ಡಾ. ಜೆ ಎಸ್ ಪಾಟೀಲ.
ಬಿಜೆಪಿ ಹೇಳಿಕೇಳಿ ಪ್ರಜಾತಂತ್ರˌ ಸಂವಿಧಾನˌ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬಹುತ್ವವನ್ನು ದ್ವೇಷಿಸುವ ಪುರೋಹಿತಶಾಹಿಗಳು ಸ್ಥಾಪಿಸಿದ ಪಕ್ಷ. ಸ್ವಾತಂತ್ರ ಭಾರತದಲ್ಲಿ ಶೂದ್ರರು ಸಂವಿಧಾನಬದ್ಧ ಸೌಲಭ್ಯಗಳನ್ನು ಪಡೆದು ಏಳಿಗೆಯಾಗುವುದು ತಡೆಯಲೆಂದು ಸ್ವಾತಂತ್ರಪೂರ್ವದ ೧೯೨೫ ರಲ್ಲಿ ಯೋಚಿಸಿಯೆ ಪುರೋಹಿತಶಾಹಿಗಳು ಹಿಂದುತ್ವವಾದಿ ಸಂಘಟನೆಯನ್ನು ಹುಟ್ಟು ಹಾಕಿದರು. ಶೂದ್ರರ ಮಿದುಳಿಗೆ ಹಿಂದುತ್ವದ ಅಮಲನ್ನು ಹಾಗು ಮುಸ್ಲಿಮ್ ದ್ವೇಷವನ್ನು ಉಣ್ಣಿಸಿ ಅಧಿಕಾರ ಹಿಡಿದರು. ಅಧಿಕಾರ ಹಿಡಿಯುವವರೆಗೆ ಶೂದ್ರರನ್ನು ಬಳಸಿ ಆಮೇಲೆ ಬಿಸಾಕುವುದು ಪುರೋಹಿತಶಾಹಿಗಳು ರಕ್ತಗತ ಗುಣ. ಅದು ಸ್ವಾರ್ಥಿ ಶೂದ್ರರಿಗೆ ಅರ್ಥವಾಗಲಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಪಡೆದದ್ದು ಎರಡು ಮೂಲಗಳಿಂದ. ಒಂದು: ದೇವೇಗೌಡರ ಕುಟುಂಬಪ್ರೇಮದಿಂದ ವಿಘಟನೆಗೊಂಡ ಜನತಾ ಪರಿವಾರದ ನಾಯಕ ರಾಮಕೃಷ್ಣ ಹೆಗಡೆಯವರ ಬಿಜೆಪಿ ಬಗೆಗಿನ ಗುಪ್ತ ಒಲವಿನಿಂದ. ಎರಡು: ಲಿಂಗಾಯತ ಯಡಿಯೂರಪ್ಪನವರನ್ನು ಅಧಿಕಾರದ ಆಶೆ ತೋರಿಸಿ ದಾಳವಾಗಿ ಬಳಸುವ ಮೂಲಕ. ಇದರ ಜೊತೆಗೆ ಬಂಗಾರಪ್ಪನನ್ನು ದಾಳವಾಗಿ ಬಳಸುವ ಮೂಲಕ. ಹೀಗೆ ಸತತ ಮೂರು ದಶಕಗಳುದ್ದಕ್ಕೂ ಯಡಿಯೂರಪ್ಪ ಸೈಕಲ್ ತುಳಿದು ಕಟ್ಟಿದ ಪಕ್ಷವನ್ನು ಅನಂತಕುಮಾರ್ ಮುಂತಾದ ಪುರೋಹಿತರೆ ನಿಯಂತ್ರಿಸುತ್ತಿದ್ದರು. ಯಡಿಯೂರಪ್ಪ ಏಕಮೇವಾದ್ವಿತಿಯ ನಾಯಕನಾಗುವುದಕ್ಕೆ ಪುರೋಹಿತರು ಎಂದಿಗೂ ಆಸ್ಪದವೀಯಲಿಲ್ಲ.
ಅನಂತಕುಮಾರ ಸತ್ತುಹೋದ ಮೇಲೆ ಯಡಿಯೂರಪ್ಪನವರನ್ನು ನಿಯಂತ್ರಿಸಲು ಉಡುಪಿ ಮೂಲದ ಮುಖಗೇಡಿ ಬಿ ಎಲ್ ಸಂತೋಷನನ್ನು ಸಂಘ ಮುನ್ನೆಲೆಗೆ ತಂದಿತು. ಆ ಮೂಲಕ ಆ ಸಂಘ ಯಡಿಯೂರಪ್ಪ ಮಾತ್ರವಲ್ಲದೆ ಇಡೀ ಪಕ್ಷದ ಮೇಲೆ ನಿಯಂತ್ರಣ ಸಾಧಿಸಿತು. ಈ ಬಿ ಎಲ್ ಸಂತೋಷ ಬಿಜೆಪಿಗೆ ಮಾಡಿದ ಡ್ಯಾಮೇಜ್ ಬಹುಶಃ ಇನ್ನಾರಿಂದಲೂ ಮಾಡಲು ಸಾಧ್ಯವಿಲ್ಲ. ಮೊದಮೊದಲು ಈ ಸಂತೋಷ್ ಕೇವಲ ಪಕ್ಷದ ಮೇಲಿನ ಯಡಿಯೂರಪ್ಪ ನಿಯಂತ್ರಣವನ್ನು ಮಾತ್ರ ತಪ್ಪಿಸುತ್ತಾನೆ ಎಂದುಕೊಂಡರೆ ಆತ ಬಹಳ ಮುಂದುವರೆದಿದ್ದ. ಪಕ್ಷದಲ್ಲಿ ಲಿಂಗಾಯತರೂ ಒಳಗೊಂಡಂತೆ ಇಡೀ ಬಹುಜನರ ಶಕ್ತಿಯನ್ನೆ ನಗಣ್ಯಗೊಳಿಸಿ ಬ್ರಾಹ್ಮಣರ ಹಿಡಿತಕ್ಕೆ ಪಕ್ಷವನ್ನು ತಂದು ನಿಲ್ಲಿಸಿದ ಈ ಸಂತೋಷ್.
ಕೇಂದ್ರದಲ್ಲಿ ೨೮ ಕ್ಕೆ ೨೬ ಜನ ಸಂಸದರನ್ನು ನೀಡಿದ ಬಹುಜನರನ್ನು ಅಲಕ್ಷಿಸಿ ಪ್ರಲ್ಹಾದ್ ಜೋಶಿಯನ್ನು ಮೆರೆಸಿದ ಪಕ್ಷ ˌ ತುಮಕೂರಿನ ಬಸವರಾಜುˌ ಜಿ ಎಮ್ ಸಿದ್ದೇಶ್ˌ ಗದ್ದಿಗೌಡರ್ˌ ವಿಜಯ ಸಂಕೇಶ್ವರ್ˌ ಮಹಾಂತೇಶ್ ಕವಟಗಿಮಠˌ ಪ್ರಭಾಕರ್ ಕೋರೆˌ ಸಂಗಣ್ಣ ಕರಡಿˌ ಮುಂತಾದ ಹಿರಿಯ ಲಿಂಗಾಯತ ನಾಯಕರುˌ ರಮೇಶ್ ಜಿಗಜಿನ್ನಿ ˌ ಶ್ರೀನಿವಾಸಪ್ರಸಾದ್ˌ ಮುಂತಾದ ದಲಿತ ಸಂಸದರನ್ನು ನಯವಾಗಿಯೆ ಬಿಜೆಪಿಯ ಪುರೋಹಿತರು ಮೂಲೆಗುಂಪು ಮಾಡಿದರು. ಅದರ ಜೊತೆಗೆ ಸದಾನಂದಗೌಡ್ˌ ಆರ್ ಅಶೋಕˌ ಎಸ್ ಎಂ ಕೃಷ್ಣ ˌ ಮುದ್ದುಹನುಮೇಗೌಡ ಮುಂತಾದ ವಕ್ಕಲಿಗ ನಾಯಕರನ್ನು ಕೂಡ ತುಳಿಯಲಾಯಿತು. ಪುರೋಹಿತರ ಈ ಕೃತ್ಯ ಇವರಿಗೆ ಅರ್ಥವೆ ಆಗಲಿಲ್ಲ.
ಈಗ ಈ ಬಿ ಎಲ್ ಸಂತೋಷ್ ಕರ್ನಾಟಕದ ಬಿಜೆಪಿಯನ್ನು ಒಂದು ನಿರ್ಣಾಯಕ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾನೆ. ಯಡಿಯೂರಪ್ಪ ˌ ಜಗದೀಶ್ ಶೆಟ್ಟರ್ˌ ಸೋಮಣ್ಣ ˌ ಲಕ್ಷ್ಮಣ ಸೌದಿˌ ಆಯನೂರು ಮಂಜುನಾಥ ಮುಂತಾದ ಎಲ್ಲಾ ಲಿಂಗಾಯತ ನಾಯಕರನ್ನು ಹಾಗು ಆರ್ ಅಶೋಕ ಮುಂತಾದ ವಕ್ಕಲಿಗ ನಾಯಕರನ್ನು ಸಂಪೂರ್ಣವಾಗಿ ಪಕ್ಷದಿಂದ ದೂರ ಸರಿಸುವಲ್ಲಿ ಸಫಲನಾಗಿದ್ದಾನೆ. ಈತನ ಈ ಅನಾಹುತಕಾರಿ ಕೃತ್ಯಕ್ಕೆ ಮಾಧ್ಯಮವ್ಯಾಧಿಗಳು ಗುಜರಾತ್/ಯುಪಿ ಮಾದರಿ ಪ್ರಯೋಗವೆಂದು ಸಂಭ್ರಮಿಸುತ್ತಿವೆ. ಆದರೆ ಬಿಜೆಪಿ ೨೦೨೩ ರ ಚುನಾವಣೆಯಲ್ಲಿ ಸಂಪೂರ್ಣ ನೆಲಕಚ್ಚಲು ಇನ್ನೆನು ಕ್ಷಣಗಣನೆ ಆರಂಭಗೊಂಡಿದೆ.
ಇಲ್ಲಿ ನಾವು ಕೇವಲ ಸಂತೋಷನನ್ನಾಗಲಿ ಅಥವಾ ಆತ ಪ್ರತಿನಿಧಿಸುವ ಪುರೋಹಿತ ಹಿತಾಯ ಸಂಘವನ್ನಾಗಲಿ ದೂಷಿಸಿದರೆ ಸಾಲದು. ಇವರ ಆಮೀಷಗಳಿಗೆ ಬಲಿಯಾಗಿ ತಾವು ಹುಟ್ಟಿದ ಲಿಂಗಾಯತ ಧರ್ಮದ ಅಸ್ಮಿತೆಯನ್ನು ಮರೆತವರುˌ ಸಂಘದ ಮಾತು ಕೇಳಿ ಇಡೀ ಸಮುದಾಯಕ್ಕೆ ಸಿಗಬಹುದಾಗಿದ್ದ ಅಲ್ಪಸಂಖ್ಯಾತರ ಸೌಲಭ್ಯ ವಿರೋಧಿಸಿದವರುˌ ಬಸವಣ್ಣನವರ ಸಮಾಜವಾದಕ್ಕೆ ಬೆಂಕಿ ಇಟ್ಟವರು ಇದೇ ಲಿಂಗಾಯತ ಪುಢಾರಿಗಳು. ಅಧಿಕಾರದ ಆಶೆˌ ತಮ್ಮ ಪೀಳಿಗೆಯ ರಾಜಕೀಯ ಭವಿಷ್ಯಗಳ ಎದುರಿಗೆ ಇವರಿಗೆ ಸಮಗ್ರ ಲಿಂಗಾಯತ ಸಮುದಾಯದ ಹಿತಾಸಕ್ತಿ ಪ್ರಮುಖವೆನ್ನಿಸಲಿಲ್ಲ ˌ ಬಸವಣ್ಣನವರ ವೈದಿಕ ವಿರೋಧಿ ತತ್ವ ಪತ್ಯವೆನ್ನಿಸಲಿಲ್ಲ.
ಈಗ ಬಿಜೆಪಿಯಲ್ಲಿನ ಲಿಂಗಾಯತˌ ದಲಿತರಾದಿಯಾಗಿ ಎಲ್ಲ ಬಹುಜನ ವರ್ಗದ ನಾಯಕರು ಸಂಪೂರ್ಣ ಬ್ರಾಹ್ಮಣ್ಯದ ದಬ್ಬಾಳಿಕೆಗೆ ಬಲಿಪಶುಗಳಾಗಿದ್ದಾರೆ. ಈ ನೆಲದ ಜನಪರ ಹೋರಾಟಗಾರರನ್ನು ˌ ದೇಶಭಕ್ತರನ್ನು ˌ ಕಾಂಗ್ರೆಸ್ ಪಕ್ಷವನ್ನು ˌ ಅಲ್ಪಸಂಖ್ಯಾತರನ್ನು ˌ ಬುದ್ದ ˌ ಬಸವಣ್ಣ ˌ ಅಂಬೇಡ್ಕರ್ˌ ಫುಲೆˌ ಪೆರಿಯಾರ್ˌ ಕುವೆಂಪುˌ ನಾರಾಯಣಗುರು ಮುಂತಾದ ಕವಿˌ ದಾರ್ಶನಿಕರನ್ನು ದ್ವೇಷಿಸುವ ಸಂಘಿಗಳು ಈಗ ಬಿಜೆಪಿಯೊಳಗಿನ ಶೂದ್ರ ಶಕ್ತಿಗಳನ್ನು ಒಂದೇ ಸಲಕ್ಕೆ ನಾಶಗೊಳಿಸಿ ಬಿಟ್ಟಿದ್ದಾರೆ. ಈಗ ಬಿಜೆಪಿ ಸಂಪೂರ್ಣ ಬ್ರಾಹ್ಮಣರ ಹಿಡಿತಕ್ಕೆ ಹೋಗಿದೆ.
ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಕೇವಲ ಬ್ರಾಹ್ಮಣರು ಮಾತ್ರ ಯಜಮಾನರುˌ ಉಳಿದವರು ಅಲ್ಲಿ ಕೇವಲ ಗುಲಾಮರಾಗಿ ಮಾತ್ರ ಬದುಕುವ ಹಂತಕ್ಕೆ ಬಂದು ನಿಲ್ಲಿಸಲಾಗಿದೆ. ಬೇರೆ ಪಕ್ಷದ ಪ್ರಬಲ ವಕ್ಕಲಿಗರ ಎದುರಿಗೆ ಬಿಜೆಪಿಯ ವಕ್ಕಲಿಗರುˌ ಅದೇ ರೀತಿ ಆಯಾ ಸಮಬಲದ ಶೂದ್ರರ ನಡುವೆ ಸ್ಪರ್ಧೆ ಏರ್ಪಡಿಸಿ ಒಂದು ಡಜನ್ ಗೂ ಹೆಚ್ಚಿನ ಬ್ರಾಹ್ಮಣರು ಸುರಕ್ಷಿತ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಪಕ್ಷ ಮುಂದಿನ ದಿನಗಳಲ್ಲಿ ವಿರೋಧ ಪಕ್ಷದ ಸ್ಥಾನ ಪಡೆದರೂ ಕೂಡ ಬ್ರಾಹ್ಮಣನೊಬ್ಬನ ಹಿರಿತನದಲ್ಲೆ ಅದು ವಿರೋಧಪಕ್ಷವಾಗಿ ಕಾರ್ಯ ಮಾಡಲಿದೆ. ಶೂದ್ರರು ಅಲ್ಲೇನಿದ್ದರೂ ಕೇಶವ ಕೃಪಾ ಮತ್ತು ಜಗನ್ನಾಥ ಜೋಶಿ ಭವನದ ಕಸ ಗುಡಿಸಲಷ್ಟೆ ಅರ್ಹರು ಎನ್ನುವ ಅಘೋಷಿತ ಸ್ಥಿತಿ ನಿರ್ಮಾಣಗೊಂಡಿದೆ.
ಬಸವ ತತ್ವಕ್ಕೆ ದ್ರೋಹ ಮಾಡಿˌ ಲಿಂಗಾಯತ ಧರ್ಮ ಮಾನ್ಯತೆಯನ್ನು ವಿರೋಧಿಸಿದ ಲಿಂಗಾಯತ ನಾಯಕರುˌ ನಾರಾಯಣಗುರುˌ ಅಂಬೇಡ್ಕರ್ˌ ಫುಲೆˌ ಕುವೆಂಪುˌ ಪೆರಿಯಾರರ ತತ್ವಗಳು ಮರೆತ ಉಳಿದ ದಲಿತ/ಶೂದ್ರರಿಗೆ ಬಿಜೆಪಿಯಲ್ಲಿ ತಕ್ಕ ಶಾಸ್ತಿಯಾಗಿದೆ. ಇದು ಎಂದೊ ಆಗಬೇಕಿತ್ತು ˌ ತಡವಾಗಿಯಾದರೂ ಆಗುತ್ತಿರುವುದು ಆಶಾದಾಯಕ ಬೆಳವಣಿಗೆ. ಸಂಘಿಗಳು ಮಾಡುವ ಮೋಸ ಸಾಮಾನ್ಯವಾಗಿ ಗೊತ್ತಾಗದಂತಿರುತ್ತದೆ. ಆದರೆ ಈ ಸಲ ಸಂಘಿಗಳು ಬಹಳ ಬೋಲ್ಡ್ ಆಗಿಯೆ ಬಹುಜನರನ್ನು ತುಳಿಯುವ ಕೃತ್ಯ ಮಾಡಿದ್ದಾರೆ. ಆದರೂ ಇದನ್ನು ತಿಳಿದುಕೊಂಡು ಬಹುಜನರು ಸುಧಾರಿಸದಿದ್ದರೆ ಅದರಲ್ಲಿ ಸಂಘಿಗಳ ತಪ್ಪೇನಿದೆ?
~ಡಾ. ಜೆ ಎಸ್ ಪಾಟೀಲ.