ಪಶ್ಚಿಮ ಏಷ್ಯಾದ ದೇಶಗಳಿಗೆ ಭೇಟಿ ನೀಡುವಿಕೆಯನ್ನು ಉತ್ತೇಜಿಸುವ ಯತ್ನದಲ್ಲಿ ಬಾಂಗ್ಲಾದೇಶದ ಹೊಸ ಪಾಸ್ಪೋರ್ಟ್ಗಳಲ್ಲಿ ಇಸ್ರೇಲ್ ದೇಶವು ಸಿಂಧುತ್ವ ಪಡೆದುಕೊಂಡಿದೆ. ಆದರೆ ಇಸ್ರೇಲ್-ಪ್ಯಾಲೆಸ್ಟೈನ್ ವಿಷಯದಲ್ಲಿ ದೇಶದ ನಿಲುವು ಬದಲಾಗದೆ ಉಳಿಯುತ್ತದೆ ಎಂದು ಬಾಂಗ್ಲಾದ ವಿದೇಶಾಂಗ ಸಚಿವಾಲಯ ಭಾನುವಾರ ತಿಳಿಸಿದೆ.
“ಇಸ್ರೇಲ್ ಹೊರತುಪಡಿಸಿ ಎಲ್ಲ ದೇಶಗಳಲ್ಲಿ ಮಾನ್ಯ” ಎಂಬ ಪದಗಳನ್ನು ಇದುವರೆಗೆ ಬಾಂಗ್ಲಾದ ಪಾಸ್ಪೋರ್ಟ್ ಹೊಂದಿತ್ತು. ಈ ಪದಗಳನ್ನು ತೆಗೆದುಹಾಕುವ ಕ್ರಮವು ‘ಜಾಗತಿಕ ಮಾನದಂಡಗಳನ್ನು ಕಾಯ್ದುಕೊಳ್ಳುವ’ ಪ್ರಯತ್ನವಾಗಿದೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಹೇಳಿರುವುದಾಗಿ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
“ಇಸ್ರೇಲ್ ಬಗ್ಗೆ ಬಾಂಗ್ಲಾದೇಶದ ನಿಲುವಿನಲ್ಲಿ ಯಾವುದೇ ಬದಲಾವಣೆಗಳಿಲ್ಲ, ಏಕೆಂದರೆ ಅದು ಇನ್ನೂ ಇಸ್ರೇಲನ್ನು ಒಂದು ದೇಶವಾಗಿ ಗುರುತಿಸುವುದಿಲ್ಲ. ಹೊಸ ಪಾಸ್ಪೋರ್ಟ್ನಲ್ಲಿ ‘ಇಸ್ರೇಲ್ ಹೊರತುಪಡಿಸಿ’ ಪದಗಳನ್ನು ತೆಗೆದುಹಾಕುವುದರಿಂದ ಬಾಂಗ್ಲಾದೇಶದ ನಿಲುವಿನಲ್ಲಿ ಬದಲಾವಣೆಯಾಗಿದೆ ಎಂದು ಅರ್ಥವಲ್ಲ ”ಎಂದು ಮೊಮೆನ್ ಹೇಳಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಉದ್ವಿಗ್ನತೆ ಹೆಚ್ಚಿದ್ದ ಸಂದರ್ಭದಲ್ಲಿ ಬಾಂಗ್ಲಾದೇಶವು ಈ ನಿರ್ಧಾರಕ್ಕೆ ಬಂದಿದೆ. ಎರಡೂ ಕಡೆಯವರು ರಾಕೆಟ್ ದಾಳಿ ಮತ್ತು ವೈಮಾನಿಕ ದಾಳಿಯನ್ನು ನಡೆಸಿ ಸಾವಿರಾರು ನಾಗರಿಕರನ್ನು ಕೊಂದು ಹಾಕಿದ್ದರು. 11 ದಿನಗಳ ಉಗ್ರ ಹಿಂಸಾಚಾರದ ನಂತರ, ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಹಮಾಸ್ ಎರಡೂ ಮೇ 21 ರಂದು ಕದನ ವಿರಾಮಕ್ಕೆ ಕರೆ ನೀಡಿವೆ.
ಜಾಗತಿಕವಾಗಿ ಬದಲಾಗುತ್ತಿರುವ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ನೀತಿಯನ್ನು ರೂಪಿಸಲಾಗಿದೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಅಸಾದುಝ್ಝಮಾನ್ ಖಾನ್ uzz ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಹಳೆಯ ನೀತಿಯನ್ನು ಅರಬ್ ಜಗತ್ತು ಸಹ ಇನ್ನು ಮುಂದೆ ಅನುಸರಿಸುವುದಿಲ್ಲ ಎಂದು ಅವರು ಹೇಳಿದರು.
“ಹಳೆಯ ಪಾಸ್ಪೋರ್ಟ್ಗಳಲ್ಲಿ ಆ ಶರತ್ತು ಇತ್ತು, ಆದರೆ ಈಗ ಅದನ್ನು ತೆಗೆದುಹಾಕಿ ಹೊಸ ಪಾಸ್ಪೋರ್ಟ್ಗಳನ್ನು ನೀಡಲಾಗುವುದು. ಬಾಂಗ್ಲಾದೇಶ ಇನ್ನೂ ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿಲ್ಲ ಮತ್ತು ಅದು ಇಸ್ರೇಲನ್ನು ಒಂದು ದೇಶವಾಗಿ ಗುರುತಿಸುವುದಿಲ್ಲ ” ಎಂದು ಅವರು ಹೇಳಿದರು.
ಮೊದಲಿನಿಂದಲೂ ಪ್ಯಾಲೆಸ್ಟೈನ್ ಪರ ದೃಢವಾಗಿ ನಿಂತಿರುವ ಬಾಂಗ್ಲಾದೇಶ ಎಂದಿಗೂ ಇಸ್ರೇಲ್ ಅನ್ನು ಒಂದು ದೇಶವೆಂದು ಗುರುತಿಸಿಲ್ಲ ಮತ್ತು ಇಸ್ರೇಲ್ ಜತೆಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿಲ್ಲ.
ಈ ಬೆಳವಣಿಗೆಯನ್ನು ಸ್ವಾಗತಿಸಿರುವ ಇಸ್ರೇಲ್ ಬಾಂಗ್ಲಾದೇಶವನ್ನು ತಮ್ಮ ದೇಶದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಬೆಳೆಸುವಂತೆ ಒತ್ತಾಯಿಸಿದೆ.
“ದೊಡ್ಡ ಸುದ್ದಿ! ಬಾಂಗ್ಲಾದೇಶವು ಇಸ್ರೇಲ್ಗೆ ಪ್ರಯಾಣ ನಿಷೇಧವನ್ನು ತೆಗೆದುಹಾಕಿದೆ. ಇದು ಸ್ವಾಗತಾರ್ಹ ಹೆಜ್ಜೆಯಾಗಿದೆ ಮತ್ತು ಇಸ್ರೇಲ್ ಜೊತೆ ಮುಂದುವರಿಯಲು ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲು ನಾನು ಬಾಂಗ್ಲಾದೇಶ ಸರ್ಕಾರವನ್ನು ಕೋರುತ್ತೇನೆ, ಇದರಿಂದಾಗಿ ನಮ್ಮ ಎರಡೂ ಜನರು ಪ್ರಯೋಜನ ಪಡೆಯಬಹುದು ಮತ್ತು ಅಭಿವೃದ್ಧಿ ಹೊಂದಬಹುದು” ಎಂದು ಇಸ್ರೇಲ್ನ ವಿದೇಶಾಂಗ ಸಚಿವಾಲಯದ ಏಷ್ಯಾ ಮತ್ತು ಪೆಸಿಫಿಕ್ ಉಪ ಮಹಾನಿರ್ದೇಶಕ ಗಿಲಾಡ್ ಕೊಹೆನ್ ಹೇಳಿದ್ದಾರೆ.
ಅಲ್ಜೀರಿಯಾ, ಬ್ರೂನಿ, ಇರಾನ್, ಇರಾಕ್, ಕುವೈತ್, ಲೆಬನಾನ್, ಲಿಬಿಯಾ, ಮಲೇಷ್ಯಾ, ಪಾಕಿಸ್ತಾನ, ಸೌದಿ ಅರೇಬಿಯಾ, ಸಿರಿಯಾ ಮತ್ತು ಯೆಮೆನ್ನಂತಹ ದೇಶಗಳು ಸಹ ಇಸ್ರೇಲ್ ಅನ್ನು ದೇಶವಾಗಿ ಗುರುತಿಸುವುದಿಲ್ಲ ಅಥವಾ ಇಸ್ರೇಲಿ ಪಾಸ್ಪೋರ್ಟ್ ಹೊಂದಿರುವವರನ್ನು ಒಪ್ಪಿಕೊಳ್ಳುವುದಿಲ್ಲ.