ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ(Bike taxis) ಸೇವೆಗಳಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಹೈಕೋರ್ಟ್(High Court) ಬೈಕ್ ಟ್ಯಾಕ್ಸಿ ಸೇವೆಗೆ ಗ್ರೀನ್ ಸಿಗ್ನಲ್ ನೀಡಿದೆ. ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅನುಮತಿ ನೀಡುವಂತೆ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.

ಈ ಹಿಂದೆ, ಮೋಟಾರು ವಾಹನ ಕಾಯ್ದೆಯಲ್ಲಿ ಬೈಕ್ ಅನ್ನು ಸಾರಿಗೆ ವಾಹನವಾಗಿ ಪರಿಗಣಿಸಲಾಗಿಲ್ಲ, ಹೀಗಾಗಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿತ್ತು. ಈ ಕಾರಣದಿಂದ ಬೈಕ್ ಟ್ಯಾಕ್ಸಿ ಸೇವೆಗಳ ಮೇಲೆ ನಿರ್ಬಂಧ ಹೇರಲಾಗಿತ್ತು.
ಇದನ್ನೂ ಓದಿ: ರಾಜ್ಯಪಾಲರಿಗೆ ಬಿ.ಕೆ ಹರಿಪ್ರಸಾದ್ ಪ್ರತಿರೋಧ..ಇದು ರಾಜಕೀಯ ಘಟನೆಯಲ್ಲ, ಸಂವಿಧಾನಾತ್ಮಕ ಎಚ್ಚರಿಕೆ!
ಆದರೆ, ಈ ವಾದವನ್ನು ಪರಿಗಣಿಸಿದ ಹೈಕೋರ್ಟ್, ಬೈಕ್ ಟ್ಯಾಕ್ಸಿ ಸೇವೆಗಳ ಕಾರ್ಯಾಚರಣೆಗೆ ಅವಕಾಶ ನೀಡಬಹುದು ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿ, ಮೇಲ್ಮನವಿಯನ್ನು ಅಂಗೀಕರಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳು ಮತ್ತೆ ಆರಂಭಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಹೈಕೋರ್ಟ್ ತೀರ್ಪು ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆ, ಕಡಿಮೆ ವೆಚ್ಚದ ಸಾರಿಗೆ ವ್ಯವಸ್ಥೆ ಹಾಗೂ ಯುವಕರ ಉದ್ಯೋಗಾವಕಾಶಗಳ ದೃಷ್ಟಿಯಿಂದ ಮಹತ್ವದ ತೀರ್ಪು ಎಂದು ವಿಶ್ಲೇಷಿಸಲಾಗುತ್ತಿದೆ. ಇದೀಗ, ರಾಜ್ಯ ಸರ್ಕಾರ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕಿದ್ದು, ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ, ನಿಯಮಾವಳಿ, ಸುರಕ್ಷತಾ ಮಾರ್ಗಸೂಚಿಗಳ ಕುರಿತು ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.












