ಬೆಂಗಳೂರು : 2025-26ನೇ ಸಾಲಿನಲ್ಲಿ ಬಮೂಲ್ 3400 ಕೋಟಿ ರೂ. ವಹಿವಾಟು ಮಾಡಿದ್ದು, 14.50 ಕೋಟಿ ನಷ್ಟದಲ್ಲಿದ್ದ ಸಂಸ್ಥೆಯು ಈ ವರ್ಷ 60 ಕೋಟಿ ಲಾಭ ಕಂಡಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ಬೋನಸ್ ಆಗಿ ಏಪ್ರಿಲ್ 1, 2025ರಿಂದ ಮಾರ್ಚ್ 31, 2026ರ ಅವಧಿಯಲ್ಲಿ ಸಂಸ್ಥೆಗೆ ಹಾಲು ನೀಡಿರುವ 1,27,644 ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ 1 ರೂ. ಹೆಚ್ಚುವರಿ ಹಣವನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಘೋಷಿಸಿದ್ದಾರೆ.

ನಗರದ ಡೈರಿ ವೃತ್ತದಲ್ಲಿರುವ ಬಮೂಲ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಸಾಲಿನಲ್ಲಿ ನಮ್ಮ ಒಕ್ಕೂದಿಂದ 2900 ಕೋಟಿ ವಹಿವಾಟು ಮಾಡಿದ್ದು, ಈ ವರ್ಷ ಮಾರ್ಚ್ 31ರ ವೇಳೆಗೆ 3,400 ಕೋಟಿಯಷ್ಟು ವಹಿವಾಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನಮ್ಮಲ್ಲಿ ಆಡಳಿತಾತ್ಮಕ ವೆಚ್ಚ ಹೆಚ್ಚಾಗಿದೆ. ನಮ್ಮಲ್ಲಿ 880 ಖಾಯಂ ಸಿಬ್ಬಂದಿ, 1800 ಗುತ್ತಿಗೆ ಕಾರ್ಮಿಕರು ಇದ್ದಾರೆ. ತಿಂಗಳಿಗೆ 15-16 ಕೋಟಿ ರೂ. ಸಿಬ್ಬಂದಿ ವೆಚ್ಚಕ್ಕೆ ಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತಾತ್ಮಕವಾಗಿ, ಮಾರುಕಟ್ಟೆ ವಿಚಾರದಲ್ಲಿ ಸಾಕಷ್ಟು ಬದಲಾವಣೆ, ಸುಧಾರಣೆ ಮಾಡುವ ಜವಾಬ್ದಾರಿ ನಮ್ಮ ಆಡಳಿತ ಮಂಡಳಿಗೆ ಇದೆ ಎಂದು ತಿಳಿಸಿದ್ದಾರೆ.
ನಾನು ಬಮೂಲ್ ಅಧ್ಯಕ್ಷನಾದ ಬಳಿಕ ಬದಲಾವಣೆ ಮಾಡುವ ನಿರೀಕ್ಷೆ ರೈತರು, ಕಾರ್ಮಿಕರಲ್ಲಿದೆ. ನಾನು ಏನು ಮಾಡಿದ್ದೇನೋ ಗೊತ್ತಿಲ್ಲ, ಆದರೆ ನನ್ನ ಮೇಲೆ ನಿರೀಕ್ಷೆಯಂತೂ ಇದೆ. ಅದಕ್ಕೆ ತಕ್ಕಂತೆ ಕೆಲಸ ಮಾಡುವಾಗ ನಿರ್ದೇಶಕರು, ಸಿಬ್ಬಂದಿ ಸಹಕಾರ ಬೇಕಾಗುತ್ತದೆ. ಇವರ ಸಹಕಾರದಿಂದ ಒಂದು ಹಂತಕ್ಕೆ ಬಂದಿದ್ದು, ಈ ವರ್ಷ 500 ಕೋಟಿ ರೂ.ನಷ್ಟು ವಹಿವಾಟು ಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
1800 ಗುತ್ತಿಗೆ ಕಾರ್ಮಿಕರಿಗೆ ತಲಾ 5 ಸಾವಿರ ರೂ. ಬೋನಸ್..
ಈ ಹಿಂದಿನ ಆಡಳಿತ ಮಂಡಳಿಯಲ್ಲಿ 280 ಜನರನ್ನು ಹೊಸದಾಗಿ ನೇಮಕ ಮಾಡಿಕೊಂಡಿದ್ದರು. 3 ವರ್ಷವಾಗಿದ್ದರೂ ನಮಗೆ ಖಾಯಂ ಮಾಡಿಲ್ಲ ಎಂದು ಅವರಿಂದ ಒತ್ತಡವಿದೆ. ಇದನ್ನು ಮಾಡಿದರೆ ವಾರ್ಷಿಕವಾಗಿ 1.60 ಕೋಟಿ ಹೆಚ್ಚಿನ ವೇತನ ನೀಡಬೇಕಾಗುತ್ತದೆ. ಸರ್ಕಾರದ ನಿಯಮ ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ವೇತನ ಪ್ರಮಾಣ 2% ಇರಬೇಕು. ಆದರೆ ನಮ್ಮ ಒಕ್ಕೂಟದಲ್ಲಿ ಅದು 6.5% ಇದೆ. ಇದನ್ನು ತಡೆಯಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : BREAKING: ಶಾಸಕ ಭೈರತಿ ಬಸವರಾಜ್ ಗೆ ಜಾಮೀನು!
ಹೀಗಾಗಿ ನಾವು ನಮ್ಮದೇ ಆದ ಗುರಿ ಹೊಂದಿದ್ದೇವೆ. ನಮ್ಮ ವಹಿವಾಟಿನ ಮುಂದಿನ ಗುರಿ 3,400 ಕೋಟಿಯಿಂದ 4500 ಅಥವಾ 5000 ಕೋಟಿಗೆ ಹೋಗಬೇಕು. ಆಗ ಆಡಳಿತ ವೆಚ್ಚ ಸುಧಾರಿಸಬಹುದು. ನಮ್ಮ ಸಂಸ್ಥೆ ಲಾಭ ಕಂಡಿರುವ ಹಿನ್ನೆಲೆಯಲ್ಲಿ, ನಾವು ಕಾರ್ಮಿಕರಿಗೆ ಬಾಕಿ ಇದ್ದ 4.68 ಕೋಟಿ ಡಿಎ ಅನ್ನು ನೀಡಲು ತೀರ್ಮಾನಿಸಿದ್ದೇವೆ. 3 ವರ್ಷದಿಂದ ಖಾಯಂ ಆಗದ ಸಿಬ್ಬಂದಿಗಳನ್ನು ಖಾಯಂ ಮಾಡಿದ್ದೇವೆ. ನಮಗೆ ಶಕ್ತಿ ನೀಡುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ತಲಾ 5 ಸಾವಿರ ಬೋನಸ್ ನೀಡಲು ತೀರ್ಮಾನಿಸಿದ್ದೇವೆ ಎಂದು ಡಿಕೆ ಸುರೇಶ್ ಮಾಹಿತಿ ನೀಡಿದ್ದಾರೆ.
2300 ಪ್ರಾಥಮಿಕ ಹಾಲು ಒಕ್ಕೂಟಗಳಿಗೆ ನಿರ್ವಹಣೆಗೆ ಪ್ರತಿ ಲೀಟರ್ ಗೆ 1.40 ರೂ. ನೀಡುತ್ತಿದ್ದು, ಈ ಬಾರಿ ನಮ್ಮ ನಿರ್ದೇಶದ ಮನವಿ ಮೇರೆಗೆ ಪ್ರತಿ ಸಂಘಗಳಿಗೆ 15 ಸಾವಿರದಂತೆ 3.45 ಕೋಟಿ ರೂ.ಗಳನ್ನು ನೀಡಲಾಗುವುದು. ನಮ್ಮಲ್ಲಿ 1,27,644 ಹಾಲು ಉತ್ಪಾದಕರಿದ್ದು, ಅವರು ಈ ವರ್ಷ 59,39,78,492 ಲೀಟರ್ ಹಾಲು ನೀಡಿದ್ದಾರೆ. ನಮ್ಮ ಒಕ್ಕೂಟದ ಇತಿಹಾಸದಲ್ಲಿ ಮೊದಲನ ಬಾರಿಗೆ ನಾವು ಅವರಿಗೆ ಪ್ರತಿ ಲೀಟರ್ ಗೆ 1 ರೂ. ನಂತೆ 59,39,78,492 ರೂ. ಅನ್ನು ಹೆಚ್ಚುವರಿಯಾಗಿ ನೀಡಲು ತೀರ್ಮಾನಿಸಿದ್ದೇವೆ. ಯುಗಾದಿ ಹಬ್ಬದ ಕೊಡುಗೆಯಾಗಿ ನಮ್ಮ ಆಡಳಿತ ಮಂಡಳಿ ಈ ನಿರ್ಧಾರ ಮಾಡಿದ್ದು, ಮಾ.31 ಅಥವಾ ಏ.10ರ ಒಳಗಾಗಿ ಅವರ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ.

“ಕ್ಷೀರ ಕ್ಷೇತ್ರದಲ್ಲಿ ರೈತರು ಬೆಳಗ್ಗೆ ಹಾಗೂ ರಾತ್ರಿ ಎದ್ದು ಸೂಕ್ಷ್ಮ ಪ್ರಾಣಿ ಹಸುವನ್ನು ಸಾಕಬೇಕು. ಈ ರೈತರಿಗೆ ಶಕ್ತಿ ನೀಡಬೇಕು ಎಂಬುದು ನಮ್ಮ ಉದ್ದೇಶ. ಇಂದು ಕೆಎಂಎಫ್ ಹಾಗೂ ನಂದಿನಿ ಮೂಲಕ ಸಾಕಷ್ಟು ಬೆಳವಣಿಗೆ ಕಂಡಿದ್ದು, ಈಗ ಖಾಸಗಿ ಸಂಸ್ತೆಗಳು ನಗರ ಪ್ರದೇಶಗಳಲ್ಲಿ ಲಗ್ಗೆ ಹಾಕಿವೆ. ಇಂದು ಸಾಮಾಜಿಕ ಜಾಲತಾಣ ಕೂಡ ಪ್ರಭಾವ ಬೀರಿದೆ. ಗ್ರಾಹಕರಿಗೆ ಗುಣಮಟ್ಟದ ಹಾಲು, ಉತ್ಪನ್ನ ನೀಡುವುದು, ಕಾರ್ಮಿಕರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಬೆಂಗಳೂರು ಹಾಲು ಒಕ್ಕೂಟ ಕೆಲಸ ಮಾಡುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.
ನಾನು 3 ಬಾರಿ ಸಂಸದನಾಗಿದ್ದರೂ ನಮ್ಮ ನಾಯಕರ ಒತ್ತಾಯದ ಮೇರೆಗೆ ನನಗೆ ಈ ಹಾಲು ಒಕ್ಕೂಟದ ಜವಾಬ್ದಾರಿ ನೀಡಿದ್ದಾರೆ. ಕಳೆದ 8 ತಿಂಗಳಿನಿಂದ ಈ ಒಕ್ಕೂಡದ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಪ್ರತಿನಿತ್ಯ ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದ್ದು, ನಮ್ಮ ಒಕ್ಕೂಟದಿಂದ 16-18 ಲಕ್ಷ ಲೀಟರ್ ಹಾಲು ಶೇಖರಿಸುತ್ತಿದ್ದೇವೆ. ನಮಗೂ ಬೇರೆ ಖಾಸಗಿಯವರಿಗೆ ಇರುವ ವ್ಯತ್ಯಾಸ ಎಂದರೆ ನಾವು 24 ತಾಸಿನೊಳಗೆ ಗ್ರಾಹಕರ ಮನೆ ಬಾಗಿಲಿಗೆ ಹಾಲು ಪೂರೈಸುವ ಕೆಲಸ ಮಾಡುತ್ತಿದ್ದೇವೆ. ಬೇರೆಯವರು ಬ್ರ್ಯಾಂಡಿಗ್ ಮಾಡಿಕೊಂಡು ಮಾರುಕಟ್ಟೆ ಮಾಡುತ್ತಿದ್ದಾರೆ ಎಂದಿದ್ದಾರೆ.
“ಬೆಂಗಳೂರು ಹಾಲು ಒಕ್ಕೂಟದಲ್ಲಿ 24 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಗುರಿ ಹೊಂದಿದ್ದು, ನಮ್ಮ ಮುಂದೆ ಮಾರುಕಟ್ಟೆ ಸವಾಲು ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿ ಲೀಟರ್ ಗೆ 4 ರೂ. ಹೆಚ್ಚಳ ಮಾಡಿದೆ. ಆದರೂ ಬೇರೆ ಹಾಲುಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಹಾಲು ಎಂದರೆ ಅದು ನಂದಿನಿ ಮಾತ್ರ. ಇದು ಹೆಮ್ಮೆಯ ವಿಚಾರ. ನಾವು ಸರ್ಕಾರದ ಆದೇಶಕ್ಕೆ ಕಟ್ಟುಬಿದ್ದು ಈ ಬೆಲೆ ಏರಿಕೆ ಹಣವನ್ನು ಗ್ರಾಹಕರಿಂದ ಪಡೆದು ರೈತರಿಗೆ ನೀಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.
ನಾವು 16-18 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಿದರೂ ಹಾಲು ಮಾರಾಟ ಮಾಡುತ್ತಿರುವುದು 10 ಲಕ್ಷ ಲೀಟರ್ ಮಾತ್ರ. ಕೆಎಂಎಫ್ ನಲ್ಲಿ 1.05 ಕೋಟಿ ಲೀಟರ್ ಹಾಲು ಸಂಗ್ರಹಿಸಿದರೂ ಮಾರಾಟ ಮಾಡುವುದು 48-50 ಲಕ್ಷ ಲೀಟರ್ ಮಾತ್ರ. ಉಳಿದ ಹಾಲನ್ನು ವಿವಿಧ ಪದಾರ್ಥಗಳ ಮೂಲಕ ಮಾರುತ್ತಿದ್ದೇವೆ. ಹಾಲಿನ ಬೆಲೆಯಲ್ಲಿ ಹೆಚ್ಚಳವಾದ 4 ರೂ. ಮೊಸರು, ತುಪ್ಪ, ಬೆಣ್ಣೆ ಹಾಗೂ ಇತರೆ ಉತ್ಪನ್ನಗಳ ಬೆಲೆ ಏರಿಕೆ ಆಗಿಲ್ಲ. ಹೀಗಾಗಿ ರಾಜ್ಯದಲ್ಲಿರುವ ಎಲ್ಲಾ ಹಾಲು ಒಕ್ಕೂಟ ಸಂಸ್ಥೆ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಯಿತು ಎಂದು ತಿಳಿಸಿದ್ದಾರೆ.
ನಮ್ಮ ಹೊಸ ಆಡಳಿತ ಮಂಡಳಿ ಬಂದ ಬಳಿಕ ನಮ್ಮ ಸಂಸ್ಥೆ 14.50 ಕೋಟಿ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಲು ಉತ್ಪಾದನೆ ಹೆಚ್ಚಾದಾಗ 2 ರೂ. ದರ ಕಡಿಮೆ ಮಾಡಿ ರೈತರಿಂದ ಸಂಗ್ರಹ ಮಾಡುವುದು ಒಖ್ಕೂಟಗಳ ವಾಡಿಕೆ. ಆದರೆ ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ 14 ಕೋಟಿ ನಷ್ಟದಲ್ಲಿದ್ದರೂ ರೈತರಿಗೆ ದರ ಕಡಿಮೆ ಮಾಡಲಿಲ್ಲ. ನಮ್ಮ ಮುಂದೆ ಸಾಕಷ್ಟು ಸವಾಲುಗಳಿತ್ತು ಎಂದು ಹೇಳಿದ್ದಾರೆ.






