ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಶತಕ ಸಿಡಿಸುವ ಮೂವಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ್ದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 173 ರನ್ ಗಳಿಸಿತು. ಗುರಿ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ (102) ಅಜೇಯ ಶತಕ ಸಿಡಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಮುಂಬೈಗೆ 7 ವಿಕೆಟ್ ಗಳ ಭರ್ಜರಿ ಜಯ ತಂದುಕೊಟ್ಟರು. ಈ ಶತಕದ ಮೂಲಕ ಸೂರ್ಯ ಕೂಡ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಅತೀ ಹೆಚ್ಚು ಶತಕ ಸಿಡಿಸಿದ ದಾಖಲೆ ಸೂರ್ಯಕುಮಾರ್ ಯಾದವ್ ಪಾಲಾಗಿದೆ. ಹೈದರಾಬಾದ್ ವಿರುದ್ಧ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕ ಸಿಡಿಸಿ ಈ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪರ 2 ಶತಕ ಬಾರಿಸಿದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟುವಲ್ಲಿ ಸೂರ್ಯಕುಮಾರ್ ಯಾದವ್ ಯಶಸ್ವಿಯಾಗಿದ್ದಾರೆ. ಸೂರ್ಯ ಐಪಿಎಲ್ 2023 ರಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಐಪಿಎಲ್ 2024 ರಲ್ಲಿ ಹೈದರಾಬಾದ್ ಶತಕ ಸಿಡಿಸಿದ್ದಾರೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತೀ ಹೆಚ್ಚು ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಕೂಡ ಸೂರ್ಯನ ಪಾಲಿಗೆ ಬಂದಿದೆ. ಈ ಪಟ್ಟಿಯಲ್ಲಿ 5 ಶತಕ ಬಾರಿಸಿರುವ ಗ್ಲೆನ್ ಮ್ಯಾಕ್ಸ್ವೆಲ್ ಅಗ್ರಸ್ಥಾನದಲ್ಲಿದ್ದಾರೆ.
ಭಾರತದ ಪರ ಟಿ20 ಇತಿಹಾಸದಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿಯೂ ಸೂರ್ಯಕುಮಾರ್ ಯಾದವ್ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಕೊಹ್ಲಿ, ರೋಹಿತ್ ನಂತರದ ಸ್ಥಾನವನ್ನು ಸೂರ್ಯ ಪಡೆದಿದ್ದಾರೆ. ಐಪಿಎಲ್ ನಲ್ಲಿ 3500ಕ್ಕೂ ಅಧಿಕ ರನ್ ಕಲೆ ಹಾಕಿದ ಸಾಧನೆಯನ್ನು ಸೂರ್ಯ ಮಾಡಿದ್ದಾರೆ.