ಕರೋನಾ ನಿಯಂತ್ರಿಸಲು ಗ್ರಾಮ ಭಾರತದಲ್ಲಿ ಆಗಬೇಕಾದುದೇನು?

– ಜಿ ಟಿ ಸತ್ಯನಾರಾಯಣ

ದೇಶದ ಪ್ರಧಾನಮಂತ್ರಿಗಳು ಮೊನ್ನೆ ರಾಜ್ಯದ ಆಯ್ದ ಜಿಲ್ಲಾಧಿಕಾರಿಗಳ ಜತೆ ನಡೆಸಿದ ಆನ್ಲೈನ್ ಮೀಟಿಂಗ್ ನಲ್ಲಿ ಕರೋನಾ ವಿರುದ್ಧ ಹೋರಾಟ ಪ್ರತಿ ಹಳ್ಳಿ-ಹಳ್ಳಿಯಿಂದಲೂ ಆಗಬೇಕು. ಅದಕ್ಕೆ ಕರೋನಾ ವಾರಿಯರ್ಸ್ ಸೇನಾ ಕಮಾಂಡರ್ ರೀತಿಯಲ್ಲಿ ಹೋರಾಡಬೇಕು ಎಂದು ಕರೆ ಕೊಟ್ಟಿದ್ದಾರೆ. 

ಪ್ರಧಾನಿ ಮೋದಿಯವರು ಕರೆ ಕೊಟ್ಟದ್ದೇನೋ ಸರಿ. ಆದರೆ, ನಿಜವಾಗಿಯೂ ಪ್ರತಿ ಹಳ್ಳಿಯೂ ಪ್ರತಿರೋಧಕ ಘಟಕಗಳಾಗಿ ಬಲವರ್ಧನೆ ಆದಾಗ ಮಾತ್ರ ಕರೋನಾ ಕಟ್ಟಿ ಹಾಕಬಹುದು. ಅಷ್ಟರಮಟ್ಟಿಗೆ ಅವರ ಚಿಂತನೆ ಮತ್ತು ಕರೆ ಸರಿ ಇದೆ. ಆದರೆ, ಅದು ಜಾರಿಗೆ ಬರಲು ಯೋಜನೆ ಬೇಕು. 

ಹಾಗಾದರೆ ಈಗಿರುವ ಸರ್ಕಾರದ ಯೋಜನೆ ಮತ್ತು ಕಾರ್ಯಭಾರ ಹೇಗಿದೆ ಎಂದು ನೋಡಿದರೆ ನಿರಾಶೆ ಹೋರಾತಾಗಿ ಬೇರೇನೂ ಕಾಣುವುದಿಲ್ಲ.

ಗ್ರಾಮ ಮಟ್ಟದಲ್ಲಿ ಕರೋನಾ ವಿರುದ್ಧ ಸಮರ ಸಾರುವ ಪ್ರಧಾನಿಗಳ ಯೋಚನೆ ಸರಿ ಇದೆ. ಆ ಯೋಚನೆ ಅವರಿಗೆ ಬರುವುದು ಅತ್ಯಂತ ತಡವಾಗಿದೆ. ಮೊದಲನೆಯದು, ಅಲೆ ಕಳೆದ ವರ್ಷ ಬಂದಾಗ ಅದನ್ನು ಎದುರಿಸುವುದು ದೊಡ್ಡ ಜಿಜ್ಞಾಸೆ ಆಗಿತ್ತು. ಆಗ ದೇಶದ ಪ್ರಧಾನಿಗಳು ಜಾರಿಗೆ ತರಲು ಬಯಸಿದ್ದು ಕೇಂದ್ರೀಕೃತವಾದ ಯೋಜನೆ. ಅದರ ಬಿರುಸು ಹೇಗಿತ್ತು ಅಂದರೆ ಸ್ವತಃ ಪ್ರಧಾನಿಗಳು 18 ದಿನದಲ್ಲಿ ಕರೋನಾ ಕಟ್ಟಿ ಹಾಕುವುದಾಗಿ ಘೋಷಣೆ ಮಾಡಿ, ಅದಕ್ಕೆ ಮಹಾಭಾರತದ ಕುರುಕ್ಷೇತ್ರದ ಉದಾಹರಣೆ ನೀಡಿದ್ದರು. ಆ ಯೋಜನೆಯಲಿ ಕೃಷ್ಣ ಮತ್ತು ಅರ್ಜುನರಾದಿಯಾಗಿ, ಯುದ್ಧ ಗೆಲ್ಲುವ ಎಲ್ಲಾ ಪಾತ್ರಗಳನ್ನು ಸ್ವತಃ ತಾವೊಬ್ಬರೇ ನಿರ್ವಹಿಸುವ ಉತ್ಸಾಹ ತೋರಿದ್ದರು. ಇದು ಅವರ ಆತ್ಮರತಿ ಮತ್ತು ಸೋಂಕಿನ ಬಗ್ಗೆ ಅವರಿಗಿದ್ದ ವೈಜ್ಞಾನಿಕ ತಿಳಿವಳಿಕೆ ಕೊರತೆಯನ್ನು ಎತ್ತಿ ತೋರಿತ್ತು.
ಈಗ ವರ್ಷ ಕಳೆದಿದೆ. ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ತೋರಿದ ಬೇಜವಾಬ್ದಾರಿತನಕ್ಕೆ ಈಗ ದೇಶವೇ ಚಿತೆಯಾಗಿ ಬೆಲೆ ತೆರುತ್ತಿದೆ. ಯಾವಾಗ ಕರೋನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ಪ್ರಧಾನಿಗಳಿಗೆ ಅರಿವಾಯಿತೋ, ಆಗ ರಾಜ್ಯಗಳ ಕಡೆ ಬೆಟ್ಟು ತೋರಿದ್ದಾರೆ.

ಈಗ ಪ್ರಧಾನಿಗಳು ವಿಕೇಂದ್ರೀಕರಣ ನೀತಿಯನ್ನ ಬಳಸಿ ಕರೋನಾ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಖುದ್ದು ಸಭೆ ನಡೆಸಿ ಹಳ್ಳಿ ಹಳ್ಳಿಯೂ ಕರೋನಾ ಪ್ರತಿರೋಧ ಘಟಕ ಆಗಿ ಸೋಂಕನ್ನು ಯುದ್ಧದಂತೆ ಎದುರಿಸಬೇಕು ಎಂದಿದ್ದಾರೆ.

ಸಧ್ಯದ ಹಳ್ಳಿಗಳ ಸ್ಥಿತಿ ಮತ್ತು ಸ್ಥಳೀಯ ಆಡಳಿತವನ್ನು ಸರ್ಕಾರದ ನಿಯಂತ್ರಿಸುತ್ತಿರುವ ಹೆಜ್ಜೆಗಳನ್ನು ಗಮನಿಸಿದರೆ, ಮೊದಲ ಅಲೆಯನ್ನು ಎದುರಿಸಿದಷ್ಟು ವ್ಯವಸ್ಥಿತವಾಗಿ ಸ್ಥಳೀಯ ಆಡಳಿತಗಳು ಈಗ ಎರಡನೇ ಅಲೆಯನ್ನು ಎದುರಿಸುತ್ತಿಲ್ಲ.

ಕಳೆದ ವರ್ಷ, ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಸ್ಥಳೀಯ ವ್ಯವಸ್ಥೆ ಮೂಲಕ ಮಾಡಿದ ಕರೋನಾ ನಿಯಂತ್ರಣ ಕಳೆದ ವರ್ಷ ಹೆಚ್ಚು ಸಮರ್ಪಕವಾಗಿ ಇತ್ತು.

ಆಗ;1) ಪ್ರತಿ ವಾರ ಪಂಚಾಯತ್ ಕೋವಿಡ್ ಸಭೆ ನಡೆಸಿ, ಸಭೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರನ್ನು ಒಳಗೊಂಡ ತಂಡಗಳಿಗೆ ಕರೋನಾ ನಿರ್ವಹಣೆಯ ಹೊಣೆ ವಹಿಸಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿತ್ತು.
2) ಅಂತಹ ಸಭೆಗೆ ಮಾರ್ಗದರ್ಶನ ನೀಡಲು ನೋಡಲ್ ಅಧಿಕಾರಿಗಳು ನೇಮಕ ಆಗಿದ್ದು ಅವರಿಗೆ ತಲಾ ನಾಲ್ಕು ಪಂಚಾಯಿತಿಗಳ ಹೊಣೆಗಾರಿಕೆ ಕೊಡಲಾಗಿತ್ತು.
3) ಊರಿಗೆ ಆಗಮಿಸಿದ ಹೊಸಬರಿಗೆ ಕಡ್ಡಾಯ ಕ್ವಾರೆಂಟೈನ್ ಇರಲು ಸ್ಪಷ್ಟ ಸೂಚನೆ ಜತೆ, ಅವರ ಚಲನವಲನದ ಮೇಲೆ ಕಣ್ಗಾವಲು ಇಡಲಾಗಿತ್ತು.
4) ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ ನಿಷೇಧ ಹೇರುವ ಜತೆಗೆ, ಲೋಪಗಳಾದಲ್ಲಿ ಪಂಚಾಯ್ತಿ ಪಿ ಡಿ ಓ ಗಳಿಗೆ ಹೊಣೆಗಾರಿಕೆ ವಹಿಸಲಾಗಿತ್ತು ಕೂಡ.
ಇಂತಹ ವ್ಯವಸ್ಥೆ ಬಹಳ ಪರಿಣಾಮವಾಗಿ ಕೆಲಸ ಮಾಡಿತ್ತು. ಈ ವರ್ಷ ಈ ವ್ಯವಸ್ಥೆಯಲ್ಲಿ ಬಹುತೇಕ ರಾಜಿ ಮಾಡಿಕೊಳ್ಳಲಾಗಿದೆ. ಕೋವಿಡ್ ಕಾರ್ಯಪಡೆ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಅನ್ನುವ ಹಾಗಿದೆ. ಸರ್ಕಾರ ಕೂಡ ಕಾರ್ಯಪಡೆಯ ಕುರಿತು ಈವರೆಗೆ ಯಾವ ಕಾಳಜಿಯನ್ನೂ ತೋರಿರಲಿಲ್ಲ.

ವಾಸ್ತವದಲ್ಲಿ ಕಳೆದ ವರ್ಷದ ನೀತಿಯನ್ನು ಇನ್ನಷ್ಟು ವ್ಯವಸ್ಥಿತ ಮಾಡುವ ಎಲ್ಲಾ ಅವಕಾಶ, ಅನುಭವದ ನೆಲೆಯಲ್ಲೇ ಸರ್ಕಾರಕ್ಕೆ ಇದ್ದರೂ ಅದ್ಯಾಕೋ ಸರ್ಕಾರ ಕೈಕಟ್ಟಿ ಕುಳಿತಿದೆ. ಎರಡನೇ ಅಲೆ ಗ್ರಾಮೀಣ ಭಾಗದಲ್ಲಿ ಆಘಾತಕಾರಿ ಪ್ರಮಾಣದಲ್ಲಿ ಸಾವು ನೋವು ಸೃಷ್ಟಿಸಿದ್ದರೂ ಸರ್ಕಾರ ಈವರೆಗೆ ಯಾವುದೇ ಸ್ಪಷ್ಟ ಸೂಚನೆ ನೀಡದೆ ನಿರ್ಲಕ್ಷ್ಯ ವಹಿಸಿದೆ.
ಆ ಹಿನ್ನೆಲೆಯಲ್ಲಿ ಕಳೆದ ವರ್ಷ ಮೊದಲ ಅಲೆಯ ವೇಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷನಾಗಿ ಎಲ್ಲಾ ಮಿತಿಗಳ ನಡುವೆಯೂ ಜನರ ಜೀವ ಮತ್ತು ಜೀವನ ಉಳಿಸುವ ನಿಟ್ಟಿನಲ್ಲಿ ಒಂದಿಷ್ಟು ಕೆಲಸಗಳನ್ನು ಮಾಡಿದ ಅನುಭವದ ನೆಲೆಯಲ್ಲಿ ಕೆಲವು ಸಲಹೆ ನೀಡಬಹುದು;

1) ಸರ್ಕಾರದ ನೌಕರಶಾಹಿ ವ್ಯವಸ್ಥೆಯನ್ನು ಗ್ರಾಮ ಮಟ್ಟದಲ್ಲಿ ಕೇಂದ್ರೀಕರಿಸಬೇಕು. ಪಂಚಾಯತ್ ರಾಜ್, ಕಂದಾಯ, ಆರೋಗ್ಯ, ಶಿಕ್ಷಣ ಮತ್ತು ಪೊಲೀಸರು ಪಂಚಾಯ್ತಿಯ ಮಟ್ಟದಲ್ಲೇ ಇದ್ದು ಕೆಲಸ ಮಾಡುವಂತಾಗಬೇಕು. ಅದಕ್ಕೂ ಮೊದಲು ಅವರೆಲ್ಲರಿಗೆ ಆದ್ಯತೆಯ ಮೇಲೆ ವ್ಯಾಕ್ಸಿನ್ ಇತ್ಯಾದಿ ಒದಗಿಸಬೇಕು.  

2) ನಿರ್ವಹಣೆ ಮತ್ತು ಹೊಣೆಗಾರಿಕೆಯನ್ನ ಸ್ಪಷ್ಟಪಡಿಸಬೇಕು. ಜಾರಿಗೊಳಿಸಬೇಕು. ಪಂಚಾಯಿತಿ ಗೆ ಜವಾಬ್ದಾರಿ ಹೆಚ್ಚಿಸುವ ಜತೆ ಪಿಡಿಒ ಗಳು, ಕಾರ್ಯಪಡೆ ಸದಸ್ಯರಾದ ಅಧಿಕಾರಿಗಳು ಪಂಚಾಯ್ತಿ ಕೇಂದ್ರ ಸ್ಥಳ ಬಿಟ್ಟು ಹೋಗುವ ಹಾಗಿಲ್ಲ ಎಂಬುದು ಜಾರಿಗೆ ಬರಬೇಕು.

3) ಪಂಚಾಯತ್ ಗಳ ಮೂಲಕ, ಆಯಾ ಆಶಾ ಕಾರ್ಯಕರ್ತರು ಒಳಗೊಂಡಂತೆ ಅರೆಸರ್ಕಾರಿ ನೌಕರರಿಗೆ ಪ್ರತಿ ವಾರ ಪ್ರೋತ್ಸಾಹ ಧನ ನೀಡಬೇಕು. ಕಳೆದ ವರ್ಷ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತುಮರಿ ಗ್ರಾಮ ಪಂಚಾಯಿತಿಯಲ್ಲಿ ನಾವು, ಪಂಚಾಯ್ತಿ ವ್ಯಾಪ್ತಿಯ ಆಶಾ ಕಾರ್ಯಕರ್ತರಿಗೆ ಪ್ರತಿ ವಾರ ತಲಾ 200 ರೂ ಮತ್ತು ಮಾಸ್ಕ್, ಸ್ಯಾನಿಟೈಸರನ್ನು ಪಂಚಾಯತ್ ಅನುದಾನದಿಂದ ನೀಡಿದ್ದೆವು. ‌ನಮ್ಮ ಮಾದರಿ ಕಾರ್ಯವನ್ನು ಇತರೆ ಕೆಲ ಪಂಚಾಯತಿಗಳೂ ಅನುಸರಿಸಿ ಯಶಸ್ಸು ಕಂಡಿದ್ದವು.

4) ಬಹಳ ಮುಖ್ಯವಾಗಿ ಮಲೆನಾಡಿನ ದುರ್ಗಮ ಹಳ್ಳಿಗಳಲ್ಲಿ ವೇಳಾಪಟ್ಟಿ ನಿಗದಿ ಮಾಡಿ ಪ್ರತೀ ಹಳ್ಳಿಗೂ ಕೋವಿಡ್ ಕಾರ್ಯಪಡೆ ನಿರ್ದೇಶನದಲ್ಲಿ ಪಡಿತರ ನೀಡಲು ಮುಂದಾಗಬೇಕು. ಅದಕ್ಕೆ ಬೇಕಾದ ವಾಹನ ವ್ಯವಸ್ಥೆಗೆ ಸರ್ಕಾರ, ಪಂಚಾಯತ್ ಗೆ ಹಣಕಾಸು ಬೆಂಬಲ ನೀಡಿದರೆ ಇನ್ನಷ್ಟು ಸಲೀಸು.

5) ಪಂಚಾಯತ್ ಗಳು ಆರ್ಥಿಕವಾಗಿ ಸಬಲವಿದ್ದು, ಸಂಘಟನೆ ಮಾಡುವ ಆಡಳಿತ ಮಂಡಳಿ ಇದ್ದರೆ, ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡುವ ಅವಕಾಶ ಇದೆ. ಲಾಕ್ ಡೌನ್ ಕಾರಣ ಕೋವಿಡ್ ಮಾತ್ರವಲ್ಲದೆ, ಇತರೆ ಖಾಯಿಲೆಗಳಿಂದ ಬಳಲುವವರ ನೂರಾರು ರೋಗಿಗಳಿಗೆ ಇದು ಸಹಾಯಕ. ಕಳೆದ ವರ್ಷ ಲಾಕ್ ಡೌನ್ ಹೊತ್ತಿನಲ್ಲಿ ತುಮರಿ ಪಂಚಾಯತ್ ಪೂರ್ಣ ಲಾಕ್ ಡೌನ್ ಅವಧಿಗೆ ಸಮೀಪದ ಸಿಗಂದೂರು ದೇವಾಲಯದ ಆಂಬುಲೆನ್ಸ್  ಬಳಸಿ ಅಂತಹ ಸೇವೆ ನೀಡಿತ್ತು.

ಇವುಗಳ ಜತೆ ಕೋವಿಡ್ ಪಡೆ ಇಚ್ಛಾಶಕ್ತಿ ತೋರಿದರೆ ಕೋವಿಡ್ ಮಾರ್ಗಸೂಚಿ ಉಲ್ಲಾಂಘಿಸುವ ಜನರಿಗೆ ತಿಳಿವಳಿಕೆ ನೀಡುವ, ಪಂಚಾಯತ್ ಕರೆಸಿ ಮನದಟ್ಟು ಮಾಡುವ ಕೆಲಸವನ್ನು ಮಾಡಬಹುದು.

ಇದರ ಜತೆ ರೋಗದ ಪ್ರಾಥಮಿಕ ಲಕ್ಷಣಗಳು ಕಂಡಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಜನರಿಗೆ ಎಚ್ಚರಿಕೆ ಅನ್ನುವುದು ಪೊಬಿಯಾ ರೀತಿಯೂ ಆಗದಂತೆ ಜಾಗೃತಿ ವಹಿಸಬೇಕಾಗಿದೆ. ಬಹಳ ಮುಖ್ಯವಾಗಿ ಜನರಲ್ಲಿ ಕೋವಿಡ್ ಬಂತು ಎಂದರೆ ತಮ್ಮ ಮನೆ, ಊರು ಬಿಟ್ಟು ಕೋವಿಡ್ ಕೇರ್ ಸೆಂಟರ್ ಗೆ ಹೋಗಬೇಕು ಎಂಬ ಭಯ ಇದೆ. ಪ್ರಾಥಮಿಕ ಹಂತದಲ್ಲಿ ಮನೆಯಲ್ಲೇ ಮುನ್ನೆಚ್ಚರಿಕೆ ವಹಿಸಿ ಚಿಕಿತ್ಸೆ ಪಡೆಯಬಹುದು ಎಂಬ ತಿಳುವಳಿಕೆ ಕೊರತೆ ಕೂಡ ಹೆಚ್ಚಿನ ಅಪಾಯ ತಂದಿದೆ. ಹಾಗಾಗಿ ಅವರಿಗೆ ವಿಶ್ವಾಸ ತುಂಬುವ, ಭೀತಿ ದೂರ ಮಾಡುವ ಜೊತೆಗೆ ಆರೋಗ್ಯಸ ನಿರ್ಲಕ್ಷ್ಯ ವಹಿಸದಂತೆ ತಿಳಿಹೇಳುವ ಕೆಲಸ ಜರೂರು.

ಹಳ್ಳಿಗಾಡಿನ ಕ್ಲಿನಿಕ್ ಗಳ ಮೇಲೆ ಸರ್ಕಾರ ಸ್ಪಷ್ಟ ನಿಯಂತ್ರಣ ಹೊಂದಬೇಕಿದೆ. ಜ್ವರ, ಕೆಮ್ಮು ಬಂದರು ಅದಕ್ಕೆ ಸ್ಥಳೀಯ ವೈದ್ಯರ ಬಳಿ ಹೋಗುವುದು, ಸುಳ್ಳು ಹೇಳುವುದನ್ನ ಜನರು ರೂಢಿಸಿಕೊಂಡಿರುವುದು ಅಪಾಯ ತಂದಿದೆ.ಚ ಹೀಗೆ ರೋಗವನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯುವ ಬಗ್ಗೆ ಹಳ್ಳಿಯವರಿಗೆ ಇರುವ ಭಯ ಮತ್ತು ಉದಾಸೀನದಿಂದಾಗಿ ರೋಗ ಉಲ್ಬಣಗೊಂಡಾಗ, ಆಮ್ಲಜನಕ ಅನಿವಾರ್ಯತೆ ಸೃಷ್ಟಿಯಾಗಿ ಸಕಾಲದಲ್ಲಿ ಸಿಗದೆ ಸಾವು ಹೆಚ್ಷುತ್ತಿವೆ.

ಇದಕ್ಕೆ ಹಳ್ಳಿಯ ಕ್ಲಿನಿಕ್ ಗಳಲ್ಲಿ ಬರುವ ರೋಗಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಬೇಕು. ಇದರಿಂದ ಹಳ್ಳಿಗಳಲ್ಲಿ  ವ್ಯಾಪಕವಾಗಿ ಹರಡುತ್ತಿರುವ ಕರೋನಾ ಪತ್ತೆ ಮತ್ತು ತಡೆ ಸಾಧ್ಯವಾಗಲಿದೆ.

ಆಶಾ ಕಾರ್ಯಕರ್ತೆಯರು ಹೋಮ್ ಕ್ವಾರೆಂಟ್ ಇರುವವರ ಮನೆಗಳಿಗೆ ಭೇಟಿ ನೀಡಿ ಆಮ್ಲಜನಕ ಪ್ರಮಾಣ ನಿರಂತರ ಚೆಕ್ ಮಾಡುವ ಜತೆಗೆ ಪ್ರಾಥಮಿಕ ಹಂತದಲ್ಲಿ ರೋಗ ನಿಯಂತ್ರಣ ಬಗ್ಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಾಗಿದೆ.

ಇದೆಲ್ಲ ಆಗಬೇಕಾದರೆ, ಪಂಚಾಯ್ತಿ ಮಟ್ಟದಲ್ಲಿ ಈಗಲೂ ನಿಷ್ಕ್ರಿಯವಾಗೇ ಇರುವ ಕೋವಿಡ್ ಕಾರ್ಯಪಡೆಗಳಿಗೆ ಕೂಡಲೇ ಚುರುಕು ಮುಟ್ಟಿಸಬೇಕಿದೆ. ಅವುಗಳಿಗೆ ತುರ್ತಾಗಿ ಬೇಕಾಗಿರುವ ಹಣಕಾಸು, ಸಿಬ್ಬಂದಿಯನ್ನು ಒದಗಿಸಲು ಸರ್ಕಾರ ತಕ್ಣಣಕ್ಕೆ ಮುಂದಾಗಬೇಕಿದೆ. ಇದು ಆಗದೇ ಇದ್ದರೆ ಪ್ರಧಾನಿಗಳ ಹಳ್ಳಿ ಮಟ್ಟದ ಸಮರ ಕೇವಲ ಭಾಷಣಕ್ಕೆ ಸೀಮಿತವಾಗಲಿವೆ. ಹಳ್ಳಿಹಳ್ಳಿಯ ಸ್ಮಶಾನಗಳ ಮುಂದೆ ಕೂಡ ಶವಗಳು ಸರದಿಗಟ್ಟಲಿವೆ!

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...