ಕೋವಿಡ್‌ ಸೋಂಕಿತರ ಸಾವಿನ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ -ಸಿದ್ದರಾಮಯ್ಯ

ಕರೋನಾ ಪರೀಕ್ಷೆ ಮತ್ತು ಸೋಂಕಿತರ ಸಾವಿನ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ಪರೀಕ್ಷೆ ಪ್ರಮಾಣವನ್ನು ಕೂಡಲೇ ಹೆಚ್ವಿಸಿ ಕೋವಿಡ್ನಿಂದಾದ ಮರಣಗಳನ್ನು ನಿಖರವಾಗಿ ದಾಖಲಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಗ್ರಹಿಸಿದ್ದು, ಈ ಕುರಿತು ಸಿಎಂ ಯಡಿಯೂರಪ್ಪಾಗೆ  ಪತ್ರ ಬರೆದಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ  ಬರೆದ ಪತ್ರದಲ್ಲಿರುವ ಮುಖ್ಯಾಂಶಗಳು ಹೀಗಿದೆ:

ಕಳೆದ ಕೆಲವು ದಿನಗಳಿಂದ ಮುಖ್ಯ ಮಂತ್ರಿಗಳು ರಾಜ್ಯದಲ್ಲಿ ಕರೋನಾ ಸೋಂಕು ಕಡಿಮೆಯಾಗುತ್ತಿದೆ ಎಂದು ಮಾತನಾಡುತ್ತಿದ್ದಾರೆ. ತಜ್ಞರ ಪ್ರಕಾರ ವೈರಸ್ಸಿನ ಅಲೆ ಕಡಿಮೆಯಾಗುವುದೆಂದರೆ  ಟೆಸ್ಟುಗಳನ್ನು ನಡೆಸಿದಾಗ ಪಾಸಿಟಿವಿಟಿ ದರ ಶೇ. 5 ಕ್ಕಿಂತ ಕಡಿಮೆಯಾಗಬೇಕು. ವಾಸ್ತವದಲ್ಲಿ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುವುದರ ಬದಲು ಹೆಚ್ಚಾಗುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಳ್ಳಾರಿ, ಹಾಸನ, ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮುಂತಾದ ಜಿಲ್ಲೆಗಳ ಪಾಸಿಟಿವಿಟಿ ದರ ಶೇ 50 ಕ್ಕಿಂತ ಹೆಚ್ಚಿಗೆ ಇದೆ. ಇನ್ನುಳಿದ ಜಿಲ್ಲೆಗಳಲ್ಲೂ  ಪಾಸಿಟಿವಿಟಿ ದರ ಶೇ. 35 ರ ಆಸುಪಾಸಿನಲ್ಲೇ ಇದೆ.  20 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳು ಒಂದೆರಡಷ್ಟೆ ಹೀಗಿರುವಾಗ ಸೋಂಕು ಕಡಿಮೆಯಾಗುತ್ತಿದೆ ಎಂದರೆ ಸುಳ್ಳು ಹೇಳಲಾಗುತ್ತಿದೆ ಎಂದು ಅರ್ಥ ಎಂದಿದ್ದಾರೆ.

ಕಡಿಮೆಯಾದ ಟೆಸ್ಟುಗಳು

ಟೆಸ್ಟುಗಳು, ಸಾವುಗಳು, ಚಿಕಿತ್ಸೆಗಳು ಎಲ್ಲದರಲ್ಲೂ ಭೀಕರ ಸುಳ್ಳುಗಳನ್ನು ಹೇಳುತ್ತಾ ಬರಲಾಗುತ್ತಿದೆ. ಟೆಸ್ಟುಗಳ ವಿಚಾರವನ್ನೇ ನೋಡಿದರೂ ಕೂಡ  ಏಪ್ರಿಲ್ ತಿಂಗಳ ಕಡೆಯ ವಾರದಲ್ಲಿ ಪ್ರತಿ ದಿನ ಸರಾಸರಿ 1.75 ಲಕ್ಷ ಟೆಸ್ಟುಗಳನ್ನು ಮಾಡಲಾಗುತ್ತಿತ್ತು. ಈಗ ಶೇ 30 ರಷ್ಟು ಕಡಿಮೆಯಾಗಿ ದಿನಕ್ಕೆ ಸರಾಸರಿ  1.15 ಲಕ್ಷದಿಂದ 1.24 ಲಕ್ಷಕ್ಕೆ ಇಳಿಕೆಯಾಗಿದೆ. 6-5-2021 ರಂದು 264441 ಟೆಸ್ಟುಗಳನ್ನು ಮಾಡಲಾಗಿದ್ದರೆ 11-5-2021 ರಂದು ಕೇವಲ 116238 ಟೆಸ್ಟುಗಳನ್ನು ಮಾಡಿದ್ದಾರೆ.

ಇದರ ಜೊತೆಗೆ ಲಸಿಕೆ ಹಾಕಿಸಿಕೊಳ್ಳಲು ಸಮರ್ಪಕ ವ್ಯವಸ್ಥೆ ಮಾಡದೆ ಅಲ್ಲೂ ಕಿ.ಮೀ ಗಟ್ಟಲೆ ಕ್ಯೂ ನಿಲ್ಲಿಸುವುದು, ಪಡಿತರ ಪಡೆಯಲು ಅಂಗಡಿಗಳ ಮುಂದೆ ಕ್ಯೂ ನಿಲ್ಲಿಸುವುದೂ ನಡೆಯುತ್ತಿದೆ. ಈ ರೀತಿಯ ಅವ್ಯವಸ್ಥೆಗಳಿಂದ ಕೊರೋನಾವನ್ನು ನಿಯಂತ್ರಿಸಲು ಸಾಧ್ಯವೇ? ಸರ್ಕಾರ ಈ ಎಲ್ಲ ತಪ್ಪುಗಳನ್ನು ಮುಚ್ಚಿಕೊಳ್ಳಲು ಟೆಸ್ಟುಗಳನ್ನೇ ಕಡಿಮೆ ಮಾಡಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಸುಳ್ಳುಗಳನ್ನು ಹೇಳಲಾಗುತ್ತಿದೆ  ಎಂದು ದೂರಿದ್ದಾರೆ.

ವ್ಯಾಕ್ಸಿನ್ ಕುರಿತ ಯೋಜನೆ ಏನು?

ವ್ಯಾಕ್ಸಿನ್ ಹಾಕುವುದರ ವಿಚಾರದಲ್ಲೂ ಹೀಗೇ ಆಗಿದೆ. ಲಸಿಕೆಗಳ ಪೇಟೆಂಟನ್ನು ರದ್ದು ಪಡಿಸಿ ಹೆಚ್ಚು ಕಂಪೆನಿಗಳಿಗೆ ಉತ್ಪಾದನೆ ಮಾಡಲು ಅವಕಾಶ ಮಾಡಿಕೊಡಿ ಎಂದು ಸುಮಾರು ದಿನಗಳಿಂದ ಒತ್ತಾಯಿಸುತ್ತಿದ್ದೆವು.

ಈ ಕುರಿತು ನಾನು ಪ್ರಧಾನ ಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದೆ. ಇಷ್ಟೆಲ್ಲ ಮಾಡಿದ ಮೇಲೆ ಈಗ ನಿಧಾನಕ್ಕೆ ಸರ್ಕಾರದ ಅಧೀನದ ಮೂರು ಕಂಪೆನಿಗಳಿಗೆ ಕೋವ್ಯಾಕ್ಸಿನ್ ಲಸಿಕೆ ತಯಾರಿಸಲು ಅವಕಾಶ ನೀಡಲಾಗಿದೆ. ನನ್ನ ಪ್ರಕಾರ ಪ್ರತಿ ರಾಜ್ಯಕ್ಕೆ ಕನಿಷ್ಟ ಒಂದೊಂದು ಕಂಪೆನಿಗಳಿಗೆ ಉತ್ಪಾದನೆ ಮಾಡಲು ಅವಕಾಶ ನೀಡಬೇಕು. ಅಮೆರಿಕದಲ್ಲಿ ಈಗಾಗಲೇ 12 ವರ್ಷ ತುಂಬಿದ ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಕೊರೋನಾದ ಮೂರನೇ ಅಲೆಯಲ್ಲಿ ಹೆಚ್ಚು ಬಾಧಿತರಾಗುವವರು ಮಕ್ಕಳೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪೋಷಕರು ಹೆಚ್ಚು ಆತಂಕಕ್ಕೆ ಒಳಗಾಗುತ್ತಿದ್ದಾರೆ. ನಮ್ಮಲ್ಲೂ ಮುಂದಿನ ಎರಡು ಮೂರು ತಿಂಗಳಲ್ಲಿ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿ ಮುಗಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಕನಿಷ್ಟ ಸರ್ಕಾರ ಗರಿಷ್ಟ ಆಡಳಿತ’ ಎಂದು ಬುರುಡೆ ಬಿಟ್ಟು ಜನರನ್ನು ಯಾಮಾರಿಸಿದ ಮೋದಿಯವರ ಸರ್ಕಾರ ಮತ್ತು ಅವರ ಪಟಾಲಮ್ಮಿಗೆ ಬಹುಶಃ ಈಗಲಾದರೂ ಅರ್ಥವಾಗಬೇಕು ;  ಸರ್ಕಾರದ ಅಧೀನದಲ್ಲಿರುವ ಕಂಪೆನಿ, ಕಾರ್ಖಾನೆಗಳು ಮಾತ್ರ ಇಂತಹ ತುರ್ತು ಪರಿಸ್ಥಿತಿಯಲ್ಲಿ ದೇಶದ ರಕ್ಷಣೆಗೆ ನಿಲ್ಲುತ್ತವೆ ಎಂದು. ಸಾರಾ ಸಗಟಾಗಿ ಸರ್ಕಾರದ ಅಧೀನದಲ್ಲಿದ್ದ ಕಾರ್ಖಾನೆ, ಕಂಪೆನಿ, ಸಂಸ್ಥೆಗಳನ್ನು ಕಾರ್ಪೊರೇಟ್ ಧಣಿಗಳಿಗೆ ಮಾರಾಟ ಮಾಡಿ ಅದರ ಮೂಲಕ ಜನರ ಸಂಪತ್ತನ್ನೆಲ್ಲ ದೋಚುವ ಭೀಕರ ಭ್ಟಷ್ಟಾಚಾರಕ್ಕೆ ಅವಕಾಶ ಕೊಡುವ ಕೇಂದ್ರ ಸರ್ಕಾರಕ್ಕೆ ಕೇವಲ ಒಬ್ಬನೇ ಒಬ್ಬ ವ್ಯಾಕ್ಸಿನ್ ತಯಾರಕನನ್ನು ನಿಯಂತ್ರಿಸಲಾಗದ ದುಸ್ಥಿತಿ ಬಂದೊದಗಿದೆ.‌‌ ಸಾರ್ವಜನಿಕ ಕಂಪೆನಿಗಳನ್ನು ಯಾವ ಕಾರಣಕ್ಕೂ ಖಾಸಗಿಯವರಿಗೆ ನೀಡಬಾರದೆಂದು ಒತ್ತಾಯಿಸುವ ಠರಾವನ್ನು  ಮಾಡಿ ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಬೇಕು.

2019 ಕ್ಕೆ ಹೋಲಿಸಿದರೆ  2020ರ ಡಿಸೆಂಬರ್ 31 ರವರೆಗೆ  ಹೃದಯಾಘಾತಗಳಿಂದ 38583, ವಯಸ್ಸಿನ ಕಾರಣಗಳಿಂದ 28647, ಪ್ಯಾರಾಲಿಸಿಸ್ ನಿಂದ 4262ಕ್ಕೂ ಹೆಚ್ಚು ಜನ ಮರಣ ಹೊಂದಿದ್ದಾರೆ. ಕೋವಿಡ್ ನಿಂದ ಮರಣ ಹೊಂದಿದವರು  ಡಿಸೆಂಬರ್ ವರೆಗೆ 12090 ಎಂದು ರಾಜ್ಯ ಸರ್ಕಾರ ಹೇಳುತ್ತಿದೆ ಆದರೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಮಾಹಿತಿಯ ಪ್ರಕಾರ 22320.  ಈ ನಾಲ್ಕು ಕಾಯಿಲೆಗಳಿಂದಲೇ 2019 ಕ್ಕೆ ಹೋಲಿಸಿದರೆ 93812ಕ್ಕೂ ಹೆಚ್ಚು ಜನ ಮರಣ ಹೊಂದಿದ್ದಾರೆ. ಇವೆಲ್ಲವೂ ಕೊರೋನ ಸಂಬಂಧಿತ ಸಾವುಗಳು ಎಂಬುದರಲ್ಲಿ ಯಾವ ಅನುಮಾನಗಳೂ ಉಳಿದಿಲ್ಲ. ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹೃದಯಾಘಾತದಿಂದ ಮರಣ ಹೊಂದುತ್ತಿರುವವಲ್ಲಿ ಅರ್ಧಕ್ಕೂ ಹೆಚ್ಚು ಜನರಿಗೆ ಕೊರೋನ ಇರುವುದು ದೃಢಪಟ್ಟಿದೆ ಎಂದು ಇತ್ತೀಚೆಗೆ ಹೇಳಿದ್ದಾರೆ. ಇದೇ ಮಾತನ್ನೇ ನಾನು ಪದೇ ಪದೇ ಹೇಳುತ್ತಾ ಬಂದಿದ್ದೆ . ಸರ್ಕಾರ ನನ್ನ ಮಾತುಗಳಿಗೆ ಉತ್ತರಿಸುವ ಧೈರ್ಯವನ್ನು ಇದುವರೆಗೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಇಷ್ಟೆಲ್ಲದರ ನಡುವೆ ಸರ್ಕಾರದಲ್ಲಿನ ಅನೇಕರು, ಬಿಜೆಪಿಯ ಮುಖಂಡರುಗಳು ಜಗತ್ತಿನ ದೇಶಗಳಿಗಿಂತ ನಮ್ಮಲ್ಲಿ ಕಡಿಮೆ ಸಾವುಗಳಾಗಿವೆ. ಇದು ಮೋದಿಯವರ ಸಾಧನೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಬಿಜೆಪಿಯು ಸುಳ್ಳು ಹೇಳುವುದಕ್ಕಾಗಿಯೇ ಸೋಷಿಯಲ್ ಮೀಡಿಯಾ ಎಂಬ ಕಾರ್ಖಾನೆಯನ್ನು ತೆರೆದು ಕೂತಿದೆ. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಧೈರ್ಯವಿದ್ದರೆ ಪ್ರತಿ ತಿಂಗಳು ಸಂಭವಿಸಿದ ಮರಣಗಳನ್ನು ಮತ್ತು ವಿತರಿಸಿದ ಮರಣ ಪ್ರಮಾಣ ಪತ್ರಗಳ ವಿವರಗಳನ್ನು ಪ್ರಕಟಿಸಬೇಕು ಎಂದಿದ್ದಾರೆ.

ಈ ಎಲ್ಲ ಅಂಶಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಟೆಸ್ಟುಗಳನ್ನು ಹೆಚ್ಚಿಸಬೇಕು. ಗರಿಷ್ಟ 24 ಗಂಟೆಗಳ ಒಳಗೆ ಫಲಿತಾಂಶ ಸಿಗುವಂತೆ ಮಾಡಬೇಕು. ಮುಂಬೈ ಮಾದರಿಯಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕಿಸಿ ಆರೈಕೆ ಮಾಡಬೇಕು. ಮಕ್ಕಳಿಗೂ ಲಸಿಕೆ ಹಾಕಲು ಸಮರೋಪಾದಿಯಲ್ಲಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕು. ಕೋವಿಡ್‍ನಿಂದಾದ ಮರಣಗಳನ್ನು ನಿಖರವಾಗಿ ದಾಖಲಿಸಿ, ಪ್ರತಿ ತಿಂಗಳು ನೀಡಿದ ಮರಣ ಪ್ರಮಾಣಗಳ ವಿವರಗಳ ಕುರಿತು ದಾಖಲೆ ಬಿಡುಗಡೆ ಮಾಡಬೇಕೆಂದು  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...