ಭಾಗ 1
ಭಾರತದ ರಾಜಕಾರಣ ಎಂದರೆ ಜಾತಿ ರಾಜಕಾರಣ. ಹಿಂದುತ್ವದ ಬೆಳವಣಿಗೆಗಳು ಹಿಂದೂ ಧಾರ್ಮಿಕ ಅಸ್ಮಿತೆಗಳನ್ನು ಮುನ್ನಲೆಗೆ ತಂದಿದ್ದರೂ, “ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ” ಎಂಬ ಸಂಘಪರಿವಾರದ ಘೋಷಣೆ ಮತ ಧೃವೀಕರಣದ (Vote Polarisation) ತಂತ್ರವಾಗಿದೆಯೇ ಹೊರತು, ಚುನಾಯಿತ ಸರ್ಕಾರಗಳ ನಿರ್ವಹಣೆಯಲ್ಲಿ ಜಾತಿ ಸಮೀಕರಣಗಳೇ ಪ್ರಧಾನವಾಗಿರುತ್ತದೆ. ಹಾಗಾಗಿಯೇ ಜಾತಿ ಗಣತಿಗೆ ಸದಾ ವಿರೋಧಿಸುತ್ತಿದ್ದ ಬಿಜೆಪಿ ಈಗ ಇದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತಾಗಿದೆ. ಇದೇನೂ ಅಚ್ಚರಿಯಲ್ಲ, ಭಾರತೀಯ ಸಮಾಜ ತನ್ನನ್ನು ತಾನು ನಿರ್ವಚಿಸಿಕೊಳ್ಳುವುದೇ ಜಾತಿಯ ಮುಖಾಂತರ. ಭಾರತೀಯ ಸಮಾಜದಲ್ಲಿ ಪ್ರಾಥಮಿಕವಾಗಿ ವ್ಯಕ್ತಿಯನ್ನು ಗುರುತಿಸುವುದೇ ಜಾತಿಯಿಂದ ಹಾಗಾಗಿ ವ್ಯಕ್ತಿಯ ಸಹಾನುಭೂತಿ, ನಾಗರಿಕ ಜವಾಬ್ದಾರಿ ಮತ್ತು ಸಾಮುದಾಯಿಕ ನಿಷ್ಠೆಯೂ ಜಾತಿ ಮುಖಾಂತರವೇ ನಿರ್ಧಾರವಾಗುತ್ತದೆ ಎಂಬ ಅಂಬೇಡ್ಕರ್ ಅವರ ಮಾತುಗಳು ಸಾರ್ವಕಾಲಿಕ ಸತ್ಯ.
ಬಹುತೇಕ ಎಂಟು ದಶಕಗಳ ಪ್ರಜಾಪ್ರಭುತ್ವೀಯ ರಾಜಕಾರಣದಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲೂ ಅಸೀಮ ಸಾಧನೆಗಳನ್ನು ದಾಖಲಿಸಿದೆ. ಶೋಷಿತ ತಳಸಮುದಾಯಗಳಲ್ಲೂ, ಅಲ್ಪಸಂಖ್ಯಾತರಲ್ಲೂ ಸಹ ಶೈಕ್ಷಣಿಕ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗಿದೆ ಭಾರತದ ಸಂವಿಧಾನ ರೂಪಿಸಿರುವ ಆಡಳಿತಾತ್ಮಕ ನಿಬಂಧನೆಗಳು ಇದನ್ನು ಆಗುಮಾಡಿರುವುದು ಒಂದೆಡೆಯಾದರೆ ಮತ್ತೊಂದೆಡೆ ಸಾಂವಿಧಾನಿಕ ಸೌಕರ್ಯ, ಸವಲತ್ತುಗಳನ್ನು ಪಡೆದುಕೊಂಡ ಸಮಾಜಗಳು ತಮ್ಮ ಸಾಮಾಜಿಕ ಸ್ಥಾನಮಾನ, ಆರ್ಥಿಕ ಸ್ಥಿತಿಗತಿ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಪರಿಣಾಮಕಾರಿಯಾಗಿ ವೃದ್ಧಿಸಿಕೊಂಡಿವೆ. ಸಾಂವಿಧಾನಿಕ ಮೀಸಲಾತಿ ತಳಸಮುದಾಯಗಳ ಸಾಮಾಜಿಕ ಮೇಲ್ ಚಲನೆ ಮತ್ತು ಆರ್ಥಿಕ ಮುಂಚಲನೆಗೆ ನೆರವಾಗಿದ್ದು ಭಾರತದ ಔದ್ಯಮಿಕ, ಔದ್ಯೋಗಿಕ, ಶೈಕ್ಷಣಿಕ, ಬೌದ್ಧಿಕ ವಲಯಗಳಲ್ಲಿ ದಲಿತ ಅಸ್ಮಿತೆ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ.
ಸಾಧನೆಯ ಮೆಟ್ಟಿಲುಗಳ ನಡುವೆ
ಒಂದು ದೃಷ್ಟಿಯಿಂದ ನೋಡಿದಾಗ ಸ್ವಾತಂತ್ರ್ಯದ 80 ವರ್ಷಗಳಲ್ಲಿ ಈ ಮಟ್ಟದ ಸಾಧನೆ ಸಾಧ್ಯವಾಗಿರುವುದು ಹೆಮ್ಮೆಯ ವಿಚಾರವಾದರೂ, ಸಂವಿಧಾನದ ನಿಬಂಧನೆಗಳು ಮತ್ತು ಕಟ್ಟಳೆಗಳು ಇಲ್ಲದೆ ಹೋಗಿದ್ದರೆ ಇದು ಸಾಧ್ಯವಾಗುತ್ತಿತ್ತೇ ಎಂಬ ಪ್ರಶ್ನೆಯೂ ಕಾಡುತ್ತದೆ. ಭಾರತದ ಮೇಲ್ಜಾತಿ ಸಮಾಜಗಳು ಹಾಗೂ ಮಧ್ಯಂತರ ಜಾತಿ ಸಮುದಾಯಗಳು (Intermediate Caste groups) ಸ್ವಪ್ರೇರಣೆಯಿಂದ ದಲಿತ-ಶೋಷಿತ ಸಮಾಜದ ಸದಸ್ಯರಿಗೆ ಅವಕಾಶಗಳನ್ನು ಕಲ್ಪಿಸುವ ಉದಾತ್ತ ಮನೋಭಾವವನ್ನು ಇಂದಿಗೂ ರೂಢಿಸಿಕೊಂಡಿಲ್ಲ. ಸಾಂವಿಧಾನಿಕ ಶಾಸನಗಳ ಚೌಕಟ್ಟಿನಲ್ಲಿ ಮಾತ್ರ ತಳಸ್ತರದ ಸಮಾಜದ ಜಾತಿ ಸಮಾಜಗಳಿಗೆ ಗೌರವ, ಮನ್ನಣೆ, ಸಮ್ಮಾನ ನೀಡುತ್ತಿರುವುದು ಪ್ರತ್ಯಕ್ಷವಾಗಿ ಕಾಣಬಹುದಾದ ಸತ್ಯ.
ಔದ್ಯೋಗಿಕ-ಶೈಕ್ಷಣಿಕ ಮೀಸಲಾತಿಯ ಹೊರತಾಗಿಯೂ ಭಾರತದಲ್ಲಿ ಸಾಮಾಜಿಕ ಬದಲಾವಣೆ ಪರಿಪೂರ್ಣವಾಗಿ ಆಗದೆ ಇರುವುದಕ್ಕೆ ಕಾರಣ, ಎಲ್ಲ ಜಾತಿಗಳಲ್ಲೂ ಬೇರೂರಿರುವ ಸ್ವಜಾತಿ ಪ್ರಜ್ಞೆ ಮತ್ತು ಅನ್ಯತೆಯ ಭಾವನೆ. ತಳಸಮುದಾಯಗಳನ್ನೂ ಒಳಗೊಂಡಂತೆ ಪ್ರತಿಯೊಂದು ಜಾತಿಯಲ್ಲೂ ಮೇಲು-ಕೀಳು ಭಾವನೆ ಹೆಪ್ಪುಗಟ್ಟಿರುವುದು ಒಪ್ಪಲೇಬೇಕಾದ ಸತ್ಯ. ಇತ್ತೀಚಿನ ಒಳಮೀಸಲಾತಿ ಹೋರಾಟದಲ್ಲಿ ಇದು ಸಾರ್ವಜನಿಕವಾಗಿ ವ್ಯಕ್ತವಾಗಿತ್ತು. ಜಾತಿ ಶ್ರೇಣಿಯಲ್ಲಿ ಪ್ರತಿ ಜಾತಿಯೂ ತನ್ನ ಕೆಳಗಿನ ಶ್ರೇಣಿಯನ್ನು ಕೀಳಾಗಿ ಕಾಣುವ ಒಂದು ಮಾನಸಿಕ ಸ್ಥಿತಿ ನಮ್ಮ ಸಮಾಜದ ನರನಾಡಿಗಳಲ್ಲಿ ಹರಿದಾಡುತ್ತಿದೆ. ಸಂವಿಧಾನ ಪಠಣ ಅಥವಾ ಅಂಬೇಡ್ಕರ್ ಸ್ತುತಿ ಇದನ್ನು ಹೋಗಲಾಡಿಸುವುದಿಲ್ಲ.
ಈ ಮನಸ್ಥಿತಿಯ ಮೂಲವನ್ನು ಹುಡುಕುತ್ತಾ ಹೋದರೆ ಜಾತಿ ವ್ಯವಸ್ಥೆಯ ಉಗಮದ ಹಂತಕ್ಕೆ ಹೋಗಬೇಕಾಗುತ್ತದೆ. ಸಮಕಾಲೀನವಾಗಿ ನೋಡಿದಾಗ ಸಮಾಜ-ಸಮುದಾಯಗಳು ಆಚರಣಾತ್ಮಕವಾಗಿ ಅನುಸರಿಸುತ್ತಿರುವ ಜೀವನ ವಿಧಾನ ಮತ್ತು ಅದರ ಮೂಲಕ ಕಟ್ಟಿಕೊಳ್ಳಲಾಗುವ ಅಸ್ಮಿತೆಯ ಗೋಡೆಗಳು, ಭಾರತೀಯ ನೆಲದ ಗುಣ ಎಂದೇ ಹೇಳಬಹುದಾದ ಶ್ರೇಷ್ಠ-ಕನಿಷ್ಠ ಸಂಸ್ಕೃತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಕಾವ್ಯಗಳಲ್ಲಿ ವ್ಯಕ್ತವಾಗುವ ʼ ನಾವು ʼ ಎಂಬ ಕಲ್ಪನೆಗೂ ವಾಸ್ತವ ಬದುಕಿನಲ್ಲಿ ನಿರ್ವಚಿಸಲಾಗುವ ʼ ನಾವು ʼ ಪರಿಕಲ್ಪನೆಗೂ ಅಪಾರ ಅಂತರವಿದೆ. ವರ್ತಮಾನದ ಭಾರತೀಯ ಸಮಾಜದಲ್ಲಿ ʼ ನಾವು ʼ ಎಂದಾಗ, ಹುಟ್ಟಿದ ಜಾತಿ-ಸಮುದಾಯ-ಸಮಾಜ-ಮತ-ಧರ್ಮ, ಈ ಮೆಟ್ಟಿಲುಗಳನ್ನು ದಾಟಿದ ಕೂಡಲೇ ಭಾಷೆ-ನಾಡು(ರಾಜ್ಯ)-ದೇಶ ತದನಂತರವಷ್ಟೇ ʼ ಮನುಜರು ʼ ಎಂಬ ಕಲ್ಪನೆ ಮೂಡುತ್ತದೆ.
ವಿಘಟನೆಯ ನಡುವೆ ದಲಿತ ಪ್ರಜ್ಞೆ
ಇತ್ತೀಚೆಗೆ ಕರ್ನಾಟಕದಲ್ಲಿ ಸದ್ದುಮಾಡಿ ತಣ್ಣಗಾದ ಒಳಮೀಸಲಾತಿ ಹೋರಾಟದಲ್ಲಿ ಈ ʼ ನಾವು ʼ ಎಂಬ ವಿಶಾಲ ಪದವನ್ನು ಸಂಕುಚಿತಗೊಳಿಸಿ ಹೊಲೆಯ-ಮಾದಿಗ ಎಂದು ನಿರ್ವಚಿಸಿದ್ದನ್ನು ಕಂಡಿದ್ದೇವೆ. ಎದೆ ತಟ್ಟಿ ಘೋಷಿಸಿದ್ದನ್ನೂ ನೋಡಿದ್ದೇವೆ. ಅಂದರೆ “ ಮನುಜ ಜಾತಿ ತಾನೊಂದೇ ವಲಂ ” ಎಂಬ ಪಂಪನ ಮಾತುಗಳು ಇನ್ನೂ ಬಹುದೂರ ಉಳಿದಿದೆ. ಹಾಗಾಗಿಯೇ ಬುದ್ಧ ಪ್ರಜ್ಞೆಯನ್ನು ರೂಢಿಸಿಕೊಂಡವರೂ, ಬೌದ್ಧ ಧಮ್ಮವನ್ನು ಆಲಂಗಿಸಿಕೊಂಡವರೂ, ಸಂವಿಧಾನವನ್ನು ಎದೆಗವುಚಿಕೊಂಡವರೂ, ಅಂಬೇಡ್ಕರರನ್ನು ಆರಾಧಿಸುವವರೂ , ಬಾಬಾ ಸಾಹೇಬ್ ಆಶಯದಂತೆ ಎಲ್ಲರನ್ನೂ ಒಳಗೊಳ್ಳುವ ಇಂಗಿತವನ್ನೂ ಸಹ ಪ್ರದರ್ಶಿಸಲಿಲ್ಲ. ಇದರ ಪರಿಣಾಮ ಅವಕಾಶವಂಚಿತ-ಶೋಷಿತ ಅಲೆಮಾರಿ ಸಮುದಾಯಗಳು ಹೊರಗೇ ಉಳಿದುಬಿಟ್ಟಿವೆ. ಸಾಂವಿಧಾನಿಕ ಸೌಲಭ್ಯಗಳ ವಿಚಾರದಲ್ಲಿ ಈ ಅವಕಾಶವಂಚಿತರು ಹಿಂದೂಗಳೂ ಆಗಲಿಲ್ಲ, ಬೌದ್ಧರೂ ಆಗಲಿಲ್ಲ, ದಲಿತರಾಗಿಯೂ ಕಾಣಲಿಲ್ಲ.
ನಾವು ʼ ದಲಿತ ಪ್ರಜ್ಞೆ ʼ ಎಂದು ಮಾತನಾಡುವಾಗ ಈ ಸೂಕ್ಷ್ಮಗಳನ್ನು ಮರೆತಿರುತ್ತೇವೆ ಅಥವಾ ಬದಿಗಿರಿಸಿರುತ್ತೇವೆ. ಶತಮಾನದ ಹಿಂದಿನ ಕನ್ನಡ ಸಾಹಿತ್ಯದಲ್ಲೂ ʼ ದಲಿತ ಪ್ರಜ್ಞೆ ʼಯನ್ನು ಹೆಕ್ಕಿ ತೆಗೆಯಲು ಯತ್ನಿಸುವ ಸಮಕಾಲೀನ ಚಿಂತಕರಿಗೆ 80 ವರ್ಷಗಳ ಸಾಂವಿಧಾನಿಕ ಆಳ್ವಿಕೆಯಲ್ಲಿ ದೇಶದ ತಳಸಮುದಾಯಗಳು ಈ ʼ ದಲಿತ ಪ್ರಜ್ಞೆ ʼಯನ್ನು ರೂಢಿಸಿಕೊಳ್ಳಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆ ಕಾಡಲೇಬೇಕಲ್ಲವೇ ? ʼ ಒಳಗೊಳ್ಳುವಿಕೆ ʼ (Inclusiveness) ಇಲ್ಲದೆ ಇದು ಸಾಧ್ಯವೇ ಇಲ್ಲ ಎಂಬ ಪರಿಜ್ಞಾನವೂ ಇರಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಂಡವರಿಗೆ ಅಥವಾ ಅವರ ಚಿಂತನೆಗಳನ್ನು ಅಂತರೀಕರಣಗೊಳಿಸಿಕೊಂಡಿರುವವರಿಗೆ (Internalise) ಇದನ್ನು ಬಿಡಿಸಿ ಹೇಳಬೇಕಿಲ್ಲ. ಆದರೂ ಮೇಲ್ಜಾತಿ ದೌರ್ಜನ್ಯಗಳು ಎದುರಾದಾಗ ನಮ್ಮೊಳಗಿನ ಸ್ವ–ಪ್ರಜ್ಞೆ , ದಲಿತತ್ವದ ಕಡೆಗೆ ಹೊರಳುತ್ತದೆ.
ಕರ್ನಾಟಕದ ಮಟ್ಟಿಗೇ ಹೇಳುವುದಾದರೆ 50 ವರ್ಷಗಳ ದಲಿತ ಚಳುವಳಿ ಮತ್ತು ಹತ್ತಾರು ಸಂಘಟನೆಗಳು ಏಕೆ ʼ ದಲಿತ ಪ್ರಜ್ಞೆ ʼಯನ್ನು ಸಾಂಸ್ಥೀಕರಿಸಲು (Institutionalise) ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಶೋಷಣೆಯ ಆಯಾಮಗಳು ರೂಪಾಂತರ ಹೊಂದುತ್ತಿರುವ ಬದಲಾದ ಭಾರತದಲ್ಲಿ ಶೋಷಣೆಗೊಳಗಾಗುವ ಪ್ರತಿಯೊಂದು ಜಾತಿಯೂ ತನ್ನೊಳಗಿನ ಕೆಲವಾದರೂ ಸಾಂಪ್ರದಾಯಿಕ ಲಕ್ಷಣಗಳನ್ನು ತೊಡೆದುಹಾಕಬೇಕಿದೆ. ಅದರಲ್ಲಿ ಮುಖ್ಯವಾಗಿ ಊಳಿಗಮಾನ್ಯ-ಪಿತೃಪ್ರಧಾನ ಮನಸ್ಥಿತಿ, ಆರ್ಥಿಕ ಮೇಲ್‌ಚಲನೆಯ ಭೌತಿಕ ಅಂತರ, ಆಚರಣಾತ್ಮಕ ಭಿನ್ನ ಭೇದಗಳು ಹಾಗೂ ತಳಸ್ತರದ ಸಮಾಜವನ್ನು ನೋಡುವ Myopic ದೃಷ್ಟಿಕೋನ, ಇವುಗಳನ್ನು ಸರಿಪಡಿಸುವುದು ಅತ್ಯವಶ್ಯ.
ದಲಿತತ್ವದ ಸಾಮಾಜಿಕ ಆಯಾಮ
ಸಾಮಾಜಿಕವಾಗಿ ಮುಂದುವರೆದವರು ಹಿಂದುಳಿದವರ ಕಡೆಗೆ ನೋಡುವುದಷ್ಟೇ ಅಲ್ಲದೆ, ಆ ಹಿಂದುಳಿಯುವಿಕೆಗೆ ಕಾರಣಗಳೇನು, ಯಾರು ಕಾರಣ ಎಂದೂ ಯೋಚಿಸಬೇಕಾಗುತ್ತದೆ. ಇಲ್ಲವಾದರೆ ತಮ್ಮ ಮುಂಗಾಣ್ಕೆಯ ಕ್ಷಮತೆಯನ್ನೂ ಕಳೆದುಕೊಂಡು, ಸ್ವಾರ್ಥತೆಯ ಕೂಪದಲ್ಲಿ ಬಿದ್ದು ಹೊರಳಾಡಬೇಕಾಗುತ್ತದೆ. ಭಾರತದ ಸಂವಿಧಾನ ಸಮಾನತೆಯನ್ನೇ ಉಸಿರಾಡುತ್ತದೆ ಎಂದು ಅರಿತಿದ್ದೂ, ಅಸಮಾನತೆಗಳನ್ನು ಮುಜುಗರ ಇಲ್ಲದೆ ಅರಗಿಸಿಕೊಳ್ಳುವ ಮನಸ್ಥಿತಿ ಇದ್ದರೆ ಅಲ್ಲಿ ಶೋಷಣೆಯ ಸ್ವರೂಪವನ್ನು ಸಮಗ್ರ ದೃಷ್ಟಿಯಿಂದ ನೋಡಲು ಸಾಧ್ಯವಾಗುವುದೇ ಇಲ್ಲ. ಇಲ್ಲಿ ವರ್ಗ ಪ್ರಜ್ಞೆ ಅಥವಾ ವರ್ಗ ಭೇದಗಳ ಅರಿವು ಮುಖ್ಯವಾಗುತ್ತದೆ. ಇದಕ್ಕೆ ಮಾರ್ಕ್ಸ್‌ವಾದವೇ ಬೇಕಿಲ್ಲ. ಜೀವನಾನುಭವವೇ ಸಾಕಲ್ಲವೇ ? ಈ ದೃಷ್ಟಿಕೋನ ಇದ್ದಿದ್ದಲ್ಲಿ ಒಳಮೀಸಲಾತಿ ಹೋರಾಟದಲ್ಲಿ ಅಸ್ಮಿತೆಗಳು ಸದ್ದು ಮಾಡುತ್ತಿರಲಿಲ್ಲ.
ಈ ದಲಿತ ಪ್ರಜ್ಞೆ ಏಕೆ ಬೇಕು ? ಕೇವಲ “ ಶೋಷಿತರು ನಾವೆಲ್ಲಾ ಒಂದು ” ಎಂಬ ಘೋಷಣೆಗಾಗಿ ಅಲ್ಲ. ಅಥವಾ ಮೇಲ್ಜಾತಿ ದೌರ್ಜನ್ಯಗಳನ್ನು ವ್ಯಕ್ತಿನಿಷ್ಠವಾಗಿ (Subjective) ನೋಡುತ್ತಾ ಶೋಷಕ ವ್ಯವಸ್ಥೆಯನ್ನು ಜಾತಿವಾರು ವಿಂಗಡಿಸಿ ನೋಡುವುದಕ್ಕಲ್ಲ. ʼ ದಲಿತ ಪ್ರಜ್ಞೆ ʼ ಬೇಕಿರುವುದು ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಶೋಷಣೆಗಳ ಎಲ್ಲ ಆಯಾಮಗಳನ್ನೂ ಸಮಗ್ರವಾಗಿ, ಸಮಷ್ಟಿ ದೃಷ್ಟಿಯಿಂದ ಅರ್ಥಮಾಡಿಕೊಳ್ಳುವುದಕ್ಕಾಗಿ. ಯಾವುದೇ ರೀತಿಯ ಶೋಷಣೆಯಾದರೂ ಅಲ್ಲಿ ಎರಡು ಮಗ್ಗುಲುಗಳಿರುತ್ತವೆ. ಮೊದಲನೆಯದು ಸಾಮಾಜಿಕ-ಆರ್ಥಿಕ ಪ್ರಾಬಲ್ಯ, ಎರಡನೆಯದು ಈ ಮುಂಚಲನೆಯಿಂದ ಸೃಷ್ಟಿಯಾಗುವ ಮೇಲರಿಮೆ ಅಥವಾ ಶ್ರೇಷ್ಠತೆಯ ಮನಸ್ಥಿತಿ. ಈ ಎರಡೂ ಮಜಲುಗಳನ್ನು ವಿಶಾಲ ಸಾಮಾಜಿಕ ಹಂದರದಲ್ಲಿಟ್ಟು (Broader Social Canvas) ನೋಡಿದರೆ ಅಲ್ಲಿ ಜಾತಿವ್ಯವಸ್ಥೆಯನ್ನು ಮೀರಿದ ಒಂದು ಶೋಷಕ ವ್ಯವಸ್ಥೆ ಎದುರಾಗುತ್ತದೆ.
ನವ ಉದಾರವಾದ ಮತ್ತು ದಲಿತರು
ನವ ಉದಾರವಾದ ಮತ್ತು ಬಂಡವಾಳಶಾಹಿ ಬೆಳವಣಿಗೆಯಲ್ಲಿ ಇದನ್ನು ಆರ್ಥಿಕತೆಯಲ್ಲಿ ಕಾಣಬಹುದು. ವರ್ತಮಾನದ ಕಾರ್ಪೋರೇಟ್-ಮಾರುಕಟ್ಟೆ ಆರ್ಥಿಕ ನೀತಿಗಳು ಉಂಟುಮಾಡುತ್ತಿರುವ ಅನಾಹುತಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಭಾರತದ ಸಂವಿಧಾನದ ಆಶಯಗಳೇ ಅಪ್ರಸ್ತುತ ಅಥವಾ ಅಸಂಗತ ಎನಿಸುವ ಸಾಧ್ಯತೆಗಳೂ ಇವೆ. ಅಂಬೇಡ್ಕರ್ vs ಮಾರ್ಕ್ಸ್ ಎಂಬ ವಿತಂಡವಾದಕ್ಕೆ ಜೋತು ಬೀಳದೆ ಭಾರತದ ರಾಜಕೀಯ ವ್ಯವಸ್ಥೆಯನ್ನು ಮತ್ತು ಅಧಿಕಾರ ರಾಜಕಾರಣದ ವಾತಾವರಣದ (Ecosystem) ಒಳಹೊಕ್ಕು ನೋಡಿದರೆ ಅಲ್ಲಿ ನಮಗೆ ಶೋಷಿತ ಸಮಾಜದ ಪ್ರತಿನಿಧಿಗಳೇ ಶೋಷಕರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಾರೆ. ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎಲ್ಲ ಜನವಿರೋಧಿ ಕಾಯ್ದೆಗಳಿಗೆ ಈ ಪ್ರತಿನಿಧಿಗಳ ಸಮ್ಮತಿಯ ಮುದ್ರೆ ಇದ್ದೇ ಇರುತ್ತದೆ.
ಇತ್ತೀಚಿನ ಉದಾಹರಣೆಯಾಗಿ ನರೇಗಾ ಯೋಜನೆಯ (MNREGA) ದಾರುಣ ಅಂತ್ಯ ಮತ್ತು ಮತದಾನದ ಹಕ್ಕನ್ನೇ ಕಸಿದುಕೊಳ್ಳುತ್ತಿರುವ SIR ಪ್ರಕ್ರಿಯೆಯನ್ನು ಗುರುತಿಸಬಹುದು. ದೇಶದ ಬಹುಸಂಖ್ಯಾತ ತಳಸಮುದಾಯಗಳೇ ಪ್ರಧಾನ ಫಲಾನುಭವಿಗಳಾಗಿದ್ದ ನರೇಗಾ ಯೋಜನೆಯ ಮರುಸ್ಥಾಪನೆಗಾಗಿ ಆಗಲೀ, ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಒಂದೇ ಮೌಲ್ಯದ ಒಂದು ಮತ ಸಾಂವಿಧಾನಿಕ ಹಕ್ಕು ಎಂಬ ಅಂಬೇಡ್ಕರ್ ಅವರ ಮೂಲ ಆಶಯವನ್ನೇ ಬುಡಮೇಲು ಮಾಡುತ್ತಿರುವ SIR ವಿರುದ್ಧ ಆಗಲೀ, ಯಾವ ಪಕ್ಷದಲ್ಲೂ ಶೋಷಿತರ ಪ್ರತಿನಿಧಿಗಳು ಸದ್ದು ಮಾಡಲೇ ಇಲ್ಲ. ಅಥವಾ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಎದೆಯೊಳಗೇ ಇಳಿಸಿಕೊಂಡಿರುವ ದಲಿತ ಸಂಘಟನೆಗಳು ರಾಷ್ಟ್ರವ್ಯಾಪಿ, ರಾಜ್ಯವ್ಯಾಪಿ ಜನಾಂದೋಲನಗಳನ್ನು ಹಮ್ಮಿಕೊಂಡಿಲ್ಲ. ಮೋದಿ ಸರ್ಕಾರ ಜಾರಿಗೊಳಿಸಿರುವ ನೂತನ ಕಾರ್ಮಿಕ ಸಂಹಿತೆಗಳಿಂದ ಅತಿಹೆಚ್ಚು ಬಾಧಿತರಾಗುವುದು ತಳಸಮುದಾಯಗಳೇ ಆದರೂ ಇದರ ವಿರುದ್ಧ ಸಾಮೂಹಿಕ ದಲಿತ ಧ್ವನಿ ಕೇಳಿಬಂದಿಲ್ಲ.
ರಾಜಕೀಯ ಪ್ರಜ್ಞೆಯ ಕೊರತೆ
ಇದು ಏನನ್ನು ಸೂಚಿಸುತ್ತದೆ ? ದಲಿತ ಚಳುವಳಿಗಳು ತಳಮಟ್ಟದ ಕಾರ್ಯಕರ್ತರ ನಡುವೆ ರಾಜಕೀಯ ಪ್ರಜ್ಞೆ (Political Consciousness) ಮೂಡಿಸಲು ಗಂಭೀರ ಪ್ರಯತ್ನಗಳನ್ನು ಮಾಡಿಲ್ಲ ಎಂದಲ್ಲವೇ ? ಅಂಬೇಡ್ಕರ್-ಫುಲೆ ಅವರ ಚಿಂತನೆಗಳನ್ನು ನಿರಂತರ ಚರ್ಚೆಗೊಳಪಡಿಸಲಾಗುತ್ತಿದೆ, ಬುದ್ಧ ತತ್ವಗಳಲ್ಲಿ ಅರ್ಥಶಾಸ್ತ್ರದ ಛಾಯೆಯನ್ನು ಶೋಧಿಸಲಾಗುತ್ತಿದೆ ಆದರೆ ದೇಶದ ಇಡೀ ಸಾಮಾಜಿಕ ಸಂರಚನೆಯನ್ನು (Social Structure) ಪ್ರಭಾವಿಸುವ ರಾಜಕೀಯ ಅರ್ಥಶಾಸ್ತ್ರದ (Political Economy) ಒಳಸುಳಿಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಬೇಡ್ಕರ್ ಅವರ ಅರ್ಥಶಾಸ್ತ್ರದ ಅರಿವು ಮತ್ತು ಜ್ಞಾನವನ್ನು ವೈಭವೀಕರಿಸಿ ರೋಚಕವಾಗಿ ವ್ಯಾಖ್ಯಾನಿಸುವುದಕ್ಕಿಂತಲೂ ಮುಖ್ಯವಾದದ್ದು ವರ್ತಮಾನದ ನವ ಉದಾರವಾದಿ ಆರ್ಥಿಕತೆಯ ರಾಜಕೀಯ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು.
ಈ ಸಂಕುಚಿತ ಚಿಂತನಾ ವಿಧಾನದ ಪರಿಣಾಮ ಎಂದರೆ ʼ ದಲಿತ ಪ್ರಜ್ಞೆ ʼ ಸಾಮಾಜಿಕ ನೆಲೆಯಲ್ಲಿ ಗಟ್ಟಿಯಾಗಿದೆ ಆದರೆ ರಾಜಕೀಯವಾಗಿ ಬಹುಮಟ್ಟಿಗೆ ಇಲ್ಲವಾಗಿದೆ. ಒಂದು ವೇಳೆ ಇದ್ದರೂ ಅದು ಅಧಿಕಾರ ರಾಜಕಾರಣದ ಆವರಣದಲ್ಲಿ ಛಿದ್ರವಾಗಿದೆ. ಕರ್ನಾಟಕದಲ್ಲಿ 1980ರ ದಶಕದಿಂದಲೇ ಆರಂಭವಾದ ಈ ಪ್ರಕ್ರಿಯೆ 2026ರಲ್ಲಿ ನಿರ್ಣಾಯಕ ಹಂತ ತಲುಪಿದ್ದು , ದಲಿತ ಚಳುವಳಿ ಮತ್ತು ಸಂಘಟನೆಗಳ ವಿಘಟನೆಯಷ್ಟೇ ಪ್ರಮಾಣದಲ್ಲಿ ʼ ದಲಿತ ರಾಜಕೀಯ ಪ್ರಜ್ಞೆ ʼಯನ್ನೂ ಒಡೆದು ಚೂರು ಮಾಡಲಾಗಿದೆ. ಮತ್ತೆಂದೂ ಒಂದು ಮಾಡಲಾಗದ ರೀತಿಯಲ್ಲಿ ಜಾತಿ ರಾಜಕಾರಣದ ಮೇಲ್ಪಂಕ್ತಿಯ ಶಕ್ತಿಗಳು ತಳಸಮುದಾಯಗಳ ರಾಜಕೀಯ ನೆಲವನ್ನೇ (Political Ground) ಛಿದ್ರಗೊಳಿಸಿವೆ. ಇದಕ್ಕೆ ಕಾರಣಗಳನ್ನು ಶೋಧಿಸುವುದು ಬೆಟ್ಟವನ್ನು ಅಗೆದಂತಾಗುತ್ತದೆ.
ಸ್ಥೂಲವಾಗಿ ಹೇಳುವುದಾದರೆ ಕರ್ನಾಟಕದ ಜಾತಿ ರಾಜಕಾರಣದ ಪ್ರಬಲ ಶಕ್ತಿಗಳಾಗಿರುವ ಲಿಂಗಾಯತ-ಒಕ್ಕಲಿಗ ಸಮುದಾಯಗಳ ನಡುವೆ ʼ ದಲಿತ ಅಸ್ಮಿತೆಯನ್ನು ʼ (Dalit Identity) ಸಂಪೂರ್ಣವಾಗಿ ಅಪ್ರಸ್ತುತಗೊಳಿಸುವ ಒಂದು ಹುನ್ನಾರವನ್ನು ಗುರುತಿಸಬಹುದು. ರಾಜಕೀಯವಾಗಿ ಅಂಚಿಗೆ ತಳ್ಳಲ್ಪಟ್ಟಿರುವ ಸಮುದಾಯಗಳ ಪರವಾಗಿ ಹೋರಾಡುವ ʼ ಅಹಿಂದ ʼ ಸಹ ಮಧ್ಯವರ್ತಿ ಹಿಂದುಳಿದ ಹಾಗೂ ಪ್ರಬಲ ಜಾತಿಗಳನ್ನೇ ಪ್ರತಿನಿಧಿಸುವುದೇ ಹೊರತು ದಲಿತ ಸಮುದಾಯಗಳನ್ನಲ್ಲ. ಹಾಗಾಗಿಯೇ ಅಹಿಂದ ಗುಂಪಿನಲ್ಲಿ ಮುಂಚೂಣಿಯಲ್ಲಿರುವ ಕೆಲವು ಜಾತಿಗಳ ಪ್ರತಿನಿಧಿಗಳು ತಮ್ಮ ಹಿತ್ತಲಿನಲ್ಲಿ ಚಾಲ್ತಿಯಲ್ಲಿರುವ ಸಾಮಾಜಿಕ ಬಹಿಷ್ಕಾರದ ಬಗ್ಗೆ ಚಕಾರ ಎತ್ತುವುದಿಲ್ಲ. ಈ ಅನಿಷ್ಠ ಪದ್ಧತಿ ಅಸ್ಪೃಶ್ಯತೆಯ ಆದಿಮೂಲ ಎಂದು ಅರ್ಥವಾಗಿಲ್ಲವೇ ? ಅಥವಾ ಸಾಮಾಜಿಕ ಅಸ್ತಿತ್ವ-ಪ್ರಾಬಲ್ಯ ದಲಿತ ಪ್ರಜ್ಞೆ ಮತ್ತು ಸಂವೇದನೆಯನ್ನು ಮೀರಿ ನಿಲ್ಲುತ್ತದೆಯೇ ?
ಮುಂದುವರೆಯುತ್ತದೆ,,,,,,,
ನಾ ದಿವಾಕರ : ಹಿರಿಯ ಲೇಖಕರು..
(ಕೃಪೆ : ಸಂವಾದ ಮಾಸಪತ್ರಿಕೆ ಜುಲೈ 2026)






