ಬೆಂಗಳೂರು : ರಾಜ್ಯದ ಶಕ್ತಿ ಸೌಧ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಸರ್ಕಾರ ನಿರ್ಬಂಧ ಹೇರಿರುವುದು ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನವೇ ಆಗಿದೆ. ಇದು ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿ ಹಾಕಲು ಹುಡುಕಿಕೊಂಡಿರುವ ಇನ್ನೊಂದು ದಾರಿಯಾಗಿದೆ.
ಭದ್ರತಾ ನೆಪವೊಡ್ಡಿ ಮಾಧ್ಯಮಗಳು ವಿಧಾನಸೌಧದಲ್ಲಿ ಎಲ್ಲೆಂದರಲ್ಲಿ ಶಾಸಕ, ಸಚಿವರ ಪ್ರತಿಕ್ರಿಯೆ ಪಡೆಯುವಂತಿಲ್ಲ. ನಿರ್ಧಿಷ್ಟ ಸ್ಥಳದಲ್ಲಿ ಮಾತ್ರ ಮಾಧ್ಯಮಗಳು ಇರಬೇಕು ಎಂದು ಸರ್ಕಾರ ಸೂಚಿಸಿದ್ದು. ಮಾಧ್ಯಮಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದು ಹೇಡಿತನಕ್ಕೆ ಸಾಕ್ಷಿ, ಅಕ್ರಮ ಬಯಲಾಗುವ ಆತಂಕ : ಕಾಂಗ್ರೆಸ್ ವಿರುದ್ಧ ದೋಸ್ತಿ ವಾಗ್ದಾಳಿ….
ಮಾತ್ತೆತ್ತಿದರೆ ಮಾಧ್ಯಮದ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳ ಹಕ್ಕನ್ನು ಕಸಿಯಲು ಮುಂದಾಗಿದ್ದಾರೆ ಎಂದು ಸರ್ಕಾರದ ನಡೆಯನ್ನು ವಿಪಕ್ಷಗಳು ಖಂಡಿಸಿವೆ. ಅಲ್ಲದೆ ಇದು ಸರ್ಕಾರದ ಹೇಡಿತನಕ್ಕೆ ಸಾಕ್ಷಿ ಅಂತ ಜೆಡಿಎಸ್ ವಾಗ್ದಾಳಿ ನಡೆಸಿದೆ.
ಪ್ರಶ್ನೆ ಕೇಳುವ ಪತ್ರಕರ್ತರನ್ನು ಕಂಡರೆ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟೊಂದು ನಡುಕವೇ? ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ಹೇಡಿತನಕ್ಕೆ ಸಾಕ್ಷಿ. ಸಚಿವರು, ಶಾಸಕರ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ಭಯವೇಕೆ? ಮಾಧ್ಯಮಗಳ ಧ್ವನಿ ಅಡಗಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆಯಲ್ಲವೇ ಸಿದ್ದರಾಮಯ್ಯ ಅವರೇ? ಎಂದು ಕಿಡಿಕಾರಿದೆ.
ಇದನ್ನೂ ಓದಿ : ಕಸ ವಿಲೇವಾರಿಗೆ ಅಡ್ಡಿಡಿಸುವವರ ಮನೆ ಮುಂದೆ ಕಸ ಸುರಿಯುತ್ತೇವೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ
ಸಂವಿಧಾನ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಸಮಾಜವಾದಿ ಮುಖವಾಡ ತೊಟ್ಟ ಮಜಾವಾದಿಗೆ ಇಂದು ನಡುಕ ಶುರುವಾಗಿದೆ. ಸರ್ಕಾರದ ಹಗರಣಗಳು, ಕಮಿಷನ್, ಟ್ರಾನ್ಸ್ ಫರ್ ದಂಧೆ, ಅಕ್ರಮಗಳು ಬಯಲಾಗುತ್ತವೆ ಎಂಬ ಆತಂಕದಿಂದ ಮಾಧ್ಯಮಗಳ ಸ್ವಾತಂತ್ರ್ಯ ಕಸಿಯಲು ಮುಂದಾಗಿದೆ. ಇದು ಪ್ರಜಾಪ್ರಭುತ್ವದ ಆಶಯದ ಮೇಲೆ ಪ್ರಹಾರವಾಗಿದೆ. ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಮುಖ್ಯಮಂತ್ರಿಗಳೇ, ಸತ್ಯವನ್ನು ಮುಚ್ಚಿಡಲು ಗೋಡೆಗಳನ್ನು ಕಟ್ಟುವುದು ಬಿಟ್ಟು, ಪಾರದರ್ಶಕ ಆಡಳಿತ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಸರ್ಕಾರದ ವಿರುದ್ಧ ಕೆಂಡಕಾರಿದೆ.
ಇನ್ನೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಾರ್ತಾ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸುವಂತೆ ಸೂಚಿಸಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿ ಕಾರಿದ್ದಾರೆ.
ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಬೆಳಗಾವಿ ಅಧಿವೇಶನದಲ್ಲಿ ದ್ವೇಷ ಭಾಷಣ ಕಾಯ್ದೆ ಜಾರಿಗೆ ತಂದಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಕಾಂಗ್ರೆಸ್ ಸರ್ಕಾರದ್ದು ಪ್ರಜಾಪ್ರಭುತ್ವ ಅಣಕಿಸುವ ನಡೆ ಎಂದು ಟೀಕಿಸಿದ್ದಾರೆ.ಇದು ವಿಧಾನಸೌಧದಲ್ಲಿ ಪಾಕಿಸ್ತಾನ ಜಯಘೋಷಗಳನ್ನು ನಿಲ್ಲಿಸಲು ಆಗದ ಅಯೋಗ್ಯ ಸರ್ಕಾರ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರಿಗೆ ಪುರಾವೆ ಇಲ್ಲ ಎಂದ ಸರ್ಕಾರ ಇದು. ಈಗ ಸಚಿವರ ಕಚೇರಿಯಲ್ಲಿ ಕಳ್ಳತನ ಬೆಳಕಿಗೆ ಬಂದಿದೆ, ಇದನ್ನ ನೆಪವೊಡ್ಡಿ ಮಾಧ್ಯಮಗಳ ಮೇಲೆ ನಿರ್ಬಂಧ ತರುವುದು ಸರಿಯಲ್ಲ, ನಾವು ಒಪ್ಪುವುದಿಲ್ಲ ಎಂದು ಗುಡುಗಿದ್ದಾರೆ.

ಎರಡನೇ ಬಾರಿ ಸಿದ್ದು ಸರ್ಕಾರದಿಂದ ಮಾಧ್ಯಮಗಳಿಗೆ ಕಡಿವಾಣ..
ಈಗ ಹೊರಡಿಸಿರುವಂತೆಯೇ ಈ ಹಿಂದೆ ಸಿದ್ದರಾಮಯ್ಯ ಅವರು ಕಳೆದ 2013-2018 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆಯೂ ವಿಧಾನಸೌಧದಲ್ಲಿ ಮಾಧ್ಯಮಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ವ್ಯರ್ಥ ಪ್ರಯತ್ನಕ್ಕೆ ಮುಂದಾಗಿದ್ದರು. ಅದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಹೊರಡಿಸಿದ್ದರು. ಆಗ ವಿಧಾನಸೌಧದ ಬದಲು ವಾರ್ತಾ ಇಲಾಖೆಯಲ್ಲಿ ಸಚಿವರ ಮತ್ತು ಸಂಬಂಧಪಟ್ಟವರು ಪತ್ರಿಕಾಗೋಷ್ಠಿ ನಡೆಸಬೇಕು ಎಂಬ ಸೂಚನೆ ಕೊಟ್ಟಿದ್ದರು. ಆದರೆ ಅದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ವ್ಯಾಪಕ ವಿರೋಧಗಳು ಬಂದ ಬಳಿಕ ಕೊನೆಗೆ ಅಧಿಸೂಚನೆಯನ್ನೇ ಹಿಂಪಡೆಯಲಾಗಿತ್ತು.

ಅದರಂತೆಯೇ ಇತ್ತೀಚಿಗಷ್ಟೇ ನಗರಾಭಿವೃದ್ದಿ ಸಚಿವರ ಕೊಠಡಿಯಲ್ಲಿ ಕಳ್ಳತನದ ಪ್ರಕರಣ ಬಯಲಾಗಿತ್ತು. ಅಷ್ಟೊಂದು ಬಿಗಿ ಭದ್ರತೆ ಇರುವ ವಿಧಾನಸೌಧದಲ್ಲಿಯೇ ಕಳ್ಳತನವಾಗಿದ್ದು, ಸರ್ಕಾರಕ್ಕೂ ಇರಿಸು ಮುರಿಸು ತಂದಿತ್ತು. ಇದೇ ಕಾರಣವೊಡ್ಡಿ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಸರ್ಕಾರ ಮಾಧ್ಯಮಗಳನ್ನು ವಿಧಾನಸೌಧಕ್ಕೆ ಪ್ರವೇಶಕ್ಕೆ ತಡೆಯಲು ಎರಡನೇ ಬಾರಿಗೆ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.
ಕಾಗೇರಿ ಹೊರಡಿಸಿದ್ದ ಆದೇಶದ ವಿರುದ್ಧ ಸಿಡಿದೆದ್ದಿದ್ದ ಮಾಧ್ಯಮಗಳು..
ಇಷ್ಟೇ ಅಲ್ಲದೆ ಈ ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗಲೂ ಮಾಧ್ಯಮಗಳನ್ನು ತಡೆಯುವ ಯತ್ನ ನಡೆದಿತ್ತು. ಆಗ ವಿಧಾನಸಭಾ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿವೇಶನದ ಸಂದರ್ಭದಲ್ಲಿ ಕಲಾಪ ನೇರಪ್ರಸಾರವನ್ನು ಯಾವುದೇ ಖಾಸಗಿ ಮಾಧ್ಯಮಗಳು ಮಾಡಬಾರದೆಂದು ಆದೇಶ ಹೊರಡಿಸಿದ್ದರು. ಕೇವಲ ಸರ್ಕಾರದ ವಾಹಿನಿಯಿಂದ ಫೀಡ್ ಮಾಡಬೇಕು. ನೇರವಾಗಿ ವಿಧಾನಸೌಧದಲ್ಲಿ ಯಾವುದೇ ಮಾಧ್ಯಮಗಳು ಕಲಾಪದ ಪ್ರಸಾರ ಮಾಡಲು ಅವಕಾಶವಿಲ್ಲ ಎಂಬ ಸೂಚನೆ ನೀಡಿದ್ದರು.
ಆದರೆ ಈ ವಿವಾದಾತ್ಮಕ ಆದೇಶದ ವಿರುದ್ಧ ಸಿಡಿದೆದ್ದಿದ್ದ ಮಾಧ್ಯಮಗಳು ಹಾಗೂ ಪತ್ರಕರ್ತರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪ್ರತಿಭಟನೆ ನಡೆಸಿದ್ದರು. ಆದರೆ ಅದೇ ಸಾಲಿಗೆ ಈಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೇರಿಕೊಂಡಿದ್ದು, ಇದನ್ನು ಮಾಧ್ಯಮಗಳು ತೀವ್ರವಾಗಿ ಖಂಡಿಸುತ್ತಿವೆ.






