ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬೆಳವಣಿಗೆಗಳ ನಡುವೆಯೇ ಸಚಿವ ಸತೀಶ್ ಜಾರ್ಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ತೀರ್ಮಾನದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ ಅವರು, “ರಾಜಕೀಯದಲ್ಲಿ ಇವೆಲ್ಲಾ ಸಹಜ ಬೆಳವಣಿಗೆಗಳು” ಎಂದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯಾವಾಗಲಾದರೂ ಒಂದು ದಿನ ಸ್ಥಾನದಿಂದ ಇಳಿಯಲೇಬೇಕಿತ್ತು. ಈಗ ಸಿದ್ದರಾಮಯ್ಯ ಅವರ ಜಾಗಕ್ಕೆ ಡಿ ಕೆ ಶಿವಕುಮಾರ್ ಬರುತ್ತಿದ್ದಾರೆ. ಇದು ಪಕ್ಷದ ನಿರ್ಧಾರ” ಎಂದು ಹೇಳಿದರು.

ಸಿದ್ದರಾಮಯ್ಯ ಅವರು 2028ರಲ್ಲೂ ಕಾಂಗ್ರೆಸ್ ಅನ್ನು ಗೆಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ ಸತೀಶ್ ಜಾರಕಿಹೊಳಿ, “ಅವರು ರಾಜ್ಯಕ್ಕೆ ಅತ್ಯಂತ ಮುಖ್ಯ ನಾಯಕ. ಹೊಸ ಸರ್ಕಾರ ಬಂದರೂ ಅವರ ಅನುಭವ ಮತ್ತು ನಾಯಕತ್ವವನ್ನು ಪಕ್ಷ ಬಳಸಿಕೊಳ್ಳುತ್ತದೆ” ಎಂದರು.ಸಿದ್ದರಾಮಯ್ಯ ವಿರುದ್ಧ ಸಹಿ ಸಂಗ್ರಹಿಸಲಾಗಿದೆ ಎಂಬ ಸುದ್ದಿಗಳನ್ನು ತಳ್ಳಿಹಾಕಿದ ಅವರು, “ಯಾವುದೇ ಸಹಿ ಸಂಗ್ರಹ ಆಗಿಲ್ಲ. ಅದೆಲ್ಲ ಸುಳ್ಳು ಸುದ್ದಿ” ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಬದಲಾವಣೆ ಹಿಂದೆ ಪೂರ್ವ ಒಪ್ಪಂದವಿತ್ತು ಎಂಬ ಮಾತನ್ನು ಪರೋಕ್ಷವಾಗಿ ಒಪ್ಪಿಕೊಂಡ ಸತೀಶ್ ಜಾರಕಿಹೊಳಿ, “ಮೂರು ವರ್ಷಗಳ ಒಪ್ಪಂದದಂತೆ ಈಗ ನಿರ್ಧಾರ ಆಗಿದೆ. ದೆಹಲಿಯಲ್ಲೇ ಚರ್ಚೆ ಮುಗಿದಿದೆ” ಎಂದು ಹೇಳಿದರು.
“ಶಿಮ್ಲಾ, ತಾಷ್ಕೆಂಟ್ ಒಪ್ಪಂದದಂತೆ ರಾಜಕೀಯದಲ್ಲೂ ಕೆಲವು ನಿರ್ಧಾರಗಳು ಇರುತ್ತವೆ” ಎಂದು ವ್ಯಂಗ್ಯಮಿಶ್ರಿತವಾಗಿ ಪ್ರತಿಕ್ರಿಯಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತೂ ಚರ್ಚೆ ನಡೆದಿರುವುದನ್ನು ಒಪ್ಪಿಕೊಂಡ ಅವರು, “ದೆಹಲಿ ಮಟ್ಟದಲ್ಲಿ ಈ ವಿಚಾರಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ” ಎಂದರು.ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಡಿಸಿಎಂ ಮಾಡಿದರೆ ಅನುಕೂಲ ಆಗಬಹುದು, ಆಗದೇ ಇರಬಹುದು. ಅದು ಸಂಪೂರ್ಣವಾಗಿ ವರಿಷ್ಠರ ನಿರ್ಧಾರ” ಎಂದರು.ಸರ್ಕಾರ ರಚನೆಯ ಬಳಿಕ ಮುಖ್ಯಮಂತ್ರಿ ಅವರಿಗೆ ಸಚಿವ ಸಂಪುಟ ರಚನೆ ಹಾಗೂ ತಂಡ ಆಯ್ಕೆ ಮಾಡುವ ಸ್ವಾತಂತ್ರ್ಯ ಇರುತ್ತದೆ ಎಂದು ಅವರು ಹೇಳಿದರು.
ಯತೀಂದ್ರ ಸಿದ್ದರಾಮಯ್ಯ ಹೇಳಿದಂತೆ ಅಹಿಂದ ರಾಜಕೀಯವನ್ನು ಮುಂದುವರಿಸಬೇಕಿದೆ ಎಂದು ಹೇಳಿದ ಸತೀಶ್ ಜಾರಕಿಹೊಳಿ, “ಅಹಿಂದದಲ್ಲಿ ಸಿದ್ದರಾಮಯ್ಯ ಅವರ ಸ್ಥಾನ ತುಂಬುವ ಪ್ರಯತ್ನ ಖಂಡಿತ ಮಾಡುತ್ತೇನೆ” ಎಂದರು.“ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಒಗ್ಗಟ್ಟಾಗಿ ಇದ್ದಾರೆ. ಪಕ್ಷದ ಒಳಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ” ಎಂದು ಸ್ಪಷ್ಟಪಡಿಸಿದ ಅವರು, “ಎಲ್ಲರೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಹಲವರು ಸಾಲಿನಲ್ಲಿ ಇರುತ್ತಾರೆ. ಆದರೆ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು” ಎಂದರು.
ಇದೇ ವೇಳೆ ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆ ಇದ್ದು, ಸೋಮವಾರದಿಂದ ರಾಜ್ಯ ಕಾಂಗ್ರೆಸ್ನಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.






