ಭಾರತದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಅಫ್ಘಾನಿಸ್ತಾನ ಸೋವಿಯತ್ ಕಾಲದಿಂದಲೂ ಭಾರತದ ಹಿತೈಷಿ. ಬುಡಕಟ್ಟು ಜನಾಂಗಗಳೇ ಅಧಿಕ ಪ್ರಮಾಣದಲ್ಲಿರುವ ಅಫ್ಘಾನಿಸ್ತಾನದಲ್ಲಿ ಭಾರತದ ಬಗ್ಗೆ ಅಸಹನೆ ಪ್ರಕಟವಾದದ್ದು ತಾಲಿಬಾನ್ ಕಾಲದಲ್ಲಿ ಮಾತ್ರ. ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ರೀತಿಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅದು ಮೊದಲಿನಂತೆ ಭಾರತ ಸ್ನೇಹಿಯಾಗಿಯೇ ಇತ್ತು. ಇದೇ ಕಾರಣಕ್ಕೆ ಅಫ್ಘಾನಿಸ್ತಾನದ ಹಲವು ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾರತ ಸಹಕಾರ ನೀಡಿದ್ದು. ಒಂದು ಕಾಲದಲ್ಲಿ ಭಾರತದ ಮಿತ್ರ ರಾಷ್ಟ್ರವಾಗಿದ್ದ, ಇನ್ನೊಮ್ಮೆ ಭಾರತದ ಬಗ್ಗೆ ಅಸಹನೆ ಬೆಳೆಸಿಕೊಂಡ ಮತ್ತು ಸದ್ಯಕ್ಕೆ ಭಾರತದ ಬಗ್ಗೆ ಯಾವ ಗಟ್ಟಿನಿಲುವನ್ನೂ ತೆಗೆದುಕೊಳ್ಳದ ಅಫ್ಘಾನಿಸ್ತಾನದ ಸಾಂಸ್ಕೃತಿಕ ಚಹರೆ ಭಾರತದ ಪಾಲಿಗೆ ಅಷ್ಟೇನೂ ಪರಿಚಿತವಲ್ಲ. ಈ ಕಾರಣಕ್ಕೇ ಅಲ್ಲಿನ ಅಲ್ಪಸಂಖ್ಯಾತ ಸಿಖ್ಖರ, ಹಿಂದುಗಳ, ಬೌದ್ಧರ ಬಗ್ಗೆ ಮಾತನಾಡುವಾಗ ಭಾರತದ ಹೊಸ ಪೀಳಿಗೆಗೆ ಆಶ್ಚರ್ಯವಾಗುವುದು. ಆದರೆ ಹದಿನೈದನೇ ಶತಮಾನದಲ್ಲೇ ಅಫ್ಘಾನಿನ ನೆಲದಲ್ಲಿ ಸಿಖ್ಖರು ವಾಸಿಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ.
ಈ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿರುವ ಮಾನವಶಾಸ್ತ್ರಜ್ಞ ರಾಬರ್ಟ್ ಬಲ್ಲಾರ್ಡ್ ತಮ್ಮ 2011 ರ ಕೃತಿಯಲ್ಲಿ, ಅಫ್ಘಾನಿಸ್ತಾನದಲ್ಲಿ ಸಿಖ್ ಧರ್ಮವು ಹದಿನೈದನೇ ಶತಮಾನದಲ್ಲೇ ಇತ್ತು ಎಂದು ದಾಖಲಿಸಿದ್ದಾರೆ. ಇತಿಹಾಸಜ್ಞ ಇಂದ್ರಜಿತ್ ಸಿಂಗ್ ಸಹ ತಮ್ಮ ಕೃತಿಯಲ್ಲಿ 16 ನೇ ಶತಮಾನದ ಆರಂಭದಲ್ಲೇ ಗುರು ನಾನಕ್ ಅವರು ಸಿಖ್ ಧರ್ಮದ ಸಂದೇಶವನ್ನು ಹರಡಲು ಕಾಬೂಲ್‌ಗೆ ಪ್ರಯಾಣ ಬೆಳೆಸಿದ್ದರು ಎಂದು ಬರೆದಿದ್ದಾರೆ.
‘ಹಿಂದುಸ್ತಾನದ ಸ್ವಂತ ಮಾರುಕಟ್ಟೆ’ ಎಂದು ಕಾಬೂಲನ್ನು ಉದ್ದೇಶಿಸಿ ತನ್ನ ಆತ್ಮಚರಿತ್ರೆಯಾದ ‘ಬಾಬರ್‌ನಾಮ’ದಲ್ಲಿ ಬರೆದಿರುವ ಬಾಬರ್ ಸಹ 1504ರ ಆಸುಪಾಸಿನಲ್ಲಿ ಸಿಖ್ಖರು ಅಫ್ಘಾನಿಸ್ತಾನದ ಆಸುಪಾಸಿನಲ್ಲಿ ಬದುಕುತ್ತಿದ್ದುದನ್ನು ದಾಖಲಿಸಿದ್ದರು.
ವಾಯುವ್ಯ ಭಾರತೀಯ ಉಪಖಂಡವನ್ನು ಆಳಿದ ಸಿಖ್ ಸಾಮ್ರಾಜ್ಯದ ಮೊದಲ ರಾಜ ಮಹಾರಾಜಾ ರಂಜಿತ್ ಸಿಂಗ್ 19 ನೇ ಶತಮಾನದ ಆರಂಭದಲ್ಲಿ ತನ್ನ ರಾಜ್ಯವನ್ನು ಅಫಘಾನ್‌ವರೆಗೂ ವಿಸ್ತರಿಸಿರುವುದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ. ಆದರೆ 1849ರ ಆಂಗ್ಲೋ ಸಿಖ್ ಕದನದಲ್ಲಿ ಇಡೀ ಸಿಖ್ ಸಾಮ್ರಾಜ್ಯ ಬ್ರಿಟಿಷರ ಪಾಲಾಯಿತು. 20 ನೇ ಶತಮಾನದ ಆರಂಭದ ವರ್ಷಗಳಲ್ಲಿ ಅಫ್ಘಾನಿಸ್ತಾನಕ್ಕೆ ಆಗಮಿಸಿದ ಮತಾಂತರ ಚಟುವಟಿಕೆಗಳಿಗೆ ಪ್ರತಿಕ್ರಿಯೆಯಾಗಿ ‘ಸಿಂಗ್ ಸಭಾ ಸುಧಾರಣಾವಾದಿ’ ಚಳುವಳಿಯು ಉಪಖಂಡದಲ್ಲಿ ಹೊರಹೊಮ್ಮಿತು. ಇದರ ಭಾಗವಾಗಿ ಪ್ರಮುಖ ಸಿಖ್ ಬೋಧಕ ಅಕಾಲಿ ಕೌರ್ ಸಿಂಗ್ 1919 ರಲ್ಲಿ ಸಿಖ್ ಧರ್ಮದ ಬೋಧನೆಗಾಗಿ ಅಫ್ಘಾನಿಸ್ತಾನದ ನಂಗರಾರ್ ಪ್ರಾಂತ್ಯಕ್ಕೆ ಆಗಮಿಸಿದ್ದರು. ಅವರ ನಾಯಕತ್ವದಲ್ಲಿ ‘ಖಾಲ್ಸಾ ದಿವಾನ್’ ಅಫ್ಘಾನಿಸ್ತಾನವನ್ನು ಸ್ಥಾಪಿಸಲಾಯಿತು, ಇದು ಈ ಪ್ರದೇಶದಲ್ಲಿ ಸಿಖ್ ಮೌಲ್ಯಗಳ ಪ್ರಸರಣ ಮತ್ತು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಅಫ್ಘಾನಿಸ್ತಾನದಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದ ಸಿಖ್ಖರು ಮೊದಲ ಬಾರಿ ದೇಶ ತೊರೆಯುವಂತಹ ಪರಿಸ್ಥಿತಿ ಸೃಷ್ಟಿಯಾದದ್ದು ಅಮಿರ್ ಅಬ್ದುರ್ರಹ್ಮಾನ್ ಖಾನ್ ಆಳ್ವಿಕೆಯ ಸಮಯದಲ್ಲಿ . ಆಗ ಅಫಘಾನ್ ಸಮಾಜದ ಮೂಲಭೂತವಾದಿಗಳು ಸ್ಥಳೀಯ ಹಿಂದೂಗಳು ಮತ್ತು ಸಿಖ್ಖರನ್ನು ತೊಂದರೆಗೊಳಪಡಿಸಿದರು. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಸಿಖ್ಖರು ಬೇರೆ ದಾರಿಯಿಲ್ಲದೆ ತಮ್ಮ ತಾಯ್ನಾಡನ್ನು ತೊರೆದು ಭಾರತದಲ್ಲಿ ನೆಲೆಸಿದರು ಮತ್ತು ಪಂಜಾಬಿನ ಪಟಿಯಾಲದಲ್ಲಿ ‘ಅಫ್ಘಾನ್-ಸಿಖ್’ ಸಮುದಾಯವನ್ನು ರೂಪಿಸಿಕೊಂಡರು.
20 ನೇ ಶತಮಾನದ ಉತ್ತರಾರ್ಧದಲ್ಲಿ ಅಫ್ಘಾನಿಸ್ತಾನದಲ್ಲಿ ಹುಟ್ಟಿಕೊಂಡ ಮುಜಾಹಿದ್ದೀನ್ ಮತ್ತು ಅವರ ಅನ್ಯ ಧರ್ಮ ದ್ವೇಷವು ಅಫಘಾನ್ ಸಿಖ್ಖರ ಎರಡನೆಯ ಮತ್ತು ವ್ಯಾಪಕ ವಲಸೆಯನ್ನು ಮತ್ತಷ್ಟು ಹೆಚ್ಚಿಸಿತು.
1992 ರಲ್ಲಿ, ಮುಜಾಹಿದ್ದೀನ್ ಕಾಬೂಲ್ ಅನ್ನು ವಶಪಡಿಸಿಕೊಂಡಾಗ, ಈ ಭಯೋತ್ಪಾದಕ ಗುಂಪು ನಗರದ ಅತಿದೊಡ್ಡ ಗುರುದ್ವಾರವಾದ ‘ಕಾರ್ತೆ ಪರ್ವನ್’ ಅನ್ನು ಅಪವಿತ್ರಗೊಳಿಸಿತು. ಇದರಿಂದ ಅಲ್ಲಿದ್ದ ಸಿಖ್ಖರು ಭೀತಿಗೊಳಗಾದರು ಮತ್ತು ಅದೇ ವರ್ಷ ಸುಮಾರು 65,000 ಹಿಂದುಗಳು ಮತ್ತು ಸಿಖ್ಖರು ಅಫ್ಘಾನಿಸ್ತಾನದಿಂದ ಪಲಾಯನ ಮಾಡಿ ಭಾರತಕ್ಕೆ ಬಂದರು ಎಂದು ಸಿಂಗ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
1996 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಈ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಂಡಿರುವ ವಿದ್ವಾಂಸ ರಾಬರ್ಟ್ ಬಲ್ಲಾರ್ಡ್ “ಅದುವರೆಗೂ ಅಫ್ಘಾನ್ ಇಸ್ಲಾಂನ ಲಕ್ಷಣವಾಗಿದ್ದ ಸಹಿಷ್ಣುತೆಯು ಮಾಯವಾಗಿ ಜಿಹಾದಿ ಮತ್ತು ತಾಲಿಬಾನರಿಂದ ಉತ್ತೇಜಿಸಲ್ಪಟ್ಟ ಮೂಲಭೂತವಾದಿ ಧೋರಣೆಗಳು ಹೆಚ್ಚಿನ ಪ್ರಾಮುಖ್ಯತೆ ಗಳಿಸಿಕೊಂಡವು” ಎಂದು ಹೇಳುತ್ತಾರೆ. ಯುಎನ್‌ಎಚ್‌ಸಿಆರ್ ಪತ್ರಿಕೆಯ ಪ್ರಕಾರ 2005 ರ ಹೊತ್ತಿಗೆ, ಸುಮಾರು 3,700 ವ್ಯಕ್ತಿಗಳು ಹಿಂದು ಮತ್ತು ಸಿಖ್ ಸಮುದಾಯಗಳಿಗೆ ಸೇರಿದವರು ಅಫ್ಘಾನಿಸ್ತಾನದಲ್ಲಿ ವಾಸವಾಗಿದ್ದರು.
ಯುದ್ಧ ಪೀಡಿತ ದೇಶದಲ್ಲಿ ಸಿಖ್ ಅಲ್ಪಸಂಖ್ಯಾತರ ಗಾತ್ರವು ಕಳೆದ ಕೆಲವು ದಶಕಗಳಲ್ಲಿ ತೀವ್ರವಾಗಿ ಕಡಿಮೆಯಾಗಿದೆ. ಅಲ್ ಜಜೀರಾ ವರದಿಯ ಪ್ರಕಾರ 2020 ರಲ್ಲಿ ಕೇವಲ 700 ಸಿಖ್ಖರು ಮಾತ್ರ ಅಫ್ಘಾನಿಸ್ತಾನದಲ್ಲಿ ಉಳಿದಿದ್ದರು.
ಭಯೋತ್ಪಾದಕ ಸಂಘಟನೆ ಐಎಸ್ ನಡೆಸಿದ 2018 ರ ಜಲಾಲಾಬಾದ್ ದಾಳಿಯಲ್ಲಿ 19 ಸಿಖ್ಖರು ಸಾವನ್ನಪ್ಪಿದ್ದರೆ, 2020 ರಲ್ಲಿ ಹರ್ ರಾಯ್ ಸಾಹಿಬ್ ಗುರುದ್ವಾರದ ಮೇಲೆ ನಡೆದ ಬಾಂಬ್ ಸ್ಫೋಟವು 25 ಸಮುದಾಯದವರ ಸಾವಿಗೆ ಕಾರಣವಾಯಿತು ಎಂದು ಬಿಬಿಸಿಯೂ ವರದಿ ಮಾಡಿದೆ.
ಅಫ್ಘಾನಿನಲ್ಲಿ ತಾಲಿಬಾನ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಅಫ್ಘಾನ್ ಸಿಖ್ಖರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಅವರೆಲ್ಲರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ. ಈವರೆಗೆ 77 ಸಿಖ್ಖರನ್ನು ಸ್ಥಳಾಂತರಿಸಲಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಆಗಸ್ಟ್ 24 ರಂದು ಹೇಳಿದ್ದಾರೆ. ಮತ್ತೊಮ್ಮೆ ಸಿಖ್ಖರ ಪವಿತ್ರ ಗ್ರಂಥವನ್ನು ತಾಲಿಬಾನಿಗರು ವಶಪಡಿಸಿಕೊಳ್ಳುವ ಸಾಧ್ಯತೆ ಇದ್ದು ಗುರು ಗ್ರಂಥ ಸಾಹಿಬ್‌ನ 3 ಪವಿತ್ರ ಸರೂಪ್‌ಗಳನ್ನು (ಭೌತಿಕ ಪ್ರತಿಗಳು) ಭಾರತಕ್ಕೆ ಸಾಗಿಸಲಾಗಿದೆ.
ತಾಲಿಬಾನ್ ಅಫ್ಘಾನಿಸ್ತಾನದ ಸಿಖ್ಖರು ಮತ್ತು ಹಿಂದುಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಅಭಯ ನೀಡಿದೆ. ಆದರೆ ಅವರು ತಮ್ಮ ಮಾತಿಗೆ ಬದ್ಧರಾಗಿರುತ್ತಾರೆ ಎನ್ನುವುದರ ಬಗ್ಗೆ ಯಾವುದೇ ನಂಬಿಕೆ ಇಲ್ಲದ ಅಲ್ಲಿನ ಅಲ್ಪಸಂಖ್ಯಾತ ಸಮುದಾಯ ಮತ್ತೆ ಶುರುವಿಂದಲೇ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಭಾರತ, ಕೆನಡಾ, ಅಮೆರಿಕ ಮತ್ತಿತರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.