2023 ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು 20 ತಿಂಗಳು ಮಾತ್ರ ಬಾಕಿ ಇವೆ. ಹೇಗಾದರೂ ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಮುಂದಾಗಿದೆ. ಹೀಗಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವಲ್ಲಿ ಕಾಂಗ್ರೆಸ್ ಕೂಡ ಅಧಿಕಾರ ಹಿಡಿಯಲು ಭಾರೀ ತಂತ್ರ ಹೆಣೆದಿದೆ. ಈ ನಡುವೆಯೇ ಜೆಡಿಎಸ್ನಲ್ಲಿ ಮಾತ್ರ ಒಬ್ಬೊಬ್ಬರೇ ಶಾಸಕರು ತೆನೆ ಇಳಿಸಿ ಕೈ ಹಿಡಿಯುವತ್ತ ಒಲವು ತೋರುತ್ತಿರುವುದು ದಳಪತಿಗಳ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಸಾಂಸ್ಕೃತಿಕ ನಗರಿಯಲ್ಲಿ ಇದು ಪಕ್ಷಕ್ಕೆ ದೊಡ್ಡ ಹೊಡೆತ ಕೊಡುವ ಮುನ್ಸೂಚನೆ ಕೊಟ್ಟಿದೆ. ಆದ್ದರಿಂದಲೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ರಣತಂತ್ರ ಹೆಣೆದಿದ್ದಾರೆ. ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯಲು ಮೆಗಾ ಪ್ಲಾನ್ ರೂಪಿಸಿದ್ದಾರೆ.
ಪ್ರತೀ ಬಾರಿಯೂ ಒಂದಿಲ್ಲೊಂದು ರೀತಿಯಲ್ಲಿ ರಾಜ್ಯದಲ್ಲಿ ಕಿಂಗ್ ಮೇಕರ್ ಆಗುತ್ತಿರುವ ಜೆಡಿಎಸ್ಗೆ ಶಾಸಕರು ಭಾರೀ ಆಘಾತ ನೀಡುತ್ತಿದ್ದಾರೆ. ಗೆಲ್ಲುವ ನಾಯಕರೇ ತೆನೆ ಇಳಿಸಿ ಕೈ ಹಿಡಿಯಲು ಮುಂದಾಗುತ್ತಿರುವುದು ದಳಪತಿಗಳಿಗೆ ದೊಡ್ಡ ತಲೆನೋವಾಗಿದೆ. ಮೈಸೂರಿನಲ್ಲಂತೂ ಶಾಸಕ ಜಿ.ಟಿ ದೇವೇಗೌಡ ಅವರ ನಡೆ ಜೆಡಿಎಸ್ಗೆ ಅಸ್ಥಿತ್ವದ ಹೊಡೆತ ಕೊಡುವ ಲಕ್ಷಣಗಳಿವೆ. ಇತ್ತ ಪಿರಿಯಾಪಟ್ಟಣ, ಅತ್ತ ಕೆ.ಆರ್ ನಗರದ ಜೆಡಿಎಸ್ ಮುಖಂಡರು ಕೂಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಇದು ದೊಡ್ಡಗೌಡರ ಆತಂಕಕ್ಕೆ ಕಾರಣವಾಗಿದೆ.
ಮೈಸೂರಿನಲ್ಲಿ ಡ್ಯಾಮೇಜ್ ಕಂಟ್ರೋಲ್ಗೆ ಜೆಡಿಎಸ್ ಪ್ಲಾನ್ ಮಾಡಿಕೊಂಡಿದೆ. ಸಾಂಸ್ಕೃತಿಕ ನಗರಿಯಲ್ಲಿ ದೇವೇಗೌಡರು ರಣತಂತ್ರವೊಂದನ್ನು ಹೆಣೆದಿದ್ದು, ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯಲು ಮುಂದಾಗಿದ್ದಾರೆ. ಆ ಒಂದು ಕಲ್ಲು ಭವಾನಿ ರೇವಣ್ಣ ಆಗಿರೋದು, ಜಿ.ಟಿ ದೇವೇಗೌಡ, ಸಾರಾ ಮಹೇಶ್ ಹಾಗೂ ಕೆ. ಮಹದೇವ್ಗೆ ಶಾಕ್ ಕೊಟ್ಟಿದೆ.
ಹೌದು. ಹೀಗೊಂದು ಚಿಂತನೆ ದೇವೇಗೌಡರ ಮನದಲ್ಲಿದೆ ಎಂದು ಹೇಳಲಾಗುತ್ತಿದೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಭವಾನಿ ರೇವಣ್ಣ ಕಣಕ್ಕಿಳಿಸಲು ಹೆಚ್ಡಿಡಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಚಾಮುಂಡೇಶ್ವರಿಯಿಂದ ಭವಾನಿ ರೇವಣ್ಣ ಅಖಾಡಕ್ಕೆ ಇಳಿದರೆ ಜೆಡಿಎಸ್ ಪಕ್ಷಕ್ಕೆ ಲಾಭವಾಗುವ ನಿರೀಕ್ಷೆಯ ಜೊತೆಗೆ ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗ ಮತಗಳ ಕ್ರೋಢೀಕರಣವೂ ಆಗುವ ಲೆಕ್ಕಚಾರ ದೇವೇಗೌಡರದ್ದು. ಇದರಿಂದ ಭುಗಿಲೆದ್ದಿರುವ ಭಿನ್ನಮತ ಶಮನಗೊಂಡು ಪಕ್ಷ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಭವಾನಿ ವಿರುದ್ಧ ಸ್ಪರ್ಧಿಸಿದ್ರೆ ಹಿನ್ನಡೆ ಎಂಬ ಆತಂಕ ಜಿ.ಟಿ ದೇವೇಗೌಡರನ್ನೂ ಕಾಡೋದಂತೂ ಸುಳ್ಳಲ್ಲ. ಇನ್ನು ಭವಾನಿ ರಾಜಕೀಯ ಪ್ರವೇಶ ವಿರೋಧ ಮಾಡಿದರೆ ಕೆ.ಆರ್ ನಗರದಲ್ಲಿ ಹಿನ್ನಡೆಯಾಗುವ ಭೀತಿ ಸಾರಾ ಮಹೇಶ್ಗೆ ಕಾಡುತ್ತಿದೆ. ಇದಲ್ಲದೆ ಪಿರಿಯಾಪಟ್ಟಣದಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ಶಾಸಕ ಕೆ. ಮಹದೇವ್ಗೂ ಆಘಾತ ಶುರುವಾಗಿದೆ.
ಒಟ್ನಲ್ಲಿ ಜೆಡಿಎಸ್ ತೊರೆಯುತ್ತಿರುವವರನ್ನ ಮೈಸೂರು ಭಾಗದಲ್ಲಾದರೂ ಕಟ್ಟಿಹಾಕಲು ದೇವೇಗೌಡರು ಮುಂದಾಗಿದ್ದಾರೆ. ಇದಕ್ಕೆ ಭವಾನಿ ರೇವಣ್ಣರನ್ನ ಅಸ್ತ್ರವಾಗಿ ಬಳಸಿಕೊಳ್ಳಲು ಹೆಚ್ಡಿಡಿ ಮೆಗಾ ಪ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗಿದೆ.