ಉತ್ತರ ಪ್ರದೇಶದ ಕಸಾಂಜ್ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಉತ್ತರ ಪ್ರದೇಶದ ಪೊಲೀಸರು ವಿಚಾರಣೆಗೆ ಕರೆದಿದ್ದ ಮುಸ್ಲಿಂ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ. 16 ವರ್ಷದ ಹಿಂದೂ ಹುಡುಗಿ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 22 ವರ್ಷದ ಅಲ್ತಾಫ್ ಅವರನ್ನು ಅಹಿರೌಲಿ ಗ್ರಾಮದ ಅವರ ಮನೆಯಿಂದ ಪೊಲೀಸರು ಕರೆದೊಯ್ದಿದ್ದರು. ಬಾಲಕಿಯ ಕುಟುಂಬದವರು ಅಲ್ತಾಫ್ ಬಾಲಕಿಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿದ್ದರು ಮತ್ತು ಪೊಲೀಸರು ಐಪಿಸಿ ಸೆಕ್ಷನ್ 363 (ಅಪಹರಣ) ಮತ್ತು 366 (ಮಹಿಳೆಯನ್ನು ಮದುವೆಯಾಗುವಂತೆ ಒತ್ತಾಯಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ ಅಲ್ತಾಫ್ ಮತ್ತು ಅಪ್ರಾಪ್ತ ಹುಡುಗಿಯ ನಡುವೆ ಪ್ರೀತಿ- ಪ್ರೇಮದ ಸಂಬಂಧವಿತ್ತು. ಹಾಗಾಗಿಯೇ ಅಲ್ತಾಫ್ ಹುಡುಗಿಯನ್ನು ಅಪಹರಿಸಿದ್ದಾನೆ. ಇದಕ್ಕೆ ಸಾಕ್ಷಿಯಾಗಿ ಇಬ್ಬರ ನಡುವಿನ ಮೊಬೈಲ್ ಕರೆಯ ಮಾಹಿತಿಯನ್ನು ಪೊಲೀಸರು ಹಂಚಿಕೊಂಡಿದ್ದಾರೆ. ಆದರೆ ಹುಡುಗಿಯ ಮನೆಯವರು ಇದನ್ನು ಸ್ಪಷ್ಟವಾಗಿ ನಿರಾಕರಿಸುತ್ತಿದ್ದು ಹುಡುಗಿಗೆ ಅಲ್ತಾಫ್‌ನ ಪರಿಚಯವೇ ಇರಲಿಲ್ಲ ಎನ್ನುತ್ತಿದ್ದಾರೆ.
ಕಸಂಜ್ ಪೊಲೀಸ್ ಅಧೀಕ್ಷಕ (ಎಸ್‌ಪಿ) ಬೋಟ್ರೆ ರೋಹನ್ ಪ್ರಮೋದ್ ಪ್ರಕಾರ ಪೊಲೀಸ್ ವಿಚಾರಣೆಯ ಸಮಯದಲ್ಲಿ ಅಲ್ತಾಫ್ ಬಾತ್ರೂಮ್‌ಗೆ ಹೋಗಲು ಅನಮತಿ ಕೇಳಿದಾಗ ಅನುಮತಿ ನೀಡಲಾಗಿತ್ತು. ಎಷ್ಟು ಹೊತ್ತಾದರೂ ಆತ ಹಿಂದಿರುಗಲಿಲ್ಲ ಎಂದಾಗ ಪೊಲೀಸ್ ಸಿಬ್ಬಂದಿ ಅವನನ್ನು ಹುಡುಕಲು ಹೋದಾಗ ಕತ್ತಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಅವರ ಪ್ರಕಾರ, ಅಲ್ತಾಫ್ ತನ್ನ ಜಾಕೆಟ್‌ನಿಂದ ಡ್ರಾಸ್ಟ್ರಿಂಗ್ ಬಳಸಿ ಸ್ನಾನದ ಟ್ಯಾಪ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಧಿಕಾರಿಗಳು ಆತನನ್ನು ಪತ್ತೆ ಹಚ್ಚಿದಾಗ ಅಲ್ತಾಫ್ ಉಸಿರಾಡುತ್ತಿದ್ದ, ಹೀಗಾಗಿ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಆದರೆ ಅವರು ಬದುಕುಳಿಯಲಿಲ್ಲ ಎಂದು ಪ್ರಮೋದ್ ಹೇಳಿಕೊಂಡಿದ್ದಾರೆ. ಶವಪರೀಕ್ಷೆಯ ವರದಿಯು ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದನ್ನು ಪುಷ್ಟೀಕರಿಸಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಮತ್ತು ಅಲ್ತಾಫ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಸ್ವತಃ ಅವರ ಕುಟುಂಬವೇ ಲಿಖಿತವಾಗಿ ಪೊಲೀಸರಿಗೆ ಹೇಳಿದ್ದರು ಎಂಬುವುದು ಪೊಲೀಸರ ಆರೋಪ.
ಅಲ್ತಾಫ್ ಅವರ ಕುಟುಂಬವು ಆತ್ಮಹತ್ಯೆಯ ಸಾಧ್ಯತೆಯನ್ನು ಅಲ್ಲಗೆಳೆದಿದೆ. ಅಲ್ತಾಫ್ ನೇಣು ಹಾಕಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿಕೊಂಡ ಟ್ಯಾಪ್ ಕೇವಲ ಎರಡು ಅಥವಾ ಮೂರು ಅಡಿಗಳಷ್ಟು ಮಾತ್ರ ನೆಲದಿಂದ ಮೇಲಿದೆ ಎಂಬುವುದು ಅವರ ಆರೋಪ. ಮಂಗಳವಾರ ರಾತ್ರಿ ಅಲ್ತಾಫ್ ತಂದೆ ಚಾಂದ್ ಮಿಯಾನ್ ಅವರು ತಮ್ಮ ಮಗನನ್ನು ಪೊಲೀಸರು ಕೊಂದಿದ್ದಾರೆ ಎಂದು ಆರೋಪಿಸಿದ್ದರು. ಪೊಲೀಸರು ಅಲ್ತಾಫ್ ಅವರನ್ನು ಅವರ ಮನೆಯಿಂದ ಕರೆದೊಯ್ದಿದ್ದಾರೆ ಮತ್ತು ಮಿಯಾನ್ ಅವರನ್ನು ಭೇಟಿ ಮಾಡಲು ಹೋದಾಗ ಅವರಿಗೆ ಮುಖತಃ ಭೇಟಿಯಾಗುವ ಅವಕಾಶ ನೀಡಿರಲಿಲ್ಲ. ಮರುದಿನ ಅಲ್ತಾಫ್ ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ ಎನ್ನುವ ಮಿಯಾನ್ “ನನ್ನ ಮಗನನ್ನು ಗಲ್ಲಿಗೇರಿಸಿದ್ದು ಪೊಲೀಸರೇ” ಎಂದು ಹೇಳಿದ್ದರು.
ಆದರೆ ನಂತರ ವೀಡಿಯೊ ಒಂದನ್ನು ಬಿಡುಗಡೆ ಮಾಡಿರುವ ಅವರು ಪೊಲೀಸರ ಮೇಲೆ ಆರೋಪ ಮಾಡಿದ್ದಾಗ ತಾನು ಕೋಪದಲ್ಲಿದ್ದೆ ಮತ್ತು ಪೊಲೀಸರು ಮತ್ತು ವೈದ್ಯರೊಂದಿಗೆ ಮಾತನಾಡಿದ ನಂತರ, ಪೊಲೀಸರ ಕ್ರಮಗಳಿಂದ ‘ತೃಪ್ತನಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಅಲ್ತಾಫ್ ಅವರಂತೆ ಮಿಯಾನ್ ಕೂಡ ಕೂಲಿ ಕೆಲಸ ಮಾಡುತ್ತಾರೆ.

ಅಲ್ತಾಫ್‌ನ ಚಿಕ್ಕಪ್ಪ ಶೌಕತ್ ಅಲಿಯ ಪ್ರಕಾರ ಅಲ್ತಾಫ್ ಅವರದು ಅತ್ಯಂತ ಬಡ ಕುಟುಂಬವಾಗಿದ್ದು ಪೊಲೀಸ್ ದೌರ್ಜನ್ಯದ ವಿರುದ್ಧ ಹೋರಾಡುವ ಸಂಪತ್ತಾಗಲೀ ಶಕ್ತಿಯಾಗಲೀ ಅವರ ಕುಟುಂಬಕ್ಕಿಲ್ಲ. ಹಾಗಾಗಿ ಅವರ ತಂದೆ ಪೊಲೀಸರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಇದೊಂದೇ ಪ್ರಕರಣದಲ್ಲಿ ಮಾತ್ರ ಅಲ್ಲ, ದೇಶದ ಬಹುತೇಕ ಕಸ್ಟಡಿ ಸಾವುಗಳು ಸಾಕ್ಷಿಗಳಿಲ್ಲದೆ, ಸಾಕ್ಷಿಗಳು ತಿರುಗಿ ಬಿದ್ದು ಕೊನೆಗೊಂಡದ್ದೇ ಹೆಚ್ಚು. ಒಂದು ಹಂತದವರೆಗೆ ಹೋರಾಡುವ ಕುಟುಂಬಸ್ಥರು ಪೊಲೀಸರ ಬೆದರಿಕೆ, ದೌರ್ಜನ್ಯ ಮಿತಿ ಮೀರಿದಾಗ ಹೋರಾಟ ಕೈ ಬಿಟ್ಟು ಸುಮ್ಮನಾಗುತ್ತಾರೆ. ಅದರಲ್ಲೂ ಆಡಳಿತಾರೂಢರ ಹಿತಾಸಕ್ತಿ ಪೊಲೀಸರಿಗೆ ಬೆಂಬಲ ನೀಡುವುದರಲ್ಲೇ ಅಡಗಿರುವಾಗ ಇಂತಹ ಪ್ರಕರಣಗಳಲ್ಲಿ ನ್ಯಾಯ ಸಿಗುವುದು ಮರೀಚಿಕೆಯೇ. ಇತ್ತೀಚೆಗೆ ಅಸ್ಸಾಮಿನಲ್ಲಿ ನಿರಾಯುಧ ರೈತನೊಬ್ಬನ ಮೇಲೆ ಮುಸ್ಲಿಮನೆಂಬ ಏಕೈಕ ಕಾರಣಕ್ಕೆ ಪೊಲೀಸರು ಗೋಲಿಬಾರ್ ಮಾಡಿದ್ದು, ಪ್ರಭುತ್ವ ಆ ಪೊಲೀಸರನ್ನು ರಕ್ಷಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದು ಇದಕ್ಕೊಂದು ಸ್ಪಷ್ಟ ಉದಾಹರಣೆ.
ಇತ್ತೀಚೆಗೆ ಲೋಕಸಭೆಯಲ್ಲಿ ಮಂತ್ರಿಗಳೇ ಕೊಟ್ಟಿರುವ ಹೇಳಿಕೆಯ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ 1189 ಪೊಲೀಸ್ ಚಿತ್ರಹಿಂಸೆಯ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 348 ಜನ ಆರೋಪಿಗಳು ಪೊಲೀಸ್ ಚಿತ್ರಹಿಂಸೆಗೆ ಬಲಿಯಾಗಿ ಜೀವ ಕಳೆದುಕೊಂಡಿದ್ದಾರೆ. ‘ನ್ಯಾಷನಲ್ ಕಾಂಪೇನ್ ಎಗೆನ್ಸ್ಟ್ ಟಾರ್ಚರ್’ ಸಂಸ್ಥೆ ದಾಖಲಿಸಿರುವ ಅಂಕಿಅಂಶಗಳ ಪ್ರಕಾರ 2019ರಲ್ಲಿ 117 ಲಾಕಪ್ ಸಾವುಗಳು ಸಂಭವಿಸಿವೆ. ‘ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ’ ಪ್ರಕಾರ 2006-18ರ ನಡುವೆ ಸಂಭವಿಸಿರುವ 500 ಲಾಕಪ್ ಸಾವುಗಳ ಪ್ರಕರಣದಲ್ಲಿ ಯಾವೊಬ್ಬ ಆರೋಪಿಗೂ ಶಿಕ್ಷೆಯಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಅಲ್ತಾಫ್ ಅಥವಾ ಅವನಂಥವರ ಸಾವಿಗೆ ನ್ಯಾಯ ಸಿಗಬೇಕು ಎಂದು ನಿರೀಕ್ಷಿಸುವುದೇ ಹೊಸ ಭಾರತದಲ್ಲಿ ತಪ್ಪಾಗುತ್ತದೆ.






