ಕರ್ನಾಟಕದ ಪ್ರಬಲ ಮತ್ತು ವಾದನೀಯವಾಗಿ ಕಾಂಗ್ರೆಸ್ಸಿನ ಅತ್ಯುತ್ತಮ ನಾಯಕರಾದ ಸಿದ್ದರಾಮಯ್ಯನವರು, ಮೂಲಭೂತವಾಗಿ ಬ್ರಾಹ್ಮಣ್ಯವನ್ನು ಹೆಚ್ಚು ಆಳವಾಗಿ ಬೇರೂರಿಸುವ ‘ಜಾತಿ’ ನಾಯಕರು ಎಂದು ನಟ ಚೇತನ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು “ನಿಜವಾದ ಬದಲಾವಣೆಗೆ ಕರ್ನಾಟಕ ಮತ್ತು ಭಾರತಕ್ಕೆ ‘ಜಾತಿ ವಿರೋಧಿ’ ನಾಯಕತ್ವ ಬೇಕಾಗಿದೆ. ಸಿದ್ದರಾಮಯ್ಯನವರ ಸೇವೆ ‘ಹುಟ್ಟಿದ ಜಾತಿಗೆ’ ಮಾತ್ರ ಸೀಮಿತವಾಗಿದ್ದು, ಇತರೆ ಬಹುಜನರಿಂದ ಸಿಗುವ ಮತಗಳಿಗಾಗಿ ಮಾತ್ರ ಬಣ್ಣದ ಮಾತಾಡುತ್ತಾರೆ” ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಜನಾಧಿಕಾರ ಪಕ್ಷದ ಅಧ್ಯಕ್ಷರಾದ ಹರೀಶ್ ಕುಮಾರ್ರವರು ಸಿದ್ದರಾಮಯ್ಯನವರು ಹೇಗೆ ಬ್ರಾಹ್ಮಣ್ಯ ಬೇರೂರಿಸುತ್ತಿದ್ದಾರೆ ಎಂಬದುನ್ನು ಉದಾಹರಣೆ ಸಹಿತ ವಿವರಿಸಬೇಕೆಂದು ಎಂದು ನಟ ಚೇತನ್ರವರನ್ನು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಎಲ್ಲಿ ಬ್ರಾಹ್ಮಣ್ಯವನ್ನು ಗಟ್ಟಿಗೊಳಿಸಿದರು? ಅವರು ಯಾವುದಾದರೂ ಮಠಗಳಿಗೆ ನಡೆದುಕೊಂಡಿದ್ದಾರೆಯೇ? ಯಾವುದಾದರೂ ಸ್ವಾಮೀಜಿಯ ಅಣತಿಯಂತೆ ಕಾರ್ಯನಿರ್ವಹಿಸಿದ್ದಾರೆಯೇ? ಯಾವುದಾದರೂ ಅರ್ಚಕರ ಕಾಲಿಗೆ ಬಿದ್ದು ಏನಾದರೂ ಸಂದೇಶ ರವಾನಿಸಿದ್ದಾರೆಯೇ? ಸಿದ್ದರಾಮಯ್ಯನವರ ಯಾವ ನಡವಳಿಕೆಯು ಬ್ರಾಹ್ಮಣ್ಯವನ್ನು ಸಾರಿ ಹೇಳುತ್ತದೆ ಕಾಂಗ್ರೆಸ್ಸಿನಲ್ಲಿ ಬ್ರಾಹ್ಮಣ್ಯವನ್ನು ಬೇರೂರಿಸುವ ಹಲವು ನಾಯಕರಿದ್ದಾರೆ. ಆದರೆ ಅವರೆಲ್ಲರನ್ನೂ ಬಿಟ್ಟು ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡುವುದರ ಹಿಂದೆ ಚೇತನ್ರವರ “ಜಾತಿ”ಯೇನಾದರೂ ವವ್ಯವಸ್ಥಿತವಾಗಿ ಕೆಲಸ ಮಾಡಿದೆಯೇ? ಎಂದು ಹರೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಒಬ್ಬ ಹೋರಾಟಗಾರ ಅನ್ನಿಸಿಕೊಳ್ಳಬೇಕಾದರೆ ಆತನಿಗೆ ಸಮಾಜದ ಜಾತಿ, ಸಾಮಾಜಿಕತೆ, ಅರ್ಥಿಕ, ರಾಜಕೀಯ ಸ್ಥಿತಿಗತಿಗಳ ಒಳನೋಟ ಇರಬೇಕು. ಸಿದ್ದರಾಮಯ್ಯನವರ ಸ್ವಜಾತಿ ಪ್ರೇಮದ ಬಗ್ಗೆ ಚೇತನ್ ಬರೆದಿದ್ದಾರೆ. ಸಿದ್ದರಾಮಯ್ಯ ಈ ರಾಜ್ಯಕ್ಕೆ ಕೊಟ್ಟ ಸೇವೆಯನ್ನು ಅವರು ಮಂಡಿಸಿದ ಬಜೆಟ್ ಮತ್ತು ಯೋಜನೆಗಳ ಮೂಲಕ ಮಾತ್ರ ಅಳೆಯಬೇಕು. ಯಾವ ಬಜೆಟ್ ನಲ್ಲಿ ಕುರುಬರಿಗಾಗಿ ಪ್ರತ್ಯೇಕ ಯೋಜನೆ/ಅನುದಾನವನ್ನು ಮೀಸಲಿಟ್ಟರು? ಸಿದ್ದರಾಮಯ್ಯರ ಕ್ಯಾಬಿನೆಟ್ ನಲ್ಲಿ ಇದ್ದ ಕುರುಬ ಸಮುದಾಯದ ಮಂತ್ರಿಗಳು ಎಷ್ಟು? ಎಷ್ಟು ನಿಗಮ ಮಂಡಳಿಗಳಲ್ಲಿ ಕುರುಬ ನಾಯಕರಿಗೆ ಸ್ಥಾನಮಾನ ನೀಡಲಾಗಿತ್ತು. ಜನಸಂಖ್ಯೆಯ ಆಧಾರದ ಮೇಲೆ ಅವಕಾಶ ನೀಡಲಾಗಿತ್ತೋ? ಸಾಮಾಜಿಕವಾಗಿ ಜಾತಿ ಪ್ರಭಾವದ ಆಧಾರದ ಮೇಲೆ ಅವಕಾಶ ನೀಡಲಾಗಿತ್ತೋ? ಸೂಕ್ಷ್ಮ, ಅತಿಸೂಕ್ಷ್ಮ ಜಾತಿಗಳವರಿಗೆ ಸಿದ್ದರಾಮಯ್ಯ ಮಾಡಿದ್ದೇನು? ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಸಿದ್ದರಾಮಯ್ಯರ ನಿಲುವೇನು? ಎಂಬ ಬಗ್ಗೆ ತಿಳಿಯಬೇಕು.
ಎಸ್ಸಿ ಮೀಸಲಾತಿಗಾಗಿ ಕುರುಬರು ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆಯಲ್ಲಿ ಸಮಾವೇಶ ನಡೆಸಿದಾಗ ಸಿದ್ದರಾಮಯ್ಯ ನಿಲುವೇನಾಗಿತ್ತು? “ನಿಜವಾಗಿಯೂ ಮೀಸ ಲಾತಿ ಬೇಕಾಗಿರುವ ಸಮುದಾಯಗಳಿಗೆ ನಾವು ಅನ್ಯಾಯ ಮಾಡಿದಂತಾಗುತ್ತದೆ, ನಾನು ಕುರುಬ ಸಮಾವೇಶಕ್ಕೆ ಹೋಗುವುದಿಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದನ್ನು ಬೇರೆ ಯಾವ ನಾಯಕರಿಂದಾದರೂ ನಿರೀಕ್ಷಿಸಲು ಸಾಧ್ಯವೇ? ಎಂದೂ ಅವರು ಹೇಳಿದ್ದಾರೆ.