ವರ್ಗಾವಣೆ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
“ನನಗೆ ಲಂಚ ಕೊಡಲು ಬಂದ ಅಧಿಕಾರಿಗೆ ಬಿಜೆಪಿ ಸರ್ಕಾರ ಬಿಡಿಎ ಕಮಿಷನರ್ ಪೋಸ್ಟ್ ನೀಡಿದೆ” ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
“ನಿಮ್ಮ ಕಾಲದಲ್ಲಿ ವರ್ಗಾವಣೆ ಆಗಿಲ್ವಾ ಅಂತ ಕೇಳ್ತಾರೆ. ಈಗಿನ ವರ್ಗಾವಣೆಗೂ, ನನ್ನ ಕಾಲದ ವರ್ಗಾವಣೆಗೂ ವ್ಯತ್ಯಾಸ ಇದೆ” ಎಂದು ಹೇಳಿದ ಅವರು, “2018 ರಲ್ಲಿ ನಾನು ಸಿಎಂ ಆದಾಗ ಬಿಡಿಎ ಕಮಿಷನರ್ ಆಗಲು ಒಬ್ರು 15 ಕೋಟಿ ಕೊಡಲು ಬಂದಿದ್ದರು. ನನಗೆ 15 ಕೋಟಿ ಕೊಡುವ ಅಧಿಕಾರಿ ಬಿಡಿಎಗೆ ಏನು ಕೆಲಸ ಮಾಡಲು ಸಾಧ್ಯ ಎಂದು ನಾನೇ ಬೇಡ ಎಂದಿದ್ದೆ” ಎಂದು ತಿಳಿಸಿದ್ದಾರೆ.
“ಆದರೆ, ನನ್ನ ಸರ್ಕಾರದ ಹೋದ ಬಳಿಕ, ಬಂದ ಬಿಜೆಪಿ ಸರ್ಕಾರ ಅದೇ ಅಧಿಕಾರಿಗೆ ಪೋಸ್ಟ್ ಕೊಟ್ಟಿದೆ” ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
“ಎಡಿ, ಜೆಡಿಗಳ ಬಳಿ ಕೆಟಗರಿ ಪ್ರಕಾರ ದರ ನಿಗದಿಯಾಗಿದೆ. ಯಾವ ಅಧಿಕಾರಿಗಳು ಕೂಡಾ ಇದನ್ನು ಧೈರ್ಯವಾಗಿ ಹೇಳಲು ಸಾಧ್ಯವಿಲ್ಲ. ವರ್ಗಾವಣೆ ಡಿಮ್ಯಾಂಡ್ ಇದೆ, ದುಡ್ಡು ಕೊಟ್ಟಿದ್ದೀವಿ ಎಂದು ಯಾವ ಅಧಿಕಾರಿಯೂ ಮುಂದೆ ಬರಲ್ಲ” ಎಂದು ಅವರು ಹೇಳಿದ್ದಾರೆ.