ಬಹುತ್ವದ ಪರಿಕಲ್ಪನೆ, ಒಕ್ಕೂಟ ವ್ಯವಸ್ಥೆಯೊಂದಿಗೆ ವಿಶ್ವದ ಇತರೆ ರಾಷ್ಟ್ರಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ ಭಾರತ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ರಾಜ್ಯ ಸರ್ಕಾರಗಳು ಇರುವುದಲ್ಲ, ಬದಲಾಗಿ ಪರಸ್ಪರ ಸಹಕಾರ ತತ್ವದಡಿಯಲ್ಲಿ ಎರಡು ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು. ಅಂದರೆ, ಕೇಂದ್ರ ಸರ್ಕಾರದ ಮುಖ್ಯಸ್ಥ ಪ್ರಧಾನ ಮಂತ್ರಿ ರಾಜ್ಯ ಮುಖ್ಯಮಂತ್ರಿಗಳ ಅಧಿಪತಿಯಲ್ಲ, ಒಡೆಯ ಅಲ್ಲ ಅನ್ನುವುದು ವಾಸ್ತವ.
ಕೇಂದ್ರದಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಅಧಿಕಾರ ವಹಿಸಿಕೊಂಡ ಬಳಿಕ ಒಕ್ಕೂಟ ವ್ಯವಸ್ಥೆ ಶಿಥಿಲವಾಗುತ್ತಿದೆಯೇ ಎಂಬ ಆತಂಕವನ್ನು ದೇಶದ ಹಲವು ರಾಜಕೀಯ ಚಿಂತಕರು ವ್ಯಕ್ತಪಡಿಸಿದ್ದರು. ಇವರುಗಳ ಆತಂಕವನ್ನು ಜಿಎಸ್ಟಿ, ನೋಟ್ಬ್ಯಾನ್ ಮೊದಲಾದ ಕೇಂದ್ರದ ಏಕಮುಖ ನಿರ್ಧಾರಗಳು ಪುಷ್ಟೀಕರಿಸಿದ್ದವು. ಜಿಎಸ್ಟಿ ಪರಿಹಾರ ಹಣ ಸರಿಯಾಗಿ ವಿತರಿಸದೆ, ರಾಷ್ಟ್ರೀಯ ವಿಪತ್ತುಗಳ ಪರಿಹಾರವನ್ನು ಸರಿಯಾಗಿ ರಾಜ್ಯಗಳಿಗೆ ನೀಡದೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಮಾಡಿರುವುದು ದೊಡ್ಡ ದ್ರೋಹ. ಇದು ಒಕ್ಕೂಟ ವ್ಯವಸ್ಥೆಯನ್ನು ಕೇಂದ್ರ ಅವಗಣಿಸುತ್ತಿರುವುದಕ್ಕೆ ಒಂದು ಪ್ರತ್ಯಕ್ಷ ಸಾಕ್ಷಿ.
ಕೇಂದ್ರ ಸರ್ಕಾರವೆಂದರೆ ಮೋದಿ ಮಾತ್ರ ಎನ್ನುವಷ್ಟು ಮೋದಿ ಸರ್ಕಾರವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಅಧಿಕಾರ ವಿಕೇಂದ್ರಿಕರಣದ ಲಕ್ಷಣಗಳು ಕೇಂದ್ರ ಸರ್ಕಾರದೊಳಗೆ ಅಷ್ಟಾಗಿ ಕಾಣುತ್ತಿಲ್ಲ. ಚುನಾವಣೆಯ ಸಂಧರ್ಭದಲ್ಲಿ ಕೇಂದ್ರ ಗೃಹ ಮಂತ್ರಿಯ ಹೆಸರು ಅಲ್ಲಿ ಇಲ್ಲಿ ಪ್ರಸ್ತಾಪವಾಗುತ್ತದೆ ಬಿಟ್ಟರೆ, ಸರ್ಕಾರದ ಭಾಗವಾಗಿ ಅಮಿತ್ ಶಾ ಅಷ್ಟಾಗಿ ಸುದ್ದಿಯಲ್ಲಿರುವುದಿಲ್ಲ. ಕೆಲವೊಮ್ಮೆ ಬಂದರೆ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್. ಇದು ಕೇಂದ್ರ ಸರ್ಕಾರದ ಅವಸ್ಥೆ.
ನರೇಂದ್ರ ಮೋದಿ ಎಷ್ಟು ಸರ್ವಾಧಿಕಾರಿ ಸ್ವಭಾವದ ಮನುಷ್ಯ ಅನ್ನುವುದನ್ನು ತೋರಿಸಿಕೊಡಲು ಇಷ್ಟು ಉಲ್ಲೇಖಿಸಬೇಕಾಯಿತು. ಇನ್ನು ರಾಜ್ಯಗಳೊಡನೆ ಪ್ರಧಾನಮಂತ್ರಿಯ ಸ್ವಭಾವವನ್ನು ಗಮನಿಸುವಾಗಲೂ ಇದು ಅನುಭವಕ್ಕೆ ಬರುತ್ತದೆ. ರಾಜ್ಯ ಮುಖ್ಯಮಂತ್ರಿಗಳ ಬಾಸ್ ಎಂಬಂತೆಯೇ ವರ್ತಿಸುವ ಪ್ರಧಾನಿ ಮೋದಿಗೆ ಸಾಂವಿಧಾನಿಕವಾಗಿ ಎಷ್ಟು ಗೌರವ ನೀಡಬೇಕೋ ಅಷ್ಟೇ ಗೌರವ ನೀಡುವವರು ಕೇರಳದ ಪಿಣರಾಯಿ ವಿಜಯನ್, ಮಹಾರಾಷ್ಟ್ರದ ಉದ್ಧವ್ ಠಾಕ್ರೆ, ಇತ್ತೀಚೆಗೆ ಸ್ಟಾಲಿನ್ ಮೊದಲಾದವರು. ಉಳಿದ ಬಹುತೇಕ ಮುಖ್ಯಮಂತ್ರಿಗಳ ನಡು ನೆಲ ಮಟ್ಟಕ್ಕೆ ಬಾಗಿರುತ್ತವೆ ಮೋದಿ ಎದುರು ಎಂಬ ಆರೋಪಗಳಿವೆ. ಆದರೆ, ನರೇಂದ್ರ ಮೋದಿಯ ʼಅಹಂʼಗೆ ಮರ್ಮಾಘಾತ ನೀಡುವಲ್ಲಿ ನಿಷ್ಣಾತರಾಗಿರುವವರು ಪಶ್ಚಿಮ ಬಂಗಾಳದ ಸರ್ವಾಧಿಕಾರಿ ಸ್ವಭಾವದ ಮಮತಾ ಬ್ಯಾನರ್ಜಿ.
ಪ್ರಧಾನ ಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯೂ ಆಗಿರುವ ಮಮತಾರೊಂದಿಗೆ ಮೋದಿಯ ಸಂಘರ್ಷ ಬಹಿರಂಗ ರಹಸ್ಯ. ಅದರಲ್ಲೂ ಕಳೆದ ಎರಡು ಮೂರು ದಿನಗಳಿಂದ ಮೋದಿ VS ದೀದಿ ತೀವ್ರ ಸುದ್ದಿಯಲ್ಲಿದೆ. ಚಂಡಮಾರುತ ಪರಿಶೀಲನೆ ಸಭೆಗೆ ಬಂದ ಪ್ರಧಾನಿ ಮೋದಿಯನ್ನು ಹಾಗೂ ರಾಜ್ಯಪಾಲರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಉನ್ನತ ಅಧಿಕಾರಿಗಳು ಕಾಯಿಸಿ ಅಪಮಾನಗೊಳಿಸಿದ್ದಾರೆಂದು ಕೇಂದ್ರ ಸರ್ಕಾರ ಆರೋಪ ಮಾಡಿದ ಕ್ಷಣದಿಂದ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ಸುದ್ದಿಯಲ್ಲಿದ್ದಾರೆ.
ರಾಜಕೀಯ ಧ್ವೇಷಗಳು, ಹಗೆತನ ಯಾವುದೇ ಇದ್ದರೂ ಪ್ರಧಾನ ಮಂತ್ರಿ, ರಾಜ್ಯಪಾಲ ಮೊದಲ ಸಾಂವಿಧಾನಿಕ ಹುದ್ದೆಗಳಿಗೆ ಗೌರವ ನೀಡಬೇಕಿರುವುದು ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಕರ್ತವ್ಯ. ಹಾಗಾಗಿ, ಮಮತಾ ಮಾಡಿರುವುದು ಉದ್ಧಟತನ ಎಂದು ಬಿಜೆಪಿ ಪರಿವಾರ ಮಮತಾ ವಿರುದ್ಧ ಮುಗಿಬಿದ್ದಿದ್ದವು.
ಕೇಂದ್ರ ಸರ್ಕಾರದ ಆರೋಪದ ಬೆನ್ನಿಗೆ ಪತ್ರಿಕಾ ಹೇಳಿಕೆ ನೀಡಿದ ಮಮತಾ, ಕೇಂದ್ರ ಸರ್ಕಾರ ಏಕಮುಖವಾಗಿ ಸನ್ನಿವೇಶವನ್ನು ವ್ಯಾಖ್ಯಾನಿಸಿದೆ, ಎಂದು ತಮ್ಮ ಪಾಲಿನ ಕೆಲವು ಸತ್ಯಗಳನ್ನು ಬಹಿರಂಗಪಡಿಸಿದ್ದರು. ಪ್ರಧಾನಮಂತ್ರಿ ಸಭೆ ಏಕಾಏಕಿ ನಿರ್ಧಾರವಾಗಿತ್ತೆಂದೂ, ಕೊನೆ ಕ್ಷಣದಲ್ಲಿ ತಾವೀಗಾಗಲೇ ನಿರ್ಧರಿಸಿದ್ದ ಭೇಟಿಗಳನ್ನು ರದ್ದುಗೊಳಿಸಲಾಗದ್ದರಿಂದ, ಪ್ರಧಾನಮಂತ್ರಿಯ ಸಭೆಯಿಂದ ಅವರ ಅನುಮತಿ ಕೋರಿ ಹೊರ ಬಂದಿದ್ದೆವೆಯೆಂದು ಅವರು ತಿಳಿಸಿದ್ದರು.
ಕೇಂದ್ರದ ಮಮತಾರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪಶ್ಚಿಮ ಬಂಗಾಲ ರಾಜ್ಯ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯ ಅವರನ್ನು ಅವರ ಸ್ಥಾನದಿಂದ ಏಕಾಏಕಿ ಕೆಳಗಿಳಿಸಿ, ದೆಹಲಿಗೆ ಕರೆಸಿಕೊಂಡು ಆದೇಶ ಹೊರಡಿಸಿದ್ದು. ಇದರ ವಿರುದ್ಧ ಕೇಂದ್ರ ಸರ್ಕಾರದೊಂದಿಗೆ ಬಹಿರಂಗವಾಗಿ ಮಾತಿನ ಗುದ್ದಾಟ ನಡೆಸಿದ ಮಮತಾ, ಕೇಂದ್ರ ಸರ್ಕಾರ ತಕ್ಷಣವೇ ತನ್ನ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದರು. ಆದರೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮುಖ್ಯಸ್ಥೆಯ ಆಗ್ರಹಗಳನ್ನು ಈಡೇರಿಸಲು ನಿರಾಸಕ್ತಿ ತೋರಿಸಿದ್ದು ಮಮತಾರ ಕೋಪವನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾಗಿತ್ತು.
ತನ್ನ ಅಸಲಿ ರಾಜಕೀಯ ಚಾಕಚಕ್ಯತೆಯನ್ನು ಪ್ರದರ್ಶಿಸಿದ ಮಮತಾ, ಬಂಡೋಪಾಧ್ಯಾಯ ಅವರನ್ನು ತನ್ನ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಮಾಡಿ, ತಮ್ಮ ಸೇವೆಗೆ ನಿವೃತ್ತಿ ಘೋಷಿಸುವಂತೆ ಮಾಡಿದ್ದರು. ಅದಾದ ಬಳಿಕ ತನ್ನ ಆಪ್ತ ಸಲಹೆಗಾರನಾಗಿ ಮುಂದಿನ ಮೂರು ವರ್ಷಕ್ಕೆ ನೇಮಕಗೊಳಿಸಿದ್ದರು. ಮಮತಾರಿಂದ ಹಾಗೂ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದಿಂದ ಬಂಡೋಪಾಧ್ಯಾಯ ಅವರನ್ನು ದೂರ ಮಾಡಬೇಕೆಂಬ ತನ್ನ ಯೋಜನೆಗಳಿಗೆ ತಲೆಕೆಳಗಾದದ್ದು ಕೇಂದ್ರ ಸರ್ಕಾರಕ್ಕೆ ಮುಜುಗರ ತರಿಸಿತ್ತು. ಆದರೆ, ಅಷ್ಟಕ್ಕೆ ಬಿಡದ ಕೇಂದ್ರ ಸರ್ಕಾರ, ಅಲಾಪನ್ ಬಂಡೋಪಾಧ್ಯಾಯ ಅವರಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ದೆಹಲಿಯ ನಾರ್ತ್ಬ್ಲಾಕ್ನಲ್ಲಿರುವ ಗೃಹಸಚಿವಾಲಯದ ಕಚೇರಿಯಲ್ಲಿ ಬಂಡೋಪಾಧ್ಯಾಯ ಅವರನ್ನು ಹಾಜರಿರಲು ಸೂಚಿಸಲಾಗಿತ್ತು. ಆದರೆ ಯಾಕೆ ಸೇರ್ಪಡೆಯಾಗಲಿಲ್ಲ ಎಂಬುದಕ್ಕೆ ವಿವರಣೆ ಕೊಡಬೇಕು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರ ಸಭೆಯಲ್ಲಿ ಪಾಲ್ಗೊಳ್ಳದೆ ಇರುವುದಕ್ಕೆ ಕಾರಣವೇನು ಎಂಬುದರ ಬಗ್ಗೆಯೂ ಸರಿಯಾದ ವಿವರಣೆ ನೀಡಬೇಕು ಎಂದು ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ನೂತನ ಆಪ್ತ ಸಲಹೆಗಾರರಿಗೆ ಸೂಚಿಸಿದೆ.
ರಾಜ್ಯ ಸರ್ಕಾರಗೊಳೊಂದಿಗೆ ಸಮನ್ವಯ ಸಾಧಿಸಲು ವಿಫಲವಾಗುತ್ತಿರುವ ನರೇಂದ್ರ ಮೋದಿ ವಿಶ್ವಗುರು ಆಗಿ ಪ್ರಪಂಚದ ನಾಯಕರೊಂದಿಗೆ ಹೇಗೆ ಸಮನ್ವಯ ಸಾಧಿಸಲಿದ್ದಾರೋ ಗೊತ್ತಿಲ್ಲ. ಏನೇ ಆದರೂ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಡುವಿನ ಈ ಸಂಘರ್ಷ ಇದೀಗ ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಪ್ರಕರಣದ ಬಳಿಕವಾದರೂ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಮೇಲೆ ʼಬಾಸ್ʼ ಅಲ್ಲ ಅನ್ನುವುದನ್ನು ನರೇಂದ್ರ ಮೋದಿ ಅರ್ಥಮಾಡಿಕೊಂಡು, ವಿನಾ ಕಾರಣ ತನ್ನ ಅಹಮ್ಮಿಗೆ ನೋವು ಮಾಡಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು. ಆ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತಹ ಇಂತಹ ಕ್ಷುಲ್ಲಕ ಜಗಳಗಳನ್ನು ಬೆಳೆಯದಂತೆ ತಡೆಯಬೇಕು.