ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ವಿಪಕ್ಷ ಬಿಜೆಪಿ ಬೆಂಬಲ ನೀಡುವ ಮೂಲಕ ಹೋರಾಟವನ್ನು ಇನ್ನಷ್ಟು ತೀವ್ರಗೊಳ್ಳುವಂತೆ ಮಾಡಿದೆ.

ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಗುರುವಾರದಂದು ರಾಜ್ಯಾದ್ಯಂತ ಸಾರಿಗೆ ನೌಕರರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ. ವೇತನ ಪರಿಷ್ಕರಣೆ, ಹಿಂಬಾಕಿ ಪಾವತಿ ಹಾಗೂ ಸಿಬ್ಬಂದಿಗಳ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಮುಷ್ಕರ ನಡೆಯಲಿದ್ದು. ಆದರೆ ಬಿಜೆಪಿಯ ಬೆಂಬಲದಿಂದ ಮುಷ್ಕರ ಇನ್ನಷ್ಟು ಕಾವು ಪಡೆದುಕೊಳ್ಳಲಿದೆ.
ರಾಜ್ಯದ ಸಾರಿಗೆ ನಿಗಮಗಳಲ್ಲಿನ ಕಾರ್ಮಿಕರ ವೇತನ ಹಿಂಬಾಕಿ ಪಾವತಿ ಹಿನ್ನೆಲೆಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ (ರಿ.) ಕೈಗೊಂಡಿರುವ ʼಅಸಹಕಾರ ಚಳವಳಿʼಯನ್ನು ಬಿಜೆಪಿ ಪೂರ್ಣವಾಗಿ ಬೆಂಬಲಿಸುತ್ತದೆ. ಕೆ. ಎಸ್. ಆರ್. ಟಿ. ಸಿ. ಕಾರ್ಮಿಕರ 38 ತಿಂಗಳ ವೇತನ ಹಿಂಬಾಕಿ ಪಾವತಿ ಹಾಗೂ 1.1.2024 ರಿಂದ ವೇತನ ಪರಿಷ್ಕರಣೆ ಜಾರಿಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವ ಮೂಲಕ ಬಿಜೆಪಿಯು ತನ್ನ ಬೆಂಬಲ ಘೋಷಿಸಿದೆ.
ಇದನ್ನೂ ಓದಿ : ಕುರ್ಚಿ ಕಚ್ಚಾಟದಲ್ಲಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಕಾಡ್ತಿದೆಯಾ ಮಾಧ್ಯಮಗಳ ಭಯ..?
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಾರಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರವು ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವುದು ಕೇವಲ ಆಡಳಿತ ವೈಫಲ್ಯವಲ್ಲ, ಇದು ಸಾಮಾಜಿಕ ನ್ಯಾಯದ ಮೇಲಿನ ಅವಮಾನವೂ ಹೌದು ಕಾರ್ಮಿಕರ ಸಹನೆಗೆ ಮಿತಿ ಇದೆ. ಎಂಬುದನ್ನು ಸರ್ಕಾರ ಮನಗಾಣಬೇಕು. ತಕ್ಷಣವೇ 38 ತಿಂಗಳ ವೇತನ ಹಿಂಬಾಕಿಯನ್ನು ಬಿಡುಗಡೆ ಮಾಡದೇ ಮತ್ತು ವೇತನ ಪರಿಷ್ಕರಣೆಯನ್ನು ಜಾರಿಗೊಳಿಸದೇ ಇದ್ದಲ್ಲಿ, ಈ ಹೋರಾಟವು ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಸರ್ಕಾರ ಗಮನದಲ್ಲಿಡಬೇಕು ಎಂದು ವಿಜಯೇಂದ್ರ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.






