ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಲ್ಲಿ ಮಸೀದಿ ಆವರಣಕ್ಕೆ ನುಗ್ಗಿ ಜೈ ಶ್ರೀರಾಮ್ ಘೋಷಣೆ ಕೂಗಿದ ಆರೋಪದ ಮೇಲೆ ಬಂಧನಕ್ಕೊಳಗಾದ ಇಬ್ಬರು ವ್ಯಕ್ತಿಗಳ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಪುತ್ತೂರು ತಾಲ್ಲೂಕಿನ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಎರಡನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿನ ಎಲ್ಲ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ಪುತ್ತೂರಿನ ಬಿಳಿನೆಲೆ ಗ್ರಾಮದ ಕೀರ್ತನ್ ಮತ್ತು ಮಂಗಳೂರಿನ ಕೈಕಂಬದ ಸಚಿನ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ದೂರುದಾರರು ಖುದ್ದು ಹೇಳಿರುವಂತೆ ಆ ಭಾಗದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರು ಒಟ್ಟಾಗಿ ಸೌರ್ಹಾದತೆಯಿಂದ ಜೀವಿಸುತ್ತಿದ್ದಾರೆ. ಆದರೆ ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 295 ಎ ( ಧರ್ಮ, ಧಾರ್ಮಿಕ ಭಾವನೆ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆಯಾಗುತ್ತದೆ ಎಂದು ಅರ್ಥವಾಗುತ್ತಿಲ್ಲ. ಜೊತೆಗೆ ಪ್ರಕರಣದಲ್ಲಿ ಯಾವುದೇ ಅಪರಾಧ ಕಂಡು ಬರುತ್ತಿಲ್ಲ. ಹೀಗಿರುವಾಗ ಅರ್ಜಿದಾರರ ವಿರುದ್ಧ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಮುಂದುವರಿದು, ಮಹೇಂದ್ರ ಸಿಂಗ್ ಧೋನಿ ವರ್ಸಸ್ ಯರ್ರಗುಂಟ್ಲ ಶ್ಯಾಮಸುಂದರ್ (2017) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ತೀರ್ಪನ್ನು ಉಲ್ಲೇಖಿಸಿರುವ ಪೀಠವು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರದ ಹೋರತಾಗಿ ಯಾವುದೇ ಪ್ರಕರಣವು ಭಾರತೀಯ ದಂಡ ಸಂಹಿತೆ ಸೆಕ್ಷನ್ 295 ಎ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಪ್ರಕರಣ ರದ್ದುಗೊಳಿಸಿದೆ.
ಅರ್ಜಿದಾರರ ಪರ ವಕೀಲ ಬಿ ಎಸ್ ಸಚಿನ್ ಅವರು “ಅರ್ಜಿದಾರರ ವಿರುದ್ಧದ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದದ್ದು, ಮಸೀದಿಯೂ ಸಾರ್ವಜನಿಕ ಸ್ಥಳವಾಗಿದ್ದು ಅದನ್ನು ಪ್ರವೇಶಿಸಿದ ಮಾತ್ರಕ್ಕೆ ಅತಿಕ್ರಮಣ ಮಾಡಿದ್ದಾರೆ ಎಂದು ಆಪಾದನೆ ಮಾಡುವುದು ಒಪ್ಪುವಂತದಲ್ಲ. ಹೀಗಾಗಿ ಪ್ರಕರಣ ರದ್ದುಗೊಳಿಸಬೇಕು” ಎಂದು ಮನವಿ ಮಾಡಿದರು.
ಸರ್ಕಾರದ ಪರ ವಾದಿಸಿದ ವಕೀಲೆ ಸೌಮ್ಯಾ ಅವರು “ಪ್ರಕರಣದಲ್ಲಿ ತನಿಖೆಯ ಅಗತ್ಯವಿದೆ.ಹಾಗಾಗಿ ಆರೋಪಿಗಳ ಮನವಿಯನ್ನು ತಿರಸ್ಕರಿಸಬೇಕು” ಎಂದು ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕು ಐತ್ತೂರು ಗ್ರಾಮದ ಮರ್ಧಾಳ ಎಂಬಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಯ ಆವರಣಕ್ಕೆ ಸೆಪ್ಟೆಂಬರ್ 24 ರಂದು ರಾತ್ರಿ ಸುಮಾರು 10.50 ರ ಸಮಯಕ್ಕೆ ಆರೋಪಿಗಳು ಅಕ್ರಮವಾಗಿ ಪ್ರವೇಶಿಸಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದು, ಬ್ಯಾರಿಗಳನ್ನು ಬದುಕಲು ಬಿಡುವುದಿಲ್ಲ ಎಂದು ಬೊಬ್ಬೆ ಹಾಕಿದ್ದಾರೆ ಎಂದು ಆರೋಪಿಸಿ ಮಸೀದಿ ಸಿಬ್ಬಂದಿಗಳು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಆರೋಪಿಗಳಿಬ್ಬರ ವಿರುದ್ಧ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣಕ್ಕೆ ಶಿಕ್ಷೆ), 505 (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ), 34 (ಸಾಮಾನ್ಯ ಉದ್ದೇಶ) ಮತ್ತು 295 ಎ ಅಡಿ ಎಫ್ಐಆರ್ ದಾಖಲಿಸಲಾಗಿತ್ತು. ಇದರ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.