ಸ್ಟೀವ್ ಲೆವಿಟ್ಸ್ಕಿ ಮತ್ತು ಡೇನಿಯಲ್ ಜಿಬ್ಲಾಟ್ ಅವರು ತಮ್ಮ ‘ಹೌ ಡೆಮಾಕ್ರಸೀಸ್ ಡೈ’ ಎನ್ನುವ ತಮ್ಮ ಪ್ರಸಿದ್ಧ ಕೃತಿಯ ‘ಯೂಸ್‌ಫುಲ್ ಅಲೆಯನ್ಸಸ್’ ಎನ್ನುವ ಅಧ್ಯಾಯದಲ್ಲಿ ವರ್ಚಸ್ವಿ ಪ್ರಬಲ ನಾಯಕರು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಸಣ್ಣ ಪಕ್ಷಗಳನ್ನು ಬಳಸಿಕೊಂಡು ನಂತರ ಅವುಗಳನ್ನು ಹೇಗೆ ಮೂಲೆಗುಂಪು ಮಾಡುತ್ತಾರೆ ಎಂಬುವುದರ ಬಗ್ಗೆ ವಿವರಿಸಿದ್ದಾರೆ. ಈಗ ಬಿಜೆಪಿ ನೇತೃತ್ವದ ಎನ್‌ಡಿಎಯಲ್ಲೂ ಇದೇ ರೀತಿಯ ನೀತಿಕಂಡು ಬರುತ್ತಿದ್ದು ರಾಜಕೀಯ ಪಂಡಿತರು ಬಿಜೆಪಿಯ ನಡೆಯನ್ನು ‘ಧೃತರಾಷ್ಟ್ರ ಆಲಿಂಗನ’ ಎಂದು ಕರೆಯುತ್ತಿದ್ದಾರೆ.
2014 ರಲ್ಲಿ ನರೇಂದ್ರ ಮೋದಿಯವರು ತಮ್ಮ ಮೊದಲ ಸರ್ಕಾರವನ್ನು ರಚಿಸಿದಾಗ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸುಮಾರು ಎರಡು ಡಜನ್ ರಾಜಕೀಯ ಪಕ್ಷಗಳ ಬೆಂಬಲವನ್ನು ಹೊಂದಿತ್ತು. ಆದರೆ ಕೆಲವೇ ವರ್ಷಗಳಲ್ಲಿ, ಅವರಲ್ಲಿ ಹೆಚ್ಚಿನವರು ಒಕ್ಕೂಟವನ್ನು ತೊರೆದಿದ್ದಾರೆ. ಅವುಗಳಲ್ಲಿ 16 ಸಂಸದರನ್ನು ಹೊಂದಿರುವ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಯಂತಹ ಪಕ್ಷಗಳೂ ಇದ್ದವು . ಈಗ ಪ್ರಧಾನಿಗೆ ನಮ್ಮನ್ನು ಭೇಟಿಯಾಗಲೂ ಸಮಯವಿಲ್ಲ ಎಂದು ಚಂದ್ರಬಾಬು ನಾಯ್ಡು ವಿಷಾದ ವ್ಯಕ್ತಪಡಿಸುತ್ತಾರೆ. ಬಿಜೆಪಿಯ ಅತ್ಯಂತ ಹಳೆಯ ಮಿತ್ರ ಶಿವಸೇನೆ, ಎಲ್‌ಜೆಪಿ, ಅಕಾಲಿ ದಳ, ಜೆಡಿಯು, ಅಪ್ನಾ ದಳ, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ ನಂತಹ ಹಲವು ಪಕ್ಷಗಳು ಬಿಜೆಪಿಯ ಸಖ್ಯ ಮಾಡಿಯೇ ಒಂದು ರೀತಿಯಲ್ಲಿ ತೊಂದರೆ ಅನುಭವಿಸುತ್ತಿವೆ.
ಇಷ್ಟೂ ಪಕ್ಷಗಳಲ್ಲಿ ಬಿಜೆಪಿಯ ಏಟಿಗೆ ಸರಿಯಾಗಿ ಎದಿರೇಟು ನೀಡಲು ಸಾಧ್ಯವಾಗಿದ್ದು ಶಿವಸೇನೆಗೆ ಮಾತ್ರ. ಅವರು ಬಿಜೆಪಿಯಿಂದ ಅವಮಾನಿತರಾದಾಗ ಮೋದಿ ವಿರುದ್ಧ ಬಂಡಾಯವೆದ್ದರು. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಾಂಗ್ರೆಸ್‌ನಂತಹ ಬಿಜೆಪಿ ವಿರೋಧಿ ಪಕ್ಷಗಳೊಂದಿಗೆ ಮಾತುಕತೆ ನಡೆಸಿ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಅನ್ನು ರಚಿಸಿ ಸ್ವತಃ ತಾವೇ ಮುಖ್ಯಮಂತ್ರಿಯಾದರು. ಅಮಿತ್ ಶಾ ಅವರು ಈ ಸರ್ಕಾರ ಬಹುಬೇಗ ಪತನವಾಗಲಿದೆ ಎಂದೇ ಲೆಕ್ಕಾಚಾರ ಹಾಕಿದ್ದರು. ಆದರೆ ಎಲ್ಲಾ ಲೆಕ್ಕಾಚಾರಗಳಿಗೆ ವಿರುದ್ಧವಾಗಿ, ಎಂವಿಎ ಸರ್ಕಾರ ಪತನವಾಗಲಿಲ್ಲ.
ಇದಕ್ಕೆ ವಿರುದ್ಧವಾಗಿ, ಮೈತ್ರಿಯ ಸ್ಥಿರತೆಯು ಮಹಾರಾಷ್ಟ್ರದಲ್ಲಿ ಬಿಜೆಪಿಯ ಸರಣಿ ಪಕ್ಷಾಂತರಕ್ಕೆ ಕಾರಣವಾಯಿತು. ಕಳೆದ ವರ್ಷ ಫೆಬ್ರವರಿಯಲ್ಲಿ ಅಮಿತ್ ಶಾ ಅವರ ಭೇಟಿಯ ನಂತರ, ಏಳು ಬಿಜೆಪಿ ಕೌನ್ಸಿಲರ್‌ಗಳು ಪಕ್ಷವನ್ನು ತೊರೆದರು. ನಂತರ, ಆರು ಬಿಜೆಪಿ ಕಾರ್ಪೊರೇಟರ್‌ಗಳು ಶಿವಸೇನೆಗೆ ಪಕ್ಷಾಂತರಗೊಂಡರು ಮತ್ತು ನಾಂದೇಡ್‌ನ ಮಾಜಿ ಬಿಜೆಪಿ ಸಂಸದರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರಿದರು.
ಕಳೆದ ಜನವರಿಯಲ್ಲಿ ಮೋದಿ ವಿರುದ್ಧ ಟೀಕೆ ಮಾಡುತ್ತಾ ಠಾಕ್ರೆಯವರು ಬಿಜೆಪಿಯ ಯೂಸ್ ಅಂಡ್ ಥ್ರೋ’ ನೀತಿಯನ್ನು ಬಹಿರಂಗಪಡಿಸಿ “ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಿದ್ದ ದಿನಗಳು ನೆನಪಿದೆಯೇ? ಆ ಸಮಯದಲ್ಲಿ ಅವರಿಗೆ ನಾವು ಮತ್ತು ಅಕಾಲಿದಳ, ಟಿಎಂಸಿಯಂತಹ ಇತರ ಪ್ರಾದೇಶಿಕ ಪಕ್ಷಗಳು ಬೇಕಾಗಿದ್ದವು. ಆದರೆ ಈಗ ಈ ನವ-ಹಿಂದುತ್ವವಾದಿಗಳು ಹಿಂದುತ್ವವನ್ನು ಕೇವಲ ತಮ್ಮ ಲಾಭಕ್ಕಾಗಿ ಬಳಸುತ್ತಿದ್ದಾರೆ” ಎಂದು ಹೇಳಿದ್ದರು. ಅಲ್ಲದೆ ಶಿವಸೇನೆಯು ಎನ್‌ಡಿಎಯಲ್ಲಿ 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ವಿಷಾದಿಸಿದ್ದರು.
ಕೊನೆಪಕ್ಷ ಠಾಕ್ರೆ ಅವರು ತಡವಾಗುವ ಮುನ್ನವೇ ಎಚ್ಚೆತ್ತಿದ್ದರು. ಆದರೆ ಸುದೀರ್ಘ ಇತಿಹಾಸ ಇರುವ ಅಕಾಲಿದಳ ಮೋದಿ ಬ್ರಾಂಡ್ ರಾಜಕಾರಣಕ್ಕೆ ಕುರುಡು ಬೆಂಬಲ ನೀಡಿ ಈಗ ತನ್ನ ಅಸ್ತಿತ್ವಕ್ಕೇ ಸಂಚಕಾರ ತಂದಿದೆ. ಪಂಜಾಬಿ ಸುಬಾ ಮತ್ತು ರೈತ ಚಳವಳಿಗಳಂತಹ ಅದ್ಭುತ ಹೋರಾಟಗಳನ್ನು ನಡೆಸಿದ ಪಕ್ಷವು ಈಗ ನಾಲ್ಕನೇ ಅಥವಾ ಐದನೇ ಸ್ಥಾನಕ್ಕೆ ಬರಲೇ ಹೆಣಗಾಡುತ್ತಿದೆ. ಮೋದಿ ಸರ್ಕಾರವು SAD ಅನ್ನು ಎಷ್ಟು ಮೂಲೆಗುಂಪು ಮಾಡಿತು ಎಂದರೆ ಮೂರು ಫಾರ್ಮ್ ಬಿಲ್‌ಗಳಂತಹ ನಿರ್ಧಾರಗಳನ್ನು ಪ್ರಕಟಿಸುವ ಮೊದಲು ಅದು ಆ ಪಕ್ಷದಜೊತೆ ಕನಿಷ್ಠ ಸಮಾಲೋಚಿಸಲೂ ಇಲ್ಲ. ಮೂರು ಮಸೂದೆಗಳು ಔಪಚಾರಿಕವಾಗಿ ಕ್ಯಾಬಿನೆಟ್ ಅನುಮೋದನೆಗೆ ಬಂದಾಗ ಅದರ ಸಚಿವರು ಪ್ರತಿಭಟಿಸಲಿಲ್ಲ. ಇಡೀ ಸಿಖ್ ರೈತರು ಬೀದಿಗಿಳಿದಾಗ ಮಾತ್ರ ಪಕ್ಷವು ವಿರೋಧಿಸಿತು. ಆದರೆ ಅಷ್ಟೊತ್ತಿಗಾಗಲೇ ತುಂಬಾ ತಡವಾಗಿತ್ತು.
ಕಳೆದ ಅಸೆಂಬ್ಲಿ (2017) ಮತ್ತು 2019 ರ ಲೋಕಸಭೆ ಚುನಾವಣೆ ಮತ್ತು ಸಿವಿಕ್ ಚುನಾವಣೆಗಳಲ್ಲಿ ಅದರ ನೀರಸ ಪ್ರದರ್ಶನವು ಬಿಜೆಪಿ ಜೊತೆಗಿನ ಮೈತ್ರಿಯ ಬಗ್ಗೆ SAD ನಾಯಕರಿಗೆ ಎಚ್ಚರಿಕೆ ನೀಡಿತ್ತು. ಆಮ್ ಆದ್ಮಿ ಪಕ್ಷವು ಪಂಜಾಬ್‌ನ ಈ ಹಳೆಯ ಪಕ್ಷಕ್ಕಿಂತ (18) ಹೆಚ್ಚು ಸ್ಥಾನಗಳನ್ನು (20) ವಿಧಾನಸಭೆಯಲ್ಲಿ ಪಡೆದುಕೊಂಡಿತ್ತು. ಆಗಲಾದರೂ ಪಕ್ಷದ ನಾಯಕರು ಎಚ್ಚೆತ್ತುಕೊಂಡಿದ್ದರೆ ಈಗ ಸಾರ್ವಜನಿಕ ಕ್ರೋಧಕ್ಕೆ ಹೆದರಿ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವ ಸ್ಥಿತಿ ಬರುತ್ತಿರಲಿಲ್ಲ.
ಎಲ್‌ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರು ಮೋದಿ ಆಡಳಿತದ ಉತ್ಸಾಹಿ ಸಹವರ್ತಿಯಾಗಿದ್ದರು. ಅವರು 2020 ರ ಅಕ್ಟೋಬರ್‌ನಲ್ಲಿ ನಿಧನ ವಾಗುವವರೆಗೂ NDA ಯ ಎಲ್ಲಾ ವಿಭಜಕ ಉಪಕ್ರಮಗಳನ್ನು ಸಮರ್ಥಿಸಿಕೊಂಡರು. ಆದರೆ ಪಾಸ್ವಾನ್ ನಿಧನದ ನಂತರ ಪಾಸ್ವಾನ್ ಅವರ ವೋಟ್ ಬ್ಯಾಂಕನ್ನು ಬಿಜೆಪಿಯ ಮತಗಳಾಗಿ ಪರಿವರ್ತಿಸಲು ಪಕ್ಷವನ್ನು ಒಡೆದು ಪಶುಪತಿನಾಥ್ ಪಾಸ್ವಾನರನ್ನು ಚಿರಾಗ್ ಪಾಸ್ವಾನರ ವಿರೋಧಿ ಎಂಬಂತೆ ಬಿಂಬಿಸಿದರು. ಕಾನೂನು ಹೋರಾಟದ ನಂತರ, ಚುನಾವಣಾ ಆಯೋಗವು ಎರಡು ಪಕ್ಷಗಳನ್ನು ಪ್ರತ್ಯೇಕ ಪಕ್ಷಗಳಾಗಿ ಗುರುತಿಸಿತು ಮತ್ತು ಅವರಿಗೆ ತಮ್ಮದೇ ಆದ ಚಿಹ್ನೆಗಳನ್ನು ನೀಡಿತು. ಆದರೆ ಕಳೆದ ವರ್ಷದ ಸೆಪ್ಟೆಂಬರ್‌ನಿಂದ, ನವದೆಹಲಿಯಲ್ಲಿ ಬದಲಾವಣೆಯ ಸೂಚನೆಗಳು ಕಂಡುಬಂದವು. ಚಿಕ್ಕಪ್ಪನ ಕ್ಷೇತ್ರದಲ್ಲೂ ಚಿರಾಗ್ ಭಾರೀ ಜನಬೆಂಬಲ ಪಡೆಯುವುದರೊಂದಿಗೆ ಪಶುಪತಿನಾಥರನ್ನು ಬಳಸುವ ಮೂಲ ಸೂತ್ರ ಮತ್ತೆ ಹಾದಿ ತಪ್ಪಿತು. ಅಗಲಿದ ನಾಯಕನ ಮಗನ ಕಡೆಗೆ ಸ್ಥಳೀಯ ಸಮುದಾಯದ ಮುಖಂಡರು ಒಲವು ತೋರಿದರು. ಇನ್ನೊಂದೆಡೆ ಚಿರಾಗ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕುಡಿ ತೇಜಸ್ವಿ ಯಾದವ್ ನಡುವಿನ ಮಹಾಮೈತ್ರಿಕೂಟದ ಅಪಾಯಗಳು ಬಿಜೆಪಿಯನ್ನು ಕಾಡತೊಡಗಿದೆ.
ಮಾರ್ಚ್ 2015 ರಿಂದ ಜೂನ್ 2018 ರವರೆಗೆ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಜೊತೆಗಿನ ಬಿಜೆಪಿಯ ಅಲ್ಪಾವಧಿಯ ಒಕ್ಕೂಟವು ವಿಭಿನ್ನ ರೀತಿಯ ಮೈತ್ರಿಯಾಗಿತ್ತು. ಎರಡೂ ಕಡೆಯವರು ಮಿತಿಗಳನ್ನು ತಿಳಿದಿದ್ದರು, ಆದರೆ ಅಧಿಕಾರಕ್ಕಾಗಿ ಇಬ್ಬರೂ ಒಂದಾದರು. ಮೆಹಬೂಬಾ ಮುಫ್ತಿ ಅವರು ಒಕ್ಕೂಟವನ್ನು ವಿರೋಧಿಸಿದ್ದರು ಆದರೆ ಅವರ ತಂದೆ ಅದನ್ನು ಪ್ರಯೋಗಿಸಬಯಸಿದರು. ಇಡೀ ಸರ್ಕಾರವನ್ನು ತನ್ನೊಂದಿಗೆ ಒಯ್ಯಬಲ್ಲ ನಾಯಕನಾಗಿ ಮೋದಿಯವರು ಪಾಕಿಸ್ತಾನದೊಂದಿಗೆ ಫಲಪ್ರದ ಮಾತುಕತೆಯನ್ನು ಪ್ರಾರಂಭಿಸಬಹುದು ಮತ್ತು ಕಾಶ್ಮೀರದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದ್ದರು. ಆದರೆ “ಇದು ಒಂದು ಕಪ್ ವಿಷವನ್ನು ಕುಡಿದಂತೆ” ಎಂದು ಒಕ್ಕೂಟವನ್ನು ತೊರೆದ ನಂತರ ಮೆಹಬೂಬಾ ಹೇಳಿಕೆ ನೀಡಿದರು.
ಲೆವಿಟ್‌ಸ್ಕಿ ಮತ್ತು ಝಿಬ್ಲಾಟ್‌ರ ಬ’ಳಕೆ ಮತ್ತು ತಿರಸ್ಕರಿಸುವಿಕೆ’ಗೆ ಮತ್ತೊಂದು ಉದಾಹರಣೆ ನಿತೀಶ್ ಕುಮಾರ್ . ಲಾಲು ಅವರ ಆರ್‌ಜೆಡಿಗೆ ಪ್ರತ್ಯುತ್ತರ ನೀಡಲು ನಿತೀಶ್ ಅವರನ್ನು ಮುಖ್ಯಮಂತ್ರಿಯಾಗಿ ಬಿಂಬಿಸಿದಾಗ, ಅವರ ಜೆಡಿಯು ಅತಿದೊಡ್ಡ ಏಕೈಕ ಪಕ್ಷವಾಗಿತ್ತು. ಧೃತರಾಷ್ಟ್ರನ ಆಲಿಂಗನ ಬಿಗಿಯಾಗುತ್ತಿದ್ದಂತೆ, ನಿತೀಶ್ ಅವರ ಜನಪ್ರಿಯತೆ ಕುಸಿಯಿತು ಮತ್ತು ಬಿಜೆಪಿಗೆ ಲಾಭವಾಯಿತು. ಹೀಗಾಗಿ, 2020 ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 74 ಶಾಸಕರೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಜೆಡಿಯು 45ಕ್ಕೆ ಕುಸಿದಿತ್ತು.
ಅಂದಿನಿಂದ, ರಾಜ್ಯ ಬಿಜೆಪಿ ನಾಯಕರು ನಿತೀಶ್ ಕುಮಾರ್ ಅವರನ್ನು ದುರ್ಬಲ ನಾಯಕ ಎಂದು ಪರಿಗಣಿಸಲು ಪ್ರಾರಂಭಿಸಿದರು. ಸದ್ಯಕ್ಕೆ, ನಿತೀಶ್‌ರ ನೇರ ಉಚ್ಚಾಟನೆ ಬಿಜೆಪಿಯ ಅಜೆಂಡಾದಲ್ಲಿ ಇಲ್ಲದಿರಬಹುದು. ಮುಖ್ಯಮಂತ್ರಿಯ ಬಲವನ್ನು ಕ್ಷೀಣಿಸುವುದು, ಅವರ ಅಧಿಕಾರವನ್ನು ದುರ್ಬಲಗೊಳಿಸುವುದು ಮತ್ತು ಬಿಜೆಪಿಯ ರಾಜಕೀಯ ಮಾರ್ಗವನ್ನು ಅನುಸರಿಸುವಂತೆ ಒತ್ತಾಯಿಸುವುದು ನಿಚ್ಚಳವಾಗಿ ಕಾಣುತ್ತಿದೆ.
ರಾಜಕೀಯ ಪಟ್ಟುಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುವ ನಿತೀಶ್‌ಗೆ ‘ಕೈಗೊಂಬೆ’ ಮುಖ್ಯಮಂತ್ರಿಯಾಗುವುದರ ಅಪಾಯಗಳು ತಿಳಿದಿರಬೇಕಿತ್ತು. ಆದರೆ ಅವರು ಬಿಜೆಪಿ ಸಹಕಾರದೊಂದಿಗೆ ಮತ್ತೆ ಮುಖ್ಯಮಂತ್ರಿಯಾದರು. ಈಗ ಉಪಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಸಚಿವರು ಪ್ರತಿಯೊಂದು ಕ್ಷುಲ್ಲಕ ವಿಚಾರವನ್ನು ಬಳಸಿಕೊಂಡು ಅವರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ನಿತೀಶ್ ಅವರು ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಕೇಂದ್ರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಅವರ ಉಪಮುಖ್ಯಮಂತ್ರಿ ಸಾರ್ವಜನಿಕವಾಗಿ ಈ ಕಲ್ಪನೆಯನ್ನು ನಿರಾಕರಿಸಿ ಮತ್ತು ಕೇಂದ್ರ ಸರ್ಕಾರದ ನಿಲುವನ್ನು ಬೆಂಬಲಿಸಿದ್ದು ನಿತೀಶ್ ಮೂಲೆಗುಂಪಾಗುತ್ತಿದ್ದಾರೆ ಎನ್ನುವುದಕ್ಕೆ ಉತ್ತಮ ಉದಾಹರಣೆ.
ನಿತೀಶ್ ಕುಮಾರ್ ಅವರ ಪ್ರಸ್ತುತ ಅಗ್ನಿಪರೀಕ್ಷೆಗಳು, ಚಿರಾಗ್ ಪಾಸ್ವಾನರನ್ನು ಮೂಲ ಗುಂಪಾಗಿಸಿದ್ದು , ಶಿರೋಮಣಿ ಅಕಾಲಿ ದಳದ ದುಸ್ಥತಿಯು ಇತರ ಬಲಾಢ್ಯ ಪಕ್ಷಗಳ ಅದರಲ್ಲೂ ಬಿಜೆಪಿಯಂತಹ ಸರ್ವಾಧಿಕಾರಿ ಪಕ್ಷದೊಂದಿಗೆ ಮೈತ್ರಿಯನ್ನು ಎದುರು ನೋಡುತ್ತಿರುವ ಎಲ್ಲಾ ಪಕ್ಷಗಳಿಗೆ ಎಚ್ಚರಿಕೆಯ ಗಂಟೆಯಾಗಲಿ.
ಇನ್ಪುಟ್ಸ್: ‘ದಿ ವೈರ್’