ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಕೆಲವು ನಾಯಕರು ತಮ್ಮದೇ ಆದ ರೀತಿಯಲ್ಲಿ ರಾಜ್ಯದ ಅಭಿವೃದ್ದಿಗೆ ಹಾಗೂ ಏಳ್ಗೆಗೆ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಏಕೀಕರಣದ ಬಳಿಕ ಆ ಸಾಲಿನಲ್ಲಿ ಹಲವು ದಿಗ್ಗಜರು ತಮ್ಮ ಹೆಗ್ಗುರುತುಗಳನ್ನು ಉಳಿಸಿದ್ದಾರೆ. ಪಕ್ಷ ಯಾವುದೇ ಇರಲಿ ರಾಜಕೀಯ ಕ್ಷೇತ್ರಕ್ಕೂ ಹಾಗೂ ಸಮಾಜಕ್ಕೂ ಒಂದು ರೀತಿಯಲ್ಲಿ ಈ ನಾಯಕರು ಆಸ್ತಿಯಾಗಿದ್ದಾರೆ. ಹೀಗೆ ರಾಜ್ಯದ ಕಂಡು ನಾಯಕರ ಸಾಲಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಒಬ್ಬರಾಗಿದ್ದಾರೆ.
ಕರ್ನಾಟಕ ರಾಜ್ಯ ಕಂಡ ಜನಪ್ರಿಯ, ಜನಪರ ಹಾಗೂ ಕರ್ತವ್ಯ ಶೀಲ ಮುಖ್ಯಮಂತ್ರಿಗಳ ಸಾಲಿಗೆ ಯಡಿಯೂರಪ್ಪ ಹೆಸರು ಕೂಡ ಮೊದಲ ಸಾಲಿಗೆ ಬರುತ್ತದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಎಂದಾಕ್ಷಣ ನೆನಪಾಗುವ ಹೆಸರೇ ಈ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ. ಸಿದ್ದಲಿಂಗಯ್ಯ ಹಾಗೂ ಶ್ರೀಮತಿ ಪುಟ್ಟ ತಾಯಮ್ಮನವರಿಗೆ 1943ರ ಫೆಬ್ರವರಿ 27ರಂದು ಜನಿಸಿದ ಸುಪುತ್ರ ಬಿ.ಎಸ್. ಯಡಿಯೂರಪ್ಪ, ಉನ್ನತ ಮಟ್ಟದ ನಾಯಕ ಆಗುತ್ತಾರೆಂದು ಅವರು ಉಹಿಸಿರಲಿಲ್ಲ. ತಮ್ಮ ನಾಲ್ಕನೇ ವಯಸ್ಸಿನಲ್ಲಿ ತಾಯಿಯವರನ್ನು ಕಳೆದುಕೊಂಡರೂ ತಮ್ಮ ಗುರಿ ಸಾಧನೆಗೆ ಹಾಗೂ ಧ್ಯೇಯ ವಾದಕ್ಕೆ ಯಾವ ತೊಡಕೂ ಆಗಲಿಲ್ಲ. ಹೀಗೆ ರಾಜಕೀಯದಲ್ಲಿ ಮೇರು ಸಾಧನೆ ಮಾಡಿರುವ ಯಡಿಯೂರಪ್ಪ ಅವರ ಸುದೀರ್ಘ ರಾಜಕೀಯ ಜೀವನಕ್ಕೆ ಇಂದಿಗೆ ಸಾರ್ಥಕ 50 ವರ್ಷ ಪೂರ್ಣಗೊಂಡಿದೆ.

ಆದರೂ ಇಂದಿಗೂ ಸಹ ಪಕ್ಷದ ವಿಚಾರ ಹಾಗೂ ಜನರ ಮೇಲಿನ ಕಾಳಜಿಯಂತೂ ಎಳ್ಳಷ್ಟೂ ಕಡಿಮೆಯಾಗಿಲ್ಲ. ಯಡಿಯೂರಪ್ಪ ಕೇವಲ ಒಬ್ಬ ವ್ಯಕ್ತಿಯಲ್ಲ, ರಾಜ್ಯ ರಾಜಕಾರಣದ ದೊಡ್ಡ ಶಕ್ತಿಯಾಗಿ ಇತಿಹಾಸದ ಪುಟಗಳಲ್ಲಿ ಸಾರ್ವಕಾಲಿಕವಾಗಿ ತಮ್ಮ ದಾಖಲೆ ಬರೆದಿದ್ದಾರೆ. ಆರಂಭದಲ್ಲಿ 1976ರಲ್ಲಿ ತಮ್ಮ 32ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಧುಮುಕಿದ ಯಡಿಯೂರಪ್ಪ ಅವರು ಶಿಕಾರಿಪುರ ಪುರಸಭೆ ಸದಸ್ಯ ಸ್ಥಾನದಿಂದ ಮುಖ್ಯಮಂತ್ರಿ ಗಾದಿಯವರೆಗೆ ನಡೆದು ಬಂದ ಹಾದಿ ಹೂವಿನದ್ದಾಗಿರಲಿಲ್ಲ. ರಾಜಕಾರಣದಲ್ಲಿ ಎಲ್ಲವೂ ಸುಲಭವಾಗಿ ದಕ್ಕುವುದಿಲ್ಲ, ನಿರಂತರ ಶ್ರಮ ಹಾಗೂ ಬದ್ಧತೆಯನ್ನು ಪಕ್ಷಕ್ಕಾಗಿ ಧಾರೆ ಎರೆಯಬೇಕು. ಹೇಳ ಹೆಸರೇ ಇಲ್ಲದಂತಿದ್ದ ಬಿಜೆಪಿಯನ್ನು ಕಟ್ಟಿ ಬೆಳೆಸಿ ಒಬ್ಬ ನಾಯಕನಾದವನು ಜನರಿಗಾಗಿ ತನ್ನ ಬದುಕನ್ನು ಹೇಗೆಲ್ಲ ಸವೆಸಬೇಕೆಂದು ಯಡಿಯೂರಪ್ಪ ಅವರು ಈಗಿನ ರಾಜಕಾರಣಕ್ಕೆ ನೈಜ ಉದಾಹರಣೆಯಾಗಿದ್ದಾರೆ.
ಶಿಕಾರಿಪುರದ ಶಿಕಾರಿವೀರ, ಯಡಿಯೂರಪ್ಪ ಎಂಬ ಸರದಾರ…
ಮಂಡ್ಯದ ಒಂದು ಪುಟ್ಟ ಗ್ರಾಮದಿಂದ ಬಂದ ಒಬ್ಬ ಯುವಕನ ಸಾಧನೆಯು ನಿಜಕ್ಕೂ ಪ್ರೇರಣಾದಾಯಕವಾಗಿದೆ. ಯಡಿಯೂರಪ್ಪ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಓದಿ, 1965ರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿಕೊಂಡರೂ ಕೂಡ, ಅದಕ್ಕೂ ಗುಡ್ ಬೈ ಹೇಳಿ ಶಿಕಾರಿಪುರದ ವೀರಭದ್ರ ಶಾಸ್ತ್ರೀ ಶಂಕರ್ ರೈಸ್ ಮಿಲ್ ನಲ್ಲಿ ಗುಮಾಸ್ತರಾಗಿಯೂ ದುಡಿದಿದ್ದಾರೆ. ಅಲ್ಲದೆ ರೈಸ್ ಮಿಲ್ ಕೆಲಸವೂ ಅವರ ವೈವಾಹಿಕ ಜೀವನ ಪ್ರಾರಂಭವಾಗಲೂ ಕಾರಣವಾಯಿತು. 1967ರಲ್ಲಿ ಇದೇ ರೈಸ್ ಮಿಲ್ ಮಾಲೀಕರ ಸುಪುತ್ರಿ ಮೈತ್ರಾ ದೇವಿಯವರನ್ನು ಯಡಿಯೂರಪ್ಪ ವರಿಸಿದರು. ಬಳಿಕ ಇದೇ ಸಮಯದಲ್ಲಿ ಬಿಎಸ್‌ವೈ 1972 ರಲ್ಲಿ ಶಿಕಾರಿಪುರದ ಜನಸಂಘದ ಅಧ್ಯಕ್ಷರಾಗಿ ಸಾರ್ವಜನಿಕ ಬದುಕಿಗೆ ಎಂಟ್ರಿಕೊಟ್ಟರು.
ಹೋರಾಟದ ಹಾದಿಯಿಂದಲೇ ಬಂದ ಯಡಿಯೂರಪ್ಪ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬೀದಿಗಿಳದು ನೊಂದವರ ಪರವಾಗಿ ಗಟ್ಟಿಯಾಗಿ ನಿಲ್ಲುವ ನಾಯಕ. ಹೀಗಿರುವಾಗ ದೇಶದಲ್ಲಿ 1975ರಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಸಮಯದಲ್ಲಿ 45 ದಿನಗಳ ಕಾಲ ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ ಜೈಲಿನಲ್ಲಿದ್ದರು. ಹೀಗೆ ಬದುಕಿನ ಪ್ರತಿ ಹಂತದಲ್ಲೂ ಯಡಿಯೂರಪ್ಪ ಹೋರಾಟವನ್ನೇ ತಮ್ಮ ಶಕ್ತಿಯಾಗಿಸಿಕೊಂಡಿದ್ದರು.
ಹೀಗೆಯೇ ತಮ್ಮ ಹೋರಾಟದ ಬಲದಿಂದ 1700 ಜನರನ್ನು ಜೀತ ಪದ್ಧತಿಯಿಂದ ಹೊರಬರುವಂತೆ ಮಾಡುವಲ್ಲಿ ಬಿಎಸ್‌ವೈ ಯಶಸ್ವಿಯಾಗಿದ್ದರು. ಮುಖ್ಯವಾಗಿ ಬಗರ್ ಹುಕುಂ ರೈತರ ಪರವಾಗಿ ಹೋರಾಟ ಮಾಡಿದ್ದು, ಇದು ಮಂಡ್ಯದ ಸಾಮಾನ್ಯ ಹುಡುಗ ಯಡಿಯೂರಪ್ಪ ಅವರ ಬದುಕನ್ನೇ ಬದಲಾಯಿಸಲು ಮೆಟ್ಟಿಲಾಯಿತು. ಬಳಿಕ 1987 ರಲ್ಲಿ ಸೈಕಲ್ ಮೇಲೆ ಸಂಚರಿಸಿ ಜಾಥಾ ನಡೆಸಿ ಶಿಕಾರಿಪುರ ತಾಲ್ಲೂಕಿನಾದ್ಯಂತ ಬರ ಪರಿಸ್ಥಿತಿ ಅಧ್ಯಯನ ಮಾಡಿ ಸರ್ಕಾರದ ಗಮನಕ್ಕೆ ತಂದು, ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದು ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಟ್ಟಿದ್ದರು.

1975ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಕ್ರಿಯ ರಾಜಕಾರಣ ಆರಂಭಿಸಿದ ಯಡಿಯೂರಪ್ಪ, 1983ರಲ್ಲಿ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆ ಪ್ರವೇಶ ಮಾಡಿದರು. ಬಳಿಕ ಸತತ ನಾಲ್ಕು ಬಾರಿ ಆಯ್ಕೆಯಾಗಿ 1994ರಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. 1999ರಲ್ಲಿ ಶಿಕಾರಿಪುರದಲ್ಲಿ ಸೋಲು ಕಂಡ ಅವರು, 2000ರಲ್ಲಿ ಮೇಲ್ಮನೆ ಪ್ರವೇಶ ಮಾಡಿದರು. 2004ರಲ್ಲಿ ಶಿಕಾರಿಪುರದಿಂದ 5ನೇ ಬಾರಿ ಆಯ್ಕೆಯಾಗಿ ಪ್ರತಿಪಕ್ಷ ನಾಯಕ ಜವಾಬ್ದಾರಿ ವಹಿಸಿಕೊಂಡರು. 2006ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿ ಹಣಕಾಸು ಇಲಾಖೆ ನಿರ್ವಹಿಸಿದರು. 2014ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಅವರು, 2018ರಲ್ಲಿ ಮತ್ತೆ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು.
ಹುಟ್ಟು ಹೋರಾಗಾರ, ರೈತನಾಯಕ ಈ ಯಡಿಯೂರಪ್ಪ,..
ಬಿ.ಎಸ್. ಯಡಿಯೂರಪ್ಪ ಇಂದು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಿರಬಹುದು ಆದರೆ ಅವರು ಅಧಿಕಾರದ ಅವಧಿಯಲ್ಲಿ ತಂದಿರುವ ಜನಪರ ಹಾಗೂ ರೈತಪರ ಯೋಜನೆಗಳು ಮಾತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿವೆ. ಯಡಿಯೂರಪ್ಪ ಮೂಲತಃ ರೈತಾಪಿ ಕುಟುಂಬದಿಂದ ಬೆಳೆದು ಬಂದವರು. ಹೀಗಾಗಿ ರೈತರ ಮೇಲೆ ಬಿಎಸ್‍ವೈಗೂ ವಿಶೇಷ ಕಾಳಜಿಯೂ ಇದೆ. ಕಳೆದ 2008 ರಲ್ಲಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಸಿಎಂ ಆಗಿದ್ದರು. ಬಳಿಕ 2011ರಲ್ಲಿ ಯಡಿಯೂರಪ್ಪ ಹೊಸ ಇತಿಹಾಸ ಸೃಷ್ಟಿ ಮಾಡಿ ವಿಶೇಷವಾಗಿ ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡುವ ಮೂಲಕ ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳು ಹಾಗೂ ಅನುಕೂಲಕರ ಕಾರ್ಯಕ್ರಮಗಳನ್ನು ರೂಪಿಸಿದ್ದರು. ರೈತರಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಿದ್ದ ಬಿಎಸ್‌ವೈ ರೈತಾಪಿ ವರ್ಗಕ್ಕೆ ಅನೇಕ ಕೊಡಗೆಗಳನ್ನು ನೀಡುವ ಮುಖಾಂತರ ಅದರಲ್ಲೂ ದೇಶದಲ್ಲೆ ಮೊದಲ ಕೃಷಿ ಬಜೆಟ್ ಮಂಡಿಸಿದ ಕೀರ್ತಿಗೂ ಯಡಿಯೂರಪ್ಪ ಭಾಜನರಾಗಿದ್ದರು.
ಪ್ರಮುಖವಾಗಿ ಬಡ್ಡಿ ರಹಿತ ಸಾಲ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಯಂತ್ರೋಪಕರಣಗಳ ಖರೀದಿಗೆ ರಿಯಾಯ್ತಿ ಹೀಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ರೈತರಿಗಾಗಿ ಪ್ರತ್ಯೇಕ ರೈತ ಬಜೆಟ್ ಮಂಡನೆ ಮಾಡುವುದಾಗಿ ಯಡಿಯೂರಪ್ಪ ರೈತಾಪಿ ವರ್ಗಕ್ಕೂ ಭರವಸೆ ನೀಡಿದ್ದರು. ಅದರಂತೆ ರೈತರಿಗೂ ಲಾಭ ಸಿಗುತ್ತವೆ. ಬರ, ನೆರೆಯಿಂದ ತತ್ತರಿಸಿರುವ ರೈತರಿಗೂ ಅನುಕೂಲ ಆಗಬಹುದು ಎಂಬ ನಿರೀಕ್ಷೆಯನ್ನೂ ಹೊತ್ತಿದ್ದ ಅನ್ನದಾತರಿಗೆ ರೈತನ ಮಗ ಯಡಿಯೂರಪ್ಪ ನಿರಾಸೆ ಮೂಡಿಸಲಿಲ್ಲ. ಹೀಗಾಗಿ ಎಲ್ಲ ಕಾರಣ ಹಾಗೂ ರೈತಪರ ಹೋರಾಟದ ಹಿನ್ನೆಲೆಯಿಂದ ನಿಜವಾದ ರೈತ ನಾಯಕರಾಗಿ ಯಡುಯೂರಪ್ಪ ಹೊರಹೊಮ್ಮಿದ್ದರು.

2011ರ ಫೆಬ್ರುವರಿ 24ರಂದು 40 ಪುಟಗಳ ಕೃಷಿ ಬಜೆಟ್ ಮಂಡನೆ ಮಾಡಿದ್ದರು. ಕೃಷಿ ಬಜೆಟ್ ಓದಿದ ಬಳಿಕ 87 ಪುಟಗಳ ಸಾಮಾನ್ಯ ಬಜೆಟ್ ಮಂಡನೆ ಮಾಡಿದ್ದರು. ಆಗ ಪ್ರತ್ಯೇಕ ಕೃಷಿ ಬಜೆಟ್‌ಗೆ ಟೀಕೆ ಮಾಡಿದ್ದ ವಿಪಕ್ಷಗಳ ನಾಯಕರು, ಇದು ಕೃಷಿ ಬಜೆಟ್ ಅಲ್ಲ, ಕೃಷಿ ವಲಯದ ವಿವರಗಳನ್ನು ಪ್ರತ್ಯೇಕ ಪುಸ್ತಕದಲ್ಲಿ ಬರೆದಿದ್ದಾರೆ ಅಷ್ಟೇ, ಇದು ಗಿಮಿಕ್ ಎಂದು ಜರಿದಿದ್ದರು. ವಿಪಕ್ಷಗಳ ಟೀಕೆಯೆ ಮಧ್ಯೆಯೆ ರೈತರಿಗೆ ಹಲವು ಹೊಸ ಯೋಜನೆಗಳನ್ನು ಯಡಿಯೂರಪ್ಪ ಜಾರಿಗೆ ತಂದಿದ್ದರು. ಶೇ. 1ರ ಬಡ್ಡಿ ದರದಲ್ಲಿ ರೈತರಿಗೆ ಕೃಷಿ ಸಾಲ, 2011-2020ರ ದಶಕವನ್ನು ನೀರಾವರಿ ದಶಕವೆಂದು ಘೋಷಣೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಡಿಪ್ಲೋಮಾ ಕೋರ್ಸ್ ಆರಂಭ, ಸಾವಯವ ಮಿಶನ್ ಸ್ಥಾಪನೆ ಸೇರಿದಂತೆ ಹಲವು ಯೋಜನೆ ಘೋಷಣೆ ಮಾಡಿದ್ದರು. ಒಟ್ಟು 17,857 ಕೋಟಿ ರೂ.ಗಳ ಕೃಷಿ ಬಜೆಟ್‌ನ್ನ ಯಡಿಯೂರಪ್ಪ ಮಂಡಿಸಿದ್ದರು.
ಅಂದು ಬಜೆಟ್ ಮಂಡನೆಗೂ ಮೊದಲು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಸಿಎಂ ನಿವಾಸದಿಂದ ಸುಮಾರು 5 ಸಾವಿರ ರೈತರು ಚಾಲುಕ್ಯ ವೃತ್ತದವರೆಗೆ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಮೆರವಣಿಗೆ ಮಾಡಿದ್ದರು. ರಾಷ್ಟ್ರಕವಿ ಕುವೆಂಪು ರಚಿಸಿದ್ದ ರೈತಗೀತೆ “ಉಳುವಾ ಯೋಗಿಯ ನೋಡಲ್ಲಿ” ರೈತಗೀತೆಯೊಂದಿಗೆ ರೈತರು ಭಾಗವಹಿಸಿದ್ದರು. ನಂತರ ಕೈಯಲ್ಲಿ ಕೆಂಪುಬಣ್ಣದ ಸೂಟ್‌ಕೇಸ್ ಹಿಡಿದುಕೊಂಡು ವಿಧಾನಸೌಧ ಪ್ರವೇಶಿಸಿದ್ದು ಇತಿಹಾಸದ ಹಾಳೆಗಳಲ್ಲಿ ದಾಖಲಾಗಿದೆ.

ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದ ಕೇಸರಿ ನಾಯಕ…
ಕರ್ನಾಟಕದಂತಹ ದಕ್ಷಿಣ ಭಾರತದ ರಾಜ್ಯದಲ್ಲಿ ಅಂದಿನ ದಿನಗಳಲ್ಲಿ ಯಾವುದೇ ನೆಲೆ ಇರಲಿಲ್ಲ, ಜೊತೆಗೆ ದಿಕ್ಕು ದೆಸೆಯೂ ಕಂಡಿರಲಿಲ್ಲ. ಹೇಳ ಹೆಸರಿಲ್ಲದಂತಾಗಿದ್ದ ಬಿಜೆಪಿಗೆ ಮರು ಜನ್ಮ ನೀಡಿರುವ ಯಡಿಯೂರಪ್ಪ ಸೈಕಲ್ ಮೇಲೆ ರಾಜ್ಯ ಸುತ್ತಾಡಿ ಪಕ್ಷದ ಸಂಘಟನೆಗಾಗಿ ಅವಿರತವಾಗಿ ಶ್ರಮಿಸಿದ್ದರು. ಈ ಮೂಲಕ ರಾಜ್ಯಾಧ್ಯಕ್ಷರಾಗಿ ಅಧಿಕಾರ ಹಿಡಿಯುವ ಹಂತಕ್ಕೆ ಹೋಗಿದ್ದರು. ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ದಕ್ಷಿಣದವವರೆಗೂ ವಿಸ್ತರಿಸುವಂತೆ ಮಾಡಿದ್ದು, ಯಡಿಯೂರಪ್ಪ ಎಂಬ ಧೀಮಂತ ನಾಯಕ ಎಂಬುದನ್ನು ಯಾರೂ ಮರೆಯುವಂತಿಲ್ಲ. ಇದರ ಫಲವಾಗಿ ಬಿಜೆಪಿಗೆ ಬಲ ಬಂತು, ವಿಧಾನಸಭಾ ಚುನಾವಣೆಯಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಬಿಜೆಪಿಯು ಉತ್ತಮ ಪ್ರದರ್ಶನ ನೀಡುವಂತಾಗಿತ್ತು. ಯಡಿಯೂರಪ್ಪ ಎಂಬ ಹೋರಾಟದ ಶಕ್ತಿಯಿಂದ ಹಂತ ಹಂತವಾಗಿ ಕರ್ನಾಟಕದಲ್ಲಿ ಬಿಜೆಪಿಯು ಸಾಕಷ್ಟು ಗಟ್ಟಿಯಾಗ ತೊಡಗಿತು. ಶೂನ್ಯದಿಂದ ಆರಂಭವಾದ ಅವರ ಪಕ್ಷ ಸಂಘಟನೆ ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತಂದ ಕೀರ್ತಿ ಅವರದು. ಸೈಕಲ್ನಲ್ಲಿ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮೂಲಕ ರಾಜ್ಯಾಧ್ಯಕ್ಷರಾಗಿ ಅಧಿಕಾರ ಹಿಡಿಯುವ ಹಂತಕ್ಕೆ ಬಂದರು.

ಶೂನ್ಯದಿಂದ ಸಿಂಹಾಸನದವರೆಗೆ:
ವಿಧಾನಸಭೆ ಅವಧಿಯ ಆರಂಭದಲ್ಲಿ ಬೆರಳೆಣಿಕೆ ದಿನ ಸಿಎಂ ಆಗಿ ವಿಶ್ವಾಸಮತದ ಕೊರತೆ ಕಾರಣ ರಾಜೀನಾಮೆ ನೀಡಿ ನಿರ್ಗಮಿಸಿದ್ದ ಯಡಿಯೂರಪ್ಪ, 14 ತಿಂಗಳ ಬಳಿಕ ಮತ್ತೆ ಸಿಎಂ ಹುದ್ದೆ ಅಲಂಕರಿಸಿದರು. ರಾಜ್ಯದ ಮುಖ್ಯಮಂತ್ರಿ ಹುದ್ದೆಯ ವರೆಗೆ ತಲುಪಲು ಅವರು ಸವೆಸಿದ್ದು ಕಲ್ಲು ಮುಳ್ಳಿನ ಹಾದಿ.
ಜನಪರ ಆಡಳಿತ, ಅಧಿಕಾರಿಗಳೊಂದಿಗೆ ಸಮ್ಮಿಳಿತ, ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯದ ವಿಷಯ ಬಂದಾಗ ಯಡಿಯೂರಪ್ಪ ಆಡಳಿತ ವೈಖರಿಯನ್ನು ಅವರ ವಿರೋಧಿಗಳೂ ಮೆಚ್ಚುತ್ತಾರೆ. ಸದಾ ಬಡವರ ಪರ, ನೊಂದವರ ಪರ ನಿಲುವು ತಳೆಯುವ ಯಡಿಯೂರಪ್ಪ ಆಡಳಿತದಲ್ಲಿ ಅನುಭವಿಗಳು. ತಮ್ಮ ಅಧಿಕಾರಾವಧಿಯಲ್ಲಿ ಆಡಳಿತವನ್ನು ಎಂದೂ ನಿಷ್ಕ್ರಿಯವಾಗುವಂತೆ ಬಿಟ್ಟವರಲ್ಲ. ಜನರ ನಾಡಿಮಿಡಿತ ಬಲ್ಲ ಯಡಿಯೂರಪ್ಪ ಅಧಿಕಾರಿಗಳ ಮಾತು ಕೇಳಿದರೂ ಜನರ ಕಷ್ಟಗಳಿಗೆ ಕಿವಿಯಾಗಿ ಸಮನ್ವಯ ಮಾರ್ಗ ತುಳಿದವರು.

ಹಾಗಾಗಿ ಅವರು ಜನರಿಗೆ ಹತ್ತಿರವಾದರು. ಸಾರ್ವಜನಿಕರ ತೊಂದರೆ, ಅವರ ದುಃಖಗಳನ್ನು ಅರಿತು ಸಂವೇದನಶೀಲತೆಯಿಂದ ಕಾರ್ಯ ನಿರ್ವಹಿಸಿದರು. ಸವಾಲುಗಳನ್ನು ಮೆಟ್ಟಿನಿಂತು ಆಡಳಿತ ನಡೆಸಿದ ಯಡಿಯೂರಪ್ಪ, ಸದಾ ರೈತರು, ಬಡವರ ಬಗ್ಗೆ ತುಡಿದವರು, ಅವರ ಕಷ್ಟ ಕಾರ್ಪಣ್ಯಗಳಿಗೆ ಮಿಡಿದವರು. ಬಡವರ ಕೆಲಸಗಳಿಗಾಗಿ ಅಧಿಕಾರಿಗಳಿಗೆ ಅನೇಕ ಬಾರಿ ಗುಡುಗಿದರು. ಅವರ ಅಸಮಾಧಾನ, ಸಿಟ್ಟು, ಸೆಡವು ಎಲ್ಲವೂ ಬಡವವ ಕಲ್ಯಾಣಕ್ಕಾಗಿ ಇದ್ದವು. ದಕ್ಷ, ಪ್ರಾಮಾಣಿಕ, ಪಾರದರ್ಶಕ ಆಡಳಿತ ನೀಡಿದವರು. ಆಡಳಿತ ವಿಚಾರದಲ್ಲಿ ಅನೇಕ ಆರೋಪಗಳು ಬಂದಾಗಲೂ ಸಂಯಮದಿಂದ ನಿಭಾಯಿಸಿದ ರಾಜಕೀಯ ಚತುರರು. ಅಧಿಕಾರಿ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸಿದವರಲ್ಲಿ ಯಡಿಯೂರಪ್ಪ ಮುಂಚೂಣಿ ಸಾಲಿನಲ್ಲಿ ನಿಲ್ಲುತ್ತಾರೆ. ಜನರ ಕಷ್ಟಗಳನ್ನು ಆಲಿಸುವಂತೆಯೇ ಅಧಿಕಾರಿಗಳ ಸಮಸ್ಯೆಗಳಿಗೂ ಸ್ಪಂದಿಸಿದ್ದಾರೆ. ನೌಕರರ ಬೇಡಿಕೆಗೆ ಆದ್ಯತೆ ನೀಡಿ ಬಗೆಹರಿಸಿದರು.
ಕೆಂಡದಂಥ ಕೋಪ, ಹೃದಯವಂತ ಕೆಲಸಗಾರ
ರಾಜಕಾರಣದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿ.ಎಸ್.ಯಡಿಯೂರಪ್ಪನವರೇ ಸಾಟಿ ಎನ್ನುವ ಮಾತಿದೆ. ಅದು ನಿಜವೂ ಹೌದು. ಎಲ್ಲವೂ ತಾನು ಅಂದುಕೊಂಡಂತೆ ಆಗಬೇಕು ಎಂಬ ನಿಟ್ಟಿನಲ್ಲಿ ಹಿಂದೆ ಮುಂದೆ ನೋಡದೆ ಧೈರ್ಯವಾಗಿ ಹೆಜ್ಜೆ ಇಡುವ ಛಾತಿ ಬಿಎಸ್‌ವೈ ಅವರದು. ಎಷ್ಟೇ ವಿರೋಧಗಳು ಬಂದರೂ, ಅದನ್ನು ಮೆಟ್ಟಿ ನಿಲ್ಲುವ ಎದೆಗಾರಿಕೆ ಅವರದು. ಹೋರಾಟದ ನೆಲೆಯಲ್ಲಿ ನಾಯಕತ್ವ ರೂಪಿಸಿಕೊಂಡ ಅವರಿಗೆ ರಕ್ತದ ಕಣಕಣದಲ್ಲಿಯೂ ಹೋರಾಟ ಎನ್ನುವುದು ಮೈಗೂಡಿಕೊಂಡಿದೆ. ಅವರ ರಾಜಕೀಯ ಜೀವನದ ಪುಟಗಳನ್ನು ತಿರುವಿ ಹಾಕಿದರೆ, ರೂಪಿಸಿ, ನಡೆಸಿದ ಹೋರಾಟಗಳಿಗೆ ಲೆಕ್ಕವಿಲ್ಲ. ಅದರಲ್ಲಿ ರೈತಪರ ಹೋರಾಟ, ಧರಣಿ, ಸತ್ಯಾಗ್ರಹಗಳೇ ಅತಿ ಹೆಚ್ಚು. ರಾಜ್ಯದ ಹಿತ ದೃಷ್ಟಿಯಿಂದ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಎಸ್‌ವೈ ಹಿಂದೇಟು ಹಾಕಲಿಲ್ಲ. ರಾಜಕೀಯದ ಜೀವನದಲ್ಲಿ ವಿವಾದಗಳು ಸಾಮಾನ್ಯ, ಅವುಗಳ ಹೊರತಾಗಿಯೂ ಯಡಿಯೂರಪ್ಪ ಒಬ್ಬ ಅತ್ಯದ್ಭುತ ನಾಯಕ ಎಂದರೆ ತಪ್ಪಾಗಲಾರದು. ಅಧಿಕಾರಕ್ಕೆ ಅಂಟಿಕೊಳ್ಳದೆ ಕಾಲ ಕಾಲಕ್ಕೆ ಜನಪರವಾದ ನಿರ್ಧಾರ ಪಡೆಯುವಲ್ಲಿ ಯಡಿಯೂರಪ್ಪ ನಿಶ್ಸೀಮರು. ಹೀಗಾಗಿಯೇ ಅಧಿಕಾರ ದೊರೆತಾಗಲೆಲ್ಲ ರಾಜ್ಯದ ಕಲ್ಯಾಣಕ್ಕೆ ಹಗಲಿರುಳು ವಿಶ್ರಮಿಸದೆ ಬಿಎಸ್‌ವೈ ದುಡಿದಿದ್ದಾರೆ. ಕೆಂಡತಂಥ ಕೋಪವಿದ್ದರೂ, ಹೃದಯವಂತ ಕೆಲಸಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ.

ರಾಜಾಹುಲಿಯ ರಾಜನಡಿಗೆ ಹೇಗಿತ್ತು..?
- 1972ರಲ್ಲಿ ಜನಸಂಘದ ಶಿಕಾರಿಪುರ ತಾಲೂಕು ಅಧ್ಯಕ್ಷರಾಗಿ ನೇಮಕ.
- 1975ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ. 45 ದಿನಗಳ ಜೈಲುವಾಸ.
- 1977ರಲ್ಲಿ ಶಿಕಾರಿಪುರ ಪುರಸಭಾ ಅಧ್ಯಕ್ಷರಾಗಿ ಆಯ್ಕೆ.
- 1980ರಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆ.
- 1981ರಲ್ಲಿ ಜೀತಾದಾಳು ವಿಮುಕ್ತಿ ಹೋರಾಟದ ನಾಯಕತ್ವ ಪಾದಯಾತ್ರೆ.
- 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನ ಸಭೆಗೆ ಪ್ರವೇಶ.
- 1985ರಲ್ಲಿ ಬಿಜೆಪಿಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ.
- 1988ರಲ್ಲಿ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ.
- 1988ರಲ್ಲಿ ಬಸವ ಕಲ್ಯಾಣದಿಂದ ಬೆಂಗಳೂರು ವರೆಗೆ ರೈತ ಜಾಥಾ ಹಾಗೂ ಬನವಾಸಿಯಿಂದ ಬೆಂಗಳೂರು ವರೆಗೆ ರೈತ ಜಾಥಾದ ನೇತೃತ್ವ.
- 1991ರಲ್ಲಿ ಡಾ. ಮುರಳೀ ಮನೋಹರ ಜೋಶಿ ನೇತೃತ್ವದಲ್ಲಿ ನಡೆದ ಏಕತಾ ಯಾತ್ರೆಯಲ್ಲಿ ಭಾಗಿ. ಶ್ರೀನಗರದ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜಾರೋಹಣ.
- 1992ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯೋಜನೆ.
- 1994ರಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆ.
- 1998 ತಲಕಾವೇರಿಯಿಂದ ಕೆ.ಆರ್.ಎಸ್ ವರೆಗೆ ರೈತ ಜಾಥಾ. 2000ರಲ್ಲಿ ವಿಧಾನ ಪರಿಷತ್ ಗೆ ಆಯ್ಕೆ.
- 2003 ಬಗರ್ ಹುಕುಂ ರೈತರ ಜಮೀನು ಸಕ್ರಮಕ್ಕೆ ಆಗ್ರಹಿಸಿ ಶಿಕಾರಿಪುರದಿಂದ ಬೆಂಗಳೂರಿಗೆ ಪಾದಯಾತ್ರೆ.
- 2004ರಲ್ಲಿ 5ನೇ ಬಾರಿ ವಿಧಾನಸಭೆಗೆ ಪ್ರವೇಶ, ಪ್ರತಿಪಕ್ಷದ ನಾಯಕನಾಗಿ ಆಯ್ಕೆ.

- 2006 ಉಪಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆ ನಿರ್ವಹಣೆ.
- 2007ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ, ಜೆಡಿಎಸ್ ನಿಂದ ಅಧಿಕಾರ ನಿರಾಕರಣೆ.
- 2008 ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ.
- 2011 ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ. 2014 ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆ ಪ್ರವೇಶ.
- 2014ರಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ.
- 2016ರಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ನೇಮಕ.
- 2017 ನವಂಬರ್ 2ರಿಂದ 2018ರ ಜನವರಿ 28ರ ವರೆಗೆ “ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ”. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಕ ಪ್ರವಾಸ.
- 2018ರಲ್ಲಿ ಮೇ 13ರಂದು 3ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ.
- 2018ರಲ್ಲಿ ಮೇ 25ರಿಂದ 2019ರ ಜುಲೈ 25ರವರೆಗೆ ವಿಧಾನಸಭೆ ವಿಪಕ್ಷ ನಾಯಕರಾಗಿದ್ದರು.
- 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 104 ಸ್ಥಾನಗಳನ್ನು ಗೆಲ್ಲುವಂತೆ ಮುನ್ನೆಡೆಸಿದ ಬಿಎಸ್‌ವೈ, ಸಿಎಂ ಆಗಿ ಬಹುಮತ ಸಾಬೀತುಪಡಿಸುವುದಕ್ಕೂ ಮುಂಚೆಯೇ ರಾಜೀನಾಮೆ ನೀಡಿದ್ದರು.

- ಇದರಿಂದ ಮೂರೇ ದಿನಕ್ಕೆ ಆಗಿನ ಯಡಿಯೂರಪ್ಪ ಸರ್ಕಾರ ಪತನವಾಗಿತ್ತು. ಆದರೆ ಬಳಿಕ ಮತ್ತೆ ಅಧಿಕಾರಕ್ಕೆ ಬಂದು ಯಡಿಯೂರಪ್ಪ ರಾಜ್ಯದ ಅಭಿವೃದ್ದಿಗಾಗಿ ಶ್ರಮಿಸಿದ್ದಾರೆ. ಹೀಗೆ 1972ರಿಂದ ಆರಂಭವಾದ ಯಡಿಯೂರಪ್ಪ ಜರ್ನಿ 2021ರಲ್ಲಿ ವಿಶ್ರಾಂತ ಸ್ಥಿತಿಗೆ ತಲುಪಿದೆ. ಹಿರಿಯ ನಾಯಕರಾಗಿರುವ ಯಡಿಯೂರಪ್ಪ ಸದ್ಯ ಕೇಂದ್ರ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಹಾಗೂ ಕರ್ನಾಟಕದ ರಾಜಕೀಯಕ್ಕೆ ಯಡಿಯೂರಪ್ಪ ನೀಡಿರುವ ಕೊಡುಗೆ ಸದಾ ಸ್ಮರಣೀಯವಾಗಿದೆ. ಫೆಬ್ರವರಿ 19ಕ್ಕೆ ಯಡಿಯೂರಪ್ಪ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ್ದು, ಈ ಪ್ರಯುಕ್ತ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಅವರಿಗೆ ಬಿಜೆಪಿ ನಾಯಕರು ಸನ್ಮಾನಿಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ರಾಜಕೀಯದಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡಿರುವ ಯಡಿಯೂರಪ್ಪ ಅವರಂತಹ ಧೀಮಂತ ನಾಯಕ ಕರ್ನಾಟಕಕ್ಕೆ ದೊರಕಿರುವುದು ಕೋಟ್ಯಂತರ ಕನ್ನಡಿಗರ ಹೆಮ್ಮೆಯಾಗಿದೆ. ಅವರಿಗೆ ಇನ್ನಷ್ಟು ಆಯುರಾರೋಗ್ಯ ಲಭಿಸಲಿ, ಈ ಮೂಲಕ ಜೀವನದ ಸಂಧ್ಯಾಕಾಲವು ಇನ್ನಷ್ಟು ನೆಮ್ಮದಿಯಾಗಿರಲಿ ಎಂಬುವುದೇ ಪ್ರತಿಯೊಬ್ಬರ ಹಾರೈಕೆಯಾಗಿದೆ.






