ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕುರಿತು ಉಭಯ ರಾಜ್ಯದ ನಾಯಕರು ಹೇಳಿಕೆ ನೀಡಿರುವ ಬೆನ್ನಲ್ಲೇ ಬೆಳಗಾವಿ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಗಡಿ ವಿವಾದದ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೀಡಿರುವ ಹೇಳಿಕೆ ಖಂಡಿಸಿ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸಿರುವ ಮರಾಠ ಸಂಘಟನೆಗಳು ಕೆಸ್ಆರ್ಟಿಸಿ ಬಸ್ಸುಗಳಿಗೆ ಕಪ್ಪು ಬಣ್ಣ ಬಳಿದು ಆಕ್ರೋಶ ಹೊರಹಾಕಿದ್ದಾರೆ.
ನಿಪ್ಪಾಣಿ-ಔರಂಗಬಾದ್ ನಡುವೆ ಸಂಚರಿಸುವ ರಾಜ್ಯ ಸಾರಿಗೆ ನಿಗಮದ ಬಸ್ಸಿನ ಮೇಲೆ ಕಿಡಿಗೇಡಿಗಳು ಕಪ್ಪು ಹಾಗೂ ಕೇಸರಿ ಬಣ್ಣದಲ್ಲಿ ಖಂಡನಾ ವಾಕ್ಯಗಳನ್ನ ಬರೆದು ಕಿಡಿಗೇಡಿತನ ಮೆರೆದಿದ್ದಾರೆ.
ಸದ್ಯ ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಘಟನೆ ಕುರಿತು ಖಂಡನೆ ವ್ಯಕ್ತವಾಗುತ್ತಿದೆ ಮತ್ತು ಕಠಿಣ ಕ್ರಮಕ್ಕೆ ಆಗ್ರಹಿಸಿಲಾಗಿದೆ.
ಇತ್ತೀಚಿಗೆ ಗಡಿ ವಿವಾದದ ಕುರಿತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿಪ್ಪಾಣಿ ಹಾಗೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಎಂದು ಹೇಳಿ ವಿವಾದದ ಕಿಡಿ ಹೊತ್ತಿಸಿದ್ದರು.
ಇನ್ನು ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರದ ಸೊಲ್ಲಾಪುರ ಹಾಗೂ ಅಕ್ಕಲಕೋಟೆಯನ್ನು ಕರ್ನಾಟಕದ ಭಾಗವಾಗಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಆಗ್ರಹಿಸಿದ್ದರು ಮತ್ತು ದೇವೇಂದ್ರ ಫಡ್ನವೀಸ್ ಹಗಲು ಕನಸು ಕಾಣುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು.