ಬೆಂಗಳೂರು: ಬಿಗ್ ಬಾಸ್ ಸೀಸನ್ 12(Bigg Boss Kannada 12) ಮುಗಿದರೂ ಸ್ಪರ್ಧಿಗಳ ನಡುವಿನ ಗುದ್ದಾಟ ಮಾತ್ರ ಇನ್ನೂ ಮುಂದುವರಿದಿದೆ. ಮಾಜಿ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ(Chaitra Kundapura S) ಮತ್ತು ಅಶ್ವಿನಿ ಗೌಡ(Ashwini Gowda) ನಡುವೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವಾರ್ ಜೋರಾಗಿದೆ.

ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಚೈತ್ರಾ ಕುಂದಾಪುರ ಹಾಗೂ ರಜತ್ ಪ್ರವೇಶಿಸಿದ್ದ ವೇಳೆ ಚೈತ್ರಾ ಮತ್ತು ಅಶ್ವಿನಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಶೋ ಮುಗಿದ ಬಳಿಕವೂ ಇಬ್ಬರ ನಡುವಿನ ಮನಸ್ತಾಪ ಕಡಿಮೆಯಾಗಿಲ್ಲ ಎಂಬುದು ಇತ್ತೀಚಿನ ಬೆಳವಣಿಗೆಯಿಂದ ಸ್ಪಷ್ಟವಾಗಿದೆ.

ಇತ್ತೀಚೆಗೆ ಅಶ್ವಿನಿ ಗೌಡ ತಮ್ಮ ಕೈ-ಕಾಲುಗಳ ಮೇಲೆ ಕಂಡುಬಂದ ಗಾಯಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಆಟದ ವೇಳೆ ಸಂಭವಿಸಿದ ಗಾಯಗಳೆಂದು ಹೇಳಲಾಗುತ್ತಿದ್ದ ಈ ಫೋಟೋಗಳು ವೈರಲ್ ಆಗಿವೆ. ಕೆಲ ಅಭಿಮಾನಿಗಳು ಈ ಗಾಯಗಳು ಚೈತ್ರಾ ಕಾರಣದಿಂದಾಗಿವೆ ಎಂದು ಕಾಮೆಂಟ್ ಮಾಡಿದ್ದು, ವಿಚಾರಕ್ಕೆ ಮತ್ತಷ್ಟು ಕಾವು ಬಂದಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಚೈತ್ರಾ ಕುಂದಾಪುರ, “ನನ್ನ ದೇಹದ ಮೇಲೂ ಗಾಯಗಳಿವೆ. ಆದರೆ ನನ್ನ ಬಳಿ ಯಾವುದೇ ಪಿಆರ್ ತಂಡ ಇಲ್ಲ” ಎಂದು ಕೌಂಟರ್ ಪೋಸ್ಟ್ ಹಾಕಿದ್ದಾರೆ. ಇದರಿಂದ ಅಭಿಮಾನಿಗಳ ಮಧ್ಯೆ ಚರ್ಚೆ ಹೆಚ್ಚಾಗಿದೆ.
ಇದಾದ ನಂತರ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಚೈತ್ರಾ ಮತ್ತಷ್ಟು ಕಟುವಾಗಿ ಪ್ರತಿಕ್ರಿಯೆ ನೀಡಿದ್ದು, ವೈಯಕ್ತಿಕ ಆರೋಪಗಳನ್ನೂ ಮಾಡಿದ್ದಾರೆ. “ನಾನು ವೈಯಕ್ತಿಕ ದಾಳಿಗೆ ಇಳಿಯಬಲ್ಲೆ, ಆದರೆ ನನಗೂ ನಿಮಗೂ ವ್ಯತ್ಯಾಸ ಇದೆ. ಯಾರು ಮೇಲೆ ಎಷ್ಟು ಚೆಕ್ ಬೌನ್ಸ್ ಕೇಸ್ ಇದೆ, ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ ಎಂಬುದನ್ನು ಮಾತನಾಡಬಹುದು. ಆದರೆ ನಾನು ಅಷ್ಟು ಚೀಪ್ ಅಲ್ಲ” ಎಂದು ಪೋಸ್ಟ್ ಮಾಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದರ ನಡುವೆ ಅಶ್ವಿನಿ ಅಭಿಮಾನಿಗಳು, “ಗೌರವವನ್ನು ಪಿಆರ್ ತಂತ್ರದಿಂದ ಪಡೆಯಲು ಸಾಧ್ಯವಿಲ್ಲ” ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಶ್ವಿನಿ ಕೂಡ ಕೆಲವು ಅಭಿಮಾನಿಗಳ ಪೋಸ್ಟ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಆರಂಭವಾದ ಈ ವೈಮನಸ್ಸು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಹಂತ ತಲುಪಿದ್ದು, ಇಬ್ಬರ ಅಭಿಮಾನಿಗಳ ನಡುವೆ ವಾಗ್ವಾದ ಮುಂದುವರಿಯುತ್ತಿದೆ. ಮುಂದಿನ ದಿನಗಳಲ್ಲಿ ಈ ವಿವಾದ ಯಾವ ದಿಕ್ಕಿಗೆ ಸಾಗಲಿದೆ ಎಂಬುದು ಕಾದು ನೋಡಬೇಕಾಗಿದೆ.






