ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ಬಿಜೆಪಿ ತನ್ನ ʼಅಭಿವೃದ್ಧಿ ಮಂತ್ರ, ಡಬಲ್ ಎಂಜಿನ್ ಸರ್ಕಾರʼ ಮೊದಲಾದ ಟಾಪಿಕ್ ನಿಂದ ಹಿಂದೆ ಸರಿದು ಮತ್ತೆ ತನ್ನ ಹಿಂದುತ್ವದ ದಾಳ ಹೂಡಲು ಶುರು ಮಾಡಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಮಂತ್ರದ ಜಪ ಮತದಾರರಿಂದ ಮತಾನುಗ್ರಹ ಪಡೆಯದಷ್ಟು ದುರ್ಬಲವಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಗುಜರಾತ್ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಗುಜರಾತ್‌ನ ಖಂಭಾತ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಕಾಂಗ್ರೆಸ್ ಹಿಂದೆಂದೂ ನಿರ್ದಿಷ್ಟ ಸಮುದಾಯದ ಅತಿಕ್ರಮಣ ನಿರ್ಮಾಣಗಳನ್ನು ತೆಗೆದುಹಾಕಲು ಹಿಂದೆ ಜಾರಿತ್ತು, ಆ ಕೆಲಸವನ್ನು ಈಗ ಬಿಜೆಪಿ ಮಾಡುತ್ತಿದೆ ಎಂದು ಹೇಳಿದ್ದಾರೆ.
ಗುಜರಾತಿನ ಓಖಾ ಪಟ್ಟಣದ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿರುವ ಮಝಾರಗಳನ್ನು ತೆಗೆದು ಹಾಕಿರುವ ಕುರಿತು ಉಲ್ಲೇಖಿಸಿದ ಕೇಂದ್ರ ಗೃಹ ಸಚಿವ, ಇನ್ನೂ ಇಂತಹ ಹಲವು ಅತಿಕ್ರಮಣ ತೆರವಿಕೆ ಮಾಡುವುದಾಗಿ ಘೋಷಿಸಿಕೊಂಡಿದ್ದಾರೆ. “ನಕಲಿ ಮಝಾರಗಳನ್ನು” (ದರ್ಗಾ) ತೆರವುಗೊಳಿಸುವುದಾಗಿ ಹೇಳಿದ ಅಮಿತ್ ಶಾ ಯಾವುದಕ್ಕೂ ಭಯಪಡಬೇಕಾದ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
“ಮಝಾರಗಳಾಗಿರಲಿ ಅಥವಾ ಸಮಾಧಿಯಾಗಿರಲಿ, ಅತಿಕ್ರಮಣಗಳನ್ನು ತೆಗೆದುಹಾಕಬೇಕಲ್ಲವೇ? ಇದು ಕಾಂಗ್ರೆಸ್‌ಗೆ ಇಷ್ಟವಾಗದಿರಬಹುದು. ಆದರೆ ಅವರಿಗೆ ಇಷ್ಟವಿಲ್ಲದಿದ್ದರೂ ಬಿಜೆಪಿ ಸ್ವಚ್ಛತೆಯನ್ನು ಮುಂದುವರಿಸಲಿದೆ. ಭಯಪಡುವ ಅಗತ್ಯವಿಲ್ಲ. ” ಎಂದು ಶಾ ಹೇಳಿದ್ದಾರೆ.

“ನಮ್ಮ ಸಿಎಂ ಭೂಪೇಂದ್ರ ಪಟೇಲ್ ಮತ್ತು ಗೃಹ ಸಚಿವ ಹರ್ಷ ಸಾಂಘ್ವಿ ಬೇಟ್ ದ್ವಾರಕಾದಲ್ಲಿ ‘ನಕಲಿ ಮಝಾರ್’ಗಳನ್ನು ಕೆಡವಿದ್ದಾರೆ. ಅವೆಲ್ಲವೂ ಮಝಾರ್‌ಗಳ ಹೆಸರಿನಲ್ಲಿ ನಡೆದ ಅತಿಕ್ರಮಣಗಳಾಗಿವೆ ಹಾಗೂ ಅವುಗಳನ್ನು ತೆರವುಗೊಳಿಸಲಾಗಿದೆ ಆದರೆ ನಾವು ಧ್ರುವೀಕರಣ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ,” ಎಂದು ಅವರು ಹೇಳಿದ್ದಾರೆ.
“ವರ್ಷಗಳಿಂದ ಪಾವಗಡದಲ್ಲಿ ಮಝಾರ್ ಇತ್ತು. ಬೆಟ್ಟದ ಮೇಲೆ ಕಾಳಿ ದೇವಸ್ಥಾನ ಕಟ್ಟಿರುವುದು ಬಿಜೆಪಿ ಸರ್ಕಾರ. ಅಂತಹ ಕೆಲಸವನ್ನು ಕಾಂಗ್ರೆಸ್ ಎಂದಿಗೂ ಮಾಡುವುದಿಲ್ಲ. ಆದರೆ ನಾವು ಯಾವುದೇ ಮತ ಬ್ಯಾಂಕ್‌ಗೆ ಹೆದರುವುದಿಲ್ಲ. ಬಿಜೆಪಿ ಸರ್ಕಾರಕ್ಕೆ ಅಧಿಕಾರದಲ್ಲಿರುವುದಕ್ಕಿಂತ ದೇಶದ ಭದ್ರತೆ ಮುಖ್ಯ.” ಎಂದು ಅಮಿತ್ ಶಾ ಬಹುಸಂಖ್ಯಾತ ಓಲೈಕೆ ಮಾಡಿದ್ದಾರೆ.
“ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಬೇಡಿ, ಇಲ್ಲದಿದ್ದರೆ ರಾಜ್ಯದಲ್ಲಿ ಮತ್ತೆ ಕೋಮುಗಲಭೆಗಳು ಪ್ರಾರಂಭವಾಗುತ್ತವೆ ಮತ್ತು ನೀವು ಮತ್ತೊಮ್ಮೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ” ಎಂದು ಶಾ ಎಚ್ಚರಿಸಿದ್ದು, ಹಲವು ವರ್ಷಗಳ ಬಳಿಕ ಮತ್ತೆ ಹಿಂದುತ್ವದ ದಾಳ ಹೂಡಿದ್ದು ಬಿಜೆಪಿ ತನ್ನ ಅಭಿವೃದ್ಧಿ ಮಂತ್ರ ಹಾಗೂ ಡಬಲ್ ಇಂಜಿನ್ ಸರ್ಕಾರಗಳ ಬಗ್ಗೆ ಸ್ವತಃ ಭರವಸೆ ಕಳೆದುಕೊಂಡಿದೆ ಎಂದು ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ.