ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ತತ್ವ, ಸಿದ್ಧಾಂತ ಒಪ್ಪಿ ಪಕ್ಷ ಸೇರ್ಪಡೆಯಾಗಿದ್ದೇನೆ. ರಾಜ್ಯ ಬಿಜೆಪಿ ಬೆಳವಣಿಗೆ ವರಿಷ್ಠರ ಗಮನಕ್ಕೆ ಬಂದಿಲ್ಲ ಅನ್ನಿಸುತ್ತೆ. ನಾನು ಮಂತ್ರಿ, ಮುಖ್ಯಮಂತ್ರಿ ಆಗಿದ್ದೇನೆ, ನನಗೆ ಅಧಿಕಾರ ಬೇಕಿಲ್ಲ. ರಾಜ್ಯ ಬಿಜೆಪಿ ಕೆಲವು ವ್ಯಕ್ತಿಗಳ ಹಿಡಿತದಲ್ಲಿದೆ. ಕೆಲ ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡ್ತಿದ್ದಾರೆಎಂದು ನೋವು ತೋಡಿಕೊಂಡಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಟೀಕೆ ಮಾಡುತ್ತಿಲ್ಲ. ಲಿಂಗಾಯತ ನಾಯಕರಲ್ಲಿ ಬಿಎಸ್‌ವೈ ಬಿಟ್ಟರೆ ನಾನೇ ಹಿರಿಯ. ಅದಕ್ಕಾಗಿ ನನ್ನನ್ನು ಪಕ್ಷದಿಂದ ಹೊರಹಾಕಿರಬೇಕು ಎಂದು ಈ ರೀತಿ ಮಾಡಿದರು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬೊಮ್ಮಾಯಿ ಸಿಎಂ ಆದಾಗಲೂ ಅವರಿಗೆ ಬೆಂಬಲ ನೀಡಿದ್ದೆ, ನನಗೆ ಸಚಿವ ಸ್ಥಾನ ಸಿಗದಿದ್ದರೂ ಎರಡು ವರ್ಷದಿಂದ ಸರ್ಕಾರಕ್ಕೆ ತೊಂದರೆ ಆಗದಂತೆ ನಡೆದುಕೊಂಡೆ, ಆದರೂ ನನ್ನನ್ನು ಈ ರೀತಿ ನಡೆಸಿಕೊಂಡಿರುವುದು ಸರಿಯಲ್ಲ. ನಾನು ಕಟ್ಟಿದ ಪಕ್ಷವೇ ನನ್ನನ್ನು ಹೊರಹಾಕಿದೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದಕ್ಕೆ ನಾನು ಪಕ್ಷ ಬಿಟ್ಟುಬರಬೇಕಾಯಿತು. ಅಧಿಕಾರದ ಮೇಲೆ ಆಸೆ ಇಟ್ಟು ನಾನು ರಾಜಕಾರಣಕ್ಕೆ ಬಂದಿಲ್ಲ.. ನನಗೆ ಯಾವುದೇ ಪದವಿ ಬೇಕಾಗಿಲ್ಲ. ಆದ್ರೆ ಬಿಜೆಪಿ ನಾಯಕರು ನಡೆದುಕೊಂಡ ರೀತಿ ನನಗೆ ಬೇಸರ ತಂದಿದೆ. ಕಾರಣ ನೀಡದೇ ಏಕಾಏಕಿ ಟಿಕೆಟ್ ನೀಡದೇ ನನ್ನ ಗೌರವಕ್ಕೆ ಧಕ್ಕೆ ತಂದಿದ್ದಲ್ಲದೇ ನನ್ನ ಕಾರ್ಯಕರ್ತರಿಗೆ ನನ್ನ ಬೆಂಬಲಿಗರಿಗೂ ಅಪಮಾನವಾಗಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ಇಡೀ ರಾಜ್ಯದ ಲಿಂಗಾಯತರು ನನಗೆ ಕಾಲ್ ಮಾಡಿ, ಏಕೆ ಅನ್ಯಾಯ ಆಯಿತು ಎಂದು ಕೇಳಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ಧನ್ಯವಾದ. ಹುಬ್ಬಳ್ಳಿ ಜನರಿಂದ ಜಗದೀಶ್ ಶೆಟ್ಟರ್ ಬೆಳೆದಿದ್ದಾನೆ. ಇನ್ನು ಮುಂದೆ ಅಧಿಕಾರ ಬೇಡ, ಗೌರವಯುತವಾಗಿ ರಾಜಕೀಯದಿಂದ ಹೊರಗೆ ಕಳಿಸಿ ಎಂದು ಕೇಳಿದೆ. ಅಷ್ಟು ಕೂಡಾ ಮಾಡಿಲ್ಲ. ದೆಹಲಿಗೆ ಕರೆದು ಬೇರೆ ವ್ಯವಸ್ಥೆ ಮಾಡಿದ್ದೀನಿ ಎಂದು ಹೇಳಿದ್ದರೆ, ಕುಷಿಯಿಂದ ಬಿಟ್ಟು ಕೊಡ್ತಿದ್ದೆ ಎಂದು ಶೆಟ್ಟರ್ ಹೇಳಿದ್ದಾರೆ.
ನನ್ನ ಕುಟುಂಬಕ್ಕೆ ಅಧಿಕಾರ ಬೇಡ, ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಈ ಬಾರಿ 6 ತಿಂಗಳು ಶಾಸಕನಾಗಿ ಇರುತ್ತೇನೆ, ನಂತರ ರಾಜಿನಾಮೆ ನೀಡುತ್ತೇನೆ ಎಂದಿದ್ದೆ ಅದಕ್ಕೂ ಅವಕಾಶ ಕೊಟ್ಟಿಲ್ಲ. ಹಿರಿಯ ನಾಯಕನಿಗೆ ಈ ರೀತಿ ಅವಮಾನ ಮಾಡುವುದು ಸರಿಯಲ್ಲ. ಏಕಾಏಕಿ ಕರೆ ಮಾಡಿ ನಿಮಗೆ ಟಿಕೆಟ್ ಇಲ್ಲ ಎಂದಿದ್ದಾರೆ. ನಾನು ನನ್ನನ್ನು ಗೌರವಯುತವಾಗಿ ಕಳಿಸಿಕೊಡಿ ಅಂದೆ, ಕೇಳಲಿಲ್ಲ ಹಾಗಾಗಿ ಪಕ್ಷ ಬಿಡಬೇಕಾಯ್ತು ಎಂದು ಅವರು ಹೇಳಿದ್ದಾರೆ.






