ಬಲಪಂಥೀಯ ಹಿಂದುತ್ವವಾದಿಗಳು ತಮ್ಮ ಪ್ರತಿಭೆ ಮತ್ತು ಶ್ರಮವನ್ನು ಸುಳ್ಳು ಅವಿಷ್ಕಾರಗಳಿಗೆ ಮೀಸಲಿಟ್ಟಿದ್ದು ಭಾರತದ ಪ್ರತಿಭಾ ದುರುಪಯೋಗದ ಮಹಾನ್ ದೃಷ್ಟಾಂತಗಳಲ್ಲಿ ಪ್ರಮುಖವಾದದ್ದು. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಪುರಾತತ್ವಶಾಸ್ತ್ರಜ್ಞ ಬಿ. ಬಿ. ಲಾಲ್. ಪ್ರಾಯೋಗಿಕ ವೈಚಾರಿಕತೆಯ ಬದ್ಧತೆಯೊಂದಿಗೆ ಪುರಾತತ್ವಶಾಸ್ತ್ರಜ್ಞರಾಗಿ ಲಾಲ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದಾಗ್ಯೂ, ೧೯೯೦ ರ ದಶಕದ ವೇಳೆಗೆ, ಅವರು ಅಂದಿನ ಅಯೋಧ್ಯೆಯ ಬಾಬರಿ ಮಸೀದಿ ಇದ್ದ ವಿವಾದಾತ್ಮಕ ಕಟ್ಟಡದ ಮೇಲಿನ ಫ್ಯಾಸಿಷ್ಟ್ ಹಿಂದುತ್ವವಾದಿಗಳ ಹಕ್ಕುಗಳಿಗಾಗಿ ನಕಲಿ ಅವಿಷ್ಕಾರಗಳ ಪ್ರತಿಪಾದನೆಯಿಂದ ‘ಕೇಸರಿ ಪುರಾತತ್ವಶಾಸ್ತ್ರಜ್ಞ’ ಎಂದು ಕರೆಯಲ್ಪಟ್ಟರು ಎನ್ನುತ್ತಾರೆ ಖ್ಯಾತ ಅಂಕಣಕಾರ ಆಶಿಶ್ ಅವಿಕುಂಠಕ್ ತಮ್ಮ ಅಕ್ಟೋಬರ್ ೧೦, ೨೦೨೨ ರ ‘ದಿ ವೈರ್’ ವೆಬ್ ಜರ್ನಲ್ಲಿನಲ್ಲಿ ಬರೆದ ಲೇಖನದಲ್ಲಿ. ಆಶಿಶ್ ಅವರು ರೋಡ್ ಐಲೆಂಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಪ್ರೆಸ್ ಪ್ರಕಟಿಸಿರುವ “ಬ್ಯೂರೋಕ್ರ್ಯಾಟಿಕ್ ಆರ್ಕಿಯಾಲಾಜಿ: ಸ್ಟೇಟ್, ಸೈನ್ಸ್ ಆಂಡ್ ಪಾಸ್ಟ್ ಇನ್ ಪೋಸ್ಟ್-ಕಾಲೋನಿಯಲ್ ಇಂಡಿಯಾ(೨೦೨೧)” ಗ್ರಂಥದ ಲೇಖಕರಾಗಿದ್ದಾರೆ.
ಸ್ವತಂತ್ರೋತ್ತರ ಭಾರತದ ಇತಿಹಾಸದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ಕಾರ್ಯಗಳ ಮೇಲೆ ಅಗಾಧವಾದ ಪ್ರಭಾವ ಬೀರಿದ ಬ್ರಜ್ ಬಸಿ ಲಾಲ್ ಅವರು ಇತ್ತೀಚೆಗೆ ಕಳೆದ ತಿಂಗಳು ತಮ್ಮ ೧೦೧ ನೇ ವಯಸ್ಸಿನಲ್ಲಿ ನಿಧನರಾದರು. ಲಾಲ್ ಅವರ ವೃತ್ತಿಜೀವನದ ಚರಿತ್ರೆಯು ಭಾರತವು ತನ್ನ ಬ್ರಿಟೀಷರ ಸಂಕೋಲೆಯಿಂದ ಬಿಡುಗಡೆಗೊಂಡ ತರುವಾಯ ಪುರಾತತ್ವ ಇಲಾಖೆ ನಡೆದುಬಂದ ಹಾದಿಯೊಂದಿಗೆ ಬೆಸೆದುಕೊಂಡಿದೆ. ೧೯೫೦ ರ ದಶಕದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಜನಪ್ರೀಯ ಜರ್ನಲ್ ‘ಏನ್ಷಿಯಂಟ್ ಇಂಡಿಯಾ’ದಲ್ಲಿ ಅವರ ಆರಂಭಿಕ ಬರವಣಿಗೆಗಳನ್ನು ನೋಡಿದರೆ ಲಾಲ್ ಅವರ ಪ್ರಾಯೋಗಿಕ ವೈಚಾರಿಕತೆಯ ಬದ್ಧತೆ ಗೋಚರಿಸುತ್ತಿತ್ತು. ಆದಾಗ್ಯೂ, ೧೯೯೦ ರ ದಶಕದ ಹೊತ್ತಿಗೆ, ಅಯೋಧ್ಯೆಯ ಅಂದಿನ ವಿವಾದಾತ್ಮಕ ಬಾಬರಿ ಮಸೀದಿಯ ಜಾಗದಲ್ಲಿ ರಾಮಮಂದಿರ ಇತ್ತು ಎನ್ನುವ ಅವರ ನಕಲಿ ಅವಿಷ್ಕಾರದ ಹಕ್ಕುಗಳಿಗಾಗಿ “ಕೇಸರಿ ಪುರಾತತ್ವಶಾಸ್ತ್ರಜ್ಞ” ಎಂದೇ ಅವರು ಕರೆಯಲ್ಪಟ್ಟರು. ಅವರ ಆ ನಕಲಿ ಅವಿಷ್ಕಾರದ ಪ್ರತಿಪಾದನೆಗಳು ೧೯೯೨ ರಲ್ಲಿ ಬಾಬರಿ ಮಸೀದಿಯ ಅಂತಿಮ ಧ್ವಂಸಕ್ಕೆ ಪುರಾತತ್ತ್ವ ಶಾಸ್ತ್ರದ ಪ್ರಚೋದನೆಯನ್ನು ಒದಗಿಸಿತು ಎನ್ನುತ್ತಾರೆ ಆಶಿಶ್ ಅವರು.
ಯುವ ಪುರಾತತ್ವಶಾಸ್ತ್ರಜ್ಞರಾಗಿ, ಲಾಲ್ ಅವರು ೧೯೪೪ ರಲ್ಲಿ ಪ್ರಸಿದ್ಧ ಟ್ಯಾಕ್ಸಿಲಾ ಸ್ಕೂಲ್ ಆಫ್ ಆರ್ಕಿಯಾಲಜಿಯಲ್ಲಿ ತರಬೇತಿ ಪಡೆದರು. ಇದು ವಸಾಹತುಶಾಹಿ ಪುರಾತತ್ವಶಾಸ್ತ್ರ ಇಲಾಖೆಯ ಕೊನೆಯ ಮಹಾನಿರ್ದೇಶಕ ಮಾರ್ಟಿಮರ್ ವೀಲರ್ ನೇತೃತ್ವದಲ್ಲಿ ಕಾರ್ಯ ಮಾಡಿದ ಕ್ಷೇತ್ರ ಪುರಾತತ್ತ್ವ ಶಾಸ್ತ್ರದ ಮೊದಲ ಶಾಲೆ ಎಂದು ಪರಿಗಣಿಸಲಾಗಿದೆ. ಬ್ರಿಟೀಷ್ ಆಡಳಿತ ಕೊನೆಕೊಂಡ ನಂತರ ೧೯೬೮ ರಿಂದ ೧೯೭೨ ರವರೆಗೆ ಪುರಾತತ್ವ ಇಲಾಖೆಯ ನೇತೃತ್ವ ವಹಿಸಿದ್ದ ಬಿ. ಬಿ. ಲಾಲ್ ಸೇರಿದಂತೆ ಅನೇಕ ಆ ಶಾಲೆಯ ವಿದ್ಯಾರ್ಥಿಗಳು ಅದರ ಡೈರೆಕ್ಟರ್ ಜನರಲ್ ಆಗಲು ಅದು ಸಹಾಯವಾಯಿತು. ಆಶಿಶ್ ಅವಿಕುಂಠಕ್ ಅವರು ಬಿ. ಬಿ ಲಾಲ್ ಅವರನ್ನು ೧೯೯೪ ರಲ್ಲಿ ಹೊಸದಿಲ್ಲಿಯ ತಾಜ್ ಮಹಲ್ ಹೋಟೆಲ್‌ನಲ್ಲಿ ನಡೆದ ಮೂರನೇ ವಿಶ್ವ ಪುರಾತತ್ವ ಕಾಂಗ್ರೆಸ್ (WAC 3)ನ ಅತ್ಯಂತ ಅಹಿತಕರ ಸಮಯಲ್ಲಿ ಮೊದಲ ಬಾರಿಗೆ ನೋಡಿದ್ದರಂತೆ. ಆಗ ಆಶಿಶ್ ಅವರು ಪುರಾತತ್ತ್ವ ಶಾಸ್ತ್ರದ ಯುವ ಪದವೀಧರ ವಿದ್ಯಾರ್ಥಿಯಾಗಿ, ನಾಲ್ಕು ವರ್ಷಗಳಿಗೊಮ್ಮೆ ನಡೆಯುವ WAC 3 ನಲ್ಲಿ ಒಬ್ಬ ಪ್ರತಿನಿಧಿಯಾಗಿ ಭಾಗವಹಿಸಿದ್ದರಂತೆ.
ಆ ಸಮ್ಮೇಳನವು ಅತ್ಯಂತ ಅವ್ಯವಸ್ಥೆಯಿಂದ ಕೂಡಿದ್ದು ಅಲ್ಲಿನ ಪ್ರತಿಯೊಂದು ವ್ಯವಸ್ಥೆಗಳು ಬಹಳ ಕೆಟ್ಟದ್ದಾಗಿದ್ದವಂತೆ. ಆ ಸಮ್ಮೇಳನದ ಆಯೋಜಕರ ಮೇಲೆ ಭ್ರಷ್ಟಾಚಾರದ ಆರೋಪಗಗಳು ಕೇಳಿಬಂದಿದ್ದವಂತೆ. ಸ್ಪಷ್ಟವಾಗಿ, ಆ ಪಂಚತಾರಾ ಹೋಟೆಲ್‌ನ ಸಮ್ಮೇಳನದ ಪಡಸಾಲೆಯಲ್ಲಿ ಬಾಬರಿ ಮಸೀದಿ ಧ್ವಂಸದ ಬಗ್ಗೆ ಯಾವುದೇ ಚರ್ಚೆಯನ್ನು ಮಾಡುವುದು ನಿಷೇಧಿಸುವ ಅನಧಿಕೃತ ಆದೇಶವು ತೇಲುತ್ತಿತ್ತಂತೆ. ಅಲ್ಲಿ ಆಶಿಶ್ ಅವರು ಭಿನ್ನಾಭಿಪ್ರಾಯವನ್ನು ದಮನಿಸುವ ಫ್ಯಾಸಿಷ್ಟರ ಹುನ್ನಾರಗಳು ಹಾಗು ಅದನ್ನು ವಿರೋಧಿಸುವ ಉದ್ವೇಗದ ಧ್ವನಿಗಳು ಸಮ್ಮೇಳನ ಅಡ್ಡಿಪಡಿಸುವ ಬೆದರಿಕೆಯನ್ನು ಗುರುತಿಸಿದರಂತೆ. ಸಮ್ಮೇಳನದ ಕೊನೆಯ ದಿನ, ಹೋಟೆಲ್‌ನ ರಾಜಭವನದ ವೇದಿಕೆಯಲ್ಲಿ ಅಹಸ್ಯಕರ ಗಲಾಟೆಯೊಂದು ನಡೆಯಿತಂತೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರತಿನಿಧಿಗಳು ದಿಗ್ಭ್ರಮೆಗೊಂಡು ಮೌನದಲ್ಲಿ ಕುಳಿತಿದ್ದರುˌ ಬಿ. ಬಿ. ಲಾಲ್ ಮತ್ತು ಬಲಪಂಥೀಯ ಪುರಾತತ್ವಶಾಸ್ತ್ರಜ್ಞ ಎಸ್ ಪಿ ಗುಪ್ತಾ ನೇತೃತ್ವದ ಇತರ ಹಿರಿಯ ಭಾರತೀಯ ಪುರಾತತ್ವಶಾಸ್ತ್ರಜ್ಞರ ಗುಂಪು ಬಿಸಿಯಾದ ಚರ್ಚೆ ಮತ್ತು ಗದ್ದಲದ ಘೋಷಣೆಗಳ ನಡುವೆ ವೇದಿಕೆಯ ಮೇಲೆ ಏರಿ ಗದ್ದಲ ಮಾಡಿದ್ದರೆಂದು ಆಶಿಶ್ ಬರೆಯುತ್ತಾರೆ.

ಸಮ್ಮೇಳನದಲ್ಲಿ ಬಾಬರಿ ಮಸೀದಿ ಧ್ವಂಸವನ್ನು ಖಂಡಿಸುವ ನಿರ್ಣಯ ಅಂಗೀಕರಿಸಲು ಸಮ್ಮೇಳನದ ಆಯೋಜಕರಿಗೆ ಒತ್ತಾಯಿಸುವ ಮನವಿಯನ್ನು ಓದಲು ವೇದಿಕೆಗೆ ಬಂದ ಭಾರತೀಯ ಪುರಾತತ್ವತಜ್ಞ ಪ್ರತಿನಿಧಿಗಳಿಂದ ಫ್ಯಾಸಿಷ್ಟರು ಮೈಕ್ ಅನ್ನು ಕಿತ್ತುಕೊಂಡರು. ಸಮ್ಮೇಳನ ಆಯೋಜನಾ ಕೌನ್ಸಿಲ್ ತನ್ನ ಅಧಿಕೃತ ಸಮಾರೋಪ ಸಮಾರಂಭವನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟಿಸಿದ ಕಾರಣ ಸಮ್ಮೇಳನವು ಹೀನಾಯವಾಗಿ ಮುಕ್ತಾಯಗೊಂಡಿತು. ಪ್ರಾಚೀನ ಹಿಂದೂ ಕಾಲ್ಪನಿಕ ಮಹಾಕಾವ್ಯದ ಸಂಪ್ರದಾಯವನ್ನು ಪುರಾತತ್ತ್ವ ಶಾಸ್ತ್ರದ ಐತಿಹಾಸಿಕ ಸತ್ಯತೆ ಎಂದು ಸಾಬೀತುಪಡಿಸಲು ಲಾಲ್ ಬಹಳಷ್ಟು ಪ್ರಯತ್ನಿಯಿಸದರು. ಈ ಪ್ರಾಚೀನ ರಾಷ್ಟ್ರದ ವೈವಿಧ್ಯಮಯ ಬದುಕಿನ ಇತಿಹಾಸಕ್ಕೆ ಉತ್ಖನನದ ಮೂಲಕ ಕಾಲ್ಪನಿಕ ಪುರಾಣದ ಕತೆಗಳಿಗೆ ಇತಿಹಾಸದ ಲೇಪ ಬಳಿಯುವ ಹುನ್ನಾರಗಳಿಂದ ಲಾಲ್ ಅವರು ಸರಕಾರದ ಪುರಾತತ್ವ ಇಲಾಖೆಯನ್ನು ದಾಳವಾಗಿ ಬಳಸಿದರು. ೧೯೫೦-೫೨ ರಲ್ಲಿ ಲಾಲ್ ಅವರು ಕಾಲ್ಪನಿಕ ಪುರಾಣವಾಗಿರುವ ಮಹಾಭಾರತಕ್ಕೆ ಸಂಬಂಧಿಸಿದವು ಎನ್ನಲಾದ ಸ್ಥಳಗಳ ಉತ್ಖನನ ಆರಂಭಿಸುವ ಮೂಲಕ ತಮ್ಮ ಪೂರ್ವನಿಯೋಜಿತ ಹಿಂದುತ್ವ ಸಿದ್ಧಾಂತ ಮತ್ತು ಪುರಾತತ್ತ್ವ ಶಾಸ್ತ್ರದ ನಡುವೆ ಒಂದು ಅನೈತಿಕ ಸಂಪರ್ಕವನ್ನು ಸಾಧಿಸಿದರು ಎನ್ನುತ್ತಾರೆ ಆಶಿಶ್ ಅವರು.
೧೯ ನೇ ಶತಮಾನದಲ್ಲಿ ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್ ಅವರು ಚೀನೀ ಪ್ರವಾಸ ಸಾಹಿತ್ಯದಲ್ಲಿ ಉಲ್ಲೇಖಿಸಿರುವ ಸ್ಥಳಗಳ ಉತ್ಖನನಗಳಿಗಿಂತ ತೀರ ಭಿನ್ನವಾಗಿ, ನಿಸ್ಸಂದಿಗ್ಧವಾದ ಐತಿಹಾಸಿಕ ಮೂಲಗಳನ್ನು ಲಾಲ್ ಹೊಂದಿದ್ದರು. ಅದಕ್ಕಾಗಿ ಅವರು ಹಸ್ತಿನಾಪುರˌ ಮಥುರಾ, ಕುರುಕ್ಷೇತ್ರ, ಬನವಾ, ಪಾನಿಪಟ್ˌ ಅಹಿಚ್ಛತ್ರ ಮತ್ತು ಇತರ ತಾಣಗಳಲ್ಲಿ ಪುರಾತತ್ತ್ವ ಉತ್ಖನನದ ಯೋಜನೆ ರೂಪಿಸಿದರು ಎಂದು ಆಶಿಶ್ ವಿವರಿಸುತ್ತಾರೆ. ಲಾಲ್ ಅವರ ಉತ್ಖನನದ ಕಾರ್ಯವು ಈ ಸ್ಥಳಗಳಲ್ಲಿ ಕಂಡುಬರುವ ಬುದ್ದಪೂರ್ವದ ಪೇಂಟೆಡ್ ಗ್ರೇ ವೇರ್ (PGW)ಗಳು ಮಹಾಭಾರತಕ್ಕೆ ಸಂಬಂಧಿಸಿದ್ದವು ಎಂಬ ವಿವಾದಾತ್ಮಕ ಪ್ರತಿಪಾದನೆಗೆ ಕಾರಣವಾಯಿತು. PGW ಅನ್ನು ೧೯೪೬ ರಲ್ಲಿ ಅಹಿಚ್ಛತ್ರದಲ್ಲಿ ಗುರುತಿಸಲಾಯಿತು. ಹಸ್ತಿನಾಪುರದ ಉತ್ಖನನದ ಸಮಯದಲ್ಲಿ, ಇದನ್ನು ಸಾಂಸ್ಕೃತಿಕವಾಗಿ ಅರ್ಥೈಸಲಾಯಿತು. ಬಿ. ಬಿ. ಲಾಲ್ ಅವರು PGW ಅನ್ನು ಹಸ್ತಿನಾಪುರದ ಎರಡನೇ ಅವಧಿ ಎಂದು ಒತ್ತಿಹೇಳಿದರು, ಆ ಮೂಲಕ ವಿವಾದಾತ್ಮಕವಾಗಿ ಮಹಾಭಾರತದಲ್ಲಿನ ಘಟನೆಗಳ ದಿನಾಂಕವನ್ನು ಕ್ರಿ.ಪೂ ೧೦೦೦ ವರ್ಷಗಳಷ್ಟು ಹಿಂದಕ್ಕೆ ತಳ್ಳಿದರು ಎನ್ನುವುದು ಆಶಿಶ್ ಅವರ ಸ್ಪಷ್ಟ ಅಭಿಪ್ರಾಯವಾಗಿದೆ.
ಆದಾಗ್ಯೂ, ೧೯೫೪ ರ “ಎನ್ಷಿಯಂಟ್ ಇಂಡಿಯಾ” ನಿಯತಕಾಲಿಕದಲ್ಲಿ ಪ್ರಕಟವಾದ ಹಸ್ತಿನಾಪುರದ ಉತ್ಖನನದ ವರದಿಯ ಅಂತಿಮ ತೀರ್ಪನ್ನು ಲಾಲ್ ಬಹಳ ಎಚ್ಚರಿಕೆಯಿಂದ ಬರೆದರು. ಅವರ ವರದಿಯ ಅಂತಿಮ ತೀರ್ಪಿನಲ್ಲಿ “ಇಲ್ಲಿ ಲಭ್ಯವಿರುವ ಸಾಕ್ಷ್ಯವು ಸಂಪೂರ್ಣವಾಗಿ ಸಾಂದರ್ಭಿಕವಾಗಿದೆ, ಮತ್ತು ತೀರ್ಮಾನಗಳನ್ನು ದೃಢೀಕರಿಸಲು ಧನಾತ್ಮಕ ಜನಾಂಗೀಯ ಮತ್ತು ಶಾಸನಶಾಸ್ತ್ರದ ಪುರಾವೆಗಳನ್ನು ಪಡೆಯುವವರೆಗೆ ಇದನ್ನು ಪರಿಗಣಿಸದಿದ್ದರೂ ಸಹ ಈ ಸಾಕ್ಷಗಳನ್ನು ತಾತ್ಕಾಲಿಕವಾಗಿ ಪರಿಗಣಿಸಲಾಗುವುದು” ಎಂದು ಬರೆದಿದ್ದರು. ಲಾಲ್ ಅವರ ಈ ವಿವಾದಾತ್ಮಕ ಯೋಜನೆಯು PGW ನ ವಸ್ತು ಸಂಸ್ಕೃತಿಯನ್ನು ಆರ್ಯನ್ ಜನಾಂಗೀಯತೆಯೊಂದಿಗೆ ಪರಸ್ಪರ ಸಂಬಂಧಿಸುವ ದೋಷಯುಕ್ತ ತರ್ಕದಿಂದ ನಡೆಸಲ್ಪಟ್ಟಿತ್ತು. ಲಾಲ್ ಅವರ ಪ್ರಯತ್ನವು ಬ್ರಿಟಿಷ್ ಪುರಾತತ್ವಶಾಸ್ತ್ರಜ್ಞ ಮಾರ್ಟಿಮರ್ ವೀಲರ್ ಅವರ ಹರಪ್ಪಾದಲ್ಲಿನ ಸ್ಮಶಾನ ‘H’ ನ ಭೌತಿಕ ಸಂಸ್ಕೃತಿ ಮತ್ತು ಆರ್ಯರ ಆಕ್ರಮಣದ ಕಲ್ಪನೆಯ ನಡುವಿನ ಸಮಸ್ಯಾತ್ಮಕ ಪರಸ್ಪರ ಸಂಬಂಧವನ್ನು ಅನುಕರಿಸುತ್ತಿತ್ತು. ಆದರೆ ಲಾಲ್ ಅವರ ಹೇಳಿಕೆಯ ೭೦ ವರ್ಷಗಳ ನಂತರವೂ ಕೂಡ ಆರ್ಯನ್ನರೊಂದಿಗೆ ಬುದ್ದಪೂರ್ವದ PGW ಗೆ ಸಂಬಂಧಗಳಿವೆ ಎನ್ನುವ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎನ್ನುತ್ತಾರೆ ಆಶಿಶ್ ಅವರು.
೧೯೭೦ ರ ದಶಕದಲ್ಲಿ, ಅದೇ ಪೂರ್ವಾಗ್ರಹಪೀಡಿತ ಕಾಳಜಿಯಿಂದ ಪ್ರೇರೇಪಿಸಲ್ಪಟ್ಟ ಲಾಲ್ ನೇತೃತ್ವದ ‘ರಾಮಾಯಣ ಸೈಟ್‌ಗಳ ಪುರಾತತ್ವ ಐತಿಹ್ಯ’ ಗಳ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಶಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ಜಂಟಿ ಯೋಜನೆಯು ಅಯೋಧ್ಯೆ, ಶೃಂಗವೇರಪುರದಲ್ಲಿ ಮತ್ತು ನಂದಿಗ್ರಾಮಗಳಲ್ಲಿ ಉತ್ಖನನ ನಡೆಸಿತು. ಲಾಲ್ ಅವರ ಈ ತಂಡವು ಮುಖ್ಯವಾಗಿ, ಅಯೋಧ್ಯೆಯಲ್ಲಿ ಮೂರು ಅವಧಿಗಳಲ್ಲಿ (೧೯೭೫-೭೬, ೧೯೭೬-೭೭, ಮತ್ತು ೧೯೮೯-೮೦) ಉತ್ಖನನಗಳನ್ನು ಕೈಗೊಂಡಿತು. ಆದರೆ ಆ ಸ್ಥಳಗಳಲ್ಲಿ ಸಂಶೋಧಿಸಿದ ಯಾವುದೇ ವಿವರವಾದ ವರದಿಯನ್ನು ಆ ತಂಡ ಯಾವತ್ತು ಪ್ರಕಟಿಸುವ ಗೋಜಿಗೆ ಹೋಗಲಿಲ್ಲ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಹೊರತರುವ “ಇಂಡಿಯನ್ ಆರ್ಕಿಯಾಲಜಿ: ಎ ರಿವ್ಯೂ” (IAR) ಎನ್ನುವ ನಿಯತಕಾಲಿಕದಲ್ಲಿ ಲಾಲ್ ನೇತ್ರತ್ವದ ಉತ್ಖನನ ತಂಡವು ಕೇವಲ ಎರಡು ಸಣ್ಣ ವರದಿಗಳನ್ನು ಪ್ರಕಟಿಸಿತು. ಈ ಉತ್ಖನನವು ಅಯೋಧ್ಯೆಯನ್ನು ಮೊದಲು ಕ್ರಿ.ಪೂ. ೭ ನೇ ಶತಮಾನದಲ್ಲಿ ಆಕ್ರಮಿಸಿಕೊಳ್ಳಲಾಗಿತ್ತು ಎನ್ನುವುದನ್ನು ಮಾತ್ರ ದೃಢಪಡಿಸಿತು ಎನ್ನುತ್ತಾರೆ ಆಶಿಶ್ ಅವರು.

ಲಾಲ್ ಅವರ ಅತ್ಯಂತ ಮಹತ್ವದ ಆವಿಷ್ಕಾರವೆಂದರೆ ಆರಂಭಿಕ ಜೈನ ಟೆರಾಕೋಟಾ ಪ್ರತಿಮೆ (ಕ್ರಿ.ಪೂ. ೪ ನೇ ಶತಮಾನ) ಮತ್ತು ರೋಮನ್ ರೌಲೆಟ್ ವೇರ್ (೧ ನೇ – ೨ ನೇ ಶತಮಾನ )ಗಳು. ಈ ಪುರಾವೆಯು ಅಯೋಧ್ಯೆಯು ಪುರಾತನ ವ್ಯಾಪಾರ ಮಾರ್ಗದ ಭಾಗವಾಗಿರಲಿಲ್ಲ, ಆದರೆ ಅದು ಬಹುಸಂಸ್ಕೃತಿಯ ತಾಣವಾಗಿತ್ತು. ಆ ಸ್ಥಳದಲ್ಲಿ ಹಿಂದೂ ದೇವಾಲಯದ ಉಲ್ಲೇಖವಿರಲಿಲ್ಲ.ಅಯ್ಯೋದ್ಯೆಯಲ್ಲಿನ ಸಣ್ಣ ಉತ್ಖನನದ IAR ವರದಿಯು ೧೧ ನೇ ಶತಮಾನದ ನಂತರದ ಸಂಪೂರ್ಣ ಅವಧಿಯು ಯಾವುದೇ ಬಗೆಯ “ವಿಶೇಷ ಆಸಕ್ತಿಯನ್ನು ಹೊಂದಿಲ್ಲ” ಎಂದು ವ್ಯಂಗ್ಯವಾಗಿ ಹೇಳಿದೆ. ಆದಾಗ್ಯೂ, ೧೯೯೦ ರಲ್ಲಿ ರಾಮಜನ್ಮಭೂಮಿ ಚಳವಳಿಯು ಭಾರತದ ರಾಜಕೀಯ ವಾತಾವರಣವನ್ನು ತಲ್ಲಣಗೊಳಿಸುತ್ತಿದ್ದಾಗ, ಮತ್ತು ಲಾಲ್ ಅವರ ತಂಡ ಅಯೋಧ್ಯೆಯಲ್ಲಿ ಉತ್ಖನನ ಮಾಡಿದ ದಶಕದ ಅವಧಿಯ ನಂತರ, ಲಾಲ್ ಅವರು ಹಿಂದುತ್ವ ಪ್ರಚಾರಕ್ಕೆ ಹೆಸರಾಗಿದ್ದ ಜರ್ನಲ್ “ಮಂಥನ್”ನಲ್ಲಿ ಪ್ರಭಾವಶಾಲಿ ಲೇಖನವೊಂದನ್ನು ಬರೆದು ತಮ್ಮ ಉತ್ಖನನದ ಸಮಯದಲ್ಲಿ ಹಿಂದೂ ದೇವಾಲಯದ ಕಂಬಗಳು ಪತ್ತೆಹಚ್ಚಿರುವುದಾಗಿ ಘೋಷಿಸಿದರು ಎನ್ನುವುದು ಆಶಿಶ್ ಅವರ ಅಭಿಪ್ರಾಯ.
ಬಾಬರಿ ಮಸೀದಿಯ ಅಡಿಯಲ್ಲಿ ಹಿಂದೂ ದೇವಾಲಯದ ಅವಶೇಷಗಳು ಅಸ್ತಿತ್ವದಲ್ಲಿವೆ ಎಂಬ ಲಾಲ್ ಅವರ ಘೋರವಾದ ಹೇಳಿಕೆಯ ಹಿಂದೆ ಲಾಲ್ ಅವರು ಸರಕಾರದ ಇಲಾಖೆಯ ಪ್ರಖ್ಯಾತ ಪುರಾತತ್ವಶಾಸ್ತ್ರಜ್ಞರಾಗಿ ತಮ್ಮ ಅಧಿಕಾರದ ಬಲವನ್ನು ಪ್ರದರ್ಶಿಸಿದರು. ಬಾಬರಿ ಮಸೀದಿಯ ಬಗ್ಗೆ ಹಿಂದುತ್ವ ಮೂಲಭೂತವಾದಿಗಳು ಮಾಡುತ್ತಿರುವ ಹೇಳಿಕೆಗೆ ಪುರಾತತ್ವಶಾಸ್ತ್ರದ ಸುಳ್ಳು ಸಮರ್ಥನೆಯನ್ನು ಲಾಲ್ ಅವರು ಬೇಕೆಂತಲೆ ಒದಗಿಸಿದರು. ಬ್ರಿಟೀಷ್ ಆಡಳಿತದ ನಿರ್ಗಮನದ ನಂತರ ಲಾಲ್ ಅವರು ಪುರಾತತ್ತ್ವ ಶಾಸ್ತ್ರವನ್ನು ಭಾರತದ ದೊಡ್ಡ ರಾಜಕೀಯ ಬಿಕ್ಕಟ್ಟಿಗೆ ತಳ್ಳಿದರು. ಮಸೀದಿಯ ಅಡಿಯಲ್ಲಿ ದೇವಾಲಯದ ಅವಶೇಷಗಳ ಉಪಸ್ಥಿತಿಯ ಬಗ್ಗೆ ಲಾಲ್ ಅವರ ಪ್ರತಿಪಾದನೆಯು ಭಾರತದಲ್ಲಿ ಪುರಾತತ್ವಶಾಸ್ತ್ರಜ್ಞರು ಮತ್ತು ಇತಿಹಾಸಕಾರರ ನಡುವೆ ಕಟುವಾದ ಚರ್ಚೆಗೆ ಕಾರಣವಾಯಿತು. ಅವರು ಹಿಂದೂ ಮೂಲಭೂತವಾದದ ರಾಜಕೀಯ ಯೋಜನೆಗೆ ಪುರಾತತ್ತ್ವ ಶಾಸ್ತ್ರದ ಸಮರ್ಥನೆಯನ್ನು ಒದಗಿಸಿದ ತಮ್ಮ ಸಹಯೋಗಿ ಎಸ್.ಪಿ. ಗುಪ್ತಾ ಅವರೊಂದಿಗೆ ಅನೇಕ ಜನ ಹಿಂದುತ್ವವಾದಿ ಇತಿಹಾಸಕಾರರು ಮತ್ತು ಪುರಾತತ್ವಶಾಸ್ತ್ರಜ್ಞರ ಗುಂಪನ್ನು ಮುನ್ನಡೆಸಿದ ಕುಖ್ಯಾತಿಗೆ ಭಾಜನರಾದರು ಎನ್ನುತ್ತಾರೆ ಆಶಿಶ್ ಅವರು.
ಇದರೊಂದಿಗೆ, ಹಿಂದುತ್ವವು ದೇಶದಲ್ಲಿ ತನ್ನ ವಿಭಜಕ ರಾಜಕೀಯವನ್ನು ಮುಂದುವರಿಸಲು ಪುರಾತತ್ವಶಾಸ್ತ್ರದ ವೈಜ್ಞಾನಿಕ ನ್ಯಾಯಸಮ್ಮತತೆಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯು ಡಿಸೆಂಬರ್ ೬, ೧೯೯೨ ರಂದು ಬಾಬರಿ ಮಸೀದಿಯನ್ನು ಕೆಡವುವ ಮೂಲಕ ಅದರ ತಾರ್ಕಿಕ ಅಂತ್ಯವನ್ನು ತಲುಪಿತು. ಈ ಯೋಜನೆಯ ಜೊತೆಗೆ, ಲಾಲ್ ಅವರು ತಮ್ಮ ನೆಚ್ಚಿನ ಹಿಂದುತ್ವದ ಪುರಾತತ್ವ ಯೋಜನೆಗಳ ಮೂಲಕ ‘ಸಿಂಧೂ ನಾಗರಿಕತೆಯ ಆರ್ಯನೈಸೇಶನ್’ನ ಮೂಲಪುರುಷರಾಗಿ ಗುರುತಿಸಿಕೊಂಡರು. ಇದರರ್ಥ ಮೂಲಭೂತವಾಗಿ ಹರಪ್ಪನ್ ನಾಗರೀಕತೆಯ (ಕ್ರಿ.ಪೂ. ೩೩೦೦-೧೮೦೦) ಮತ್ತು ವೈದಿಕ ನಾಗರಿಕತೆಯ (ಕ್ರಿ.ಪೂ. ೧೫೦೦-೬೦೦) ಅವಧಿಗಳ ನಡುವೆ ಪುರಾತತ್ತ್ವ ಶಾಸ್ತ್ರದ ಮೋಸದ ಪುರಾವೆಗಳನ್ನು ಬಲವಂತವಾಗಿ ಅಳವಡಿಸುವುದು ಮತ್ತು ಆರ್ಯನ್ನರು ಹೊರಗಿನವರು ಎನ್ನುವ ಐತಿಹಾಸಿಕ ಸತ್ಯವನ್ನು ತಿರುಚಿ ‘ವೈದಿಕ-ಹರಪ್ಪನ್ಸ್’ ಎಂಬ ಹೊಸ ಮತ್ತು ಹುಸಿ ಜನಾಂಗೀಯ ವರ್ಗವನ್ನು ರಚಿಸುವುದು ಲಾಲ್ ಅವರ ಮೂಲ ಉದ್ದೇಶವಾಗಿತ್ತು.
ಲಾಲ್ ಅವರ ಈ ಯೋಜನೆಯು ಪಶ್ಚಿಮದಿಂದ ಆರ್ಯರ ವಲಸೆಯ ಸತ್ಯವನ್ನು ವಿವಾದಿತಗೊಳಿಸುವ ಮತ್ತು ಇದಕ್ಕೆ ಯಾವುದೆ ಹೆಚ್ಚಿನ ಪುರಾವೆಗಳಿಲ್ಲದೆ, ಹರಪ್ಪನ್ನರು ಸ್ಥಳೀಯ ವೈದಿಕ-ಆರ್ಯರು ಎಂದು ಪ್ರತಿಪಾದಿಸುವ ದುರುದ್ದೇಶ ಹೊಂದಿತ್ತು. ಲಾಲ್ ಅವರ ಸೂಕ್ತ ದಾಖಲೆರಹಿತ ಈ ಸುಳ್ಳು ಪ್ರತಿಪಾದನೆಯು ಯಾವುದೇ ಐತಿಹಾಸಿಕ ವಸ್ತು ದತ್ತಾಂಶವನ್ನು ಹೊಂದಿರದ ಊಹಾತ್ಮಕ ಪ್ರಮೇಯವಾಗಿತ್ತು. ಇದು ಹರಪ್ಪನ್ ನಾಗರಿಕತೆಯು ಮೂಲ-ಇಂಡೋ-ಯುರೋಪಿಯನ್ ಭಾಷೆಯನ್ನು ಮಾತನಾಡುವ ಮತ್ತು ಯುರೇಷಿಯನ್ ಪ್ರಪಂಚದಾದ್ಯಂತ ಹರಡಿದ ಸ್ಥಳೀಯ ಆರ್ಯರ ಜನ್ಮಸ್ಥಳವಾಗಿದೆ ಎನ್ನುವ ಖೊಟ್ಟಿ ನಿರೂಪಣೆಯನ್ನು ಪ್ರತಿಪಾದಿಸಿತ್ತು ಎನ್ನುತ್ತಾರೆ ಆಶಿಶ್ ಅವರು. ಭಾರತದ ಮೂಲ ಸಿಂಧೂ ಕಣಿವೆಯ ಹರಪ್ಪನ್ ನಾಗರೀಕತೆಯನ್ನು ಆರ್ಯಮಯಗೊಳಿಸುವ ಲಾಲ್ ತಂಡದ ಪ್ರಕ್ರಿಯೆಯ ಕೇಂದ್ರವಸ್ತುವೆಂದರೆ ಆರ್ಯನ್ ಅಂಶಗಳನ್ನು ಹರಪ್ಪನ್ ವಸ್ತು ಸಂಸ್ಕೃತಿಯಲ್ಲಿ ಕಾಲ್ಪನಿಕ ಸರಸ್ವತಿ ನದಿಯ ಸೇರ್ಪಡೆ ಮಾಡುವುದಾಗಿತ್ತು.

ಲಾಲ್ ಅವರ ಈ ಖೊಟ್ಟಿ ಪ್ರತಿಪಾದನೆಯ ವಿಶೇಷ ಪಾಂಡಿತ್ಯಕ್ಕೆ ಧನ್ಯವಾದಗಳು ಎನ್ನುತ್ತಾರೆ ಆಶಿಶ್ ಅವರು. ಏಕೆಂದರೆˌ ಲಾಲ್ ಅವರು ಕಾಲ್ಪನಿಕ ಪುರಾಣವನ್ನು ಪುರಾತತ್ತ್ವ ಶಾಸ್ತ್ರದ ದುರುಪಯೋಗದ ಮೂಲಕ ಪ್ರತಿಪಾದಿಸಿದ್ದರು. ಲಾಲ್ ಉತ್ಖನನ ಮಾಡಿದ ಕಾಳಿಬಂಗನ್‌ನ ಹರಪ್ಪನ್ ಸ್ಥಳಕ್ಕೆ ಸಂಬಂಧಿಸಿದಂತೆ ಎಲ್ಲಾ ಅನ್ವೇಷಣಾ ಕಾರ್ಯಗಳ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕೃತ ಪ್ರಕಟಣೆಗಳಲ್ಲಿ ಅವರು ಎಂದಿಗೂ ‘ಸರಸ್ವತಿ’ ಎಂಬ ಪದವನ್ನು ಬಳಸದಿರುವುದು ಖಚೇದಾಶ್ಚರ್ಯವನ್ನು ಹುಟ್ಟಿಸುತ್ತದೆ. ಲಾಲ್ ಅವರು ೧೯೬೦-೬೯ ರಲ್ಲಿ ಕಾಲಿಬಂಗನ್ ಸೈಟ್ ಅನ್ನು ಉತ್ಖನನ ಮಾಡಿದರು, ಆದರೆ ಉತ್ಖನನ ಮುಗಿದ ೩೪ ವರ್ಷಗಳ ನಂತರ ಮಾತ್ರ ಆ ಕುರಿತ ವರದಿಯನ್ನು ಪ್ರಕಟಿಸಿದರು. ಈ ಮಧ್ಯೆ, ಅಧಿಕೃತವಲ್ಲದ ಪ್ರಕಟಣೆಗಳಲ್ಲಿ, ಪುರಾತತ್ವ, ಭೂವೈಜ್ಞಾನಿಕ ಅಥವಾ ಜಲವಿಜ್ಞಾನದ ಪುರಾವೆಗಳಿಲ್ಲದೆ ಮಾನ್ಸೂನ್-ಆಧಾರಿತ ಘಗ್ಗರ್-ಹಕ್ರಾ ಪ್ಯಾಲಿಯೊ ವಾಹಿನಿಯೇ ವಾಸ್ತವವಾಗಿ ವೈದಿಕ ನದಿ ಸರಸ್ವತಿ ಎಂದು ಲಾಲ್ ತಮ್ಮ ಎಂದಿನ ಹಿಂದುತ್ವವಾದಿ ವಾಡಿಕೆಯಂತೆ ಪ್ರತಿಪಾದಿಸಿದರು. ಲಾಲ್ ಅವರ ಪ್ರಕಾರ ಶ್ರೀರಾಮನು ಅಯೋಧ್ಯೆಯಲ್ಲಿ ಆಸ್ತಿ ವಿವಾದದ ದೈವಿಕ ಕೇಂದ್ರವಾಗಿದ್ದ ಮತ್ತು, ಆನಂತರ ಸರಸ್ವತಿ ದೇವಿಯು ವೈದಿಕ ಹರಪ್ಪನ್ ಜನಾಂಗದ ಹುಟ್ಟಿಗೆ ಮೂಲವಾಗಿದ್ದಳು ಎನ್ನುತ್ತಾರೆ ಆಶಿಶ್.
ಲಾಲ್ ಅವರ ಪ್ರಭಾವವು ಎಷ್ಟೊಂದು ಸ್ಥಳೀಯವಾಗಿತ್ತೆಂದರೆ ೧೯೯೦ ರ ದಶಕದ ಅಂತ್ಯ ಮತ್ತು ೨೦೦೦ ರ ದಶಕದ ಆರಂಭದಲ್ಲಿ ಅವರ ವಿದ್ಯಾರ್ಥಿಗಳು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂಶೋಧನಾ ಪಥದ ಮೇಲೆ ದೃಢವಾದ ನಿಯಂತ್ರಣವನ್ನು ಪಡೆದರು. ಅವರ ಪ್ರಮುಖ ವಿದ್ಯಾರ್ಥಿಗಳಲ್ಲಿ ಅಯೋಧ್ಯೆಯಲ್ಲಿನ ಉತ್ಖನನದ ನೇತ್ರತ್ವವಹಿಸಿದ್ದ ಬಿ.ಆರ್ ಮಣಿ; ರಾಖಿಘಡಿಯಲ್ಲಿ(೧೯೯೭-೯೮ ರಿಂದ ೧೯೧೯–೨೦೦೦) ಉತ್ಖನನ ಮಾಡಿದ ಅಮರೇಂದ್ರ ನಾಥ್; ಅಲ್ಪಾವಧಿಯ ಸರಸ್ವತಿ ಹೆರಿಟೇಜ್ ಪ್ರಾಜೆಕ್ಟ್ ನ (೨೦೦೨-೦೪) ನಿರ್ದೇಶಕರಾಗಿದ್ದು ಮತ್ತು ಧೋಲವೀರಾದಲ್ಲಿ (೧೯೮೯-೯೦ ರಿಂದ ೨೦೦೪-೦೫) ಉತ್ಖನನವನ್ನು ನಿರ್ದೇಶಿಸಿದ ಆರ್.ಎಸ್. ಬಿಷ್ಟ್ ಅವರು. ಇಂದು ಈ ಮಣಿ, ನಾಥ್ ಮತ್ತು ಬಿಷ್ಟ್ ಅವರ ಹಲವಾರು ವಿದ್ಯಾರ್ಥಿಗಳು ಭಾರತೀಯ ಸರ್ವೇಕ್ಷಣಾ ಇಲಾಖೆಯ ವಿವಿಧ ವಿಭಾಗಗಳ ಮುಖ್ಯಸ್ಥರಾಗಿದ್ದಾರೆ ಎನ್ನುವ ವಿವರ ಆಶಿಶ್ ಅವರು ನೀಡಿದ್ದಾರೆ.
೨೦೦೫ ರಲ್ಲಿ ರಾಜಸ್ಥಾನದ ಬರೋರ್ ಸ್ಥಳದಲ್ಲಿ ಆಶಿಶ್ ಅವರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಲ್ಲಿ ಜನಾಂಗೀಯ ಶಾಸ್ತ್ರದ ಕುರಿತು ಕಾರ್ಯ ಮಾಡುತ್ತಿದ್ದ ಸಮಯದಲ್ಲಿ, ಪುರಾತತ್ತ್ವ ಶಾಸ್ತ್ರಜ್ಞರೊಬ್ಬರು ಅವರಿಗೆ ಹೀಗೆ ಹೇಳಿದ್ದರಂತೆ: “ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಹಿರಿಯ ಪುರಾತತ್ತ್ವಜ್ಞರು ಬಲಪಂಥೀಯ ಸಿದ್ಧಾಂತದ ಪರ ಸಹಾನುಭೂತಿ ಹೊಂದಿದ್ದಾರೆ. ಅವರು ನೇರವಾಗಿ ಆರೆಸ್ಸೆಸ್ ಪ್ರಚಾರಕರಲ್ಲದಿರಬಹುದು, ಆದರೆ ಅವರು ಬಹಿರಂಗವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಆರ್.ಎಸ್. ಬಿಷ್ಟ್ ಅವರು ನಮಗೆಲ್ಲರಿಗೂ ತಿಳಿದಿರುವಂತೆ ಕೇಸರಿ ಪುರಾತತ್ವ ಶಾಸ್ತ್ರಜ್ಞರಾಗಿರುವ ಎಸ್.ಪಿ.ಗುಪ್ತಾ ಮತ್ತು ಬಿ.ಬಿ.ಲಾಲ್ ಅವರಿಗೆ ಬಹಳ ಹತ್ತಿರದವರು. ಸರಸ್ವತಿ ನದಿಯ ಯೋಜನೆಯು ಆರ್‌ಎಸ್‌ಎಸ್ ಜನರ ಮನಸ್ಸಿನಲ್ಲಿ ಸದಾ ನೆಲೆಸಿದೆ. ರಾಮಜನ್ಮಭೂಮಿ ವಿಷಯ ಕೂಡ ಈ ಜನರ ಆದ್ಯತೆಗಳಲ್ಲಿ ಒಂದು.”
ಬಿಜೆಪಿ ಇನ್ನೂ ದೇಶದ ಅಧಿಕಾರದ ಗದ್ದುಗೆ ಹಿಡಿಯದಿದ್ದ ಆ ಕಾಲದಲ್ಲೇ ಸರಕಾರದ ಆಯಕಟ್ಟಿನ ಜಾಗಗಳಲ್ಲಿ ಲಾಲ್ ರಂತಹ ಸಂಘಿ ಮನಸ್ಥಿತಿಯ ಬಲಪಂಥೀಯ ಜನರು ಸೇರಿಕೊಂಡು ಪುರಾತತ್ವ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡಿದ್ದರು ಎಂದಮೇಲೆ ಇಂದಿಗೆ ೧೬ ವರ್ಷಗಳ ಕಾಲ ದೇಶವನ್ನಾಳಿದ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಿ ಆರ್‌ಎಸ್‌ಎಸ್ ಇವು ಸರಕಾರ ಮತ್ತು ಖಾಸಗಿ ಕ್ಷೇತ್ರದ ಎಲ್ಲಾ ಆಯಕಟ್ಟಿನ ಜಾಗಗಳಲ್ಲಿ ಎಷ್ಟೊಂದು ಪ್ರಮಾಣದಲ್ಲಿ ಸಂಘಿಗಳನ್ನು ಸೇರಿಸಿದ್ದಾರೆ ಎನ್ನುವುದನ್ನು ಮತ್ತು ಅಂತವರಿಂದ ಮುಂದಿನ ದಿನಗಳಲ್ಲಿ ದೇಶಕ್ಕೆ ಬಂದೊದಗಬಹುದಾದ ಅಪಾಯಗಳ ಕುರಿತು ಯೋಚಿಸಿದಾಗ ಸಹಜವಾಗಿ ಪ್ರತಿಯೊಬ್ಬರಿಗೂ ದಿಗಿಲಾಗುತ್ತದೆ.