ಕೇಂದ್ರ ಸಂಪುಟ ವಿಸ್ತರಣೆಯ ಮೇಲೆ ಕರ್ನಾಟಕ ಬಿಜೆಪಿಯ ಬಹಳ ನಿರೀಕ್ಷೆಗಳು ಇದ್ದವು. ಅಂತಹ ನಿರೀಕ್ಷೆಗಳನ್ನೆಲ್ಲಾ ಬಹುತೇಕ ಹುಸಿಗೊಳಿಸಿ ಬಿಜೆಪಿಯ ನಾಯಕರಿಗೇ ಅಚ್ಚರಿಯಾಗುವಂತೆ ನಾಲ್ವರು ಸಂಸದರು ಮೋದಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.
ಹಾಗಾಗಿ ಇದೀಗ ರಾಜ್ಯ ಬಿಜೆಪಿಯ, ಅದರಲ್ಲೂ ಯಡಿಯೂರಪ್ಪ ವಿರೋಧಿ ಬಣ ಮತ್ತು ತಟಸ್ಥ ಬಣಗಳೆಂಬ ಬಹುಸಂಖ್ಯಾತರ ವಲಯದ ನಿರೀಕ್ಷೆಗಳು ಹುಸಿಯಾದ ಹಿನ್ನೆಲೆಯಲ್ಲಿ ಅವರ ಮುಂದಿನ ನಡೆಗಳೇನು ಎಂಬುದು ಸದ್ಯದ ಕುತೂಹಲದ ಸಂಗತಿ.
ಏಕೆಂದರೆ, ಕೇಂದ್ರ ಸಂಪುಟ ವಿಸ್ತರಣೆಯ ಮೋದಿಯವರ ಪ್ರಯತ್ನದ ಮೇಲೆ ದೇಶದ ಯಾವ ರಾಜ್ಯವೂ ನೆಟ್ಟಿರದ ಮಟ್ಟಿಗೆ ಕಣ್ಣು ನೆಟ್ಟಿದ್ದು ಬಹುಶಃ ಬಿಜೆಪಿಯ ಈ ವಲಯ. ರಾಜ್ಯದಲ್ಲಿ ಎರಡು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿಯ ನಾಯಕರಾಗಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೇರಿದ ಕ್ಷಣದಿಂದಲೇ ಅವರು ಕಾಲೆಳೆಯುವ ಒಂದು ಪ್ರಮುಖ ಲಾಬಿ ಚುರುಕಾಗಿತ್ತು ಎಂಬುದು ಗುಟ್ಟೇನಲ್ಲ. ಬಿಜೆಪಿಯ, ಅದರಲ್ಲೂ ಸಂಘಪರಿವಾರದ ಹಿನ್ನೆಲೆಯ ಪ್ರಭಾವಿ ನಾಯಕರೇ ಯಡಿಯೂರಪ್ಪ ವಿರುದ್ಧದ ಆ ಭಿನ್ನಮತೀಯ ಚಟುವಟಿಕೆಗಳ ಸೂತ್ರಧಾರರಾಗಿದ್ದರು ಎಂಬುದು ಕೂಡ ರಹಸ್ಯವೇನಲ್ಲ.
ಹೀಗೆ ಸೂತ್ರಧಾರರ ಪಾತ್ರಗಳಾಗಿ ರಾಜ್ಯ ಬಿಜೆಪಿಯ ಹಲವು ನಾಯಕರು ಯಡಿಯೂರಪ್ಪ ವಿರುದ್ಧ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಒಂದೊಂದು ದಾಳ ಉರುಳಿಸುತ್ತಲೇ ಇದ್ದಾರೆ. ಕಳೆದ ಮೇ ಅಂತ್ಯದ ಹೊತ್ತಿಗೆ ರಾಜ್ಯದಲ್ಲಿ ಕರೋನಾ ಎರಡನೇ ಅಲೆ ತಾರಕ್ಕೇರಿದ್ದಾಗ ಈ ಭಿನ್ನಮತೀಯ ಚಟುವಟಿಕೆ ಇನ್ನಷ್ಟು ಬಿರುಸಾಯಿತು ಮತ್ತು ಸ್ವತಃ ಯಡಿಯೂರಪ್ಪ ಸಂಪುಟದ ಸಚಿವರೇ ಬಹಿರಂಗ ಹೇಳಿಕೆಯ ಮೂಲಕ ಸಿಎಂ ಸ್ಥಾನದಿಂದ ಅವರು ಕೂಡಲೇ ಇಳಿಯಲೇಬೇಕು ಎಂದು ಒತ್ತಾಯಿಸಿದರು. ಸಚಿವ ಸಿ ಪಿ ಯೋಗೇಶ್ವರ್ ಅವರ ಆ ಮಾತಿಗೆ ಹಿರಿಯ ನಾಯಕರಾದ ಎಚ್ ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದರು. ಅರವಿಂದ್ ಬೆಲ್ಲದ್ ಅವರಂಥ ಲಿಂಗಾಯತ ಸಮುದಾಯದ ನಾಯಕರು ನೇರವಾಗಿ ದೆಹಲಿಗೇ ಹೋಗಿ ಯಡಿಯೂರಪ್ಪ ವಿರುದ್ಧ ದಾಖಲೆ ಸಹಿತ ದೂರು ನೀಡಿಬಂದರು.
ಸುಮಾರು ಒಂದೂವರೆ ತಿಂಗಳು ನಿರಂತರವಾಗಿ ಯಡಿಯೂರಪ್ಪ ವಿರೋಧಿ ಬಣದ ಪ್ರಮುಖರ ದೆಹಲಿ ಯಾತ್ರೆ, ವರಿಷ್ಠರೊಂದಿಗಿನ ಮಾತುಕತೆ, ಮಾಧ್ಯಮ ಹೇಳಿಕೆಗಳು ಮತ್ತು ಅವರಿಗೆ ಪ್ರತಿಯಾಗಿ ಯಡಿಯೂರಪ್ಪ ಪರ ಬಣದ ವಕ್ತಾರರಂತೆ ಮಾತನಾಡುತ್ತಿದ್ದ ಎಂ ಪಿ ರೇಣುಕಾಚಾರ್ಯ, ಬಸವರಾಜ ಬೊಮ್ಮಾಯಿ, ಆರ್ ಅಶೋಕ್, ಎಚ್ ಹಾಲಪ್ಪ, ಸ್ವತಃ ಅವರ ಪುತ್ರ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಹಲವರು ನೀಡಿದ ಪ್ರತಿ ಹೇಳಿಕೆಗಳು ದೊಡ್ಡ ಮಟ್ಟದ ರಾಜಕೀಯ ಚರ್ಚೆಗೆ ಕಾರಣವಾಗಿದ್ದು ಈಗ ಇತಿಹಾಸ.
ಇದೆಲ್ಲದರ ನಡುವೆ ಸಂಪುಟ ವಿಸ್ತರಣೆಗೆ ಮುನ್ನ, ಪ್ರಭಾವಿ ಲಿಂಗಾಯತ ನಾಯಕ ಸಚಿವ ಮುರುಗೇಶ್ ನಿರಾಣಿ ಅವರನ್ನು ದೆಹಲಿಗೆ ಕರೆಸಿಕೊಂಡು ವರಿಷ್ಠರು ಚರ್ಚೆ ನಡೆಸಿದ್ದರು. ಅರವಿಂದ್ ಬೆಲ್ಲದ್ ಬಳಿಕ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ರಾಜ್ಯದ ಲಿಂಗಾಯತ ನಾಯಕ ನಿರಾಣಿಯಾಗಿದ್ದರು. ಈ ನಡುವೆ, ಸ್ವತಃ ಯಡಿಯೂರಪ್ಪ ಪುತ್ರರಾದ ವಿಜಯೇಂದ್ರ ಮತ್ತು ಸಂಸದ ರಾಘವೇಂದ್ರ ಕೂಡ ಜಂಟಿಯಾಗಿ ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ಆ ಹಿನ್ನೆಲೆಯಲ್ಲಿ ಪಕ್ಷದ ಬಹುಸಂಖ್ಯಾತರ(ತಟಸ್ಥ ಬಣವೂ ಸೇರಿ) ಅಭಿಪ್ರಾಯಕ್ಕೆ ಮಣಿದಿರುವ ವರಿಷ್ಠರು, ಸಿಎಂ ಕುರ್ಚಿಯಿಂದ ಯಡಿಯೂರಪ್ಪ ಅವರನ್ನು ಇಳಿಸಲು ನಿರ್ಧರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಅವರ ಪುತ್ರ ಸಂಸದ ರಾಘವೇಂದ್ರ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲಾಗುವುದು. ಇಲ್ಲವೇ ವಿಜಯೇಂದ್ರ ಅವರಿಗೆ ರಾಜ್ಯ ಸರ್ಕಾರದಲ್ಲಿ ಪ್ರಮುಖ ಖಾತೆ ನೀಡಲಾಗುವುದು. ಆ ಹೊಂದಾಣಿಕೆ ಸೂತ್ರಗಳು ಸಮಾಧಾನ ತರದೇ ಇದ್ದಲ್ಲಿ ಯಡಿಯೂರಪ್ಪ ಅವರನ್ನು ನೆರೆಯ ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗುವುದು ಎಂಬ ಆಯ್ಕೆಗಳನ್ನು ವರಿಷ್ಠರು ಯಡಿಯೂರಪ್ಪ ಮುಂದಿಟ್ಟಿದ್ದಾರೆ ಎಂಬ ಸಂಗತಿ ಬಿಜೆಪಿ ಆಂತರಿಕ ವಲಯದಲ್ಲೇ ಕೇಳಿಬಂದಿತ್ತು.
ಆ ಹಿನ್ನೆಲೆಯಲ್ಲೇ ಕೇಂದ್ರ ಸಂಪುಟ ವಿಸ್ತರಣೆಯ ಮೇಲೆ ಕೇವಲ ಬಿಜೆಪಿ ನಾಯಕರು ಅಷ್ಟೇ ಅಲ್ಲ; ಇಡೀ ರಾಜ್ಯದ ಗಮನ ನೆಟ್ಟಿತ್ತು. ಆದರೆ, ಇದೀಗ ಎಲ್ಲಾ ಲೆಕ್ಕಾಚಾರಗಳನ್ನೂ ತಲೆಕೆಳಗು ಮಾಡಿ ಕೇಂದ್ರ ಸಂಪುಟಕ್ಕೆ ರಾಜ್ಯದ ನಾಲ್ವರು ಸಂಸದರು ಸೇರಿದ್ದಾರೆ. ಆ ಮೂಲಕ ವರಿಷ್ಠರು ರಾಜ್ಯದ ಬಿಜೆಪಿಯ ವಲಯಕ್ಕೆ ರವಾನಿಸಿರುವ ಸಂದೇಶ ಏನು ಎಂಬುದು ಈಗ ಚರ್ಚೆಯಾಗುತ್ತಿರುವ ಸಂಗತಿ. ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಬೀಸುವ ದೊಣ್ಣೆಯಿಂದ ಪಾರಾದರೆ?, ಅವರ ವಿರುದ್ದ ಬಣದ ನಾಯಕರು ಮತ್ತು ಅವರ ಸೂತ್ರಧಾರರ ಎಲ್ಲಾ ಪ್ರಯತ್ನಗಳು ಇಷ್ಟು ಬೇಗ ತಲೆಕೆಳಗಾದವೆ? ಅಥವಾ ಯಡಿಯೂರಪ್ಪ ಅವರ ವರ್ಚಸ್ಸು ಮತ್ತು ಜಾತಿ ಬಲದ ಮುಂದೆ ಬಿಜೆಪಿ ಹೈಕಮಾಂಡೇ ತಲೆಬಾಗಿತೆ? ಎಂಬ ಪ್ರಶ್ನೆಗಳು ಕುತೂಹಲ ಮೂಡಿಸಿವೆ.
ಅಷ್ಟಕ್ಕೂ ಬರೋಬ್ಬರಿ ಒಂದೂವರೆ- ಎರಡು ತಿಂಗಳ ಕಾಲ ನಿರಂತರವಾಗಿ ನಡೆದ ನಾಯಕತ್ವ ಬದಲಾವಣೆಯ ರಾಜಕೀಯ ಮೇಲಾಟದ ಹೊರತಾಗಿಯೂ ಬಿಜೆಪಿ ಹೈಕಮಾಂಡ್ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದೆ, ಅತ್ತ ಬದಲಾವಣೆಯನ್ನೂ ಮಾಡದೆ, ಇತ್ತ ಬದಲಾವಣೆಯ ಹುಯಿಲೆಬ್ಬಿಸುತ್ತಿರುವವರ ಬಾಯನ್ನೂ ಮುಚ್ಚಿಸದೆ ರಾಜ್ಯದ ಜನತೆಗೆ ಪುಕ್ಕಟ್ಟೆ ಮನರಂಜನೆ ಒದಗಿಸುತ್ತಿರುವುದರ ಹಿಂದಿನ ಉದ್ದೇಶವೇನು? ಎಂಬುದು ಈಗಿನ ಪ್ರಶ್ನೆ.
ಈ ನಡುವೆ, ನಾಯಕತ್ವ ಬದಲಾವಣೆಯ ವಿಷಯದಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ನಡುವೆ ಈಗಲೂ ತೆರೆಮರೆಯ ಹಾವು ಏಣಿಯ ಆಟ ಮುಂದುವರಿದಿದೆ. ಅಂತಹ ಆಟದ ಒಂದು ಭಾಗವಾಗಿಯೇ ಈ ಸಂಪುಟ ವಿಸ್ತರಣೆಯಲ್ಲಿ ರಾಜ್ಯದ ಸಂಸದರ ಆಯ್ಕೆ ಮಾಡಲಾಗಿದೆ. ವರಿಷ್ಠರು ಈ ಆಯ್ಕೆ ಮೂಲಕ ಯಡಿಯೂರಪ್ಪ ಪರ್ಯಾಯ ನಾಯಕತ್ವಗಳನ್ನು ಕಟ್ಟುವ ನಿಟ್ಟಿನಲ್ಲಿ ಸಂಘ ಪರಿವಾರದ ಹಿನ್ನೆಲೆಯವರಿಗೆ ಒಂದು ಸಂದೇಶ ರವಾನಿಸಿದ್ದಾರೆ. ಯಡಿಯೂರಪ್ಪ ಬಣದ ವಿರುದ್ಧ ಪಕ್ಷದಲ್ಲಿ ಸಂಘದ ಹಿನ್ನೆಲೆಯ, ಸಂಘನಿಷ್ಠರ ಪಡೆಯನ್ನು ಕಟ್ಟುವ ನಿಟ್ಟಿನಲ್ಲಿ ಈ ಸಂಪುಟ ವಿಸ್ತರಣೆಯ ಆಯ್ಕೆ ಮಹತ್ವದ್ದು ಎಂಬ ಮಾತೂ ಕೇಳಿಬರುತ್ತಿದೆ.
ಹಾಗೇ, ಯಡಿಯೂರಪ್ಪ ಮತ್ತು ವರಿಷ್ಠರ ನಡುವಿನ ನಾಯಕತ್ವ ಬದಲಾವಣೆಯ ವಿಷಯವಾಗಿ ಮಾತ್ರ ಈ ಹಗ್ಗಜಗ್ಗಾಟ ಉಳಿದಿಲ್ಲ. ಇದೀಗ ಅದು ಯಡಿಯೂರಪ್ಪ ನಂತರದ ಬಿಜೆಪಿ ಮತ್ತು ಅದರ ನಾಯಕತ್ವದ ಪ್ರಶ್ನೆಯಾಗಿ ದೆಹಲಿ ಮತ್ತು ಬೆಂಗಳೂರು ನಡುವಿನ ದಾಳ-ಪ್ರತಿದಾಳದ ಸ್ವರೂಪ ಪಡೆದಿದೆ. ರಾಜ್ಯ ಬಿಜೆಪಿಯ ಲಗಾಮು ತಮ್ಮ ನಂತರವೂ ತಮ್ಮ ಕುಟುಂಬದಲ್ಲೇ ಉಳಿಯಬೇಕು, ಇಲ್ಲವೇ ತಮ್ಮ ಕುಟುಂಬದ ಸುತ್ತಲೇ ರಾಜ್ಯ ರಾಜಕಾರಣ ಗಿರಕಿಹೊಡೆಯುವಂತ ಪರ್ಯಾವ ವ್ಯವಸ್ಥೆಯನ್ನು ಹುಟ್ಟುಹಾಕಬೇಕು ಎಂಬುದು ಯಡಿಯೂರಪ್ಪ ಲೆಕ್ಕಾಚಾರ. ಆದರೆ, ಬಿಜೆಪಿ ವರಿಷ್ಠರಿಗೆ ರಾಜ್ಯ ಬಿಜೆಪಿಯ ನಾಯಕತ್ವ ಹೀಗೆ ಒಂದು ಕುಟುಂಬದ ಹಿಡಿತಕ್ಕೆ ಒಳಗಾಗುವುದು ಬೇಕಾಗಿಲ್ಲ. ಬದಲಾಗಿ ಕನಿಷ್ಟ ಯಡಿಯೂರಪ್ಪ ಬಳಿಕವಾದರೂ ರಾಜ್ಯ ಬಿಜೆಪಿಗೆ ಅವರ ಕುಟುಂಬದ ಹೊರತಾದ ನಾಯಕರು ಬೇಕು, ಅಂಥ ಪರ್ಯಾಯ ನಾಯಕರನ್ನು ಈಗಲೇ ಸಿದ್ದಗೊಳಿಸುವುದು ಅಷ್ಟೇ ಅಲ್ಲ; ಸಾರ್ವಜನಿಕವಾಗಿ ಬಿಂಬಿಸುವುದೂ ತುರ್ತು ಎಂಬುದು ವರಿಷ್ಠರ ಲೆಕ್ಕಾಚಾರ.
ಹಾಗಾಗಿ, ಇದೀಗ ಸಂಪುಟ ವಿಸ್ತರಣೆ ಇರಬಹುದು, ರಾಜ್ಯ ನಾಯಕತ್ವ ಬದಲಾವಣೆಯ ವಿಷಯವಿರಬಹುದು, ಇದೆಲ್ಲದೂ ಸದ್ಯದ ವಿಷಯಗಳಷ್ಟೇ. ನಿಜಕ್ಕೂ ಬಿಜೆಪಿ ವರಿಷ್ಠರು ಮತ್ತು ಯಡಿಯೂರಪ್ಪ ನಡುವೆ ನಡೆಯುತ್ತಿರುವ ತಿಕ್ಕಾಟ, ಭವಿಷ್ಯದ ನಾಯಕತ್ವದ್ದು ಎಂಬ ಹೊಸ ಆಯಾಮ ಕೂಡ ಇದೆ.
ಆದರೆ, ಅಂತಹ ದೂರಗಾಮಿ ಅಥವಾ ತತಕ್ಷಣದ ಲಾಭನಷ್ಟದ ಲೆಕ್ಕಾಚಾರಗಳೇನೇ ಇರಲಿ; ಸದ್ಯಕ್ಕಂತೂ ರಾಜ್ಯ ಬಿಜೆಪಿಯ ಬೆಳವಣಿಗೆಗಳು ಮತ್ತು ಅವುಗಳಿಗೆ ಬಿಜೆಪಿ ದೆಹಲಿ ವರಿಷ್ಠರು ಪ್ರತಿಕ್ರಿಯಿಸುತ್ತಿರುವ ರೀತಿಗಳು ಬಿಜೆಪಿಯ ವರ್ಚಸ್ಸನ್ನಂತೂ ಮುಕ್ಕಾಗಿಸಿವೆ ಎಂಬುದು ತಳ್ಳಿಹಾಕಲಾಗದ ವಾಸ್ತವ.