ತಿಂಗಳ ಹಿಂದೆ ಭಾರೀ ಸದ್ದು ಮಾಡಿ ಇದ್ದಕ್ಕಿದ್ದಂತೆ ತಣ್ಣಗಾಗಿದ್ದ ಬಹುಕೋಟಿ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಸೈಬರ್ ಅಪರಾಧ ಠಾಣೆ ಪೊಲೀಸರು(ಸಿಸಿಪಿಎಸ್) ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯ ವಿವರಗಳು, ಪ್ರಕರಣದ ವಿಷಯದಲ್ಲಿ ಸಿಸಿಬಿ ಪೊಲೀಸರ ಪಾತ್ರದ ಕುರಿತು ಮಹತ್ವದ ಬೆಳಕು ಚೆಲ್ಲಿದೆ.
ಸುಮಾರು ಹತ್ತು ಸಾವಿರ ಕೋಟಿಗೂ ಅಧಿಕ ಮೊತ್ತದ ಹಣಕಾಸು ವಂಚನೆಯ ಮತ್ತು ಸುಮಾರು 200 ಕೋಟಿ ರೂ.ಗಳಿಗೆ ಅಧಿಕ ಸರ್ಕಾರಿ ಬೊಕ್ಕಸಕ್ಕೆ ಕನ್ನ ಹಾಕಿದ ಬಹುಕೋಟಿ ವಂಚನೆ ಪ್ರಕರಣದ ಕುರಿತು ಆರಂಭಿಕ ತನಿಖೆ ನಡೆಸಿದ ಸಿಸಿಬಿ ಪೊಲೀಸರೇ ಪ್ರಕರಣದಲ್ಲಿ ಶಾಮೀಲಾಗಿದ್ದು, ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಬಳಸಿಕೊಂಡು ತನಿಖಾಧಿಕಾರಿಗಳೇ ಭಾರೀ ಅವ್ಯವಹಾರ ನಡೆಸಿದ್ದಾರೆ ಎಂಬ ಅನುಮಾನಗಳಿಗೆ ಇದೀಗ ಪುರಾವೆ ಸಿಕ್ಕಿದ್ದು, ಸ್ವತಃ ಸಿಸಿಪಿಎಸ್ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿಯೇ ಸಿಸಿಬಿ ಪೊಲೀಸರು ಪ್ರಕರಣದ ಕುರಿತು ಪ್ರಮುಖ ಸಾಕ್ಷ್ಯಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಸಿಐಡಿ ಅಧಿಕಾರಿಗಳಿಂದ ಮರೆಮಾಚಿದ್ದರು ಎಂದು ಉಲ್ಲೇಖಿಸಲಾಗಿದೆ!
ಜಾಗತಿಕ ಮಟ್ಟದ ವಿವಿಧ ಬಿಟ್ ಕಾಯಿನ್ ಕಂಪನಿಗಳ ಸರ್ವರ್ ಹ್ಯಾಕ್ ಮಾಡಿ ಸಾವಿರಾರು ಕೋಟಿ ಮೊತ್ತದ ಬಿಟ್ ಕಾಯಿನ್ ಲಪಟಾಯಿಸಿ ಅವುಗಳನ್ನು ರಾಜ್ಯದ ಅಧಿಕಾರಸ್ಥರ ಆಪ್ತರು ಸೇರಿದಂತೆ ವಿವಿಧ ಬಿಟ್ ಕಾಯಿನ್ ವಹಿವಾಟುದಾರರ ಖಾತೆಗಳಿಗೆ ರವಾನಿಸಿ ಭಾರೀ ವಂಚನೆ ಎಸಗಿರುವ ಗಂಭೀರ ಪ್ರಕರಣ ಇದಾಗಿದೆ. ಅದರೊಂದಿಗೆ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಈ ಪೇಮೆಂಟ್ ಪೋರ್ಟಲ್ ಗಳನ್ನು ಕೂಡ ಹ್ಯಾಕ್ ಮಾಡಿ ಸುಮಾರು 200 ಕೋಟಿಗೂ ಅಧಿಕ ಮೊತ್ತದ ಹಣಕಾಸು ವಂಚನೆ ಎಸಗಿರುವುದಾಗಿ ಸ್ವತಃ ಪೊಲೀಸರೇ ಈ ಹಿಂದೆ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಹೇಳಲಾಗಿತ್ತು. ಆ ಪೈಕಿ ನಿರ್ದಿಷ್ಟವಾಗಿ ರಾಜ್ಯ ಸರ್ಕಾರದ ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿ 11.55 ಕೋಟಿ ರೂ. ದೋಚಿದ್ದ ಪ್ರಕರಣದ ಕುರಿತು ತನಿಖೆ ನಡೆಸಿದ ಸೈಬರ್ ಅಪರಾಧ ಪೊಲೀಸ್ ಠಾಣೆಯ ತನಿಖಾಧಿಕಾರಿ ನ್ಯಾಯಾಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ವಿವರಗಳು ಇದೀಗ ಬಹಿರಂಗವಾಗಿವೆ.
Also Read : ಬಿಟ್ ಕಾಯಿನ್ ಹಗರಣ : ಶ್ರೀಕಿ ನಾಪತ್ತೆ ಕಥೆ ಹೇಳುತ್ತಿರುವುದೇನು?
ಹ್ಯಾಕರ್ ಶ್ರೀಕಿಯಿಂದ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಹಾರ್ಡ್ ಡಿಸ್ಕ್, ಲ್ಯಾಪ್ ಟಾಪ್ ಮತ್ತಿತರ ಉಪಕರಣಗಳಿಂದ ಸಿಸಿಬಿ ಪೊಲೀಸರು ತನಿಖೆಯ ವೇಳೆ ಸಂಗ್ರಹಿಸಿದ್ದ ಮಾಹಿತಿಯನ್ನು ಮತ್ತೊಂದು ತನಿಖಾ ಸಂಸ್ಥೆ ಸಿಐಡಿಯೊಂದಿಗೆ ಹಂಚಿಕೊಳ್ಳಲು ಸಹಕರಿಸಿಲ್ಲ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಶ್ರೀಕಿಯಿಂದ ವಶಪಡಿಸಿಕೊಂಡಿದ್ದ ಉಪಕರಣಗಳಿಂದ ಸಂಗ್ರಹಿಸಿದ್ದ ಮಾಹಿತಿಯಲ್ಲಿ ಹಲವು ಮಹತ್ವದ ಸಾಕ್ಷ್ಯಗಳಿದ್ದವು. ಆದರೆ, ಸಿಸಿಬಿ ಪೊಲೀಸರು ಆ ಮಾಹಿತಿಯನ್ನು ಫೋರೆನ್ಸಿಕ್ ಇಮೇಜ್ ಪ್ರತಿ ಮಾಡಿಸಿ, ನಿಗೂಢ ಲಿಪಿ(ಎನ್ ಕ್ರಿಪ್ಷನ್)ಗೆ ಪರಿವರ್ತಿಸಿದ್ದರು ಮತ್ತು ಆ ಕುರಿತು ಪಾಸ್ ವರ್ಡ್ ನೀಡುವಾಗ ತಪ್ಪಾದ ಪಾಸ್ ವರ್ಡ್ ನೀಡಿ ಸಿಐಡಿಗೆ ಹಾದಿ ತಪ್ಪಿಸಿದ್ದರು ಎಂಬುದು ಚಾರ್ಜ್ ಶೀಟ್ ನೊಂದಿಗೆ ಸಲ್ಲಿಸಿರುವ ದಾಖಲೆಗಳಿಂದ ಬಯಲಾಗಿದೆ ಎಂದು ‘ಪ್ರಜಾವಾಣಿ’ ವಿಶೇಷ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಜನವರಿಯಲ್ಲಿ ಶ್ರೀಕಿ ಸಿಸಿಬಿ ಪೊಲೀಸರ ವಶದಲ್ಲಿರುವಾಗಲೆ ಸಿಸಿಬಿ ಪೊಲೀಸರಿಗೆ ಸಿಐಡಿ ಅಧಿಕಾರಿಗಳು ಪತ್ರ ಬರೆದು ಪ್ರಕರಣದ ಸಾಕ್ಷ್ಯಗಳನ್ನು ಕೋರಿದ್ದರು ಮತ್ತು ವಿಶೇಷವಾಗಿ ಆತನ ಹಾರ್ಡ್ ಡಿಸ್ಕ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳಿಂದ ವಶಪಡಿಸಿಕೊಂಡಿರುವ ಮಾಹಿತಿಯನ್ನು ನೀಡುವಂತೆ ಸೂಚಿಸಿದ್ದರು. ಅದಕ್ಕೆ ಪ್ರತಿಯಾಗಿ ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದರೂ, ಇ ಕಡತದ ಮೂಲಕ ನೀಡಿದ ಮಾಹಿತಿಯನ್ನು ಗೌಪ್ಯಲಿಪಿಗೆ ಪರಿವರ್ತಿಸಿದ್ದರು ಮತ್ತು ಸರಿಯಾದ ಪಾಸ್ ವರ್ಡ್ ನೀಡದೇ ಮರೆಮಾಚಿದ್ದರು. ಆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಸಿಸಿಬಿ ಮುಖ್ಯಸ್ಥರಿಗೆ ಮತ್ತೊಂದು ಪತ್ರ ಬರೆದು ತಪ್ಪು ಪಾಸ್ ವರ್ಡ್ ನೀಡಿದ ಬಗ್ಗೆ ಆಕ್ಷೇಪವೆತ್ತಿದ್ದರು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವಿಷಯದಲ್ಲಿ ಬಳಿಕ ಸಿಸಿಪಿಎಸ್ ಪೊಲೀಸರು ಸಿಸಿಬಿ ವಿರುದ್ಧ ನ್ಯಾಯಾಲಯಕ್ಕೂ ಎರಡು ಬಾರಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರು ಎಂಬುದು ಕೂಡ ಚಾರ್ಜ್ ಶೀಟ್ ನ ಹೊಸ ವಿವರಗಳು ಬಯಲುಮಾಡಿವೆ.
ಈಗ ಇರುವ ಪ್ರಶ್ನೆ; ಸಿಸಿಬಿ ಪೊಲೀಸರು ಉನ್ನತ ತನಿಖಾ ಸಂಸ್ಥೆ ಸಿಐಡಿಗೆ ಎಲ್ಲಾ ಮಾಹಿತಿ ನೀಡುವ ಬದಲು, ಗೌಪ್ಯಲಿಪಿಯಲ್ಲಿ ಮಾಹಿತಿ ನೀಡಿ, ತಪ್ಪು ಪಾಸ್ ವರ್ಡ್ ನೀಡಿ ಹಾದಿ ತಪ್ಪಿಸಿದ್ದು ಯಾಕೆ? ತನಿಖೆಯ ವಿಳಂಬಕ್ಕೆ ಕಾರಣವಾಗಿದ್ದು ಯಾಕೆ? ಸ್ವತಃ ಸಿಸಿಬಿ ಅಧಿಕಾರಿಗಳ ಹಿತ ಕಾಯಲು ಹೀಗೆ ಮಾಡಿದರೆ? ಅಥವಾ ಅಧಿಕಾರಸ್ಥ ಪ್ರಭಾವಿಗಳನ್ನು ರಕ್ಷಿಸಲು ಹೂಡಿದ ನಾಟಕ ಅದಾಗಿತ್ತೆ? ಎಂಬುದು.
Also Read : ಬಿಟ್ ಕಾಯಿನ್ ಬಿರುಗಾಳಿ: ಆರೋಪ ಪಟ್ಟಿಯಲ್ಲಿ ಕಾಲ್ – ಚಾಟ್ ಮಾಹಿತಿ ಮುಚ್ಚಿಟ್ಟದ್ದು ಯಾಕೆ?
ಹಾಗೇ, “ಬಿಟ್ ಕಾಯಿನ್ ಹಗರಣದ ವಿಷಯದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ನಿಷ್ಪಕ್ಷಪಾತ ತನಿಖೆಯಾಗಲಿದೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ” ಎಂದು ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಿಸಿಬಿಯ ಈ ಕಳ್ಳಾಟದ ಬಗ್ಗೆ ಯಾವ ಕ್ರಮ ಜರುಗಿಸಲಿದ್ದಾರೆ ಎಂಬುದು. ಜೊತೆಗೆ ಪ್ರಕರಣದ ಕುರಿತು ಇಡಿ ಮತ್ತು ಸಿಬಿಐ ತನಿಖೆ ನಡೆಯುತ್ತಿದೆ ಎಂದು ಸಿಎಂ ಮತ್ತು ಹೋಂ ಮಿನಿಸ್ಟರ್ ಈ ಹಿಂದೆ ಹೇಳಿದ್ದರು ಕೂಡ. ಆ ತನಿಖೆಯ ಪ್ರಗತಿ ಎಲ್ಲಿಗೆ ಬಂತು? ಆ ತನಿಖೆಯ ವ್ಯಾಪ್ತಿಗೆ ಸಿಸಿಬಿ ಪೊಲೀಸರು ಪ್ರಕರಣದ ಕುರಿತ ಸಿಐಡಿ ತನಿಖೆಯನ್ನು ದಿಕ್ಕುತಪ್ಪಿಸಲು ನಡೆಸಿದ ಇಂತಹ ಕಳ್ಳಾಟಗಳೂ ಸೇರಲಿವೆಯೇ? ಅಥವಾ ಕೇಂದ್ರ ತನಿಖಾ ಸಂಸ್ಥೆಗಳು ತಮ್ಮ ತನಿಖೆಯ ವ್ಯಾಪ್ತಿಗೆ ಸಿಸಿಬಿಯ ಅಧಿಕಾರಿಗಳು ಪ್ರಕರಣವನ್ನು ಮರೆಮಾಚಲು ಯತ್ನಿಸಿದ ಸಂಗತಿಯನ್ನೂ ಸೇರಿಸಿಕೊಳ್ಳಬೇಕು ಎಂದು ಗೃಹ ಸಚಿವರು ಮತ್ತು ಸಿಎಂ ಕೇಂದ್ರದ ತಮ್ಮದೇ ಸರ್ಕಾರದ ಗೃಹ ಸಚಿವರಿಗೆ ಪತ್ರಬರೆಯುವರೇ? ಎಂಬುದು ಸಾರ್ವಜನಿಕ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ನಿರೀಕ್ಷೆಯ ಪ್ರಶ್ನೆಗಳು.
ಹಾಗೇ ಹಗರಣ ಮೊದಲ ಬಾರಿಗೆ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿದ ಬಳಿಕ ಮೈಮೇಲೆ ಬಿಸಿನೀರು ಚೆಲ್ಲಿದಂತೆ ಬೆಚ್ಚಿಬಿದ್ದು ಅಬ್ಬರಿಸಿ ಬೊಬ್ಬಿರಿದಿದ್ದ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಿಸಿಬಿಯ ಈ ಹೊಸ ಕಳ್ಳಾಟದ ಬಗ್ಗೆ ಏನು ಹೇಳುತ್ತಾರೆ? ಯಾಕೆ ಆ ಎರಡೂ ಪಕ್ಷಗಳ ನಾಯಕರು ಈ ಬಗ್ಗೆ ಮಾತನಾಡಲೇಬೇಕಿದ್ದ ಬೆಳಗಾವಿ ಅಧಿವೇಶನದಲ್ಲಿ ಜಾಣಮರೆವು ಪ್ರದರ್ಶಿಸಿದರು? ಎಂಬ ಪ್ರಶ್ನೆಗಳಿಗೂ ರಾಜ್ಯದ ಜನತೆ ಉತ್ತರದ ನಿರೀಕ್ಷೆಯಲ್ಲಿದ್ದಾರೆ!
Also Read : ಬಿಟ್ ಕಾಯಿನ್ ಹಗರಣದ ಟಾಪ್ ಫೈವ್ ಕಾಮಿಡಿಗಳು ಏನು ಗೊತ್ತಾ?
ಅದರಲ್ಲೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಪ್ರಕರಣದ ಆರಂಭದ ದಿನಗಳಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ಸರ್ಕಾರ ಮತ್ತು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಆದರೆ, ಯಾವಾಗ ಶ್ರೀಕಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿ ಒಳಹೋದನೋ ಅವಾಗಿನಿಂದ ದಿಢೀರನೇ ಮೌನಕ್ಕೆ ಶರಣಾಗಿದ್ದು ಯಾಕೆ? ಯಾವ ಭಯ ಆ ನಾಯಕರ ಬಾಯಿ ಮುಚ್ಚಿಸಿದೆ? ಎಂಬುದು ಕೂಡ ಅವರು ಉತ್ತರ ನೀಡಲೇಬೇಕಾದ ಪ್ರಶ್ನೆಗಳೇ.