ಶಿವಮೊಗ್ಗ : ಕಾಂಗ್ರೆಸ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಇರುವ ವಿಚಾರವಾಗಿ ಇಂದು ಪ್ರತಿಕ್ರಿಯಿಸಿದ ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ, ಇದರಿಂದ ಕಾಂಗ್ರೆಸ್ಗೆ 100ಕ್ಕೆ 100ರಷ್ಟು ಯಾವುದೇ ಹಿನ್ನಡೆಯಿಲ್ಲ. ಬಿಜೆಪಿಯವರು ಇನ್ನೂ ಭಾವನಾತ್ಮಕ ಮತಗಳು ಸಿಗುತ್ತೆ ಎಂದು ಭಾವಿಸಿದ್ದಾರೆ. ಆದರೆ ರಾಜ್ಯದಲ್ಲಿ ಅಷ್ಟು ದಡ್ಡರು ಯಾರೂ ಇಲ್ಲ ಎಂದು ಹೇಳಿದ್ದಾರೆ.
ಆಂಜನೇಯನ ಬಗ್ಗೆ ದೊಡ್ಡ ದೊಡ್ಡ ನಾಯಕರು ಬಂದು ಮಾತನಾಡುತ್ತಿದ್ದಾರೆ. ನಾವು ಕೂಡ ಆಂಜನೇಯನ ಭಕ್ತರೇ. ನಮ್ಮ ಮನೆ ದೇವರು ಆಂಜನೇಯನೇ.. ಮೊನ್ನೆ ನಡೆದ ಜಾತ್ರೆಗೆ ಹೋಗಿ ದೇವರ ಆಶೀರ್ವಾದ ಪಡೆದು ಬಂದಿದ್ದೇನೆ. ನಾವೇನು ತಲೆ ಕಟ್ಟು ದೇವಸ್ಥಾನಕ್ಕೆ ಹೋಗೋದಿಲ್ಲ. ನಮ್ಮ ಮನಸ್ಸಿನಲ್ಲಿಯೂ ಭಕ್ತಿಯಿದೆ ಎಂದು ಹೇಳಿದ್ದಾರೆ.
ಬಿಜೆಪಿ ಭಾವನಾತ್ಮಕ ರಾಜಕಾರಣಕ್ಕೆ ಈವರೆಗೆ ಎಷ್ಟು ಜನ ಬಲಿಯಾಗಿದ್ದಾರೆ. ಯಾವ ಬಿಜೆಪಿ ನಾಯಕರ ಮಕ್ಕಳು ಬಜರಂಗದಳದಲ್ಲಿ ಇದ್ದಾರೆ ಎಂದು ಹೇಳಲಿ ನೋಡೋಣ. ಹಿಂದಿನಿಂದಲೂ ಕಾಂಗ್ರೆಸ್ ಮುಸ್ಲಿಂ ಪರ, ಹಿಂದುಳಿದವರ ಪರ ಅಂತಾರೆ. ಕಾಂಗ್ರೆಸ್ ಎಂದಿಗೂ ಭಾರತೀಯ ಪ್ರಜೆಗಳ ಪರವಾಗಿ ಇರುತ್ತದೆ ಎಂದು ಹೇಳಿದ್ದಾರೆ.
ಆಂಜನೇಯನ ಆಶೀರ್ವಾದ ನಮಗೆ ಆಗುತ್ತದೆ. ಶಾಪ ಅವರಿಗೆ ತಟ್ಟುತ್ತೆ. ಪರೇಶ್ ಮೇಸ್ತಾ ಕೇಸ್ನಲ್ಲಿ ರಾಜಕೀಯ ಮಾಡಿದ್ರು. ಕೊನೆಗೆ ಏನಾಯ್ತು..? ಅವರದ್ದೇ ಪಕ್ಷ ಅಧಿಕಾರದಲ್ಲಿದ್ದರೂ ತನಿಖಾ ಸಂಸ್ಥೆ ಕೊಟ್ಟಿರುವ ವರದಿ ಎಲ್ಲರಿಗೂ ತಿಳಿದಿದೆ. ಅದು ಪಿಎಫ್ಐ ಅಥವಾ ಬಜರಂಗದಳ ಯಾರೇ ಇರಬಹುದು. ಸಂವಿಧಾನದಡಿ ಕಾನೂನು ರೀತಿಯ ಕ್ರಮ ತೆಗೆದುಕೊಳ್ತೇವೆ.. ಅದಕ್ಕೆ ನಾವು ಬದ್ದ ಎಂದಿದ್ದಾರೆ.