ಬೆಂಗಳೂರು: “ನಮ್ಮ ಸರ್ಕಾರ ನುಡಿದಂತೆ ನಡೆದು ತೋರಿಸಿದೆ. ನಿಮ್ಮ ಮನೆ ಹಾಗೂ ದೇವಾಲಯವನ್ನು ಹೇಗೆ ಕಾಪಾಡಿಕೊಳ್ಳುತ್ತೀರೋ, ಅದೇ ರೀತಿಯಲ್ಲಿ ಜನಪರವಾಗಿ ಕೆಲಸ ಮಾಡುತ್ತಿರುವ ಈ ಸರ್ಕಾರವನ್ನೂ ಕಾಪಾಡಿಕೊಳ್ಳಿ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಅರ್ಚಕರಿಗೆ ಕರೆ ನೀಡಿದರು.
ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಹಾಗೂ ನೌಕರರ ಸಂಘ ಆಯೋಜಿಸಿದ್ದ ರಾಜ್ಯಮಟ್ಟದ ಬೃಹತ್ ಸಮಾವೇಶ ಮತ್ತು ಸಚಿವ ರಾಮಲಿಂಗಾ ರೆಡ್ಡಿ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಜನಪರ ಕಾರ್ಯಕ್ರಮಗಳು ಮತ್ತು ಮುಜರಾಯಿ ಇಲಾಖೆಯ ಸಾಧನೆಗಳನ್ನು ಪ್ರಸ್ತಾಪಿಸಿದರು.

ಸರ್ಕಾರದ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವ ಅರ್ಚಕರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ, “ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ. ನೀವು ನಮ್ಮ ಸರ್ಕಾರದ ಮೇಲೆ ಇಟ್ಟಿರುವ ವಿಶ್ವಾಸ ನಮಗೆ ಮತ್ತಷ್ಟು ಜವಾಬ್ದಾರಿ ತಂದಿದೆ” ಎಂದರು.ಅರ್ಚಕರು ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಜನರಿಗೆ ಧರ್ಮದ ಜೊತೆಗೆ ಉತ್ತಮ ಮೌಲ್ಯಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಜನರ ಮನೆಗಳಿಗೆ ತೆರಳುವ ನಿಮ್ಮ ಮಾತಿಗೆ ವಿಶೇಷ ಗೌರವವಿದೆ. ಮುಂದಿನ ದಿನಗಳಲ್ಲೂ ಜನಪರ ಸರ್ಕಾರಕ್ಕೆ ಆಶೀರ್ವಾದ ನೀಡಬೇಕು ಎಂದು ಮನವಿ ಮಾಡಿದರು.
ಧರ್ಮವನ್ನು ಕೆಲವರು ತಮ್ಮ ಸ್ವತ್ತಿನಂತೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ ಡಿಕೆ ಶಿವಕುಮಾರ್, “ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು ನಿಮ್ಮ ಜೀವನದಲ್ಲಿ ಯಾವ ಬದಲಾವಣೆ ತಂದಿದ್ದಾರೆ? ನಾವು ಮಾತು ಕೊಟ್ಟಂತೆ ಕೆಲಸ ಮಾಡಿದ್ದೇವೆ. ದೇವಾಲಯಗಳ ಅಭಿವೃದ್ಧಿ, ಅರ್ಚಕರ ಕಲ್ಯಾಣ ಮತ್ತು ಮುಜರಾಯಿ ಇಲಾಖೆಯ ಸುಧಾರಣೆಗೆ ಆದ್ಯತೆ ನೀಡಿದ್ದೇವೆ” ಎಂದು ಹೇಳಿದರು.
ರಾಜ್ಯದ ಸುಮಾರು 34 ಸಾವಿರ ಗ್ರಾಮೀಣ ದೇವಾಲಯಗಳ ಅರ್ಚಕರಿಗೆ ಸಂಸ್ಕಾರ ಹಾಗೂ ಆಗಮ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಘೋಷಿಸಿದ ಅವರು, ಮಠಗಳು ಮತ್ತು ಅರ್ಚಕರ ಸಂಘಗಳು ಈ ಕಾರ್ಯದಲ್ಲಿ ಮುನ್ನಡೆ ವಹಿಸಬೇಕು ಎಂದರು.ಅರ್ಚಕರ ಸಂಘದವರು ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮುಜರಾಯಿ ಇಲಾಖೆ ಮುಂದುವರಿಸಬೇಕೆಂಬ ಬೇಡಿಕೆ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, “ನೀವು ಮತ್ತು ರಾಮಲಿಂಗಾ ರೆಡ್ಡಿ ಚರ್ಚಿಸಿ ನಿರ್ಧಾರ ತಿಳಿಸಿ. ಪಕ್ಷದ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ಹೇಳಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಉಲ್ಲೇಖಿಸಿದ ಸಿಎಂ, ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗಳ ಮೂಲಕ ಕೋಟ್ಯಂತರ ಜನರಿಗೆ ನೆರವು ತಲುಪಿದೆ ಎಂದರು. ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಕ್ರಮ ಕೈಗೊಂಡಿದ್ದು, ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.ಸಮಾಜದಲ್ಲಿ ಧರ್ಮ, ಜಾತಿ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಭೇದಭಾವ ಇರಬಾರದು. ಅರ್ಚಕರು ಸಮಾಜದಲ್ಲಿ ಸಾಮರಸ್ಯ ಮತ್ತು ಮಾನವೀಯತೆಯ ಸಂದೇಶ ಸಾರುವವರಾಗಿದ್ದು, ಸರ್ಕಾರ ಸದಾ ಅವರೊಂದಿಗೆ ಇರುತ್ತದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.






