ಸ್ವತಂತ್ರ ಭಾರತ ಅಮೃತ ಕಾಲದತ್ತ ಸಾಗುತ್ತಿರುವ ಹಾದಿಯಲ್ಲಿ ಮತ್ತೊಂದು ವರ್ಷ ಕಳೆದುಹೋಗಿದೆ. ದಿನ, ವಾರ, ಮಾಸಗಳನ್ನೂ ಸಾಂಸ್ಕೃತಿಕ-ಧಾರ್ಮಿಕ ಅಸ್ಮಿತೆಗಳ ಚೌಕಟ್ಟುಗಳಿಗೆ ಒಳಪಡಿಸದೆ ಜನವರಿ ೧ರಂದು ಹೊಸ ವರ್ಷ ಆಚರಿಸುತ್ತಿರುವ ಸಮಸ್ತ ಭಾರತೀಯರಿಗೂ ಹೊರಳಿ ಮರೆಯಾಗುತ್ತಿರುವ 2022 ಒಂದಲ್ಲಾ ಒಂದು ರೀತಿಯಲ್ಲಿ ಕಾಡುತ್ತಲೇ ಇರುತ್ತದೆ. ಏಕೆಂದರೆ ಇಷ್ಟು ವರ್ಷಗಳ ಕಾಲ ಜಾತಿ, ಮತ, ಧರ್ಮ, ಪಂಥ ಮತ್ತು ಸಾಮುದಾಯಿಕ ನೆಲೆಗಳಲ್ಲಿ ನಿಂತು ತಮ್ಮ ಸಾಮಾಜಿಕ-ಸಾಂಸ್ಕೃತಿಕ ಅಸ್ಮಿತೆಗಳನ್ನು ಕಂಡುಕೊಳ್ಳುತ್ತಿದ್ದ ಭಾರತದ ಜನತೆಗೆ 2022 ಮತ್ತೊಂದು ಆಯ್ಕೆಯನ್ನೂ ನೀಡಿದೆ.. ವಾಸ್ತುಶಿಲ್ಪದ ಸೌಂದರ್ಯಶಾಸ್ತ್ರದ ಮಿತಿಗಳನ್ನು ಮೀರಿ ಪಾರಂಪರಿಕ ಸ್ಮಾರಕ, ಕಟ್ಟಡಗಳಲ್ಲೂ ಸಮಕಾಲೀನ ಅಸ್ಮಿತೆಗಳನ್ನು ಆರೋಪಿಸುವ ಒಂದು ಹೊಸ ಪರಂಪರೆಯೊಂದಿಗೆ, ಗೋಡೆಯ ಬಣ್ಣ, ಮನುಷ್ಯ ಧರಿಸುವ ಒಳಉಡುಪಿನ ಬಣ್ಣ ಮತ್ತು ಮಾನವ ಸಮಾಜ ತನ್ನ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಅಸ್ಮಿತೆಗಾಗಿ ಬಳಸುವ ಬಣ್ಣಗಳು, ಮಾನವ ಸಂಬಂಧಗಳನ್ನು ಬೆಸೆಯುವ-ಭೇದಿಸುವ-ಛೇದಿಸುವ ಅಸ್ತ್ರಗಳಾಗಿ ಪರಿಣಮಿಸಿವೆ.
ಈ ಗೊಂದಲಗಳ ನಡುವೆಯೇ 2022 ಹಿಂದಕ್ಕೆ ಸರಿದಿದೆ. ಕಳೆದು ಹೋದ ವರ್ಷದಲ್ಲಿ ಭಾರತ ಸಾಧಿಸಿರುವುದೇನು ಎಂದು ನೋಡಿದಾಗ ಸಾಧನೆಗಳೊಡನೆಯೇ ನಿರಾಸೆ ಮೂಡಿಸುವಂತಹ ಬೆಳವಣಿಗೆಗಳನ್ನೂ ಗುರುತಿಸಬೇಕಾಗಿದೆ. ಅಂಕಿಅಂಶಗಳನ್ನು ಹೊರಗಿಟ್ಟು ನೋಡಿದಾಗಲೂ, ವರ್ಷಾಂತ್ಯದಲ್ಲಿ ಕೇಂದ್ರ ಸರ್ಕಾರ ದೇಶದ 80 ಕೋಟಿ ಜನತೆಗೆ ಇನ್ನೂ ಒಂದು ವರ್ಷ ಉಚಿತ ಪಡಿತರ ನೀಡಲು ನಿರ್ಧರಿಸಿರುವುದು, ವಾಸ್ತವ ಸನ್ನಿವೇಶವನ್ನು ಪ್ರತಿಬಿಂಬಿಸುತ್ತದೆ. ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆ ಅರ್ಥವ್ಯವಸ್ಥೆಯ ಎಲ್ಲ ಮೂಲೆಗಳನ್ನೂ ಆಕ್ರಮಿಸುತ್ತಿರುವಂತೆಯೇ, ಭಾರತ ಹಸಿವಿನ ಸೂಚ್ಯಂಕದಲ್ಲಿ, ಬಡತನದ ಸೂಚ್ಯಂಕದಲ್ಲಿ ಹಿಂದಕ್ಕೆ ಸರಿಯುತ್ತಿರುವುದೂ ಸಹ ವಾಸ್ತವವೇ. ಭಾರತದ ವರ್ತಮಾನದ ಹಸಿವು, ಬಡತನ, ಅಪೌಷ್ಟಿಕತೆ ಮತ್ತು ಅಸಮಾನತೆ ಇವೆಲ್ಲವೂ ಅಮೂರ್ತತೆಯನ್ನು ಪಡೆದುಕೊಳ್ಳುತ್ತಿವೆ. ಹಾಗಾಗಿಯೇ ಅಂತಾರಾಷ್ಟ್ರೀಯ ಸಂಸ್ಥೆಗಳ ಸಾಂಖ್ಯಿಕ ಅಂಕಿಅಂಶಗಳೆಲ್ಲವೂ ಪಿತೂರಿಯಂತೆ ಕಾಣುತ್ತವೆ.
ಆದರೆ ವಾಸ್ತವ ಕಣ್ಣೆದುರಿದೆ. ನಮ್ಮ ಕಂಗಳಿಗೆ ಪೊರೆ ಬಂದಿದೆ. ತಮ್ಮ ನಿತ್ಯ ಬದುಕಿಗಾಗಿ ಪ್ರತಿಕ್ಷಣವೂ ಹೋರಾಡುತ್ತಿರುವ ಲಕ್ಷಾಂತರ ಮಂದಿಯ ಬದುಕು ವಿವರ್ಣವಾಗುತ್ತಿದ್ದರೂ ನಮಗೆ ಸಿನಿಮಾ ತಾರೆಯರು ಧರಿಸುವ ಉಡುಪುಗಳ ಬಣ್ಣ ಢಾಳಾಗಿ ಕಾಣತೊಡಗಿದೆ. ಶಾಲಾ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ನಮಗೆ ಗೋಚರಿಸುತ್ತಿರುವುದು ಶಾಲೆಯ ಗೋಡೆಗೆ ಬಳಿದ ಬಣ್ಣ ಮಾತ್ರ . ಆದಿವಾಸಿಗಳು, ಬುಡಕಟ್ಟು ಸಮುದಾಯಗಳು, ನಗರದ ಸ್ಲಂ ನಿವಾಸಿಗಳು ತಮ್ಮ ಬದುಕಿಗೆ ಅವಶ್ಯವಾದ ಸೂರನ್ನೇ ಕಳೆದುಕೊಳ್ಳುತ್ತಿದ್ದರೂ ನಮಗೆ ಕಾಣುತ್ತಿರುವುದು ಯಾವುದೋ ಒಂದು ಗುಂಬಜ್ ಅಥವಾ ಗೋಪುರ, ಅದರ ಆಕಾರ ಮತ್ತು ಬಣ್ಣ. ಗುಂಬಜ್ ಇರಲಿ ತಲೆಯ ಮೇಲೆ ತಡಿಕೆಯೂ ಇಲ್ಲದ ಜನಸಂಖ್ಯೆ 18 ಲಕ್ಷ. ಏಳು ಕೋಟಿಗೂ ಹೆಚ್ಚು ಕುಟುಂಬಗಳು ಕಳಪೆ ಮನೆಗಳಲ್ಲಿ ವಾಸಿಸುತ್ತಿವೆ. 2022ರ ವೇಳೆಗೆ ಪ್ರತಿಯೊಬ್ಬರಿಗೂ ಸೂರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯ ನಡುವೆಯೇ 2017-18ರಲ್ಲಿ ನಗರೀಕರಣ ಪ್ರಕ್ರಿಯೆಗೆ ಬಲಿಯಾಗಿ 53 ಸಾವಿರ ಕುಟುಂಬಗಳು, ಎರಡೂವರೆ ಲಕ್ಷ ಜನರು ತಮ್ಮ ಸೂರು ಕಳೆದುಕೊಂಡಿದ್ದಾರೆ.

ಕಳೆದುಹೋದ ವರ್ಷವನ್ನು ಅವಲೋಕನ ಮಾಡುವುದೆಂದರೆ ಅಂಕಿಅಂಶಗಳನ್ನಷ್ಟೇ ನೋಡುವುದಲ್ಲ ಬದಲಾಗಿ, ನಮ್ಮ ಸುತ್ತಲಿನ ಸಮಾಜದಲ್ಲಿ ನಡೆದಿರುವ ದೌರ್ಜನ್ಯ, ತಾರತಮ್ಯ, ಅತ್ಯಾಚಾರ ಮತ್ತು ಅಸ್ಪೃಶ್ಯತೆಯಂತಹ ಹೀನಾಚರಣೆಗಳತ್ತಲೂ ಗಮನಹರಿಸಬೇಕಲ್ಲವೇ ? ಅಮೃತ ಕಾಲದತ್ತ ಪಯಣದಲ್ಲಿ ಚಂದ್ರನ ಮೇಲೆ ಕಾಲಿರಿಸಲು ಸಜ್ಜಾಗಿರುವ ದೇಶದಲ್ಲಿ ಪ್ರಾಚೀನ ಸಮಾಜದ ಪಳೆಯುಳಿಕೆಗಳು ಇನ್ನೂ ಉಳಿದಿರುವುದನ್ನು ಅತ್ಯಾಚಾರದ ಪ್ರಕರಣಗಳಲ್ಲಿ, ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಗಳಲ್ಲಿ, ಅಸ್ಪೃಶ್ಯತೆಯ ಆಚರಣೆಗಳಲ್ಲಿ ಕಂಡಿದ್ದೇವೆ. ಹಾಗೆಯೇ ವೈಜ್ಞಾನಿಕವಾಗಿ ಭಾರತ ಹೆಮ್ಮೆ ಪಡುವಂತಹ ಸಾಧನೆಗಳನ್ನು ಮಾಡುತ್ತಿರುವ ಹೊತ್ತಿನಲ್ಲೇ, ವೈಚಾರಿಕತೆಯನ್ನು ನಾಶಪಡಿಸುವ ಪ್ರಯತ್ನಗಳೂ ಸಹ ನಡೆಯುತ್ತಲೇ ಇರುವುದನ್ನು ಕಂಡಿದ್ದೇವೆ. ಆಧುನಿಕ ನಾಗರಿಕತೆಯಲ್ಲಿ ಊಹಿಸಲಾಗದಂತಹ ಕ್ರೌರ್ಯವನ್ನು ಶ್ರದ್ಧಾವಾಲ್ಕರ್ ಪ್ರಕರಣ ನಮ್ಮ ಮುಂದಿಟ್ಟಿದೆ. ಹಾಗೆಯೇ ಅತ್ಯಾಚಾರ ಎಸಗಿದವರಿಗೆ ಸನ್ಮಾನ ಮಾಡುವಂತಹ ಅಸೂಕ್ಷ್ಮತೆಯನ್ನೂ ಕಂಡಿದ್ದೇವೆ. 2022 ಇವೆಲ್ಲಕ್ಕೂ ಸಾಕ್ಷಿಯಾಗಿದೆ.
ಭಾರತದ ಅರ್ಥವ್ಯವಸ್ಥೆ ಸಂಪೂರ್ಣ ಮಾರುಕಟ್ಟೆಯ ವಶವಾಗುವುದನ್ನು ಹಂತಹಂತವಾಗಿ 2022 ಪ್ರದರ್ಶಿಸಿದೆ. ಶಿಕ್ಷಣ, ಆರೋಗ್ಯ, ಸಂಪರ್ಕ-ಸಂವಹನ, ಮಾಧ್ಯಮ, ಸಾರಿಗೆ, ಜಲಸಂಪನ್ಮೂಲ, ರೈಲ್ವೆ ಮತ್ತು ವಿಮಾನಯಾನ ಇವೆಲ್ಲವನ್ನೂ ಕಾರ್ಪೋರೇಟ್ ಯಜಮಾನಿಕೆಗೆ ಒಪ್ಪಿಸುವ ಆಡಳಿತ ನೀತಿಗಳು ಕಳೆದ ವರ್ಷದಲ್ಲಿ ಮತ್ತಷ್ಟು ಪುಷ್ಟಿ ಪಡೆದುಕೊಂಡಿವೆ. ಹೊಸ ವರ್ಷದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲು ಕರ್ನಾಟಕದ ಹೆಮ್ಮೆಯ ಬಿಇಎಮ್‌ಎಲ್ ಸೇರಿದಂತೆ ಹಲವು ಸಾರ್ವಜನಿಕ ಉದ್ದಿಮೆಗಳು ಸಜ್ಜಾಗಬೇಕಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಸಹ ಇದೇ ಸಾಲಿನಲ್ಲಿ ಟೋಕನ್ ಹಿಡಿದು ಕುಳಿತಿವೆ. ಶಿಕ್ಷಣದ ವಾಣೀಜ್ಯೀಕರಣ ಪ್ರಕ್ರಿಯೆಗೆ ಪೂರಕವಾಗುವಂತಹ ಹೊಸ ಶಿಕ್ಷಣ ನೀತಿ ಕರ್ನಾಟಕದಲ್ಲಿ ಈಗಾಗಲೇ ಜಾರಿಯಲ್ಲಿದೆ. ಈ ನಡುವೆಯೇ ತೀವ್ರವಾಗುತ್ತಿರುವ ನಿರುದ್ಯೋಗ ಯುವ ಸಮೂಹವನ್ನು ಹೆಚ್ಚು ಹೆಚ್ಚು ಪಾತಕೀಕರಣದತ್ತ ದೂಡುತ್ತಿರುವುದನ್ನೂ ಗಮನಿಸುತ್ತಿದ್ದೇವೆ.
ಭಾರತದ ಜನಸಾಮಾನ್ಯರು ಅತಿಹೆಚ್ಚು ಗೌರವಿಸುವ ಆಧ್ಯಾತ್ಮಿಕ ಕೇಂದ್ರಗಳು, ಭವಿಷ್ಯ ಸಮಾಜದ ದೇಗುಲಗಳಾಗಿರಬೇಕಾದ ಶೈಕ್ಷಣಿಕ ಸಂಸ್ಥೆಗಳು, ಶಾಲಾ ಕಾಲೇಜುಗಳು, ವಿದ್ಯಾರ್ಥಿನಿಲಯಗಳು ಅತ್ಯಾಚಾರ, ಅಸ್ಪೃಶ್ಯತೆ, ಲೈಂಗಿಕ ದೌರ್ಜನ್ಯಗಳ ಅಖಾಡಾಗಳಾಗಿರುವುದನ್ನು 2022ರಲ್ಲಿ ಕಂಡಿದ್ದೇವೆ. ನರಗುಂದದ ಶಾಲೆಯಲ್ಲಿ ಎಳೆಯ ಮಕ್ಕಳ ಸಮ್ಮುಖದಲ್ಲೇ ಶಿಕ್ಷಕನಿಂದ ನಡೆದ ಹತ್ಯೆ ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಕಿಂಚಿತ್ತೂ ಕದಡಿಲ್ಲ. ಹಾಗೆಯೇ ಅಧ್ಯಾತ್ಮ ಮತ್ತು ಧಾರ್ಮಿಕ ನೆಲೆಯಲ್ಲಿ ಅಪ್ರಾಪ್ತ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಪ್ರಕರಣವೂ ಸಮಾಜವನ್ನು ವಿಚಲಿತಗೊಳಿಸಿಲ್ಲ. ಬದಲಾಗುತ್ತಿರುವ ಭಾರತದಲ್ಲಿ ಮನುಷ್ಯರು ತೊಡುವ ಬಟ್ಟೆಯ ಬಣ್ಣ ಎಷ್ಟು ನಿರ್ಣಾಯಕವಾಗಿದೆ ಎಂದರೆ ಅದು ಘೋರ ಅಪರಾಧವನ್ನು ರಕ್ಷಿಸುವ ರಕ್ಷಾಕವಚವೂ ಆಗುತ್ತದೆ ಹಾಗೆಯೇ ಅಮಾಯಕರನ್ನು ಶಿಕ್ಷೆಗೊಳಪಡಿಸುವ ಕಾರಣವೂ ಆಗುತ್ತದೆ. ನಮ್ಮ ಬಣ್ಣದ ವ್ಯಸನ ಸಿನಿಮಾತಾರೆಯರು ಧರಿಸುವ ಒಳಉಡುಪುಗಳವರೆಗೂ ತಲುಪಿರುವುದು ನಮ್ಮನ್ನು ಕಾಡುತ್ತಿರುವ ಬೌದ್ಧಿಕ ದಾರಿದ್ರ್ಯದ ಲಕ್ಷಣವಲ್ಲವೇ ? 2022 ಇದಕ್ಕೆ ಸಾಕ್ಷಿಯಾಗಿದೆ.

ಹೊಸ ವರ್ಷದ ಹೊಸ್ತಿಲಲ್ಲಿ ಶುಭಾಶಯಗಳನ್ನು ಕೋರುವುದು ಸಹಜ ಪ್ರಕ್ರಿಯೆ ಆದರೆ ಇದನ್ನೂ ಮೀರಿ ನಾವು, ಈ ಹೊಸ ವರುಷದ ಸಂಭ್ರಮದಲ್ಲಿ ನಾವು ಎಳೆಯ ಮಕ್ಕಳಿಗೆ, ಯುವ ಸಮೂಹಕ್ಕೆ, ಹೆಣ್ಣು ಮಕ್ಕಳಿಗೆ ಹಾಗೂ ಸಾಮಾಜಿಕವಾಗಿ ಅಂಚಿಗೊತ್ತಲ್ಪಟ್ಟಿರುವ ಶೋಷಿತ ಸಮುದಾಯದ ಮಕ್ಕಳಿಗೆ ಯಾವ ಸಂದೇಶ ನೀಡಬೇಕು ಎಂದು ಯೋಚಿಸಬೇಕಲ್ಲವೇ ? 2021ರಲ್ಲಿ ಕರ್ನಾಟಕದಲ್ಲಿ , ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತರನ್ನು ರಕ್ಷಿಸಲೆಂದೇ ಇರುವ ಪೋಕ್ಸೋ ಕಾಯ್ದೆಯಡಿ 2813 ಪ್ರಕರಣಗಳು ವರದಿಯಾಗಿವೆ. ಅಂದರೆ 2022ರಲ್ಲಿ ಅವೆಲ್ಲವೂ ಜೀವಂತವಾಗಿವೆ ಎಂದಾಯಿತಲ್ಲವೇ. ಕಳೆದ ವರ್ಷದ ಬೆಳವಣಿಗೆಗಳನ್ನು ಗಮನಿಸಿದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು. ಮಳವಳ್ಳಿಯಿಂದ ನರಗುಂದದವರೆಗೆ ಶಾಲಾ ಮಕ್ಕಳು ಲೈಂಗಿಕ ದೌರ್ಜನ್ಯ, ಮಾರಣಾಂತಿಕ ಹಲ್ಲೆ, ಅಸ್ಪೃಶ್ಯತೆಯ ಹೀನಾಚರಣೆಗಳನ್ನು ಎದುರಿಸುತ್ತಿರುವುದಕ್ಕೆ 2022 ಸಾಕ್ಷಿಯಾಗಿದೆ. ಬಡತದ ಕಾರಣದಿಂದಲೇ ಜನತೆಗೆ ಆಕರ್ಷಣೀಯವಾಗಿ ಕಾಣುವ, ಮಕ್ಕಳನ್ನು ಸೆಳೆಯುವ ತ್ರಿದಾಸೋಹ ಕೇಂದ್ರಗಳು ಅತ್ಯಾಚಾರ ಮತ್ತು ದೌರ್ಜನ್ಯದ ಕೇಂದ್ರವಾಗಿರುವ ಒಂದು ದುರಂತವನ್ನೂ 2022 ನಮ್ಮ ಮುಂದಿಟ್ಟಿದೆ.
2023ರ ಹೊಸ್ತಿಲಲ್ಲಿ ನಿಂತಿರುವ ಎಳೆಯ ಪೀಳಿಗೆ ನಾವು ಯಾವ ರೀತಿಯ ಭರವಸೆಯನ್ನು ನೀಡಲು ಸಜ್ಜಾಗಿದ್ದೇವೆ ? ಚಾರಿತ್ರಿಕ ವೈಪರೀತ್ಯಗಳನ್ನು ಸಮಕಾಲೀನ ಸಮಾಜದ ಚೌಕಟ್ಟಿನಲ್ಲಿಟ್ಟು ನೋಡುತ್ತಿರುವ ನಾವು ಕಣ್ಣೆದುರಿನ ವೈಪರೀತ್ಯಗಳನ್ನೇ ನಿರ್ಲಕ್ಷಿಸಿ ಮನುಜ ಸಮಾಜವನ್ನು ಮತ್ತಷ್ಟು ವಿಘಟನೆಗೆ ತಳ್ಳುವ ಗೋಡೆಗಳನ್ನು ಕಟ್ಟುತ್ತಿದ್ದೇವೆ. ಈ ವಿಕೃತ ಪರಂಪರೆಗೆ ಒಂದು ಇಡೀ ಪೀಳಿಗೆಯೇ ಬಲಿಯಾಗಲಿದೆ. ಏಕೆಂದರೆ ಸ್ವಾರ್ಥ ರಾಜಕಾರಣ ಮತ್ತು ಸಾಂಸ್ಕೃತಿಕ ಯಜಮಾನಿಕೆಯ ಪರಿಣಾಮ, ಚಾರಿತ್ರಿಕ ಸತ್ಯಗಳನ್ನು ಅಲ್ಲಗಳೆದು ಸುಳ್ಳುಗಳನ್ನು ವೈಭವೀಕರಿಸುವ ಒಂದು ವಿಕೃತ ಪರಂಪರೆಗೆ 2022ರಲ್ಲಿ ನಾಂದಿ ಹಾಡಿದ್ದೇವೆ. ಹಾಗಾಗಿಯೇ ಒಂದು ವ್ಯಾಧಿಯಂತೆ ಹರಡುತ್ತಿರುವ ಸಾಮಾಜಿಕ ಕ್ರೌರ್ಯ ತನ್ನ ಮೂಲವನ್ನು ಚರಿತ್ರೆಯ ಪುಟಗಳಲ್ಲಿ ಕಂಡುಕೊಳ್ಳುತ್ತಿದೆ. ಶ್ರದ್ಧಾವಾಲ್ಕರ್ ಪ್ರಕರಣಕ್ಕೂ, ಕಲ್ಲುಗಣಿಯ ದುರಂತಕ್ಕೂ, ನರಗುಂದದ ಶಾಲೆಯ ಪ್ರಕರಣಕ್ಕೂ ನಡುವೆ ಇರುವ ಅಂತರ ಕಡಿಮೆಯಾಗುತ್ತಿದ್ದು, ಎಲ್ಲವೂ ಸಹ ನಮ್ಮ ಸಮಾಜವನ್ನು ಒಳಗಿನಿಂದಲೇ ಕೊರೆಯುತ್ತಿರುವ ದ್ವೇಷಾಸೂಯೆಗಳ ಸಂಕೇತವಾಗಿಯೇ ಕಾಣುತ್ತಿದೆ. ಈ ದ್ವೇಷಾಸೂಯೆಗಳಿಗೆ ನಾವು ನೀಡುತ್ತಿರುವ ಜಾತಿ, ಮತ, ಧರ್ಮ ಮತ್ತು ಲಿಂಗತ್ವದ ಭೂಮಿಕೆಗಳು ಭವಿಷ್ಯದ ಸಮಾಜಕ್ಕೆ ಯಾವ ಸಂದೇಶವನ್ನು ನೀಡಲು ಸಾಧ್ಯ ?
ಪಿತೃ ಪ್ರಧಾನ ವ್ಯವಸ್ಥೆಯ ಸಾಮಾಜಿಕ-ಸಾಂಸ್ಕೃತಿಕ ದೌರ್ಜನ್ಯ, ಮಾರುಕಟ್ಟೆ ಆರ್ಥಿಕತೆಯ ಕ್ರೂರ ಬಾಹುಗಳು, ಮತೀಯವಾದ ಮತ್ತು ಮತಾಂಧತೆಯ ಕರಾಳ ಬಾಹುಗಳು, ಜಾತಿ ಶ್ರೇಷ್ಠತೆಯ ವ್ಯಸನ ಮತ್ತು ಅಧಿಕಾರ ರಾಜಕಾರಣದ ಪೀಠದಾಹ ಇವೆಲ್ಲವೂ 2022ರ ವರ್ಷದಲ್ಲಿ ಭಾರತದ ಮತ್ತೊಂದು ಮುಖವಾಡವನ್ನು ನಮ್ಮ ಮುಂದಿಟ್ಟಿದೆ. 2023ರ ಹೊಸ ವರ್ಷವನ್ನು ಸ್ವಾಗತಿಸಲು ನಾವು ನಿರ್ಮಿಸಬೇಕಿರುವ ಕಮಾನುಗಳಲ್ಲಿ ಇವೆಲ್ಲವನ್ನೂ ಹೊರಗಿಟ್ಟ ತೋರಣವೊಂದನ್ನು ಕಟ್ಟಬೇಕಿದೆ. ಈ ತೋರಣದ ಪ್ರತಿಯೊಂದು ಎಲೆಯೂ ಪ್ರಜಾತಂತ್ರ , ಸಂವಿಧಾನ, ಮಾನವತೆ , ಸೋದರತ್ವ ಮತ್ತು ಮಾನವ-ಸ್ತ್ರೀ ಸಂವೇದನೆಯ ಸೂಕ್ಷ್ಮಗಳನ್ನು ಬಿಂಬಿಸುವಂತೆ ಮಾಡೋಣ. ಇಲ್ಲವಾದರೆ ಭವಿಷ್ಯದ ಪೀಳಿಗೆ ಮತ್ತು ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ. ಈ ಆತ್ಮಾವಲೋಕನದೊಂದಿಗೇ 2022ಕ್ಕೆ ವಿದಾಯ ಹೇಳೋಣ.