ಹಿಂದೂ ಬಲಪಂಥೀಯ ಗುಂಪುಗಳು ಸಿನೆಮಾಗಳ ವಿರುದ್ಧ ನಡೆಸುವ ದಾಳಿ ಕಳೆದ ಕೆಲವು ವರ್ಷಗಳಿಂದ ಸರ್ವೇ ಸಾಮಾನ್ಯವೆಂಬಂತಾಗಿದೆ. ದಂಗಲ್, ಪಿಕೆ, ಪದ್ಮಾವತ್ ಮೊದಲಾದ ಸಿನೆಮಾಗಳ ವಿರುದ್ಧ ಬಲಪಂಥೀಯ ಗುಂಪುಗಳು ವಿರೋಧ ವ್ಯಕ್ತಪಡಿಸಿದ್ದವು. ಲೀಲಾ, ಪಾತಾಲ್ ಲೋಕ್ ಮೊದಲಾದ ವೆಬ್ ಸೀರೀಸ್ಗಳ ವಿರುದ್ಧವೂ ಸಂಘಟನೆಗಳು ಅಭಿಯಾನ ನಡೆಸಿದ್ದವು.
ಇದೀಗ ಖ್ಯಾತ ಬಾಲಿವುಡ್ ನಿರ್ದೇಶಕ ಪ್ರಕಾಶ್ ಝಾ ಅವರು ನಿರ್ದೇಶಿಸುತ್ತಿರುವ ಆಶ್ರಮ್ 3 ವೆಬ್ಸೀರಿಸ್ ತಂಡದ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ, ಸೆಟ್ಗಳನ್ನು ಧ್ವಂಸ ಮಾಡಿದ್ದಾರೆ.
ಝಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆಶ್ರಮ್ 3’ ವೆಬ್ ಸರಣಿಯ ಶೀರ್ಷಿಕೆ ಮತ್ತು ಕಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಭಜರಂಗ ದಳದ ಕಾರ್ಯಕರ್ತರು ಶೂಟಿಂಗ್ ಸ್ಥಳಕ್ಕೆ ನುಗ್ಗಿ ಹಲ್ಲೆ ಕೂಡ ಮಾಡಿದ್ದಾರೆ. ನಾಯಕ ಬಾಬಿ ಡಿಯೋಲ್ ಮೇಲೆ ಹಲ್ಲೆ ಮಾಡುವ ಉದ್ದೇಶದೊಂದಿಗೆ ಈ ದಾಳಿ ನಡೆದಿದೆ. ಆದರೆ ಬಜರಂಗದಳ ಕಾರ್ಯಕರ್ತರ ಕೈಗೆ ಬಾಬಿ ಡಿಯೋಲ್ ಸಿಗದ ಕಾರಣ ಹಲ್ಲೆಯಿಂದ ತಪ್ಪಿಸಿಕೊಂಡಿದ್ದಾರೆ.
ಭೊಪಾಲ್ನಲ್ಲಿ ‘ಆಶ್ರಮ್ 3’ ಶೂಟಿಂಗ್ ನಡೆಯುತ್ತಿತ್ತು. ಹಳೇ ಜೈಲಿನಲ್ಲಿ ಕೆಲವು ಸೆಟ್ಗಳನ್ನು ಹಾಕಲಾಗಿತ್ತು. ಚಿತ್ರೀಕರಣದ ಸ್ಥಳಕ್ಕೆ ಬಂದ ಭಜರಂಗ ದಳದ ಕಾರ್ಯಕರ್ತರು ವೆಬ್ ಸಿರೀಸ್ ತಂಡದ ಸಿಬ್ಬಂದಿಯನ್ನು ಮನಬಂದಂತೆ ಥಳಿಸಿದ್ದಾರೆ. ಚಿತ್ರೀಕರಣದ ಉಪಕರಣಗಳಿಗೆ ಹಾನಿ ಮಾಡಿದ್ದಾರೆ. ನಿರ್ದೇಶಕ ಪ್ರಕಾಶ್ ಝಾ ಮುಖಕ್ಕೆ ಮಸಿ ಬಳಿದು ಅವಮಾನಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಬಾಬಿ ಡಿಯೋಲ್ ವಿರುದ್ಧವೂ ಹಲ್ಲೆಗೆ ಯೋಜನೆ ರೂಪಿಸಿಕೊಂಡಿದ್ದು, ‘ಬಾಬಿ ಡಿಯೋಲ್ ಎಲ್ಲಿ’ ಎಂದು ಅವರೆಲ್ಲ ಕೂಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
‘ಈ ವೆಬ್ ಸರಣಿಗೆ ಆಶ್ರಮ್ ಎಂದು ಹೆಸರಿಟ್ಟು, ಆಶ್ರಮದ ಗುರುಗಳು ಮಹಿಳೆಯರನ್ನು ಶೋಷಿಸುವ ದೃಶ್ಯಗಳನ್ನು ತೋರಿಸಲಾಗಿದೆ. ಚರ್ಚ್ ಅಥವಾ ಮದರಾಸ ಬಗ್ಗೆ ಇದೇ ರೀತಿ ತೋರಿಸುವ ಧೈರ್ಯ ಇವರಲ್ಲಿ ಇದೆಯೇ? ‘ಆಶ್ರಮ್ 1’ ಮತ್ತು ‘ಆಶ್ರಮ್ 2’ ಬಳಿಕ ಈಗ ‘ಆಶ್ರಮ್ 3’ ಮಾಡುತ್ತಿದ್ದಾರೆ. ಇದನ್ನು ಚಿತ್ರೀಕರಿಸಲು ನಾವು ಬಿಡಲ್ಲ. ಸದ್ಯಕ್ಕೆ ಪ್ರಕಾಶ್ ಝಾ ಮುಖಕ್ಕೆ ಮಸಿ ಬಳಿದಿದ್ದೇವೆ. ಬಾಬಿ ಡಿಯೋಲ್ಗಾಗಿ ಹುಡುಕುತ್ತಿದ್ದೇವೆ. ತಮ್ಮ ಸಹೋದರ ಸನ್ನಿ ಡಿಯೋಲ್ ಅವರನ್ನು ನೋಡಿ ಬಾಬಿ ಡಿಯೋಲ್ ಕಲಿಯಬೇಕು. ಅವರು ಎಂಥೆಂಥ ದೇಶಭಕ್ತಿ ಸಿನಿಮಾ ಮಾಡಿದ್ದಾರೆ’ ಎಂದು ಭಜರಂಗ ದಳದ ಮುಖಂಡ ಸುಶೀಲ್ ಹೇಳಿದ್ದಾರೆ.
ನಿರ್ದೇಶಕ ಪ್ರಕಾಶ್ ಝಾ ಅವರು ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ನೀಡಿಲ್ಲ. ಆದರೂ ಕೂಡ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ವೆಬ್ ಸರಣಿ ತಂಡದವರಿಗೆ ಪೂರ್ತಿ ಭದ್ರತೆ ನೀಡಿ, ಶೂಟಿಂಗ್ಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಭಜರಂಗ ದಳದವರು ಹಲ್ಲೆ ಮಾಡುತ್ತಿರುವ ವಿಡಿಯೋ ಕೂಡ ಲಭ್ಯವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಬಗ್ಗೆ ಭೋಪಾಲ್ ದಕ್ಷಿಣದ ಎಸ್ ಪಿ ಸಾಯಿ ಕೃಷ್ಣ ಥೋಟ ಪ್ರತಿಕ್ರಿಯೆ ನೀಡಿದ್ದು, “ವೆಬ್ ಸೀರೀಸ್ ನ ಹೆಸರಿಗೆ ವಿರೋಧ ವ್ಯಕ್ತಪಡಿಸಿ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅರೇರಾ ಹಿಲ್ಸ್ ನ ಪ್ರದೇಶದಲ್ಲಿರುವ ಹಳೆಯ ಜೈಲಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ” ಎಂದು ತಿಳಿಸಿದ್ದಾರೆ.
ಹಿಂದೂಗಳನ್ನು ಅವಮಾನಿಸುವ, ಮಹಿಳೆಯರನ್ನು ಧಾರ್ಮಿಕ ಗುರುಗಳು ವಂಚಿಸುವ ಅಶ್ಲೀಲ ದೃಶ್ಯಗಳನ್ನು ವೆಬ್ ಸೀರೀಸ್ ನಲ್ಲಿ ಚಿತ್ರೀಕರಿಸಲಾಗಿದ್ದು ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂಬುದು ಸಂಘಟನೆಯ ಪ್ರಮುಖ ಆರೋಪವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ
ಘಟನೆ ವರದಿಯಾಗುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಈ ವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ವರದಿಯಾಗಿದೆ.