ಎಡ್‌ಟೆಕ್ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿದ್ದ ಬೈಜೂಸ್ ಸಂಸ್ಥೆಯ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರದ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಈ ಮಹತ್ವದ ತೀರ್ಪು ಹೊರಬಿದ್ದಿದೆ.ಏಪ್ರಿಲ್ 2024ರಿಂದ ತಮ್ಮ ಆಸ್ತಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ್ದ ಹಲವು ನಿರ್ದೇಶನಗಳನ್ನು ಪಾಲಿಸಲು ವಿಫಲರಾದ ಹಿನ್ನೆಲೆಯಲ್ಲಿ, ಬೈಜು ರವೀಂದ್ರನ್ ಅವರನ್ನು ನ್ಯಾಯಾಲಯ ದೋಷಿ ಎಂದು ಪರಿಗಣಿಸಿದೆ.

ಜೈಲು ಶಿಕ್ಷೆಯ ಜೊತೆಗೆ, ತಕ್ಷಣವೇ ಅಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಸೂಚಿಸಿದೆ. ಅಲ್ಲದೆ, ಸುಮಾರು 90 ಸಾವಿರ ಸಿಂಗಾಪುರ ಡಾಲರ್ ಕಾನೂನು ವೆಚ್ಚವನ್ನು ಪಾವತಿಸುವಂತೆ ಹಾಗೂ Beeaar Investco Pte ಸಂಸ್ಥೆಯ ಮೇಲಿನ ತಮ್ಮ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಆದೇಶಿಸಲಾಗಿದೆ.ಈ ಪ್ರಕರಣವನ್ನು ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ ಅಂಗಸಂಸ್ಥೆಯೊಂದು ದಾಖಲಿಸಿತ್ತು.

ಬೈಜೂಸ್ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದ್ದ ಅವಧಿಯಲ್ಲಿ ನಡೆದ ಹೂಡಿಕೆ ಮತ್ತು ಆಸ್ತಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಈ ವಿವಾದ ಹುಟ್ಟಿಕೊಂಡಿತ್ತು.ಈಗಾಗಲೇ ಅಮೆರಿಕದಲ್ಲಿ 1.2 ಬಿಲಿಯನ್ ಡಾಲರ್ ಸಾಲ ಮರುಪಾವತಿ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಬೈಜು ರವೀಂದ್ರನ್ ಅವರಿಗೆ, ಸಿಂಗಾಪುರದ ಈ ತೀರ್ಪು ಮತ್ತೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಸದ್ಯ ಅವರು ಸಿಂಗಾಪುರದಲ್ಲಿದ್ದಾರೆಯೇ ಅಥವಾ ಬೇರೆ ದೇಶದಲ್ಲಿದ್ದಾರೆಯೇ ಎಂಬ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ.






