ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡೆನ್ ಅವರು ಇತ್ತೀಚೆಗೆ ಆಯೋಜಿಸಿದ್ದ ಶೃಂಗಸಭೆಯಲ್ಲಿ ಮಾತನಾಡಲು ಆಹ್ವಾನಿಸಲಾದ 12 ನಾಯಕರಲ್ಲಿ ನರೇಂದ್ರ ಮೋದಿ ಸಹ ಒಬ್ಬರು. ಆ ಸಭೆಯಲ್ಲಿ ಮೋದಿ ಒಬ್ಬ ಪ್ರಬಲ ಪ್ರಜಾಪ್ರಭುತ್ವವಾದಿಯಾಗಿ, ಪ್ರಜಾಪ್ರಭುತ್ವದ ಅಗತ್ಯವನ್ನು ಒತ್ತಿಹೇಳಿದರು. ಎಲ್ಲಾ ಪ್ರಜಾಪ್ರಭುತ್ವ ಸರ್ಕಾರಗಳು ತಮ್ಮ ಸಂವಿಧಾನಗಳ ಮೌಲ್ಯಗಳನ್ನು ಅನುಸರಿಸಬೇಕು, ಪ್ರಜಾಪ್ರಭುತ್ವದ ಚೈತನ್ಯ ಮತ್ತು ‘ಕಾನೂನಿನ ನಿಯಮ’ ದ ಅನುಸರಣೆಯು ಭಾರತೀಯರಲ್ಲಿ ಹೇಗೆ ಬೇರೂರಿದೆ ಮತ್ತು ಅದು ಭಾರತದ “ನಾಗರಿಕತೆಯ ನೀತಿ” ಯಲ್ಲಿ ಹೇಗೆ ಅಡಗಿದೆ ಎಂಬುದನ್ನು ಹೆಮ್ಮೆಯಿಂದ ಪ್ರತಿಪಾದಿಸಿದರು.
ಆದರೆ, ಕಳೆದ ಏಳು ವರ್ಷಗಳಲ್ಲಿ ಮೋದಿಯವರು ತಮ್ಮ ರಾಜಕೀಯ ವಿರೋಧಿಗಳನ್ನು ಎಷ್ಟು ಕಟ್ಟುನಿಟ್ಟಾಗಿ ನಡೆಸಿಕೊಂಡಿದ್ದಾರೆಂದರೆ ಅವರಿಗೆ ಇಂತಹ ಶೃಂಗಸಭೆಯಲ್ಲಿ ಮಾತನಾಡಲು ಅವಕಾಶವೇ ಸಿಗಬಾರದಿತ್ತು. ಎನ್ಡಿಟಿವಿಯ ಒಂದು ತನಿಖಾ ವರದಿಯ ಪ್ರಕಾರ ಅವರ ಆಡಳಿತದ ಆರಂಭದಿಂದಲೂ, ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳ ಸದಸ್ಯರು, ಆಡಳಿತವನ್ನು ಟೀಕಿಸುವ ನಾಗರಿಕ ಹಕ್ಕುಗಳ ಕಾರ್ಯಕರ್ತರು ಮತ್ತು ಕಾನೂನು ಸಮುದಾಯದ ಕಾರ್ಪರ್ಗಳ ವಿರುದ್ಧ ಸರ್ಕಾರಿ ಸಂಸ್ಥೆಗಳು ಮತ್ತು ಅಧಿಕಾರಶಾಹಿ ಸುಮಾರು 570 ಪ್ರಕರಣಗಳನ್ನು ದಾಖಲಿಸಿವೆ.
ಅಲ್ಲದೆ ಕಳೆದ ಏಳು ವರ್ಷಗಳಲ್ಲಿ ವಿಚಿತ್ರ ಪದ್ಧತಿಯೊಂದು ಜಾರಿಗೆ ಬಂದಿದ್ದು ಇದರ ಪ್ರಕಾರ ಅಪರಾಧಿಗಳೆಂದು ಪರಿಗಣಿಸಲ್ಪಟ್ಟ, ಜಾತಿ ಹಾಗೂ ರಾಜಕೀಯ ಪ್ರಭಾವಗಳಿರುವ ರಾಜಕಾರಣಿಗಳು ಬಿಜೆಪಿ ಸೇರಿದ ಕೂಡಲೇ ಅವರ ಎಲ್ಲಾ ಅಪರಾಧಗಳು ಮನ್ನಿಸಲ್ಪಡುತ್ತಿವೆ. ಇದು ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಿಂದೆಂದೂ ನಡೆಯದಂತಹ ವಿದ್ಯಮಾನವಾಗಿದೆ.
ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಆಗಲಿ ಅಥವಾ ಬೇರೆ ಯಾವುದೇ ರಾಷ್ಟ್ರದ ಅಧ್ಯಕ್ಷ, ಪ್ರಧಾನ ಮಂತ್ರಿಗಳೇ ಆಗಿರಲಿ ಆಯಾಯ ದೇಶದ ಪತ್ರಕರ್ತರಿಂದ ಪ್ರಶ್ನೆಗೊಳಗಾಗುತ್ತಾರೆ. ಆದರೆ ‘ಪ್ರಜಾಪ್ರಭುತ್ವದ ಸ್ಪೂರ್ತಿ’ಯ ಬಗ್ಗೆ ಮಾತನಾಡುವ ನರೇಂದ್ರ ಮೋದಿ ಮಾತ್ರ ಕಳೆದ ಏಳು ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ. ಅಲ್ಲದೆ ಹೆಚ್ಚಿನ ಮಾಧ್ಯಮಗಳು ಸರ್ಕಾರದ, ಮೋದಿಯವರ ಪರವಾಗಿಯೇ ಇರುವಂತೆ ನೋಡಿಕೊಳ್ಳಲಾಗುತ್ತಿದೆ.
ಅಂತೆಯೇ, ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಪ್ರಶ್ನೆಗೊಳಗಾಗಬೇಕಾದ, ವಿರೋಧಿ ನಾಯಕರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಪ್ರಧಾನಿಯವರು ಅಂತಹ ಸಂದರ್ಭಗಳಲ್ಲಿ ಸದನಕ್ಕೆ ಗೈರುಹಾಜರಾದದ್ದೇ ಹೆಚ್ಚು. ವಿಶ್ವದ ಯಾವುದೇ ರಾಷ್ಟ್ರದ ಪ್ರಜಾಪ್ರಭುತ್ವದ ಆರೋಗ್ಯವು ಆ ದೇಶದ ಸಂಸತ್ತಿನಲ್ಲಿ ನಡೆಯುವ ಚರ್ಚೆಗಳ ಮೇಲೆ ಅವಲಂಬಿತವಾಗಿದೆ. ಆದರೆ ನಮ್ಮ ದೇಶದ ಸಂಸತ್ತಿನಲ್ಲಿ ಕಳೆದ ಏಳು ವರ್ಷಗಳಲ್ಲಿ ಯಾವ ಚರ್ಚೆಗೂ ಅವಕಾಶ ನೀಡದೆ ಪಾಸ್ ಮಾಡಿದ ಕಾಯ್ದೆಗಳೇ ಹೆಚ್ಚು.

ಪ್ರಜಾಪ್ರಭುತ್ವದ ಉನ್ನತ ಆದರ್ಶಗಳ ಬಗ್ಗೆ ಮಾತನಾಡುವ ಮೋದಿಯವರ ಸಂಪುಟದ ಸಹೋದ್ಯೋಗಿಗಳೇ ಅದರ ಆಶಯವನ್ನು ಧಿಕ್ಕರಸಿ ನಡೆದಾಗ ಪ್ರಶ್ನಿಸಿದವರಲ್ಲ ಮೋದಿ. ರಾಜ್ಯ ಸಚಿವರಾದ ಅಮಿತ್ ಮಿಶ್ರಾ ಮಗನ ಪ್ರಕರಣ ಇದಕ್ಕೊಂದು ತಾಜಾ ಉದಾಹರಣೆ. ಸಂವಿಧಾನಾತ್ಮಕವಾಗಿ ದೊರೆತಿರುವ ಅವಕಾಶದ ಪ್ರಕಾರವೇ ಸರ್ಕಾರದ ವಿರುದ್ಧ ಧರಣಿ ಕೂತ ರೈತರ ಮೇಲೆ ಅಮಾನುಷವಾಗಿ ಕಾರು ಹತ್ತಿಸಿ ಕೊಂದ ಅಮಿತ್ ಮಿಶ್ರಾ ಬಗ್ಗೆ ಒಂದೇ ಒಂದು ಮಾತೂ ಆಡಿದವರಲ್ಲ ನಮ್ಮ ಪ್ರಧಾನಿಗಳು! ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಾತನಾಡುವವರು ಈ ಘಟನೆ ನಡೆದಾಗ ನಿರಾತಂಕ ತನಿಖೆಗೆ ಅನುಕೂಲವಾಗುವಂತೆ ಸಂಪುಟದಿಂದ ಅಮಿತ್ ಅವರನ್ನು ಮೊದಲು ಅಮಾನತು ಮಾಡಬೇಕಿತ್ತು. ಆದರೆ ಪ್ರಧಾನಿ ಆ ಬಗ್ಗೆ ಯೋಚಿಸಲೂ ಇಲ್ಲ ಅನ್ನುವುದು ಒಂದು ದೊಡ್ಡ ದುರಂತ.
ಇನ್ನೊಂದು ಪ್ರಕರಣದಲ್ಲಿ ಸ್ವಾಯತ್ತ, ಸಾಂವಿಧಾನಿಕ ಪ್ರಾಧಿಕಾರವಾದ ಭಾರತದ ಚುನಾವಣಾ ಆಯೋಗಕ್ಕೆ “ಸಾಮಾನ್ಯ ಮತದಾರರ ಪಟ್ಟಿಗಳು’ ವಿಷಯದ ಮೇಲೆ ಸಭೆ ಮಾಡಲು ಯೋಜಿಸಿದ್ದು ಆಯೋಗದ ಸದಸ್ಯರು ಹಾಜರಾಗುವುದನ್ನು ‘ನಿರೀಕ್ಷಿಸಲಾಗಿದೆ’ ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿದ್ದರು. ಸುಪ್ರೀಂ ಕೋರ್ಟು 1995ರಲ್ಲೇ ಭಾರತದ ಚುನಾವಣಾ ಪ್ರಕ್ರಿಯೆಗಳ ಸ್ವಾತಂತ್ರ್ಯ ಮತ್ತು ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಚುನಾವಣಾ ಆಯೋಗವು ಸರ್ಕಾರದ ಇತರ ಶಾಖೆಗಳಿಂದ “ಇನ್ಸುಲೇಟೆಡ್” ಆಗಿ ಉಳಿಯಬೇಕು ಎಂದಿತ್ತು. ಆದರೆ ಪ್ರಧಾನ ಕಾರ್ಯದರ್ಶಿಗಳ ಪತ್ರ ಓದಿದರೆ ಚುನಾವಣಾ ಆಯೋಗವೂ ಸರ್ಕಾರದ ಭಾಗವೇ ಆಗಿದೆಯಾ ಎನ್ನುವ ಭಾವ ಮೂಡುತ್ತದೆ.
ಇವಿಷ್ಟೂ ಸಾಲದೆಂಬಂತೆ ಮೊನ್ನೆ ಮೊನ್ನೆ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ನಲ್ಲಿ ಹಿಂದುತ್ವ ಪ್ರತಿಪಾದಕರು ಭಾರತವು ಹಿಂದು ರಾಷ್ಟ್ರವಾಗಬೇಕಾದ ಅಗತ್ಯದ ಬಗ್ಗೆ ಮಾತನಾಡಿದ್ದಾರೆ. ಕೆಲವರು ಕೊಲ್ಲುವ ಬಗ್ಗೆ ಮಾತನಾಡುತ್ತಾರೆ, ಇನ್ನು ಬಹಿಷ್ಕಾರಗಳ ಬಗ್ಗೆ ಮಾತನಾಡುತ್ತಾರೆ. ಎರಡು ದಿನಗಳ ಹಿಂದೆ ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಭಾರತದ ಮುಸ್ಲಿಮರನ್ನಷ್ಟೇ ಅಲ್ಲ, ಪಾಕಿಸ್ತಾನದ ಮುಸ್ಲಿಮರನ್ನೂ ಮರುಮತಾಂತರ ಮಾಡಬೇಕು ಎಂದು ಹೇಳಿ ಸುದ್ದಿಯಾಗಿದ್ದರು. ಸ್ವತಃ ಆರ್ಎಸ್ಎಸ್ ಸಹ ಎಲ್ಲಾ ಭಾರತೀಯರು ಹೆಮ್ಮೆಯ ಹಿಂದೂಗಳಾಗುವ ಅಗತ್ಯದ ಬಗ್ಗೆ ಮಾತನಾಡುತ್ತದೆ.
ಒಟ್ಟಿನಲ್ಲಿ ಈ ಎಲ್ಲಾ ಘಟನೆಗಳು ಭಾರತದ ಮಹಾನ್ ಪ್ರಜಾಸತ್ತಾತ್ಮಕ ನಾಗರೀಕ ಮೌಲ್ಯಗಳ ಬಗ್ಗೆಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಶ್ನೆ ಮೂಡಿಸುತ್ತದೆ. ಭಾರತ ಹಿಂದಿನಿಂದಲೂ ಪ್ರಜಾಸತ್ತಾತ್ಮಕವಾಗಿಯೇ ನಡೆದುಕೊಂಡು ಬಂದಿದೆ ಮತ್ತು ಐತಿಹಾಸಿಕವಾಗಿಯೂ ನಾವು ಇಡೀ ಪ್ರಪಂಚಕ್ಕೆ ಪ್ರಜಾಪ್ರಭುತ್ವದ ಬಗ್ಗೆ ತಿಳಿಸಿಕೊಟ್ಟವರು ಎಂದು ಪ್ರಶ್ನೆಗಳನ್ನೇ ಇಷ್ಟಪಡದ ನರೇಂದ್ರ ಮೋದಿಯವರು ಅಂತರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಹೆಮ್ಮೆಯಿಂದ ಹೇಳುತ್ತಾರೆ ಎಂಬುವುದು ದೇಶದ ಮಾತ್ರ ಅಲ್ಲ ಸ್ವತಃ ಅವರ ಇಮೇಜನ್ನೂ ನಗೆಪಾಟಲೀಗೀಡು ಮಾಡುತ್ತದೆ ಎಂಬುವುದನ್ನು ಅವರು ಮತ್ತು ಹಿಂಬಾಲಕರು ಅರ್ಥ ಮಾಡಿಕೊಳ್ಳಬೇಕು.