ಅಜ್ಜಿಗೆ ಅರಿವೆ ಚಿಂತೆ, ಮಗಳಿಗೆ ಮದುವೆ ಚಿಂತೆ ಅನ್ನೋ ಮಾತು, ಕೇವಲ ಮೈಸೂರು ಡಿಸಿ ಮತ್ತು ಪಾಲಿಕೆ ಕಮೀಷನರ್ ಕೋಳಿ ಜಗಳಕ್ಕೆ ಮಾತ್ರವಲ್ಲ; ರಾಜ್ಯ ಬಿಜೆಪಿ ಸರ್ಕಾರಕ್ಕೂ ಅನ್ವಯಿಸುವ ಮಾತು.
ಏಕೆಂದರೆ, ಕೋವಿಡ್ ಸೋಂಕಿನ ಸಾವು-ನೋವು ಮತ್ತು ಯಾವ ಹೊಣೆಗಾರಿಕೆ ಇಲ್ಲದ ಏಕಪಕ್ಷೀಯ ಲಾಕ್ ಡೌನ್ ನಿಂದಾಗಿ ದುಡಿಮೆ ಮತ್ತು ಬದುಕನ್ನೇ ಕಳೆದುಕೊಂಡು ರಾಜ್ಯದ ಜನತೆ ಆತಂಕ, ಚಿಂತೆಯಲ್ಲಿ ಮುಳುಗಿರುವಾಗ, ಜನ ಸಂಕಷ್ಟ ದೂರ ಮಾಡಲು, ಭರವಸೆ ಮೂಡಿಸಲು ಯತ್ನಿಸಬೇಕಾದ ಸರ್ಕಾರ, ಅಧಿಕಾರದ ಕುರ್ಚಿ ಕಾಲೆಳೆಯುವ ಹಗ್ಗಜಗ್ಗಾಟದಲ್ಲಿ ಮುಳುಗಿದೆ.
ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಆಪರೇಷನ್ ಕಮಲ ನಡೆಸಿ, ಹಿಂದಿನ ಜೆಡಿಎಸ್-ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ, ಕೇಂದ್ರ ಮತ್ತು ರಾಜ್ಯ ಸೇರಿ ಎರಡೂ ಕಡೆ ನಮ್ಮದೇ ಸರ್ಕಾರವಿದ್ದರೆ, ಡಬ್ಬಲ್ ಎಂಜಿನ್ ಸರ್ಕಾರವಾಗಲಿದೆ. ರಾಜ್ಯಕ್ಕೆ ಸ್ವರ್ಗವೇ ಧರೆಗಿಳಿಯಲಿದೆ ಎಂಬ ನಂಬಿಕೆ ಹುಟ್ಟಿಸಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ, ಇಂತಹ ಕುರ್ಚಿ ಕಣ್ಣಾಮುಚ್ಚಾಲೆಯ ಕಾರಣಕ್ಕೆ ಕಳೆದ ಎರಡು ವರ್ಷಗಳಲ್ಲಿ ಸುದ್ದಿಯಾಗಿದ್ದೇ ಹೆಚ್ಚು. ಅದು ಹೊರತುಪಡಿಸಿದರೆ, ಭ್ರಷ್ಟಾಚಾರ, ಸಿಎಂ ಕುಟುಂಬಸ್ತರ ಹಗರಣ, ಆಡಳಿತ ಹಸ್ತಾಂತರದ ಕಾರಣಕ್ಕೆ ಸುದ್ದಿಯಲ್ಲಿದೆ.
ಇದೀಗ, ಕರೋನಾ ಸಂಕಷ್ಟದ ನಡುವೆ ರಾಜ್ಯ ದೇಶದಲ್ಲೇ ಅತಿ ಹೆಚ್ಚು ಸೋಂಕು ಮತ್ತು ಸಾವುನೋವುಗಳ ಮೂಲಕ ಸುದ್ದಿಯಾಗುತ್ತಿರುವ ಕೇಡುಗಾಲದಲ್ಲಿ ಕೂಡ ಆಡಳಿತದ ಚುಕ್ಕಾಣಿ ಹಿಡಿದ ಪಕ್ಷ, ಜನರ ಜೀವ ಮತ್ತು ಜೀವನ ಕಾಪಾಡುವ ಹೊಣೆಗಾರಿಕೆ ಮತ್ತು ಬದ್ಧತೆ ತೋರುವ ಬದಲು, ಇಂತಹ ಹೊತ್ತಲ್ಲೂ ಅಧಿಕಾರದ ಹಾವು ಏಣಿ ಆಟದಲ್ಲಿ ಮುಳುಗಿದೆ ಎಂಬುದು ಬಿಜೆಪಿಯ ಜನಪರ ಕಾಳಜಿಗೆ ಸಾಕ್ಷಿ.
ಕಳೆದ ವಾರವಷ್ಟೇ ಭಿನ್ನಮತೀಯ ಗುಂಪಿನಲ್ಲಿ ಗುರುತಿಸಿಕೊಂಡಿರುವ ಸಚಿವ ಸಿ ಪಿ ಯೋಗೀಶ್ವರ್ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದರು. ವರಿಷ್ಠರ ಭೇಟಿಯ ಉದ್ದೇಶ ನಾಯಕತ್ವ ಬದಲಾವಣೆಯೇ ಎಂಬ ವದಂತಿಗಳ ನಡುವೆಯೇ ಅವರು ಮಾಧ್ಯಮ ಹೇಳಿಕೆ ನೀಡಿ, ಸ್ವತಃ ತಮ್ಮದೇ ಸಂಪುಟ, ಸರ್ಕಾರ ಮತ್ತು ಸಿಎಂ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು. ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಅವರ ವಿರುದ್ಧ ನಿರಂತರ ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಬಿಜೆಪಿಯ ಆರ್ ಎಸ್ ಎಸ್ ಹಿನ್ನೆಲೆಯ ನಾಯಕರು ಮತ್ತು ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ದನಿಗೆ ಯೋಗೀಶ್ವರ್ ಅವರ ಹೇಳಿಕೆ ಮತ್ತಷ್ಟು ಬಲ ತುಂಬಿತ್ತು. ಅದೇ ಹೊತ್ತಿಗೆ ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಹಾಗೂ ಪ್ರಭಾವಿ ಲಿಂಗಾಯತ ಮುಖಂಡ ಅರವಿಂದ್ ಬೆಲ್ಲದ್ ಅವರೂ ಯಡಿಯೂರಪ್ಪ ಮತ್ತು ಅವರ ಆಡಳಿತದ ಬಗ್ಗೆ ಬಹಿರಂಗ ಟೀಕೆ ಮಾಡಿದ್ದರು.
ಆ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ನಾಯಕತ್ವ ಬದಲಾವಣೆ ಬಹುತೇಕ ಖಚಿತ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಇದೀಗ ಸಿಎಂ ಪುತ್ರ ಬಿ ವೈ ವಿಜಯೇಂದ್ರ ಸ್ವತಃ ದೆಹಲಿಗೆ ಹೋಗಿ ಮೂರು ದಿನಗಳಿಂದ ಅಲ್ಲಿಯೇ ಬೀಡುಬಿಟ್ಟು ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದು, ಇಡೀ ರಾಜಕೀಯ ವಿದ್ಯಮಾನಗಳಿಗೆ ಮತ್ತೊಂದು ಆಯಾಮ ನೀಡಿದೆ. ಮೂಲಗಳ ಪ್ರಕಾರ, ವಿಜಯೇಂದ್ರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಮುಖ್ಯವಾಗಿ ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ನಡುವೆ ಸರ್ಕಾರ ಸುಸೂತ್ರವಾಗಿ ಕೆಲಸ ಮಾಡಲು ಸ್ವಪಕ್ಷೀಯರಿಂದಲೇ ವಿಘ್ನಗಳು ಎದುರಾಗುತ್ತಿವೆ. ಸಿಎಂ ಬದಲಾವಣೆಯ ಬಗ್ಗೆ, ಆಡಳಿತದ ಬಗ್ಗೆ ಪದೇ ಪದೇ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದ ನಾಯಕರೇ ಜನರಲ್ಲಿ ಸರ್ಕಾರದ ಬಗೆಗಿನ ವಿಶ್ವಾಸ ಕಳೆಯುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಪಕ್ಷದ ಭಿನ್ನಮತೀಯ ಚಟುವಟಿಕೆಗಳಿಗೆ ಕಡಿವಾಣ ಹಾಕದೆ ಇದ್ದಲ್ಲಿ ಕೋವಿಡ್ ಕೆಲಸಗಳಿಗೂ ದೊಡ್ಡ ತೊಡಕು ಆಗಲಿದೆ. ಅಂತಿಮವಾಗಿ ಅದು ಪಕ್ಷ ಸಂಘಟನೆ ಮತ್ತು ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮನವರಿಕೆ ಮಾಡಿದ್ದಾರೆ. ಜೊತೆಗೆ ಭಿನ್ನಮತೀಯರ ವಿರುದ್ಧ ಕಠಿಣ ಕ್ರಮ ಜರುಗಿಸುವ ಮೂಲಕ ಯಡಿಯೂರಪ್ಪ ಪರ ವರಿಷ್ಠರು ನಿಲ್ಲಬೇಕು. ಅದಾಗದೇ ಇದ್ದಲ್ಲಿ, ತಮ್ಮ ದಾರಿ ತಾವು ನೋಡಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದೂ ಹೇಳಿದ್ದಾರೆ ಎನ್ನಲಾಗಿದೆ.
ಆ ಹಿನ್ನೆಲೆಯಲ್ಲಿ, ಇಷ್ಟು ದಿನ ಯಡಿಯೂರಪ್ಪ ವಿರೋಧಿ ಪಾಳೆಯದ ಹೇಳಿಕೆ, ಚಟುವಟಿಕೆಗಳಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿದ್ದ ಬಿಜೆಪಿ ದೆಹಲಿ ವರಿಷ್ಠರೇ ಈಗ ಇಕ್ಕಟ್ಟಿಗೆ ಸಿಲುಕಿದ್ದು, ಯಡಿಯೂರಪ್ಪ ಅಧಿಕಾರ ನಡೆಸಲು ಮುಕ್ತ ಅವಕಾಶ ನೀಡಿ, ಪಕ್ಷದ ಸರ್ಕಾರ ಉಳಿಸಿಕೊಳ್ಳುವುದು ಮತ್ತು ಅದೇ ಹೊತ್ತಿಗೆ ಸಿಎಂ ಮತ್ತು ಕುಟುಂಬದವರ ಆಡಳಿತ ವೈಖರಿಯಿಂದಾಗಿ ಪಕ್ಷ ಮತ್ತು ಸಂಘಟನೆಗೆ ಧಕ್ಕೆ ಬರದಂತೆ ಕಾಯ್ದುಕೊಳ್ಳುವ ಸವಾಲು ಎದುರಾಗಿದೆ. ಹಾಗಾಗಿ, ಸದ್ಯಕ್ಕೆ ವರಿಷ್ಠರು ಯಡಿಯೂರಪ್ಪ ಪರ ನಿಂತು, ಭಿನ್ನಮತೀಯರಿಗೆ ಖಡಕ್ ಎಚ್ಚರಿಕೆ ನೀಡುವ ಭರವಸೆ ನೀಡಿದ್ದಾರೆ. ಕೋವಿಡ್ ನಡುವೆ ನಾಯಕತ್ವ ಬದಲಾವಣೆ ಸರಳವೂ ಅಲ್ಲ, ಸುಲಭವೂ ಅಲ್ಲ. ಜೊತೆಗೆ ಅಂತಹ ಪ್ರಯತ್ನ ರಾಷ್ಟ್ರಮಟ್ಟದಲ್ಲೂ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂಬ ಕಾರಣ ಕೂಡ ವರಿಷ್ಠರನ್ನು ಚಿಂತೆಗೀಡುಮಾಡಿದೆ ಎಂಬುದು ಬಿಜೆಪಿ ಮೂಲಗಳ ಮಾಹಿತಿ.
ಆದರೆ, ವಿಜಯೇಂದ್ರ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂಬರ್ಥದ ಸಂದೇಶ ನೀಡಿರುವುದು ಮುಖ್ಯವಾಗಿ ವರಿಷ್ಠರ ನಿದ್ದೆಗೆಡಿಸಿದೆ. ಈಗಾಗಲೇ ವಿಜಯೇಂದ್ರ ರಾಜ್ಯದ ಬೇರೆ ಬೇರೆ ಪಕ್ಷಗಳು, ರಾಜಕೀಯ ಮತ್ತು ರಾಜಕೀಯೇತರ ಸಂಘಟನೆಗಳು, ಪತ್ರಕರ್ತರು, ಬುದ್ಧಿಜೀವಿಗಳು, ರೈತ ನಾಯಕರೊಂದಿಗೆ ಹಲವು ಸುತ್ತಿನ ಸಮಾಲೋಚನೆ ನಡೆಸಿ, ಒಂದು ವೇಳೆ ವರಿಷ್ಠರು, ಭಿನ್ನಮತೀಯರ ಒತ್ತಡಕ್ಕೆ ಮಣೆಹಾಕಿ ನಾಯಕತ್ವ ಬದಲಾವಣೆಗೆ ಮುಂದಾದರೆ, ಯಾವೆಲ್ಲಾ ಅವಕಾಶಗಳಿವೆ ಎಂಬ ಬಗ್ಗೆ ತಂತ್ರಗಾರಿಕೆ ಹೂಡಿದ್ದಾರೆ. ಪ್ರಾದೇಶಿಕ ಪಕ್ಷ ಕಟ್ಟುವ ವಿಷಯದಲ್ಲಿ ಕೂಡ ಅವರು ಚಿಂತನೆ ನಡೆಸಿದ್ದಾರೆ. ಕಳೆದ ಬಾರಿಯ ಕೆಜೆಪಿ ಪ್ರಯೋಗದ ಮಿತಿ ಮತ್ತು ಶಕ್ತಿಗಳನ್ನು ವಿಶ್ಲೇಷಿಸಲಾಗಿದೆ. ಅದರ ಪಾಠಗಳನ್ನೇ ಮುಂದಿಟ್ಟುಕೊಂಡು, ಕರ್ನಾಟಕದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಇರುವ ಅವಕಾಶಗಳನ್ನು ಚರ್ಚಿಸಿದ್ದಾರೆ ಎಂಬ ವಿವರಗಳನ್ನು ಸಂಗ್ರಹಿಸಿರುವ ದೆಹಲಿ ವರಿಷ್ಠರು, ಈ ಹಂತದಲ್ಲಿ ಯಾವುದೇ ದುಡುಕಿನ ನಿರ್ಧಾರ ಬಿಜೆಪಿಗೆ ತಿರುಗುಬಾಣವಾಗಬಹುದು ಎಂಬ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಹಾಗಾಗಿ, ವಿಜಯೇಂದ್ರ ದೆಹಲಿ ಭೇಟಿ ಸದ್ಯದ ಮಟ್ಟಿಗಾದರೂ ಬಿಜೆಪಿಯ ಭಿನ್ನಮತೀಯ ಚಟುವಟಿಕೆಗಳಿಗೆ ಕಡಿವಾಣ ಹಾಕಲಿದೆ. ಆದರೆ, ದೆಹಲಿ ವರಿಷ್ಠರ ಮುಂದೆ ಕರ್ನಾಟಕದ ಬಿಜೆಪಿಯ ಬಿಕ್ಕಟ್ಟು ಮಾತ್ರ ಇನ್ನಷ್ಟು ಕಗ್ಗಂಟಾಗಲಿದೆ ಎಂಬುದಂತೂ ನಿಜ!
—