ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 19 ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಒಟ್ಟು 33 ಸಚಿವರು ಡಿ.ಕೆ ಶಿವಕುಮಾರ್ ಸಂಪುಟ ಸೇರಿದಂತಾಗಿದೆ. ಆದರೆ, ಈ ಬಾರಿ ಸಂಪುಟದಲ್ಲಿ ಒಬ್ಬರೂ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಕರ್ನಾಕಟ ಕಾಂಗ್ರೆಸ್ ಸಂಪುಟದಲ್ಲಿ 30% ಬೇಡ ಮೂರು ಜನ ಮಹಿಳೆಯರಿಗೆ ಆದರೂ ಸಚಿವ ಸ್ಥಾನ ಕೊಡಬಹುದಿತ್ತು ಎನ್ನುವ ಅಭಿಪ್ರಾಯ ಜೋರಾಗಿದ್ದು, ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಪ್ರತಿನಿಧಿತ್ವಕ್ಕೆ ಅವಕಾಶ ಸಿಗದಿರುವುದು ಹಲವು ವಲಯಗಳಲ್ಲಿ ಅಸಮಾಧಾನ ಮೂಡಿಸಿದೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ನೋಡಿಕೊಳ್ಳಲು ಕೂಡ ಮಹಿಳಾ ಸಚಿವೆ ಇಲ್ಲದಿರುವುದು ಟೀಕೆಗೆ ಗುರಿಯಾಗಿದೆ.

ಒಂದೆಡೆ ಕೆಲ ಶಾಸಕರು ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಪಕ್ಷದ ವಿರುದ್ಧ ಗುಡುಗುತ್ತಿದ್ದರೆ, ಇನ್ನೊಂದೆಡೆ ಮಹಿಳೆಯರಿಗೆ ಸಚಿವ ಸ್ಥಾನ ಕೊಡುವುದು ಕೂಡ ಸದ್ಯ ಪಕ್ಷಕ್ಕೆ ಕಗ್ಗಂಟಾಗಿದೆ. ಹಿಂದಿನ ಸರ್ಕಾರದಲ್ಲಿ ಸಚಿವೆಯಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ಮೇಲ್ಮನೆಯ ನೂತನ ಸದಸ್ಯೆ ಗಾಯತ್ರಿ ಶಾಂತೇಗೌಡ ಹಾಗೂ ಎಂಎಲ್ಸಿ ಉಮಾಶ್ರೀ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದು, ತಮ್ಮ ತಮ್ಮ ಕ್ಷೇತ್ರದ ಮಹಿಳಾ ಕಾಂಗ್ರೆಸ್ ನಾಯಕಿಯರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಬೆಂಬಲಿಗರ ಒತ್ತಡ ಜೋರಾಗಿದೆ.

ಮಹಿಳೆಯರಿಗೆ ಸಚಿವ ಸ್ಥಾನ ಹಂಚಿಕೆ ಸದ್ಯ ಕರ್ನಾಟಕ ಕಾಂಗ್ರೆಸ್ ಮುಂದಿನ ದೊಡ್ಡ ಸವಾಲಾಗಿದ್ದು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತ್ರವಲ್ಲದೇ ಪಕ್ಷದ ಹಿರಿಯ ನಾಯಕರಿಗೂ ಕೂಡ ಇದೊಂದು ಛಾಲೆಂಜಿಂಗ್ ಸನ್ನಿವೇಶವಾಗಿದೆ. ಸದ್ಯ ಒಬ್ಬ ಮಹಿಳಾ ಸಚಿವೆಗೆ ಸಂಪುಟದಲ್ಲಿ ಅವಕಾಶವಿದ್ದು, ಸಂಪೂರ್ಣ ಸಂಪುಟದಲ್ಲಿ ಒಬ್ಬರೇ ಮಹಿಳೆಯರಿಗೆ ಸ್ಥಾನ ನೀಡಿದರೆ ಅದರಿಂದ ಕೂಡ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸದ್ಯ ಚತುರ ನಡೆ ಅನುಸರಿಸಬೇಕಾಗಿದ್ದು, ಕೊನೆಯ ಪಕ್ಷ ಇಬ್ಬರು ಮಹಿಳಾ ನಾಯಕಿಯರಿಗೆ ಸಂಪುಟದಲ್ಲಿ ಸ್ಥಾನ ನೀಡಿದರೆ ಈಗ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಬಹುದುದಾಗಿದೆ.

ಸದ್ಯ ಸಂಪುಟದಲ್ಲಿ ಒಂದು ಸ್ಥಾನ ಮಾತ್ರ ಇರುವುದರಿಂದ ಈಗಿರುವ ಸಚಿವರ ಪೈಕಿ ಒಬ್ಬರು ರಾಜೀನಾಮೆ ನೀಡಿದರೆ ಮಾತ್ರ ಮತ್ತೊಬ್ಬ ಮಹಿಳಾ ನಾಯಕಿಯರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ. ಆದರೆ ಈಗಾಗಲೇ ಸಿಕ್ಕಿರುವ ಸಚಿವ ಸ್ಥಾನವನ್ನು ತೊರೆಯಲು ಯಾರು ಸಿದ್ಧರಿರುತ್ತಾರೆ ಎನ್ನುವುದೇ ಪ್ರಶ್ನೆ. ಆದರೆ ಈಗಿರುವ ಸಚಿವರ ಪೈಕಿ ಮೊದಲಿನಿಂದಲೂ ಪಕ್ಷ ನಿಷ್ಠೆ ಮೆರೆದು, ಪಕ್ಷಕ್ಕಾಗಿ ಸುಧೀರ್ಘ ಸೇವೆ ಸಲ್ಲಿಸಿರುವ ಕೆ.ಹೆಚ್ ಮುನಿಯಪ್ಪ ಪಕ್ಷದ ಹಿತಕ್ಕಾಗಿ ತಮ್ಮ ಸಚಿವ ಸ್ಥಾನ ತೊರೆಯಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಹೌದು ಸಚಿವ ಸ್ಥಾನ ಹಂಚಿಕೆಯಿಂದ ಒತ್ತಡಕ್ಕೆ ಸಿಲುಕಿರುವ ಕಾಂಗ್ರೆಸ್ ಪಕ್ಷಕ್ಕೆ ಸದ್ಯ ಎದುರಾಗಿರುವ ಸವಾಲನ್ನು ನಿವಾರಿಸಲು, ಪಕ್ಷದ ಹಿತಕ್ಕಾಗಿ ಕೆ.ಹೆಚ್ ಮುನಿಯಪ್ಪ ರಾಜೀನಾಮೆಗೆ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಎಲ್ಲಿಯೂ ಅಧೀಕೃತವಾದ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ. ಒಂದು ವೇಳೆ ಕೆ.ಹೆಚ್ ಮುನಿಯಪ್ಪ ರಾಜೀನಾಮೆ ನೀಡಿದರೆ ಅವರ ಸ್ಥಾನಕ್ಕೆ ಮಹಿಳಾ ಶಾಸಕಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಕೆ.ಹೆಚ್ ಮುನಿಯಪ್ಪ ಅವರ ಪಕ್ಷ ನಿಷ್ಠೆಗೆ ಪಕ್ಷವೂ ಕೂಡ ಈಗ ಬೆಲೆ ಕೊಡಬೇಕಾಗಿದ್ದು, ಕೆ.ಜಿ.ಎಫ್ ಕ್ಷೇತ್ರದ ಶಾಸಕಿ, ಕೆ.ಹೆಚ್ ಮುನಿಯಪ್ಪ ಅವರ ಪುತ್ರಿ ರೂಪಕಲಾ ಶಶಿಧರ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸದ್ಯದ ಸನ್ನಿವೇಶವನ್ನು ನಿರ್ವಹಿಸಬೇಕಿದೆ. ಒಂದು ವೇಳೆ ರೂಪಕಲಾ ಶಶಿಧರ್ ಅವರಿಗೆ ಸಚಿವ ಸ್ಥಾನ ನೀಡಿದರೆ ಕೋಲಾರ ಜಿಲ್ಲಾ ಉಸ್ತುವಾರಿಯನ್ನೂ ಕೂಡ ಅವರು ನಿರ್ವಹಿಸಬಹುದು. ಇದರಿಂದ ಕ್ಷೇತ್ರದಲ್ಲಿ ಪಕ್ಷ ಇನ್ನಷ್ಟು ಬಲಿಷ್ಠವಾಗಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.







