ಬೆಂಗಳೂರು : ಗ್ಯಾರಂಟಿ ಬಲದ ಮೇಲೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಯೋಜನೆಯ ಫಲಾನುಭವಿಗಳಿಗೆ ಶಾಕ್ ನೀಡಲು ಮುಂದಾಗಿದೆ. ಪಂಚ ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ ಬರಿದಾಗುತ್ತಿದೆ, ಅಭಿವೃದ್ದಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳ ನಡುವೆಯೇ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಮಹತ್ವದ ತೀರ್ಮಾನಕ್ಕೆ ಬಂದಿದೆ.

ರಾಜ್ಯದಲ್ಲಿ ಸರ್ಕಾರದ ಪ್ರಮುಖ ಯೋಜನೆಗಳಾದ ಗೃಹ ಲಕ್ಷ್ಮಿ (ಮಹಿಳೆಯರಿಗೆ ಮಾಸಿಕ 2,000 ರೂ.) ಹಾಗೂ ಗೃಹ ಜ್ಯೋತಿ (ಉಚಿತ ವಿದ್ಯುತ್) ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗಳಲ್ಲಿ ಅನರ್ಹರು ಸಹ ಲಾಭ ಪಡೆಯುತ್ತಿರುವುದು ಪತ್ತೆಯಾಗಿದೆ.
ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಹೀಗಾಗಿ ಎಸ್‌ಐಆರ್ (Specila Intensive Revision) ಕುರಿತ ಕಾಂಗ್ರೆಸ್ ಶಾಸಕರು ಹಾಗೂ ಸಚಿವರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಈ ಬಗ್ಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಬೆಂಗಳೂರಿಗೆ ಬರಲಿದೆ ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ; ಸೂರ್ಯನಗರದಲ್ಲಿ ‘ಮೆಗಾ ಸ್ಪೋರ್ಟ್ಸ್ ಸಿಟಿ’ ವಿಶೇಷತೆ ಏನು?
ಈ ಹಿನ್ನೆಲೆಯಲ್ಲಿ ಪ್ರಮುಖವಾಗಿ ಮೂರು ಕಾರಣಗಳನ್ನು ನೀಡಿ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ರಾಜ್ಯದಲ್ಲಿ ಬರೋಬ್ಬರಿ 1 ಕೋಟಿ 24 ಲಕ್ಷಕ್ಕೂ ಅಧಿಕವಾಗಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಫಲಾನುಭವಿಗಳ ಪಟ್ಟಿಯಲ್ಲಿ ಕೆಲವು ತಾಂತ್ರಿಕ ದೋಷಗಳ ಕಾರಣ ಹಾಗೂ ಯೋಜನೆಯ ನಿಯಮ ಉಲ್ಲಂಘನೆಗಳು ಪತ್ತೆಯಾಗಿರುವುದು ಸರ್ಕಾರ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ವೈಫಲ್ಯಗಳ ಬಗ್ಗೆ ಆಲೋಚಿಸಿರುವ ಸರ್ಕಾರ ಈ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ.
ಕಾಂಗ್ರೆಸ್ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳ ಪೈಕಿ ಎರಡು ಅತ್ಯಂತ ಜನಪ್ರಿಯ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಮರು ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗದಂತೆ ಹಾಗೂ ನಿಜವಾದ ಅರ್ಹ ಬಡ ಜನರಿಗೆ ಮಾತ್ರ ಯೋಜನೆ ತಲುಪಬೇಕು ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಮೃತಪಟ್ಟವರ ಖಾತೆಗಳಿಗೂ ಗೃಹ ಲಕ್ಷ್ಮಿ ಯೋಜನೆಯ ಹಣ ಸಂದಾಯವಾಗುತ್ತಿದೆ, ಅಲ್ಲದೆ ಯೋಜನೆಯ ನಿಮಯಗಳ ಪ್ರಕಾರ ಆದಾಯ ತೆರಿಗೆ ಪಾವತಿದಾರರು ಯೋಜನೆಯ ಲಾಭ ಪಡೆಯಲು ಅನರ್ಹರು. ಆದರೆ ಅಂತಹ ಲಕ್ಷಾಂತರ ಕುಟುಂಬಗಳು ಸಹ ಈ ಯೋಜನೆಯ ಲಾಭ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಇಷ್ಟೇ ಅಲ್ಲದೆ ಒಂದೇ ಮನೆಯಲ್ಲಿರುವ ಇಬ್ಬರು ಸದಸ್ಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಒಂದೇ ರೇಷನ್ ಕಾರ್ಡ್ ಇದ್ದರೂ ಸಹ ತಾಂತ್ರಿಕ ದೋಷದಿಂದ ಇಬ್ಬರ ಖಾತೆಗೆ ಹಣ ತಲುಪುತ್ತಿತ್ತು. ಈ ಎಲ್ಲ ವೈಫಲ್ಯಗಳನ್ನು ಗುರುತಿಸಿ ಬಡವರ ಏಳಿಗೆಗಾಗಿ ಜಾರಿಗೆ ತಂದಿರುವ ಕಾರ್ಯಕ್ರಮಗಳು ಅರ್ಹರಿಗೆ ತಲುಪಬೇಕು, ಅವರ ಜೀವನದಲ್ಲಿ ಬದಲಾವಣೆ ತರುವಂತಾಗಬೇಕು ಎಂಬುವುದು ಸರ್ಕಾರದ ಸ್ಪಷ್ಟ ನಿಲುವಾಗಿದೆ.
ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜಂಟಿಯಾಗಿ ಚಿಂತನೆ ನಡೆಸಿ, ತಕ್ಷಣವೇ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಸೂಚಿಸಿದ್ದಾರೆ. ಸದ್ಯ ಈ ಕುರಿತು ಸರ್ಕಾರ ತೀರ್ಮಾನಿಸಿದ್ದು, ಇನ್ನೇನು ನೂತನ ಆದೇಶದನ್ವಯ ಅನರ್ಹರನ್ನು ಪತ್ತೆ ಮಾಡಲು ಅವರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಆದಾಯ ತೆರಿಗೆ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ.
ಅನರ್ಹರಿಗೆ ಈ ಯೋಜನೆಗಳಿಂದ ಶಾಶ್ವತವಾಗಿ ಗೇಟ್ ಪಾಸ್ ನೀಡಲು ಸಿದ್ದರಾಮಯ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಇನ್ನೂ ಈ ನಿರ್ಧಾರದಿಂದ ಅನಗತ್ಯವಾಗಿ ವ್ಯಯಿಸಲಾಗುತ್ತಿದ್ದ ಕೋಟ್ಯಂತರ ರೂಪಾಯಿ ಸರ್ಕಾರಕ್ಕೆ ಉಳಿತಾಯವಾಗಲಿದೆ ಎಂಬ ಲೆಕ್ಕಾಚಾರವನ್ನ ರಾಜ್ಯ ಸರ್ಕಾರ ಹಾಕಿದಂತಾಗಿದೆ.





