ಬೆಂಗಳೂರು :ಏ.11: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎನ್ನುವುದು ದಿನಗಳು ಕಳೆದಂತೆ ನಿಧಾನವಾಗಿ ನಿಚ್ಚಳವಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಎಲ್ಲಾ ಸಾಧ್ಯಗಳನ್ನು ತೆಗೆದು ಹಾಕುವಂತಿಲ್ಲ. ಈ ನಡುವೆ ಡಿಕೆ ಶಿವಕುಮಾರ್ ಹೊಸ ದಾಳ ಉರುಳಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವುದಾದರೆ ನಿಮ್ಮ ನಿರ್ಧಾರ ಏನಿರುತ್ತೆ ಎನ್ನುವ ಪ್ರಶ್ನೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗ್ತೇನೆ ಎನ್ನುವುದಾದರೆ ನನ್ನ ಅಭ್ಯಂತರವಿಲ್ಲ ಎಂದಿದ್ದಾರೆ ಡಿ.ಕೆ ಶಿವಕುಮಾರ್. ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಪಕ್ಷಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಕೆಲವೊಮ್ಮೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಿದ್ದಾಗ ಸಿಕ್ಕಿಲ್ಲ. ಈ ಬಾರಿ ನಾನು ಮುಖ್ಯಮಂತ್ರಿ ಆಗ್ತೇನೆ ಎಂದರೆ ನಾನು ಹಾಗು ಸಿದ್ದರಾಮಯ್ಯ ಕೂಡ ಒಪ್ಪಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ಒಳಗೇ ಅಪಸ್ವರ ಕೇಳಿ ಬರುವಂತಾಗಿದೆ.
ದಲಿತ ಕಾರ್ಡ್ ಪ್ಲೇ ಮಾಡಿ ಡಿಕೆಶಿ ಹೊಸ ವರಸೆ..!
ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡ್ತೀವಿ ಅಂದ್ರೆ ನಿಮ್ಮ ನಿರ್ಧಾರ ಏನು ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ, ಅದು ಹಾಗೆಲ್ಲಾ ಆಗಲ್ಲ, ಆಯ್ಕೆಯಾಗಿರುವ ಶಾಸಕರು ತಮ್ಮ ಶಾಸಕಾಂಗ ಪಕ್ಷದ ನಾಯಕನ್ನು ಆಯ್ಕೆ ಮಾಡುತ್ತಾರೆ ಎಂದಿದ್ದರು. ಈ ಸುದ್ದಿ ಡಿ.ಕೆ ಶಿವಕುಮಾರ್ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿ ಮಾಡಲ್ಲ ಎನ್ನುವ ರೀತಿ ವರದಿ ಆಗಿತ್ತು. ಸಿದ್ದರಾಮಯ್ಯ ಅದೇ ವಿಚಾರವನ್ನು ಹೇಳಿದ್ದರೂ ಸುತ್ತಿಬಳಸಿ ಮಾತನಾಡಿದ್ದರು. ಆ ಹೇಳಿಕೆಗೆ ಕೌಂಟರ್ ಎನ್ನುವಂತೆ ಡಿ.ಕೆ ಶಿವಕುಮಾರ್ ದಿ ಪ್ರಿಂಟ್ ಜೊತೆಗೆ ಮಾತನಾಡಿದಾಗ ದಲಿತ ಸಿಎಂ ವಿಚಾರ ಪ್ರಸ್ತಾಪ ಆಗಿದ್ದು, ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದರೆ ನಾನು ಹಾಗು ಸಿದ್ದರಾಮಯ್ಯ ಇಬ್ಬರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಈ ಹೇಳಿಕೆ ಸಿದ್ದರಾಮಯ್ಯ ಬಣಕ್ಕೆ ಇರಿಸು ಮುರಿಸು ತಂದಿದ್ದು, ಡಿಕೆ ಶಿವಕುಮಾರ್ ಹೇಳಿಕೆಯ ಮರ್ಮವೇನು ಅನ್ನೋ ಬಗ್ಗೆ ಚರ್ಚೆಯಾಗ್ತಿದೆ.
ಸಿದ್ದರಾಮಯ್ಯ ಹೆಸರು ತಪ್ಪಿದರೆ ಕಾಂಗ್ರೆಸ್ಗೆ ಸೋಲು..!

2013ರಿಂದ 2018ರ ತನಕ 5 ವರ್ಷಗಳ ಸಿದ್ದರಾಮಯ್ಯ ಆಡಳಿತ ನೋಡಿರುವ ಜನತೆ ಈ ಬಾರಿ ಕಾಂಗ್ರೆಸ್ ಕಡೆಗೆ ಮನಸ್ಸು ಮಾಡಿದ್ದಾರೆ ಎನ್ನುವುದು ಸಿದ್ದರಾಮಯ್ಯ ಟೀಂನ ಮಾತು. ಸಿದ್ದರಾಮಯ್ಯ ಅವರ ಖಡಕ್ ಆಡಳಿತವನ್ನು ಮೆಚ್ಚಿ ಮತ್ತೆ ಅಧಿಕಾರ ನೀಡಲು ಮುಂದಾಗಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಬದಲಿಗೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುತ್ತಾರೆ ಎಂದರೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುವುದು ಸಾಧ್ಯವಿಲ್ಲ ಎನ್ನುವ ಮನೋಭಾವ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಗಿರುವ ಬಿ.ಎಸ್ ಶಿವಣ್ಣ, ಬೇಸರ ವ್ಯಕ್ತಪಡಿಸಿದ್ದು, ಮಲ್ಲಿಕಾರ್ಜು ಖರ್ಗೆ ಹೆಸರು ಅನಾವಶ್ಯಕವಾಗಿ ಎಳೆದು ತಂದಿದ್ದು ಸರಿಯಲ್ಲ. ಖರ್ಗೆ ಈಗ ಪ್ರಧಾನಿ ಸ್ಥಾನ ಪಡೆಯಬಲ್ಲ ಲೀಡರ್ ಎಂದಿದ್ದಾರೆ. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿ ಆಗುತ್ತಿರುವ ಅಂಶ ಎಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರೆ ಎನ್ನುವುದು ಎಂದಿದ್ದಾರೆ.
ಡಿಕೆಶಿ ಖರ್ಗೆ ಹೆಸರನ್ನು ಮುನ್ನಲೆಗೆ ಬಿಟ್ಟಿದ್ಯಾಕೆ..?

ಕಾಂಗ್ರೆಸ್ನಲ್ಲಿ ಈ ಬಾರಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಸಾಧ್ಯವಿಲ್ಲ ಅನ್ನೋ ವಿಚಾರ ಈಗಾಗಲೇ ಡಿಕೆಶಿ ಬ್ರದರ್ಸ್ಗೆ ತಿಳಿದಿದೆ. ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದು, ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಹೇಳುತ್ತಾರೆ. ಆದರೆ ದಲಿತ ಸಿಎಂ ಕಾರ್ಡ್ ಪ್ಲೇ ಮಾಡಿದರೆ ಮುಂದಿನ ದಿನಗಳಲ್ಲಿ ನನಗೆ ಸಹಕಾರಿ ಆಗಬಹುದು ಎನ್ನುವ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆಯನ್ನು ಎಳೆದು ತಂದಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಸಿದ್ದರಾಮಯ್ಯ ದಲಿತ ನಾಯಕರನ್ನು ತುಳಿಯುತ್ತಲೇ ಬಂದಿದ್ದು, ದಲಿತ ವಿರೋಧಿ ಅನ್ನೋ ಅಭಿಯಾನವೂ ಕೋಲಾರದಲ್ಲಿ ನಡೆದಿತ್ತು. ಮುಂದಿನ ದಿನಗಳಲ್ಲಿ ಸಿಎಂ ಅಭ್ಯರ್ಥಿ ಆಯ್ಕೆ ಮಾಡುವ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಅಖಾಡಕ್ಕೆ ಇಳಿಸಿ ಸಿದ್ದರಾಮಯ್ಯರನ್ನು ನಿಯಂತ್ರಣ ಮಾಡುವುದು ಡಿಕೆ ಲೆಕ್ಕಾಚಾರ ಎನ್ನುವುದು ಕಾಂಗ್ರೆಸ್ ವಲಯದಲ್ಲೇ ಕೇಳಿ ಬರುತ್ತಿರುವ ಮಾತು.
ಕೃಷ್ಣಮಣಿ