ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಲು ಗೋಪಾಲಕೃಷ್ಣನಿಗೆ ಸಾಥ್ ನೀಡಿದ್ದ ಆರೋಪದಲ್ಲಿ ಕುಳ್ಳ ದೇವರಾಜ್ ಬಂಧನವಾಗಿದೆ. ಎರಡು ದಿನಗಳಿಂದ ರಾಜಾನಕುಂಟೆ ಪೊಲೀಸರು ದೇವರಾಜ್ನ ವಿಚಾರಣೆ ನಡೆಸುತ್ತಲೇ ಇದ್ದಾರೆ. ಈ ವೇಳೆ ಕುಳ್ಳ ದೇವರಾಜ್ ಪೊಲೀಸರ ಮುಂದೆ ಸ್ಕೆಚ್ ಹಿಂದಿನ ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದಾನೆ.
ರಾಜಕೀಯದಲ್ಲಿ ಯಾರಿಗೂ ಯಾರು ಶತ್ರುವಲ್ಲ, ಮಿತ್ರರಲ್ಲ ಎಂಬ ಮಾತಿದೆ. ಆದ್ರೆ ಆ ಮಾತನ್ನು ಯಲಹಂಕ ಶಾಸಕರ ಹತ್ಯೆ ಯತ್ನದ ಪ್ರಕರಣ ಸುಳ್ಳಾಗಿಸಿದೆ. ಹಳೇ ರಾಜಕೀಯ ದ್ವೇಷದ ಹಿನ್ನಲೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್ ಸ್ಕೆಚ್ ಹಾಕಿದ್ರು ಎಂಬ ಸುದ್ದಿ ಎಲ್ರಿಗೂ ಗೊತ್ತಿರುವ ವಿಷಯ. ಆದ್ರೆ ಈಗ ಮರ್ಡರ್ ಪಾಲಿಟಿಕ್ಸ್ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಿದ್ದು ಗೋಪಾಲಕೃಷ್ಣನೇ ಆದ್ರೂ, ಅದಕ್ಕೆ ಬರೋಬ್ಬರಿ ಸಾಥ್ ಕೊಟ್ಟಿದ್ದು ಮಾತ್ರ ಇದೇ ಕುಳ್ಳ ದೇವರಾಜ್. ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪದಡಿ ಪೊಲೀಸರು ಕುಳ್ಳನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ರು. ವಿಚಾರಣೆ ವೇಳೆ ದೇವರಾಜ್ ಸತ್ಯ ಬಾಯ್ಬಿಟ್ಟಿದ್ದು, ಈಗ ರಿಲೀಸ್ ಆಗಿರೋ ಅಷ್ಟೂ ವಿಡಿಯೋ ಮಾಡಿದ್ದು ತಾನೇ ಅಂತ ಒಪ್ಪಿಕೊಂಡಿದ್ದಾನೆ. ಇನ್ನೂ ದೇವರಾಜ್ ಸ್ಫೋಟಕ ಸತ್ಯ ಬಾಯ್ಬಿಟ್ಟ ಬೆನ್ನಲ್ಲೇ ಡಿವೈಎಸ್ಪಿ ನಾಗರಾಜ್ ನೇತೃತ್ವದ ತಂಡ ಗೋಪಾಲಕೃಷ್ಣನ ಸೆರೆಗೆ ಬಲೆ ಬೀಸಿದೆ.
ಎಸ್.ಆರ್ ವಿಶ್ವನಾಥ್ ಹತ್ಯೆ ಸಂಚಿನ ಪ್ರಕರಣದಲ್ಲಿ ರಿಲೀಸ್ ಆಗಿರುವ ಎಲ್ಲಾ ವೀಡಿಯೋಗಳನ್ನು, ತಾನೇ ಮಾಡಿರೋದಾಗಿ ಕುಳ್ಳ ದೇವರಾಜ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾನೆ. ಹತ್ಯೆ ಪ್ಲ್ಯಾನ್ಗೆ ಸಂಬಂಧಪಟ್ಟಂತೆ ತಿಂಗಳುಗಳ ಕಾಲ ಸಂಭಾಷಣೆ ನಡೆದಿತ್ತು ಎಂಬ ಸ್ಫೋಟಕ ಸತ್ಯ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಹೊರಬಿದ್ದಿದೆ. ಹಾಗಾದ್ರೆ ವಿಶ್ವನಾಥ್ ಮನೆಗೆ ಪೆನ್ ಡ್ರೈವ್, ಕ್ಷಮಾಪಣ ಪತ್ರ ತಲುಪಿಸಿದ್ದು ಯಾರು? ದೇವರಾಜ್ ಮತ್ತು ಗೋಪಾಲಕೃಷ್ಣ ಸಂಭಾಷಣೆ ಶಾಸಕರು ಎಡಿಟ್ ಮಾಡಿದ್ಯಾಕೆ? ಎಂಬ ಅನುಮಾನದ ವಿಷಯಗಳ ಬಗ್ಗೆಯೂ ತನಿಖೆಯಲ್ಲಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಇತ್ತ ಎಸ್.ಆರ್.ವಿಶ್ವನಾಥ್ ರಾಜಾನುಕುಂಟೆ ಠಾಣೆಗೆ ದೂರು ನೀಡ್ತಿದ್ದಂತೆ, ಈ ಹತ್ಯೆ ಕೇಸ್ನಲ್ಲಿ ಪ್ರಮುಖ ಆರೋಪಿಯಾಗಿರುವ ಗೋಪಾಲಕೃಷ್ಣ ಬಂಧನ ಭೀತಿ ಹಿನ್ನೆಲೆ ಯಲಹಂಕ ನ್ಯೂಟೌನ್ನ ತಮ್ಮ ಮನೆಯಿಂದ ನಾಪತ್ತೆಯಾಗಿದ್ದಾನೆ. ಈ ಬೆಳವಣಿಗೆ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಗೋಪಾಲಕೃಷ್ಣನಿಗೆ ರಾಜಾನಕುಂಟೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಶಾಸಕರ ಹತ್ಯೆ ಸ್ಕೆಚ್ ಹಾಕಿದ ಆರೋಪದಡಿ ಕುಳ್ಳ ದೇವರಾಜ್ ಅರೆಸ್ಟ್ ಆಗಿದ್ದ. ಈಗ ಆರೋಪಿ ಕುಳ್ಳ ದೇವರಾಜ್ಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ಈ ಕೇಸ್ನ ಅಂತಿಮ ವರದಿ ಸಲ್ಲಿಸೋವರೆಗೆ ಆರೋಪಿ ತನಿಖೆಗೆ ಸಹಕರಿಸಬೇಕು. ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಸ್ಟೇಷನ್ನಲ್ಲಿರಬೇಕು. ಜೊತೆಗೆ ಸಾಕ್ಷಿ ನಾಶಪಡಿಸದಂತೆ ಇಬ್ಬರ ಬಾಂಡ್ ಶ್ಯೂರಿಟಿ ಪಡೆದು ಸಿಟಿ ಸಿವಿಲ್ ಕೋರ್ಟ್ನಿರೀಕ್ಷಣಾ ಜಾಮೀನು ನೀಡಿದೆ.
ಶಾಸಕರ ಹತ್ಯೆ ಸಂಚಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದ್ದು, ಆರೋಪಿಗಳ ಹೇಳಿಕೆ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿಕೆಗಳು ಹಲವು ಅನುಮಾನ ಹುಟ್ಟಿಸಿವೆ. ಇದರ ನಡುವೆ ಕುಳ್ಳ ದೇವರಾಜ್ ಪೊಲೀಸರ ಮುಂದೆ ಸಂಚಿನ ಸತ್ಯ ಬಾಯ್ಬಿಟ್ಟಿದ್ದು, ಮುಂದೆ ಈ ಕೇಸ್ ನ್ಯಾಯಾಯುತ ಅಂತ್ಯ ಕಾಣುತ್ತೋ? ಇಲ್ಲ ಎಲ್ಲಾ ಪ್ರಕರಣಗಳಂತೆ ಹಳ್ಳ ಹಿಡಿಯುತ್ತೋ? ಕಾದು ನೋಡಬೇಕು.