ವಿಜಯಪುರ ಜಿಲ್ಲೆಯಲ್ಲಿ ಲೈನ್ ಮ್ಯಾನ್ ಗಳು, ಕರೆಂಟ್ ಬಿಲ್ ಕಲೆಕ್ಟ್ ಮಾಡುವ ಸಿಬ್ಬಂದಿ ಹಾಗೂ ಜನರ ನಡುವೆ ಜಗಳಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಕರೆಂಟ್ ಬಿಲ್ ಕಟ್ಟದಿದ್ದಾಗ ಕೆಇಬಿ ಸಿಬ್ಬಂದಿ ಬಂದು ವಿದ್ಯುತ್ ವೈರ್ ಕಟ್ ಮಾಡಲು ಹೋದಾಗ ಹಾಗೂ ಮನೆ ಮನೆಗೆ ಹೋಗಿ ಕರೆಂಟ್ ಬಿಲ್ ಕೇಳಬೇಕಾದ್ರೆ ಈ ಜಗಳಗಳು ನಡೆಯುತ್ತಿವೆ.
ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಲೈನ್ ಮ್ಯಾನ್ ಗಳು ಹಾಗೂ ಜನರು ಪರಸ್ಪರ ಹೊಡೆದಾಡುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದರಿಂದಾಗಿ ಲೈನ್ ಮ್ಯಾನ್ ಗಳು ಹಾಗೂ ಬಿಲ್ ಕಲೆಕ್ಟ್ ಮಾಡುವವರು ಆತಂಕಗೊಂಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ಪ್ರಕರಣಗಳು ನಡೆದಿದ್ದು, ಕರೆಂಟ್ ಬಿಲ್ ಕಟ್ಟದ್ದಿದ್ದರೂ ಮನೆಗೆ ಹೋಗಿ ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಡಿಸೆಂಬರ್ 4 ರಂದು ಕರೆಂಟ್ ಬಿಲ್ ಕೇಳಲು ಹೋಗಿದ್ದ ಅಧಿಕಾರಿಗೆ ಮನೆ ಮಾಲೀಕನೋರ್ವ ಮಚ್ಚು ತೋರಿಸಿ ಹಲ್ಲೆಗೆ ಯತ್ನಿಸಿದ್ದಾನೆ ಎನ್ನುವ ಆರೋಪ ವಿಜಯಪುರ ತಾಲ್ಲೂಕಿನ ಜುಮನಾಳ ಗ್ರಾಮದಲ್ಲಿ ಕೇಳಿಬಂದಿದೆ.
ವಿಜಯಪುರ ಕೆಇಬಿ ಎಇಇ ಎ.ಎಸ್. ದೊಡ್ಡಿಮನಿಗೆ ಮನೆ ಮಾಲೀಕ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ, ಕಳೆದ ಹಲವು ತಿಂಗಳಿಂದ ಮನೆಯ ಮಾಲೀಕ ಕರೆಂಟ್ ಬಿಲ್ ಕಟ್ಟಿಲ್ಲ. ಈ ಬಗ್ಗೆ ದೊಡ್ಡಿಮನಿಯವರು ಕರೆಂಟ್ ಬಿಲ್ ಕಟ್ಟುವಂತೆ ಗ್ರಾಹಕನ ಮನೆಗೆ ಹೋಗಿದ್ದಾರೆ. ಈ ವೇಳೆಯಲ್ಲಿ ಇಬ್ಬರು ಮಧ್ಯೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ಕಾರಣವಾಗಿದೆ. ಕೊಡಲೇ ಅಕ್ಕಪಕ್ಕದ ಮನೆಯವರು ಗಲಾಟೆ ತಣ್ಣಗೆ ಮಾಡಿದ್ದಾರೆ.
ಅದೇ ರೀತಿ ಕಳೆದ 12 ನೇ ತಾರೀಖು ಬಿಲ್ ಪಾವತಿಸುವಂತೆ ಮನೆಗೆ ತೆರಳಿದ್ದ ಲೈನ್ಮ್ಯಾನ್ ಮೇಲೆ ಗ್ರಾಹಕನಿಂದ ಹಲ್ಲೆಗೈದು, ಬಡಿಗೆ ತೋರಿಸಿ ಧಮ್ಕಿ ಹಾಕಿದ ಘಟನೆ ವಿಜಯಪುರದ ಗ್ಯಾಂಗ್ಬಾವಡಿಯಲ್ಲಿ ನಡೆದಿದೆ. ಬಿಲ್ ಕೇಳಿದ ಬಾಳಪ್ಪ ಮಲ್ಲಪ್ಪ ಬೊಮ್ಮಣಗಿ ಹಲ್ಲೆಗೊಳಗಾದ ಲೈನ್ಮ್ಯಾನ್ ಆಗಿದ್ದು, ಗ್ಯಾಂಗ್ಬಾವಡಿಯ ನೆಹರು ನಗರ ನಿವಾಸಿ ಮಹ್ಮದ್ರಫೀಕ್ ಬುಡನ್ಸಾಬ ಬಡೇಕಾರ ಲೈನ್ಮ್ಯಾನ್ ಮೇಲೆ ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ. ಬಾಕಿ ಉಳಿಸಿಕೊಂಡಿರುವ 2 ಸಾವಿರಕ್ಕೂ ಅಧಿಕ ವಿದ್ಯುತ್ ಬಿಲ್ ಪಾವತಿಸುವಂತೆ ಲೈನ್ಮ್ಯಾನ್ ಬಾಳಪ್ಪ ಕೇಳಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಹಲ್ಲೆ ಮಾಡಲಾಗಿದೆ.

ಈ ಎರಡು ಘಟನೆ ಬಳಿಕ ಜಿಲ್ಲೆಯಲ್ಲಿ ಲೈನ್ ಮ್ಯಾನ್ ಗಳು ಹಾಗೂ ಕರೆಂಟ್ ಬಿಲ್ ಸಂಗ್ರಹ ಮಾಡುವವರು ಆತಂಕಗೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಬಿಲ್ ಕಲೆಕ್ಟ್ ಮಾಡಿಕೊಂಡು ಬರುವಂತೆ ಒತ್ತಡ ಹಾಕುತ್ತಾರೆ. ಆದರೆ ಗ್ರಾಹಕರ ಮನೆಗೆ ಹೋಗಿ ಬಿಲ್ ಕಲೆಕ್ಟ್ ಮಾಡಲು ಮುಂದಾದರೆ ಹಲ್ಲೆ ಮಾಡುತ್ತಾರೆ. ಹೀಗಾಗಿ ನಮಗೆ ರಕ್ಷಣೆ ನೀಡಬೇಕು ಹಾಗೂ ಹಲ್ಲೆ ಮಾಡಿದವರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಹಿರಿಯ ಅಧಿಕಾರಿಗಳು ನಮ್ಮ ಸಹಾಯಕ್ಕೆ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಹಕರಿಂದ ಹಲ್ಲೆಗೆ ಕಾರಣವೇನು?
ಸಮಾನ್ಯವಾಗಿ ಕರೆಂಟ್ ಬಿಲ್ ತಿಂಗಳ ಕೊನೆಯಲ್ಲಿ ಬರುತ್ತದೆ. ಅದನ್ನು ಕಟ್ಟುಲು ಒಂದು ವಾರದಿಂದ ಹತ್ತು ದಿನಗಳವರೆಗೆ ಅವಕಾಶ ಇರುತ್ತದೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ಅಥವಾ ಆರ್ಥಿಕ ಸಮಸ್ಯೆಯಿಂದ ಕೆಲವರಿಗೆ ಆ ಸಮಯದಲ್ಲಿ ಬಿಲ್ ಕಟ್ಟಲು ಆಗುವುದಿಲ್ಲ. ಇದರಿಂದಾಗಿ ಬಿಲ್ ಬಾಕಿ ಉಳಿಯುವುದು ಸಾಮಾನ್ಯ. ಇದನ್ನ್ನು ಕಲೆಕ್ಟ್ ಮಾಡಲು ಬರುವ ಲೈನ್ ಮ್ಯಾನ್ ಹಾಗೂ ಬಿಲ್ ಕಲೆಕ್ಟರ್ ಸಂಪರ್ಕ ಕಡಿತ ಮಾಡುತ್ತಾರೆ. ಇದು ಇಬ್ಬರ ನಡುವೆ ಗಲಾಟೆಗೆ ಕಾರಣವಾಗುತ್ತಿದೆ. ಏಕಾಏಕಿ ಬಂದು ಸಂಪರ್ಕ ಕಡಿತ ಮಾಡಿದರೆ ಹೇಗೆ ಎಂದು ಗ್ರಾಹಕರು ಪ್ರಶ್ನಿಸಿದರೆ, ನಮ್ಮ ಅಧಿಕಾರಿಗಳು ಸೂಚಿಸಿದ್ದಾರೆ ಹಾಗಾಗಿ ನಾವು ಕಡಿತ ಮಾಡಲೇಬೇಕು ಎಂದು ಸಿಬ್ಬಂದಿ ವಾದ ಮಾಡುತ್ತಿದ್ದು, ಇದು ಗಲಾಟೆಗೆ ಕಾರಣವಾಗುತ್ತಿದೆ.
ರಾಜಧಾನಿ ಹಾಗೂ ಮೆಟ್ರೋ ನಗರದಲ್ಲಿ ಆನಲೈನ್ ಮೂಲಕ ಜನರು ಬಿಲ್ ಕಟ್ಟುತ್ತಾರೆ. ಆದರೆ ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲದ ಕಾರಣ ಜನ ಈಗಲೂ ಹೆಸ್ಕಾಂ ಕಚೇರಿಗೆ ಬಂದು ಬಿಲ್ ಕಟ್ಟುತ್ತಾರೆ. ಆದರೆ ಬಿಲ್ ಪಡೆಯುವ ಕೌಂಟರ್ ಗಳು ಜಿಲ್ಲೆಯಲ್ಲಿ ಕಡಿಮೆ ಇರುವ ಕಾರಣ ಜನ ಸಂದಣಿ ಉಂಟಾಗಿ ಕೆಲವರು ಬಿಲ್ ತುಂಬುವ ಸಮಯ ಮೀರಿರುತ್ತಾರೆ. ಇದನ್ನೂ ಲೆಕ್ಕಿಸದೆ ಸಿಬ್ಬಂದಿ ಬಂದ್ ಏಕಾಏಕಿ ಸಂಪರ್ಕ ಕಡಿತ ಮಾಡುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಬಡವರು ಹಾಗೂ ಮಧ್ಯಮ ವರ್ಗದವರ ಮಾತ್ರ ಇವರ ಟಾರ್ಗೆಟ್
ಕರೆಂಟ್ ಬಿಲ್ ಕಟ್ಟದ ಕಾರಣ ಸಾಮಾನ್ಯ ಜನರ ಮನೆಗೆ ಏಕಾಏಕಿ ಬಂದು ಕರೆಂಟ್ ಕಟ್ ಮಾಡುವ ಸಿಬ್ಬಂದಿ, ಶ್ರೀಮಂತರು ಹಾಗೂ ಪ್ರಭಾವಿಗಳ ಮನೆಗೆ ಯಾಕೆ ಹೋಗೋದಿಲ್ಲ ಅನ್ನೋದು ಜನ ಸಾಮಾನ್ಯರು ಪ್ರಶ್ನೆ. ನಾವು ಒಂದು ತಿಂಗಳು ಬಿಲ್ ಕಟ್ಟದಿದ್ದರೆ ಮುಂದಿನ ತಿಂಗಳು ಅದಕ್ಕೆ ಬಡ್ಡಿ ಸಮೇತ ದುಡ್ಡು ಕಟ್ಟುತ್ತೇವೆ. ಆದರೆ ಪ್ರಭಾವಿಗಳು ಬಿಲ್ ಕಟ್ಟದಿದ್ದರೂ ಹೆಸ್ಕಾಂ ಸಿಬ್ಬಂದಿ ಅವರ ಮನೆಗೆ ಹೋಗಿ ಪ್ರಶ್ನೆ ಮಾಡೋದಿಲ್ಲ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಬಿಲ್ ಕೇಳಲು ಬರುವ ಸಿಬ್ಬಂದಿಗಳು ವರ್ತನೆ ಸಹ ಜನರ ಸಿಟ್ಟಿಗೆ ಕಾರಣವಾಗುತ್ತಿದೆ.