ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ವೇಳೆ ಮನೆ ಸುಟ್ಟುಕೊಂಡಿದ್ದ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾದ ನಂತರ ಅಖಂಡ ಶ್ರೀನಿವಾಸ ಮೂರ್ತಿ ರಾಜಿನಾಮೆ ನೀಡಿದ್ದಾರೆ. ಪುಲಕೇಶಿನಗರದ ಟಿಕೆಟ್‌ಗಾಗಿ ಮಾಜಿ ಮೇಯರ್ ಸಂಪತ್‌ರಾಜ್ ಹಾಗೂ ಅಖಂಡ ಶ್ರೀನಿವಾಸಮೂರ್ತಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕೆಜಿಹಳ್ಳಿ ಗಲಭೆಯಲ್ಲೂ ಸಂಪತ್ ರಾಜ್ ಪ್ರಮುಖ ಆರೋಪಿಯಾಗಿದ್ದರು.
ಕಾಂಗ್ರೆಸ್‌ನ ಮೂರು ಪಟ್ಟಿಯಲ್ಲಿಯೂ ನನಗೆ ಟಿಕೆಟ್ ನೀಡಿಲ್ಲ. ಇದರಿಂದ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅಖಂಡ ಶ್ರೀನಿವಾಸ ಹೇಳಿದ್ದಾರೆ.
ಡಿಜೆಹಳ್ಳಿ, ಕೆಜೆ ಹಳ್ಳಿ ಗಲಭೆಗೆ ಅಖಂಡ ಶ್ರಿನಿವಾಸ್ ಕಾರಣ, ಹಾಗಾಗಿ ಅವರಿಗೆ ಟಿಕೆಟ್ ನೀಡಬಾರದು ಎಂದು ಮುಸ್ಲಿಂ ಮುಖಂಡರು ಕಾಂಗ್ರೆಸ್ ಗೆ ಒತ್ತಡ ಹೇರಿದ್ದರು.
ಅಖಂಡ ಶ್ರೀನಿವಾಸ್ ಸಿದ್ದರಾಮಯ್ಯ ಬಣದ ಶಾಸಕರಾಗಿದ್ದು, ಅವರಿಗೆ ಟಿಕೆಟ್ ಕೈತಪ್ಪಲು ಡಿಕೆಶಿ ಕಾರಣ ಎನ್ನಲಾಗಿದೆ. ಡಿಕೆಶಿ ಬಣದ ಸಂಪತ್ ರಾಜ್ ಗೆ ಟಿಕೆಟ್ ನೀಡಲು ಅಖಂಡಗೆ ಟಿಕೆಟ್ ತಪ್ಪಿಸಲಾಗಿದೆ ಎಂಬ ಚರ್ಚೆಗಳೂ ನಡೆದಿವೆ. ಅಲ್ಲದೆ, ಸಿದ್ದು ಬಣದ ಝಮೀರ್ ಅಹಮದ್ ಅವರು ಅಖಂಡ ಪರವಾಗಿ ಮುಸ್ಲಿಂ ಮುಖಂಡರ ಮನವೊಲಿಸಲು ಪ್ರಯತ್ನಿಸಿದ್ದರಾದರೂ, ಅದು ಫಲ ಕೊಟ್ಟಿರಲಿಲ್ಲ.






