ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವದ ಕಿತ್ತಾಟ, ದಲಿತ ಸಿಎಂ ಬೇಡಿಕೆಗಳು ಹೈಕಮಾಂಡ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಈಗಾಗಲೇ ಎರಡನೇ ಬಾರಿಗೆ ಸಿದ್ದರಾಮಯ್ಯ ಬಳಿಕ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬೇಕು ಎಂಬ ಹಕ್ಕೊತ್ತಾಯಗಳು ಬಲವಾಗಿವೆ. ಈ ನಡುವೆಯೇ ಲಿಂಗಾಯತ ಸಮುದಾಯಕ್ಕೂ ಸಿಎಂ ಸ್ಥಾನ ಬೇಕೆಂದು ಮತ್ತೊಂದು ಕೂಗು ಜೋರಾಗುತ್ತಿದೆ.

ಕುರುಬ ನಾಯಕರಾಗಿ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರದಲ್ಲಿದ್ದಾರೆ, ಇದಾದ ಬಳಿಕ ಒಕ್ಕಲಿಗ ನಾಯಕರಾಗಿರುವ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕೆಂದು ಚರ್ಚೆಗಳು ನಡೆಯುತ್ತಿವೆ. ಅಲ್ಲದೆ ಬಹುದಿನಗಳಿಂದ ದಲಿತ ಸಿಎಂ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕೆಂಬ ವಾದಗಳಿದ್ದು, ಇದೀಗ ಲಿಂಗಾಯತ ಸಮಾಜದಿಂದ ಹಾಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಒದಗಿಸಿ ಕೊಡಬೇಕೆಂದು ಕೂಗು ಕೇಳಿ ಬಂದಿದೆ.
ಎಕ್ಸ್‌ನಲ್ಲಿ ಏನಿದೆ..?
ಈ ಕುರಿತು ವೀರಶೈವ ಲಿಂಗಾಯತ ಸಮುದಾಯದ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಮನವಿ ಮಾಡಲಾಗಿದೆ. ಕರ್ನಾಟಕದ ದೊಡ್ಡ ಸಮುದಾಯವಾದ ವೀರಶೈವ ಲಿಂಗಾಯತವನ್ನು 1990ರ ನಂತರ ( ವೀರೇಂದ್ರ ಪಾಟೀಲ ತದನಂತರ ) ಕಾಂಗ್ರೆಸ್ ಪಕ್ಷ ನಿರಂತರವಾಗಿ ನಿರ್ಲಕ್ಷಿಸುತ್ತಾ ಬಂದಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ : ಬಂಗಾರದ ಬೆಲೆ ಇಳಿಕೆ: ಇಲ್ಲಿದೆ ಚಿನ್ನ ಪ್ರಿಯರಿಗೆ ಚಿನ್ನದಂತ ಸುದ್ದಿ
ಹಿಂದುಳಿದ ಅಥವಾ ಚಿಕ್ಕ ಚಿಕ್ಕ ಸಮುದಾಯಗಳ ನಾಯಕರುಗಳು ಬೆಳೆಯ ಬೇಕೆಂಬುದು ನಮ್ಮ ಆಶಯವೂ ಆಗಿದ್ದರಿಂದ ಈವರೆಗೂ ಸಹನೆಯಿಂದ ಸಹಕಾರ ನೀಡಿದ್ದೇವೆ. ವಿವಿಧ ಕಾರಣಗಳನ್ನು ಮುಂದಿಟ್ಟು ಮತ್ತೆ ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದರೆ ಸಹಿಸಲು ಇನ್ನೂ ಸಾಧ್ಯವಿಲ್ಲಎಂದು ಎಚ್ಚರಿಸಿದೆ
ಹಾಲಿ ಇರುವ ಮುಖ್ಯಮಂತ್ರಿಗಳ ತದನಂತರ ನಮ್ಮ ಸಮುದಾಯದ ನಾಯಕ ಶರಣ ಎಂ ಬಿ ಪಾಟೀಲರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುವ ಮೂಲಕ ಕಾಂಗ್ರೆಸ್ ಲಿಂಗಾಯತರ ವಿಷಯದಲ್ಲಿ ಮಾಡಿದ ಕೆಲ ತಪ್ಪುಗಳನ್ನ ಸರಿಪಡಿಸಿಕೊಳ್ಳಬೇಕು ಎಂದು ಸಮುದಾಐ ಒತ್ತಾಯಿಸಿದೆ.
ಇನ್ನೂ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕುರ್ಚಿ ಕದನದ ಹೊಗೆಯಾಡುತ್ತಿರುವಾಗಲೇ ಸಮುದಾಯವಾರು ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆಗಳು ಅಧಿಕವಾಗುತ್ತಿವೆ. ಸದ್ಯ ಬಜೆಟ್ ಮೂಡ್‌ನಲ್ಲಿರುವ ಸಿಎಂ ಸಿದ್ದರಾಮಯ್ಯ ದಾಖಲೆಯ ಆಯವ್ಯಯ ನೀಡಲು ಸಿದ್ಧತೆ ನಡೆಸಿದ್ದಾರೆ. ಈ ನಡುವೆಯೇ ದಲಿತ ಬಳಿಕ ಲಿಂಗಾಯತ ಸಿಎಂ ಕೂಗು ಕೇಳಿ ಬಂದಿದ್ದು, ಈ ಬೇಡಿಕೆಯನ್ನು ಯಾವ ರೀತಿಯಾಗಿ ಹೈಕಮಾಂಡ್ ಪರಿಗಣಿಸುತ್ತದೆ ಎನ್ನುವುದನ್ನು ಕಾದು ನೋಡೋಣ..






