದಿಂದ ಯಾವುದೇ ಸ್ಪಂದನೆ ಸಿಗದೆ 18-44 ವಯೋಮಾನದವರಿಗೆ ಲಸಿಕೆ ನೀಡುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕೃತವಾಗಿ ಬುಧವಾರ ಘೋಷಿಸಿ ಕೈತೊಳೆದುಕೊಂಡಿದೆ. ಈಗಿರುವ ಲಸಿಕೆಗಳು, 45ವರ್ಷ ಮೇಲ್ಪಟ್ಟವರಲ್ಲಿ ಕೂಡ ನೋಂದಣಿ ಮಾಡಿಸಿಕೊಂಡ ಎಲ್ಲರಿಗೂ ನೀಡುವುದಿರಲಿ, ಕನಿಷ್ಟ ಎರಡನೇ ಡೋಸ್ ನೀಡಬೇಕಾದವರಿಗೆ ನೀಡುವಷ್ಟೂ ಲಸಿಕೆ ಇಲ್ಲ ಎಂದು ಸರ್ಕಾರವೇ ಹೇಳಿದೆ.

ಈ ನಡುವೆ, ರಾಜ್ಯ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರೇ, ಬುಧವಾರ ಕೇಂದ್ರದಿಂದ ಲಸಿಕೆಯ ವಿಷಯದಲ್ಲಿ ಸಹಕಾರ ಸಿಕ್ಕಿಲ್ಲ. ಹಾಗಾಗಿ, ರಾಜ್ಯ ಸರ್ಕಾರ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದಿಂದ ಲಸಿಕೆ ನೀಡಬೇಕಿದ್ದು, ಅದಕ್ಕಾಗಿ ಪ್ರತಿ 15 ದಿನಕ್ಕೊಮ್ಮೆ 15 ಲಕ್ಷ ಲಸಿಕೆಯನ್ನು ಕೇಂದ್ರ ರಾಜ್ಯಕ್ಕೆ ಪೂರೈಸಬೇಕು. ಆದರೆ, ಕಳೆದ 12 ದಿನದಲ್ಲಿ ಕೇವಲ 8 ಲಕ್ಷ ಪೂರೈಕೆ ಮಾಡಲಾಗಿದೆ. ಇನ್ನು 45 ವರ್ಷದ ಕೆಳಗಿನವರಿಗೆ ಲಸಿಕೆ ನೀಡುವ ಜವಾಬ್ದಾರಿಯನ್ನು ರಾಜ್ಯಕ್ಕೆ ವಹಿಸಲಾಗಿದ್ದು, ಅದಕ್ಕಾಗಿ 6 ಕೋಟಿ ಲಸಿಕೆ ಬೇಕಾಗುತ್ತವೆ. ರಾಜ್ಯ ಸರ್ಕಾರ ಈಗಾಗಲೇ 3 ಕೋಟಿ ಲಸಿಕೆಗೆ ಬೇಡಿಕೆ ಇಟ್ಟಿದ್ದು, ಆ ಪೈಕಿ ಕೇಲವ 7 ಲಕ್ಷ ಮಾತ್ರ ಸರಬರಾಜಾಗಿದೆ. ಹಾಗಾಗಿ, ಸದ್ಯಕ್ಕೆ 45 ವರ್ಷ ಕೆಳಗಿನವರಿಗೆ ಸಲಿಕೆ ನೀಡಿಕೆಯನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಹೀಗೆ ಲಸಿಕೆ ಅಭಿಯಾನ ತೀರಾ ಕನಿಷ್ಟ ಯೋಜನೆಯೂ ಇಲ್ಲದೆ, ಪೂರ್ವ ತಯಾರಿಯೂ ಇಲ್ಲದೆ, ಆರಂಭವಾಗಿ 50 ದಿನದಲ್ಲೇ ಮುಗ್ಗರಿಸಿದೆ. ಮುಖ್ಯವಾಗಿ, ಕೋಟ್ಯಂತರ ಲಸಿಕೆಯನ್ನು ವ್ಯಾಕ್ಸಿನ್ ಡಿಪ್ಲೊಮಸಿ ಹೆಸರಿನಲ್ಲಿ ನೆರೆಹೊರೆಯ ದೇಶಗಳಿಗೆ ಉಚಿತವಾಗಿ ನೀಡಿ, ಪ್ರಧಾನಿ ಮೋದಿಯವರ ವಿಶ್ವನಾಯಕ ವರ್ಚಸ್ಸು ವೃದ್ಧಿಗೆ ತೋರಿದ ಆಸಕ್ತಿಯನ್ನು ಕೇಂದ್ರ ಸರ್ಕಾರ, ದೇಶದಲ್ಲಿ ಲಸಿಕೆ ಮಾನದಂಡದ ಪ್ರಕಾರ ಅರ್ಹ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ದಾಸ್ತಾನು ಮಾಡಲು ತೋರದೇ ಇರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣ ಎಂಬುದನ್ನು ದಾರಿಹೋಕ ಕೂಡ ಗ್ರಹಿಸಬಲ್ಲ.

ಆದರೆ, ಬಿಜೆಪಿ ಮತ್ತು ಅದರ ಐಟಿ ಸೆಲ್ ಮಾತ್ರ ಮತ್ತದೇ ಹಸೀಸುಳ್ಳುಗಳು, ಕಟ್ಟುಕತೆಗಳ ಮೂಲಕ ಲಸಿಕೆ ಅಭಿಯಾನದ ವೈಫಲ್ಯವನ್ನು ದೇಶದ ಜನರ ತಲೆಗೆ ಕಟ್ಟುವ ನಾಚಿಕೆಗೇಡಿನ ಪ್ರಯತ್ನದಲ್ಲೇ ಮುಳುಗಿದೆ. ಆರಂಭದಲ್ಲಿ ಲಸಿಕೆಯ ವಿರುದ್ಧ ಅಪಪ್ರಚಾರ ನಡೆಸಿದ ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ಈಗ ಲಸಿಕೆ ಕೊರತೆ ಬಗ್ಗೆ ಬೊಬ್ಬೆ ಹೊಡೆಯುತ್ತಿವೆ ಎಂಬ ನಗೆಪಾಟಲಿನ ಪ್ರಶ್ನೆಯನ್ನು ಎತ್ತಿವೆ. ಆದರೆ, ಹೊಸ ಲಸಿಕೆಯೊಂದನ್ನು(ಕೋವಾಕ್ಸಿನ್) ನಿಗದಿತ ಪ್ರಯೋಗಗಳಿಗೆ ಮುಂಚೆಯೇ ಜನರಿಗೆ ನೀಡಲು ಮುಂದಾದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವುದು ದೇಶದ ಜನರ ಜೀವದ ದೃಷ್ಟಿಯಿಂದ ಯಾವುದೇ ಜವಾಬ್ದಾರಿಯುತ ಮಾಧ್ಯಮ ಮತ್ತು ಪ್ರತಿಪಕ್ಷಗಳ ಕರ್ತವ್ಯವಾಗಿತ್ತು ಎಂಬ ಸತ್ಯವನ್ನು ಅಂತಹ ಹೇಳಿಕೆಯ ಮೂಲಕ ಮರೆಮಾಚಲಾಗುತ್ತಿದೆ ಎಂಬುದು ಈ ಐಟಿ ಸೆಲ್ ಮತ್ತು ಮೋದಿ ಭಕ್ತರಿಗೆ ದೇಶದ ಜನರ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದಕ್ಕೆ ಸಾಕ್ಷಿ.

ಈ ನಡುವೆ, ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ದೇಶದ ಪ್ರಮುಖ ಪ್ರತಿಪಕ್ಷಗಳು, ದೇಶದಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕು ಎಂದು ಒತ್ತಾಯಿಸಿವೆ. ಹಣಕಾಸು ಹೊರೆಯ ನೆಪವೊಡ್ಡಿ ಕೇವಲ 45ವರ್ಷ ಮೇಲಟ್ಪವರಿಗೆ ಮಾತ್ರ ತಾನು ಲಸಿಕೆ ಒದಗಿಸುವುದಾಗಿಯೂ ಮತ್ತು ಉಳಿದವರಿಗೆ ಆಯಾ ರಾಜ್ಯ ಸರ್ಕಾರಗಳೇ ಲಸಿಕೆ ವೆಚ್ಚ ಭರಿಸಬೇಕು ಎಂದು ಕೇಂದ್ರ ಏಪ್ರಿಲ್ ನಲ್ಲಿ ಪ್ರಕಟಿಸಿತ್ತು. ಅದಾದ ಬೆನ್ನಲ್ಲೇ ಲಸಿಕೆ ಲಭ್ಯತೆಯ ಯಾವ ಅಂದಾಜನ್ನೂ ಮಾಡದೆ ಪ್ರಧಾನಿ ಮೋದಿ, ಮೇ 1ರಿಂದಲೇ ದೇಶಾದ್ಯಂತ 18 ರಿಂದ 44 ವರ್ಷ ವಯೋಮಾನದವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಜನರ ಜೀವ ಉಳಿಸುವ ಲಸಿಕೆ ಒದಗಿಸಲು ಹಣದ ಕೊರತೆಯ ನೆಪವೊಡ್ಡುವ ಚೌಕಿದಾರ್ ಮೋದಿಯವರು, ತಮ್ಮ ವಾಸದ ಭವ್ಯ ಬಂಗಲೆಯೂ ಸೇರಿದಂತೆ ಸೆಂಟ್ರಲ್ ವಿಸ್ತಾ ಎಂಬ ಹೊಸ ಸಂಸತ್ ಭವನ ಸಂಕೀರ್ಣಕ್ಕೆ, ಅದರ ತುರ್ತು ಅಗತ್ಯವೇ ಇಲ್ಲದೇ ಇದ್ದರೂ, ಬರೋಬ್ಬರಿ 20 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಗೆ ತುರ್ತು ಚಾಲನೆ ನೀಡಿದ್ದಾರೆ! ಸಹಜವಾಗೇ ಇಂತಹ ಜನವಿರೋಧಿ ಧೋರಣೆ ದೇಶಾದ್ಯಂತ ವ್ಯಾಪಕ ಖಂಡನೆ ಮತ್ತು ಜನಾಕ್ರೋಶಕ್ಕೆ ಕಾರಣವಾಗಿದೆ.

ಹಾಗೆ ನೋಡಿದರೆ, ದೇಶದ 18 ವರ್ಷ ಮೇಲ್ಪಟ್ಟ ಸುಮಾರು 84 ಕೋಟಿ ಜನರಿಗೆ ಲಸಿಕೆ ನೀಡಲು ಬೇಕಾಗುವುದು ಸುಮಾರು 68 ಸಾವಿರ ಕೋಟಿ ರೂ. ಅಷ್ಟೇ. ಅಂದರೆ, ಅದು ನಮ್ಮ ದೇಶದ ಒಟ್ಟು ಜಿಡಿಪಿಯ ಶೇ.0.36ರಷ್ಟಾಗಲಿದೆ(ಇಂಡಿಯಾ ರೇಟಿಂಗ್ಸ್ ಅಂಡ್ ರೀಸರ್ಚ್ ಪ್ರಕಾರ). ಅದರಲ್ಲೂ ಕೇಂದ್ರ ಸರ್ಕಾರ, ತಾನು 20,870 ಕೋಟಿ ಮಾತ್ರ ಭರಿಸಲಿದ್ದು, ಉಳಿದ 46,323 ಕೋಟಿಯಷ್ಟು ಮೊತ್ತವನ್ನು ರಾಜ್ಯ ಸರ್ಕಾರಗಳು ಭರಿಸಬೇಕು ಎಂದು ಹೇಳಿದೆ. ಹಾಗಾಗಿ, ಕೇಂದ್ರದ ಬಜೆಟ್ ನ ಶೇ.0.12ರಷ್ಟು ಮಾತ್ರ ಕೇಂದ್ರದ ಹೊರೆಯಾಗಲಿದ್ದು, ಉಳಿದ ಶೇ.0.24ರಷ್ಟು ಮೊತ್ತ ಎಲ್ಲಾ ರಾಜ್ಯಗಳ ಬಜೆಟ್ ಹಂಚಿಕೆಯಲ್ಲಿ ಹಂಚಿಹೋಗುತ್ತದೆ. ಅಷ್ಟಾಗಿಯೂ ಕನಿಷ್ಟ ದೇಶದ ಜಿಡಿಪಿಯ ಶೇ.0.36ರಷ್ಟು ಅತ್ಯಲ್ಪ ಪ್ರಮಾಣದ ಹಣವನ್ನು ಕೂಡ ದೇಶದ ಜನರ ಪ್ರಾಣ ರಕ್ಷಣೆಯ ಲಸಿಕೆ ಅಭಿಯಾನಕ್ಕೆ ನೀಡಲು ಪ್ರಧಾನಿ ಮೋದಿಯವರು ನಿರಾಕರಿಸುವ ಮೂಲಕ ತಮ್ಮ ಆದ್ಯತೆ ಜನರ ಜೀವವಲ್ಲ; ಬದಲಾಗಿ ತಮ್ಮ ವರ್ಚಸ್ಸು ಬೆಳೆಸುವ ಸೆಂಟ್ರಲ್ ವಿಸ್ತಾದಂತಹ ಯೋಜನೆಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಅವರ ಅಂತಹ ಧೋರಣೆಯ ಪರಿಣಾಮವಾಗಿ ಈಗ ಕರ್ನಾಟಕದಲ್ಲಿ ಮಾತ್ರವಲ್ಲ; ಇಡೀ ದೇಶಾದ್ಯಂತ ಲಸಿಕೆಗಾಗಿ ಹಾಹಾಕಾರ ಉಂಟಾಗಿದ್ದು, ಈಗಾಗಲೇ ಮಹಾರಾಷ್ಟ್ರ ಮತ್ತಿರರ ರಾಷ್ಟ್ರಗಳು 18-44 ವಯೋಮಾನದವರ ಲಸಿಕೆ ಅಭಿಯಾನ ನಿಲ್ಲಿಸಿವೆ. ಇದೀಗ ಕರ್ನಾಟಕ ಕೂಡ ಅದೇ ಹಾದಿ ತುಳಿದಿದೆ.

ಈ ನಡುವೆ, ದೇಶದಲ್ಲಿ 44 ವರ್ಷ ಮೇಲ್ಪಟ್ಟ ಸುಮಾರು 34 ಕೋಟಿ ಜನರಿಗೆ ಸಂಪೂರ್ಣ ಲಸಿಕೆ ನೀಡಲು ಕೂಡ, ಲಸಿಕೆ ಲಭ್ಯತೆಯ ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಕನಿಷ್ಟ ಮೂರು ವರ್ಷಗಳೇ ಬೇಕಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ಈಗ ಒಂದೊಂದೇ ರಾಜ್ಯಗಳು ಸ್ಥಗಿತಗೊಳಿಸುತ್ತಿರುವ 18 ವರ್ಷ ಮೇಲ್ಪಟ್ಟವರ ಗುಂಪಿನ ಸುಮಾರು 50 ಕೋಟಿ ಮಂದಿಗೆ ಲಸಿಕೆ ನೀಡಬೇಕು. ಜೊತೆಗೆ ಎರಡು ವರ್ಷ ಮೇಲ್ಟಟ್ಟ ಮಕ್ಕಳು ಸೇರಿದಂತೆ ಎಲ್ಲರಿಗೂ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು. ಏಕೆಂದರೆ ಮೂರನೇ ಅಲೆ ಎರಡನೇ ಅಲೆಗಿಂತ ಮಾರಣಾಂತಿಕವಾಗಿರಲಿದ್ದು, ಅದರಲ್ಲೂ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.

 ಈ ನಡುವೆ, ಮೊದಲ ಲಸಿಕೆ ಪಡೆದ 6-8 ವಾರಗಳ ಮಿತಿಯಲ್ಲಿ ಎರಡನೇ ಡೋಸ್ ಸಲಿಕೆ ಪಡೆಯಬೇಕಿದೆ. ಇಲ್ಲವಾದಲ್ಲಿ ಅದು ನಿರೀಕ್ಷಿತ ಮಟ್ಟದಲ್ಲಿ ವೈರಸ್ ವಿರುದ್ಧ ಕೆಲಸ ಮಾಡುವುದಿಲ್ಲ ಎಂಬ ಅಭಿಪ್ರಾಯವೂ ಇದೆ. ಜೊತೆಗೆ ಈ ಎರಡೂ ಡೋಸ್ ಲಸಿಕೆ ಪಡೆದ ಬಳಿಕ, ವೈರಸ್ ವಿರುದ್ಧ ಅದು ಶಕ್ತಿಶಾಲಿ ಎನಿಸುವುದು ಕೇವಲ ಒಂದರಿಂದ ಒಂದೂವರೆ ವರ್ಷ ಕಾಲ ಮಾತ್ರ. ಆ ಬಳಿಕ ಮತ್ತೆ ದೇಶದ ಎಲ್ಲರಿಗೂ ಲಸಿಕೆ ನೀಡಬೇಕಾಗುತ್ತದೆ. ಹಾಗಾಗಿ ಲಸಿಕೆ ನೀಡಿಕೆ ಎಂಬುದು ಕರೋನಾ ವೈರಾಣು ಇರುವವರೆಗೆ ಇನ್ನು ವಾರ್ಷಿಕ ಬಜೆಟ್ ಹೊರೆಯೇ!

ಆದರೆ, ಸದ್ಯದ ಅಧಿಕೃತ ಅಂಕಿಅಂಶಗಳನ್ನು ಗಮನಿಸುವುದಾದರೆ; ಭಾರತ ದಿನವೊಂದಕ್ಕೆ 17-18 ಲಕ್ಷ ಲಸಿಕೆಗಳನ್ನು ನೀಡುತ್ತಿದ್ದು, ಕಳೆದ ಹದಿನೈದು ದಿನಗಳಲ್ಲಿ 40 ಲಕ್ಷದಷ್ಟಿದ್ದ ದೈನಂದಿನ ಲಸಿಕೆ ನೀಡಿಕೆ ಪ್ರಮಾಣದಲ್ಲಿ ಭಾರೀ ಕುಸಿತವಾಗಿದೆ. ಒಂದು ಕಡೆ ಲಸಿಕೆಗಾಗಿ ಕೋವಿಲ್ ಆ್ಯಪ್ ಮೂಲಕ ನೋಂದಾಯಿಸಿಕೊಳ್ಳುವವರ ಸಂಖ್ಯೆ ಪ್ರತಿದಿನ ಕೋಟ್ಯಂತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದರೆ, ಲಸಿಕೆ ಕೊರತೆಯಿಂದಾಗಿ ನೀಡಿಕೆ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ನೋಂದಣಿಯಾಗಿರುವ ಜನರಿಗೆ ಲಸಿಕೆ ನೀಡಲು ಕೂಡ ಕನಿಷ್ಟ ಆರು ತಿಂಗಳು ಬೇಕಾಗಬಹುದು ಎನ್ನಲಾಗುತ್ತಿದೆ.

ಇಂತಹ ಬಿಕ್ಕಟ್ಟಿನ ನಡುವೆ, ಇದೀಗ ಎರಡನೇ ಅಲೆಯ ಹಾನಿ ಕಡಿತ ಮಾಡಲು ಲಸಿಕೆಯೇ ಪ್ರಮುಖ ಅಸ್ತ್ರವಾಗಿದ್ದು ಕನಿಷ್ಟ 20 ಶೇ.ಜನರನ್ನಾದರೂ ನಾವು ಪೂರ್ಣ ಪ್ರಮಾಣದ ಲಸಿಕೆ ನೀಡುವ ಮೂಲಕ ಸಮುದಾಯದ ರೋಗನಿರೋಧಕತೆ(ಹರ್ಡ್ ಇಮ್ಯುನಿಟಿ) ವೃದ್ಧಿಸಬೇಕಿದೆ. ಆ ಕೆಲಸವನ್ನು ಎಷ್ಟು ಬೇಗ ಮಾಡುತ್ತೇವೆಯೋ ಅಷ್ಟು ಬೇಗ ಎರಡನೇ ಅಲೆಯ ಅಟ್ಟಹಾಸ ತಗ್ಗಿಸಬಹುದು. ಹಾಗೇ ಇದಕ್ಕಿಂತ ಭಯಾನಕ ಮೂರನೇ ಅಲೆ ಬರದಂತೆ ತಡೆಯಬಹುದು. ಆದರೆ, ಒಂದು ಕಡೆ ದೇಶದ ಪ್ರಮುಖ ಎರಡು ಲಸಿಕೆ ತಯಾರಿಕಾ ಕಂಪನಿಗಳಾದ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಕಂಪನಿಗಳು ಸದ್ಯದ ವೇಗದ ಉತ್ಪಾದನೆಯನ್ನು ಪರಿಗಣಿಸಿದರೆ, ಇಂತಹ ಸವಾಲಿನಲ್ಲಿ ನಾವು ಗೆಲ್ಲುವುದು ಅನುಮಾನಾಸ್ಪದ ಎಂಬ ಅಭಿಪ್ರಾಯಗಳಿವೆ.

ಹಾಗಾಗಿ, ಲಸಿಕೆ ಎಂಬುದು ಭಾರತದ ಮಟ್ಟಿಗೆ ಸದ್ಯಕ್ಕೆ ಹಣದ ಹೊರೆಯ ವಿಷಯವಷ್ಟೇ ಅಲ್ಲ; ಬದಲಾಗಿ ಕಾಲದ ವಿರುದ್ಧ ಓಟದ ಸವಾಲು. ಆದರೆ, ಅಂತಹ ಸವಾಲಿನ ಹೊತ್ತಿನಲ್ಲಿ, ದೇಶದ ಆಡಳಿತ ಐಷಾರಾಮಿ ಸೆಂಟ್ರಲ್ ವಿಸ್ತಾದ ಕಡೆ ಗಮನ ನೆಟ್ಟಿದೆ ಮತ್ತು ಚೌಕಿದಾರ ಪ್ರಧಾನಿ ಮೋದಿಯವರು ಕಳೆದ ಹಲವು ದಿನಗಳಿಂದ ದೇಶದ ಭೀಕರ ಸಂಕಷ್ಟಕ್ಕೆ ಬೆನ್ನು ತಿರುಗಿಸಿ, ನಿಗೂಢ ಮೌನಕ್ಕೆ ಶರಣಾಗಿದ್ದಾರೆ!

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...