ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೆಡಿ’ ಸಿನಿಮಾಗೆ ಸೆನ್ಸಾರ್ ಸಂಬಂಧಿತ ಅಡಚಣೆಗಳು ಎದುರಾಗಿದ್ದು, ಕೇಂದ್ರ ಸೆನ್ಸಾರ್ ಮಂಡಳಿಯ ಕ್ರಮದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.ಮಾಹಿತಿಯ ಪ್ರಕಾರ, ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗಲೇ ‘ಕೆಡಿ’ ಚಿತ್ರವನ್ನು ವೀಕ್ಷಿಸಿ, ಸಿನಿಮಾದಲ್ಲಿ ರಕ್ತಪಾತದ ದೃಶ್ಯಗಳಿರುವ ಹಿನ್ನೆಲೆ ‘A’ ಪ್ರಮಾಣಪತ್ರ ನೀಡಲು ತೀರ್ಮಾನಿಸಿತ್ತು.

ಹಾಡಿನ ಸಾಹಿತ್ಯದಲ್ಲಿ ಎರಡು ಸಾಲುಗಳನ್ನು ಬದಲಿಸಲು ಸೂಚನೆ ನೀಡಲಾಗಿತ್ತು. ನಿರ್ಮಾಪಕರು ಮತ್ತು ನಿರ್ದೇಶಕರು ಆ ಸೂಚನೆಗಳನ್ನು ಪಾಲಿಸಲು ಸಿದ್ಧರಾಗಿದ್ದರೆಂಬುದೂ ತಿಳಿದುಬಂದಿದೆ.ಆದರೆ, ಮುಂಬೈ ಕೇಂದ್ರ ಸೆನ್ಸಾರ್ ಮಂಡಳಿ ಈ ನಿರ್ಧಾರವನ್ನು ಅಂಗೀಕರಿಸದೆ, ಚಿತ್ರವನ್ನು ಮರುಪರಿಶೀಲನೆಗಾಗಿ ರಿವೈಸಿಂಗ್ ಕಮಿಟಿಗೆ ಕಳುಹಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಮುಖ್ಯವಾಗಿ, ಈ ಕ್ರಮವನ್ನು ನಿರ್ಮಾಣ ಸಂಸ್ಥೆ, ನಿರ್ದೇಶಕರು ಹಾಗೂ ಪ್ರಾದೇಶಿಕ ಮಂಡಳಿಯ ಗಮನಕ್ಕೆ ತರದೇ ಕೈಗೊಂಡಿರುವುದರಿಂದ ನಿಯಮ ಉಲ್ಲಂಘನೆ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ.

ಚಿತ್ರರಂಗದ ವಲಯದಲ್ಲಿ, ಇದು ಕನ್ನಡ ಸಿನಿಮಾಗಳ ವಿರುದ್ಧದ ಭೇದಭಾವದ ಉದಾಹರಣೆಯೇ ಎಂಬ ಪ್ರಶ್ನೆ ಎದ್ದಿದೆ. ಇತ್ತೀಚೆಗೆ ‘ಜನನಾಯಗನ್’ ಚಿತ್ರಕ್ಕೂ ಇದೇ ರೀತಿಯ ಅಡಚಣೆಗಳು ಎದುರಾಗಿದ್ದನ್ನು ಉಲ್ಲೇಖಿಸಿ, ‘ಕೆಡಿ’ಗೂ ಅದೇ ಪರಿಸ್ಥಿತಿ ಎದುರಾಗುತ್ತಿದೆಯೇ ಎಂಬ ಚರ್ಚೆ ಜೋರಾಗಿದೆ. ‘ಕೆಡಿ’ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಇದೀಗ ಗೊಂದಲಕ್ಕೆ ಸಿಲುಕಿದ್ದು, ಅಂತಿಮ ನಿರ್ಧಾರ ಯಾವಾಗ ಹೊರಬರುತ್ತದೆ ಎಂಬುದನ್ನು ಚಿತ್ರತಂಡ ಹಾಗೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.






