ಸಾಧನೆ ಅನ್ನೋದು ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ. ಬದುಕಲ್ಲಿ ಏನನ್ನಾದರೂ ಗಳಿಸಬೇಕು ಅಂದ್ರೆ ಶ್ರದ್ಧೆ ಹಾಗೂ ಶ್ರಮ ಅತ್ಯಗತ್ಯ. ಇದೇ ದಿಕ್ಕಿನಲ್ಲಿ ಮೈಸೂರು ಜಿಲ್ಲೆಯ ಮೂವರು ಭಾರತೀಯ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಜಿಲ್ಲೆಗೆ ಇನ್ನಷ್ಟು ಕೀರ್ತಿ ತಂದಿದ್ದಾರೆ .
ಮೈಸೂರಿನ ಪೂಜಾ ಎಂಬುವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 390ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.ಭಾರತ ಲೋಕಸೇವಾ ಆಯೋಗವು ನಡೆಸಿದ 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಮೈಸೂರಿನ ಕುವೆಂಪುನಗರದ ಪೂಜಾ ಅವರು 390ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಇದಲ್ಲದೇ , ವಿಜಯನಗರದ ನಿವಾಸಿ ಕೆ.ಸೌರಭ್ಗೆ 260ನೇ ಸ್ಥಾನ, ಕೆ.ಆರ್.ನಗರದ ಡಾ.ಕೆ.ಭಾನುಪ್ರಕಾಶ್ಗೆ 448ನೇ ಸ್ಥಾನ ದೊರೆತಿದೆ. ಸತತ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಅಭ್ಯರ್ಥಿಗಳು ರಿಸಲ್ಟ್ ನೋಡಿ ಖುಷ್ ಆಗಿದ್ದಾರೆ.

ಪೂಜಾ ಪರಿಶ್ರಮ..
ಇನ್ನು, ಪೂಜಾ ಕುವೆಂಪುನಗರದ ಕಾವೇರಿ ಶಾಲೆಯಲ್ಲಿ 1ರಿಂದ 10ನೇ ತರಗತಿ, ಮರಿಮಲ್ಲಪ್ಪ ಪಿಯು ಕಾಲೇಜಿನಲ್ಲಿ ಪಿಯು ಹಾಗೂ ಗೋಕುಲಂನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿರುವ ಪೂಜಾ ಮುಕುಂದ ಹಾಗೂ ಪದ್ಮಾವತಿ ದಂಪತಿಯ ಪುತ್ರಿ. ಪೂಜಾ ಯಾವುದೇ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆಯದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ವಿಶೇಷವಾಗಿದೆ ಕಳೆದ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಂದರ್ಶನ ಹಂತದವರೆಗೂ ಹೋಗಿದ್ದರು. ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಎರಡನೇ ಬಾರಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ.2019ರಲ್ಲಿ ಪದವಿ ಮುಗಿಸಿದ್ದ ಇವರು 2020 ಡಿಸೆಂಬರ್‌ನಿಂದ ತಯಾರಿ ಆರಂಭಿಸಿ ಅಣಕು ಪರೀಕ್ಷೆಗಳನ್ನು ತೆಗೆದುಕೊಂಡಿದ್ದರು. .
ಐಎಎಸ್ ಅಥವಾ ಐಪಿಎಸ್ ಹುದ್ದೆ ಸಿಗುವ ನಿರೀಕ್ಷೆ ಇದೆ ಎಂದು ಪೂಜಾ ಹೇಳಿಕೊಂಡಿದ್ದಾರೆ. ʻಶಿಸ್ತು ಹಾಗೂ ಶ್ರಮವನ್ನು ಪರೀಕ್ಷೆ ಬೇಡುತ್ತದೆ. ಉತ್ತಮವಾಗಿ ತಯಾರಿ ನಡೆಸಿದ್ದರೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು. ಧೈರ್ಯದಿಂದ ಮುನ್ನುಗ್ಗಬೇಕುʼ ಎಂದು ಪೂಜಾ ತಮ್ಮ ತಯಾರಿ ಬಗ್ಗೆ ಇತರರಿಗೆ ಟಿಪ್ಸ್ ನೀಡಿದ್ದಾರೆ.
ಸೌರಭ್ ಸ್ಫೂರ್ತಿ.
ಇನ್ನು ಜಿಲ್ಲೆಯ ಮತ್ತೊಬ್ಬ ವಿದ್ಯಾರ್ಥಿ ಸೌರಭ್ ಸಾಕಷ್ಟು ಕಠಿಣ ಶ್ರಮ ವಹಿಸಿ 260ನೇ ರ್ಯಾಂಕ್ ಪಡೆದಿದ್ದಾರೆ. ಯಾರೇ ಭಾರತೀಯ ಲೋಕಸೇವಾ ಆಯೋಗದ ಪರೀಕ್ಷೆ ತೆಗೆದುಕೊಂಡರೂ ಛಲದಿಂದ ಪರೀಕ್ಷೆ ಎದುರಿಸುವಂತೆ ಯುವ ಉತ್ಸಾಹಿಗಳಿಗೆ ಸಲಹೆ ಕೊಟ್ಟಿದ್ದಾರೆ.
ಭಾನುಪ್ರಕಾಶ್ ಮನದಾಳ..
ಮತ್ತೊಂದೆಡೆ ಭಾನುಪ್ರಕಾಶ್ ವೃತ್ತಿಯಲ್ಲಿ ವೈದ್ಯರಾಗಿದ್ದು , ಈ ಬಾರಿ 448 ನೇ ರ್ಯಾಂಕ್ ಗಳಿಸಿದ್ದಾರೆ. ಬಾಲ್ಯದಿಂದಲೂ ಐಎಎಸ್ ಅಧಿಕಾರಿ ಆಗಬೇಕೆಂಬ ಕನಸು ಕಂಡಿರಲಿಲ್ಲ. ಅಮ್ಮ ಅಂಗನವಾಡಿ ಶಿಕ್ಷಕಿ. ಕೋವಿಡ್ ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವಾಗ ನಾಗರಿಕ ಸೇವಾ ಅಧಿಕಾರಿ ಆಗಬೇಕೆಂಬ ಕನಸು ಮೂಡಿತು ಎಂದು ಹೇಳಿಕೊಂಡಿದ್ದಾರೆ.