ಹಾಲು ಕರೆಯಲು ಹೋದರೆ ಜಾಡಿಸಿ ಒದೆಯುತ್ತಿವೆ. ಅವನ್ನು ಅರೆಸ್ಟ್ ಮಾಡಿ ಬೆಂಡೆತ್ತಿ ಬುದ್ದಿಹೇಳಿ ಎಂದು ಶಿವಮೊಗ್ಗದ ರೈತನೊಬ್ಬ ತನ್ನದೇ ಹಸುಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ!. ಒಂದು ಕಡೆ ಶಿವಮೊಗ್ಗದವರೇ ಆದ ಗೃಹ ಸಚಿವರು, ತಮ್ಮದೇ ಪೊಲೀಸರ ಬಗ್ಗೆ ಅವಹೇಳನಕಾರಿ ಮಾತನಾಡಿ ವಿವಾದಕ್ಕೀಡಾಗಿದ್ದರೆ, ಈ ಬಡ ರೈತ ತನ್ನ ಮೂಕ ಹಸುಗಳಿಗೂ ಬುದ್ಧಿಹೇಳುವ ಛಾತಿ ಪೊಲೀಸರಿಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪೊಲೀಸರ ಮೇಲಿನ ರೈತನ ಆ ವಿಶ್ವಾಸ, ಭರವಸೆ ಇದೀಗ ಸ್ವಾರಸ್ಯಕರ ಸುದ್ದಿಯಾಗಿದೆ.
ನಿತ್ಯ ಹುಲ್ಲು ಮೇಯಿಸಿ, ಕಾಳಜಿ ವಹಿಸಿ ಆರೈಕೆ ಮಾಡಿದ ಹಸುಗಳು ಹಾಲು ಕರೆಯಲು ಹೋದರೆ ತನಗೇ ಜಾಡಿಸಿ ಒದೆಯುತ್ತಿವೆ. ಸಾಕಿ ಸಲಹಿದ ತನಗೇ ಮೋಸ ಮಾಡುತ್ತಿವೆ. ಇದು ನ್ಯಾಯವೇ ? ಎಂಬುದು ಮುಗ್ಧ ರೈತನ ಪ್ರಶ್ನೆ. ಈ ಅನ್ಯಾಯವನ್ನು ಪ್ರಶ್ನಿಸಿ ಆತ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ತನ್ನ ಹಸುಗಳನ್ನು ಬಂಧಿಸಿ, ವಿಚಾರಣೆ ನಡೆಸಿ ಬುದ್ದಿಹೇಳಬೇಕು. ಸಾಕಿ ಸಲಹಿ ಆರೈಕೆ ಮಾಡಿದ ತನಗೆ ಅನ್ಯಾಯ ಮಾಡದೆ ಹಾಲು ಕೊಡುವಂತೆ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವಿಲಕ್ಷಣ ದೂರು ಪ್ರಕರಣ ನಡೆದಿದ್ದು, ರೈತನ ದೂರು ಸ್ವೀಕರಿಸಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ!
ಏನದು ರೈತನ ದೂರು?:
“ನನ್ನ ಕೊಟ್ಟಿಗೆಯಲ್ಲಿ ನಾಲ್ಕು ಹಸುಗಳಿವೆ. ಅವುಗಳನ್ನು ಪ್ರತಿದಿನ ಬೆಳಗ್ಗೆ 8ಗಂಟೆಯಿಂದ 11 ರವರೆಗೆ ಮತ್ತು ಸಂಜೆ 4ಗಂಟೆಯಿಂದ 6 ಗಂಟೆಯವರೆಗೂ ಮೇಯಿಸುತ್ತೇನೆ. ಆದರೆ ಕಳೆದ ನಾಲ್ಕೈದು ದಿನಗಳಿಂದ ನಾಲ್ಕೂ ಹಸುಗಳು ಹಾಲು ಕೊಡುವುದನ್ನು ನಿಲ್ಲಿಸಿಬಿಟ್ಟಿವೆ. ಹಾಲು ಕರೆಯಲು ಹೋದರೆ ನನಗೆ ಹಾಗೂ ನನ್ನ ಪತ್ನಿಗೆ ಜಾಡಿಸಿ ಒದೆಯುತ್ತಿವೆ. ಹೀಗಾಗಿ ಆ ನಾಲ್ಕೂ ಹಸುಗಳನ್ನು ನಿಮ್ಮ ಸ್ಟೇಷನ್ಗೆ ಕರೆಸಿ ನಾಲ್ಕು ಬುದ್ದಿ ಮಾತು ಹೇಳಿ, ಹಾಲು ಕೊಡುವಂತೆ ಕ್ರಮ ಕೈಗೊಳ್ಳಿ” ಎಂದು ಹಸುವಿನ ಮುನಿಸಿನಿಂದ ನೊಂದ ರೈತ ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದಾರೆ.
ಆದರೆ, ಒಂದು ಕಡೆ ತಮ್ಮದೇ ಇಲಾಖೆಯ ಹೊಣೆ ಹೊತ್ತ ಗೃಹ ಸಚಿವರು ಇಡೀ ಪೊಲೀಸ್ ವ್ಯವಸ್ಥೆಯ ಬಗ್ಗೆ ತೀರಾ ಬಾಲಿಶಃವಾಗಿ ಮಾತನಾಡಿ, ಪೊಲೀಸರ ಬಗೆಗಿನ ಜನರ ವಿಶ್ವಾಸವನ್ನು ಕುಂದಿಸುವ ಮಾತನಾಡಿರುವಾಗ ಮುಗ್ಧ ರೈತ, ಪೊಲೀಸರ ಮೇಲೆ ಇಟ್ಟಿರುವ ನಂಬಿಕೆ ಪೊಲೀಸರ ನಡುವೆಯೇ ಚರ್ಚೆಗೆ ಗ್ರಾಸವಾಗಿದೆ. ಆದರೆ ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ, ದೂರು ನೀಡಿದ ರೈತನನ್ನು ಕೂರಿಸಿಕೊಂಡು ಸಮಾಧಾನ ಮಾಡಿ, ಬುದ್ದಿಮಾತು ಹೇಳಿ ಕಳಿಸಿದ್ದಾರೆ!