ಓರಲ್ ಸ್ಟೀರಾಯ್ಡ್‌ಗಳ ದುರುಪಯೋಗ ಮತ್ತು ಅನಿಯಂತ್ರಿತ ಮಧುಮೇಹವು ಭಾರತದ ಕೋವಿಡ್ -19 ರೋಗಿಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕು ಏಕಾಏಕಿ ಏರಲು ಕಾರಣ ಎಂದು ಇಬ್ಬರು ಹಿರಿಯ ಆರೋಗ್ಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಕರೋನಾ-ಸಂಬಂಧಿತ ಮ್ಯೂಕೋರ್ಮೈಕೋಸಿಸ್ (mucormycosis)ನ ಹಿಂದಿನ ಕಾರಣ ಸ್ಟೀರಾಯ್ಡ್ಗಳ ದುರುಪಯೋಗ. ಅನಿಯಂತ್ರಿತ ಮಧುಮೇಹ ಹೊಂದಿರುವ ಕೋವಿಡ್ -19 ಪಾಸಿಟಿವ್ ರೋಗಿಗಳು ಮತ್ತು ಸ್ಟೀರಾಯ್ಡ್ ತೆಗೆದುಕೊಳ್ಳುವ ರೋಗಿಗಳಲ್ಲಿ ಕಪ್ಪು ಶಿಲೀಂಧ್ರ (black fumgus)ಗಳ ಸೋಂಕಿನ ಸಾಧ್ಯತೆಗಳು ಹೆಚ್ಚಾಗುತ್ತವೆ. ಇದನ್ನು ತಡೆಯಲು ನಾವು ಸ್ಟೀರಾಯ್ಡ್‌ಗಳ ದುರುಪಯೋಗವನ್ನು ನಿಲ್ಲಿಸಬೇಕು ”ಎಂದು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಿರ್ದೇಶಕ ರಂದೀಪ್ ಗುಲೇರಿಯಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ರೋಗವು ಮುಖದ ಮೇಲೆ ಪರಿಣಾಮ ಬೀರುತ್ತದೆ, ಮೂಗು, ಕಣ್ಣು ಅಥವಾ ಮೆದುಳಿನ ಕಕ್ಷೆಗೆ ಸೋಂಕು ತರುತ್ತದೆ ಮತ್ತು ಇದು ದೃಷ್ಟಿ ನಷ್ಟಕ್ಕೂ ಕಾರಣವಾಗಬಹುದು. ಅಲ್ಲದೆ ಇದು ಶ್ವಾಸಕೋಶಕ್ಕೂ ಹರಡುವ ಸಾಧ್ಯತೆಗಳಿರುತ್ತವೆ.

“ಸ್ಟೀರಾಯ್ಡ್‌ಗಳನ್ನು ವಿವೇಚನೆಯಿಲ್ಲದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀಡಬಾರದು. ಅನಿಯಂತ್ರಿತ ಮಧುಮೇಹ ಸೋಂಕಿಗೆ ಕಾರಣವಾಗುವುದರಿಂದ ಮಧುಮೇಹವನ್ನು ಸಹ ಆಗಾಗ ಪರೀಕ್ಷಿಸಬೇಕು ”ಎಂದು NITI ಆಯೋಗದ ಸದಸ್ಯ ಮತ್ತು ಏಮ್ಸ್‌ನ ಮಾಜಿ ಪ್ರಾಧ್ಯಾಪಕ ವಿ ಕೆ ಪಾಲ್ ಹೇಳಿದರು.
ಕೋವಿಡ್ -19 ಸಂಬಂಧಿತ ಮ್ಯೂಕಾರ್ಮೈಕೋಸಿಸ್ ಪ್ರಕರಣಗಳ ರಾಷ್ಟ್ರೀಯ ಅಂಕಿ ಅಂಶ ಇಲ್ಲ ಎಂದ ಪಾಲ್ ಕೆಲವು ರಾಜ್ಯಗಳು 400-500 ಪ್ರಕರಣಗಳನ್ನು ವರದಿ ಮಾಡಿದ ನಂತರ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ವಿವರವಾದ ಒಂದನ್ನು ರಚಿಸಲು ಪ್ರಾರಂಭಿಸಿತು ಎಂದಿದ್ದಾರೆ. ದೆಹಲಿಯ ಏಮ್ಸ್ ನಲ್ಲಿ ಇಂತಹ 23 ಪ್ರಕರಣಗಳಿವೆ ಎಂದು ಗುಲೇರಿಯಾ ಹೇಳಿದ್ದಾರೆ.
ಕಳೆದ ವಾರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಕಾರಣ ತಮಿಳುನಾಡು ಹೊಸ ಕಳವಳಕ್ಕೆ ಕಾರಣವಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಚೆನ್ನೈ, ಚೆಂಗಲ್ಪಟ್ಟು ಮತ್ತು ಕೊಯಮತ್ತೂರು ಮೂರು ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಲ್ಲಿ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿವೆ.

516 ಜಿಲ್ಲೆಗಳು ಶೇಕಡಾ 10 ಕ್ಕಿಂತ ಹೆಚ್ಚು ಪರೀಕ್ಷೆಯ ಫಲಿತಾಂಶವು ಪಾಸಿಟಿವ್ ಅನುಪಾತವನ್ನು ಹೊಂದಿವೆ, ಅದರಲ್ಲಿ 316 ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಸೋಂಕು ಹೆಚ್ಚುತ್ತಿವೆ. ಮತ್ತು 187 ಜಿಲ್ಲೆಗಳು ಸೋಂಕು ಕಡಿಮೆಯಾಗುತ್ತಿರುವ ಲಕ್ಷಣಗಳನ್ನು ಸೂಚಿಸುತ್ತಿವೆ. ಕಳೆದ ಕೆಲವು ವಾರಗಳಿಂದಲೂ ಅತ್ಯಧಿಕ ಪ್ರಕರಣಗಳು ದಾಖಲಾಗುತ್ತಿದ್ದ ಮಹಾರಾಷ್ಟ್ರ, ಗುಜರಾತ್, ಛತ್ತೀಸ್ಗಢ ಮತ್ತು ಉತ್ತರ ಪ್ರದೇಶದಲ್ಲಿ ಪಾಸಿಟಿವ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲೋವ್ ಅಗರ್ವಾಲ್ ಹೇಳಿದ್ದಾರೆ.