ಕಾಂಗ್ರೆಸ್ ಹಿರಿಯ ನಾಯಕ ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ, ಅವರ ಸ್ಥಾನಕ್ಕೆ ಅನಿರೀಕ್ಷಿತವಾಗಿ ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು ನೇಮಕ ಮಾಡಿದ ಬಳಿಕ, ಕೆಲವು ದಿನಗಳಿಂದ ಪಂಜಾಬ್ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.
ಇದೀಗ ಒಂದು ಕಡೆ ಅಮರೀಂದರ್ ಸಿಂಗ್ ವಿರೋಧಿ ಬಣದ ನಾಯಕ ನವಜೋತ್ ಸಿಂಗ್ ಸಿಧು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದರೆ, ಮತ್ತೊಂದು ಕಡೆ ಮಾಜಿ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆಯ ಬಳಿಕ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿದ್ದಾರೆ.
ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ನಿರ್ಣಾಯಕ ಘಟ್ಟಕ್ಕೆ ತಂದ ಪಂಜಾಬ್ ಬೆಳವಣಿಗೆ!
ಉತ್ತಮ ಆಡಳಿತ ಮತ್ತು ಪಕ್ಷ ಸಂಘಟನೆಯ ಹೊರತಾಗಿಯೂ ಚುನಾವಣಾ ಹೊಸ್ತಿಲಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಿಧು ಬಂಡಾಯಕ್ಕೆ ಮಣಿದು ತಮ್ಮ ರಾಜೀನಾಮೆ ಪಡೆದ ಪಕ್ಷದ ಹೈಕಮಾಂಡ್ ವಿರುದ್ಧ ಆಕ್ರೋಶಗೊಂಡಿರುವ ಸಿಂಗ್ ಅವರ ಈ ದೆಹಲಿ ಭೇಟಿ ಕುತೂಹಲ ಕೆರಳಿಸಿದೆ. ಜೊತೆಗೆ ಪಕ್ಷದ ರಾಜ್ಯ ಘಟಕ ಈಗಾಗಲೇ ಒಡೆದ ಮನೆಯಾಗಿದ್ದು, ಹೊಸ ಸರ್ಕಾರದಲ್ಲಿ ಅಧಿಕಾರ ಪಡೆದಿರುವವರ ಒಂದು ಗುಂಪು, ಅಧಿಕಾರವಂಚಿತ ಸಿಂಗ್ ಬಣ ಮತ್ತು ಬಂಡಾಯ ನಾಯಕ ನವಜೋತ್ ಸಿಧು ಬಣಗಳ ನಡುವೆ ಪಕ್ಷದ ಒಗ್ಗಟ್ಟು ಹರಿದುಹಂಚಿಹೋಗಿದೆ. ಆದರೆ, ದೊಡ್ಡ ಸಂಖ್ಯೆಯ ಶಾಸಕರ ಪಡೆ ಸಿಂಗ್ ಅವರಿಗೆ ಆದ ಅನ್ಯಾಯದ ಹಿನ್ನೆಲೆಯಲ್ಲಿ ಅವರ ಪರ ನಿಂತಿದ್ದಾರೆ. ಆ ಹಿನ್ನೆಲೆಯಲ್ಲಿ ಕೂಡ ಸಿಂಗ್ ದೆಹಲಿ ಭೇಟಿ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಸಂಚಲನ ಮೂಡಿಸಿದೆ
ಈ ನಡುವೆ, ಅಮರೀಂದರ್ ಅವರು ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಬಹುದು ಎಂದು ಕೆಲವು ಮಾಧ್ಯಮ ವರದಿ ಮಾಡಿವೆ. ಜೊತೆಗೆ ಮಂಗಳವಾರ ಸಂಜೆ ಹೊತ್ತಿಗೆ ಸಿಂಗ್ ಮತ್ತು ಬಿಜೆಪಿ ಹೈಕಮಾಂಡ್ ಅಮಿತ್ ಶಾ ಭೇಟಿಯ ಹಳೆಯ ಫೋಟೋಗಳು, ಹೊಸ ಭೇಟಿ ಮತ್ತು ಮಾತುಕತೆ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Breaking News – ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ
ಆದರೆ, ಇಂತಹ ಊಹಾಪೋಹಗಳ ಕುರಿತು ಸ್ಪಷ್ಟನೆ ನೀಡಿರುವ ಅಮರಿಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀಣ್ ತುಕ್ರಾಲ್, ‘ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ದೆಹಲಿ ಭೇಟಿ ಕುರಿತಂತೆ ಹಲವು ಊಹಾಪೋಹಗಳು ಎದ್ದಿವೆ. ವೈಯಕ್ತಿಕ ಕಾರಣಕ್ಕಾಗಿ ಅವರು ದೆಹಲಿಗೆ ಭೇಟಿ ನೀಡಲಿದ್ದಾರೆ. ಈ ಸಮಯದಲ್ಲಿ ಅವರು ಕೆಲವು ಸ್ನೇಹಿತರನ್ನು ಭೇಟಿ ಮಾಡಲಿದ್ದಾರೆ ಮತ್ತು ನೂತನ ಮುಖ್ಯಮಂತ್ರಿಗಾಗಿ ಕಪುರ್ತಲಾದ ಮನೆಯನ್ನು ಖಾಲಿ ಮಾಡುತ್ತಾರೆ. ಈ ವಿಚಾರವಾಗಿ ಯಾವುದೇ ಅನಗತ್ಯ ಊಹಾಪೋಹಗಳ ಅಗತ್ಯವಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ಪಂಜಾಬ್ ಸಿಎಂ ರಾಜೀನಾಮೆ: ಹಳೆಯ ಬಿಕ್ಕಟ್ಟಿನ ಅಂತ್ಯವೋ? ಹೊಸ ಬಿಕ್ಕಟ್ಟಿನ ಆರಂಭವೋ?
ಅಲ್ಲದೆ ಸ್ವತಃ ಅಮರೀಂದರ್ ಸಿಂಗ್ ಕೂಡ ಈ ಬಗ್ಗೆ ಬುಧವಾರ ಬೆಳಗ್ಗೆ ಸ್ಪಷ್ಟನೆ ನೀಡಿದ್ದು, ತಮ್ಮ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿ, ನೂತನ ಮುಖ್ಯಮಂತ್ರಿಗೆ ಮನೆ ಬಿಟ್ಟುಕೊಡಲು ಬಂದಿದ್ದೇನೆ. ಇದೇ ಸಮಯದಲ್ಲಿ ದೆಹಲಿಯ ಕೆಲವು ಮಿತ್ರರನ್ನು ಭೇಟಿಯಾಗುವುದಿದೆ ಅಷ್ಟೇ. ಅದು ಬಿಟ್ಟು ಉಳಿದ ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ” ಎಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ರಾಹುಲ್, ಪ್ರಿಯಾಂಕ ಅನನುಭವಿಗಳು; ಸಿಧು ಅಪಾಯಕಾರಿ- ಮಾಜಿ ಸಿಎಂ ಅಮರಿಂದರ್ ಸಿಂಗ್
ಈ ನಡುವೆ, ಸಿಧು ರಾಜೀನಾಮೆ ವಿಷಯ ದೆಹಲಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಮರೀಂದರ್ ಸಿಂಗ್ ರಾಜೀನಾಮೆ ಬಳಿಕ ನೂತನ ಸಿಎಂ ಆಯ್ಕೆ, ಸಂಪುಟ ರಚನೆ ಸೇರಿದಂತೆ ಪ್ರತಿ ಹಂತದಲ್ಲೂ ಪಕ್ಷದ ಹೈಕಮಾಂಡ್ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಹಿನ್ನೆಲೆಯಲ್ಲಿ ಸಿಧು ಸಿಡಿದೆದ್ದಿದಾರೆ. ಇದೀಗ ಈ ಬೆಳವಣಿಗೆಯಿಂದ ಪಕ್ಷದ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದೆ. ತನ್ನ ತಂತ್ರಗಾರಿಕೆ ತನಗೇ ತಿರುಗುಬಾಣವಾದ ಸ್ಥಿತಿ ಕಾಂಗ್ರೆಸ್ ಹೈಕಮಾಂಡ್ ನದು.
ಪಂಜಾಬಿನಲ್ಲಿ ಕಾಂಗ್ರೆಸಿಗೆ ‘ದಲಿತ ಸಿಎಂ’ಗಿಂತ ಒಳ್ಳೆಯ ಆಯ್ಕೆ ಇರಲಿಲ್ಲ!
ಚುನಾವಣೆ ಹೊಸ್ತಿಲಲ್ಲಿ ಒಂದು ಕಡೆ ವಿಶ್ವಾಸಾರ್ಹ ನಾಯಕ ಅಮರೀಂದರ್ ಸಿಂಗ್ ಅವರ ವಿಶ್ವಾಸವನ್ನೂ ಕಳೆದುಕೊಂಡು, ಮತ್ತೊಂದು ಕಡೆ ಪರ್ಯಾಯ ನಾಯಕನಾಗಿ ಹೊರಹೊಮ್ಮುವ ಮಹತ್ವಾಕಾಂಕ್ಷೆಯ ಸಿಧು ಅಸಮಾಧಾನಕ್ಕೂ ಈಡಾಗಿ, ಹೈಕಮಾಂಡ್ ಪಕ್ಷದ ಪಂಜಾಬ್ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತದೆ ಮತ್ತು ಮುಂದಿನ ಚುನಾವಣೆಯನ್ನು ಹೇಗೆ ಎದುರಿಸುತ್ತದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.