ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ತಗ್ಗಿಸಿ ಜನರಿಗೆ ಉಪಕಾರ ಮಾಡಿದ್ದಾಗಿ ಹೇಳಿಕೊಳ್ಳುತ್ತಿರುವ ಮೋದಿ ಸರ್ಕಾರವು ಈಗ ಬಟ್ಟೆಗಳು, ಸಿದ್ದ ಉಡುಪುಗಳು, ಪಾದರಕ್ಷೆಗಳು ಸೇರಿದಂತೆ ಜನಸಾಮಾನ್ಯರು ಬಳಸುವ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು(ಜಿಎಸ್ಟಿ) ಶೇ.5 ರಿಂದ 12ಕ್ಕೆ ಏರಿಕೆ ಮಾಡಿದೆ. ಪರಿಷ್ಕೃತ ದರಗಳು ಜನವರಿ 2022 ರಿಂದ ಜಾರಿಗೆ ಬರಲಿವೆ. ಪರೋಕ್ಷ ತೆರಿಗೆ ಮತ್ತು ಸುಂಕಗಳ ಕೇಂದ್ರೀಯ ಮಂಡಳಿಯು ತೆರಿಗೆ ದರ ಏರಿಕೆ ಅಧಿಸೂಚನೆಯನ್ನು ನವೆಂಬರ್ 18ರಂದು ಹೊರಡಿಸಿದೆ.
ಭಾರತೀಯ ಜವಳಿ ಉತ್ಪಾದಕರ ಸಂಘದ(ಸಿಎಂಎಐ) ಅಂದಾಜಿನಂತೆ ತೆರಿಗೆ ದರ ಹೆಚ್ಚಳದ ಹಿನ್ನೆಲೆಯಲ್ಲಿ ಶೇ.15 ರಿಂದ 20ರಷ್ಟು ದರ ಏರಿಕೆ ಆಗುವ ನಿರೀಕ್ಷೆ ಇದೆ. ಬಟ್ಟೆಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಶೇ.5ರಂದು 12ಕ್ಕೆ ಏರಿಕೆ ಮಾಡಲಾಗಿದೆ. ಸಿದ್ದ ಉಡುಪುಗಳ ಮೇಲಿನ ತೆರಿಗೆ ದರವನ್ನು ಎಲ್ಲಾ ಮೌಲ್ಯದ ಸರಕುಗಳಿಗೂ ಶೇ.5 ರಿಂದ 12ಕ್ಕೆ ಏರಿಸಲಾಗಿದೆ. ಇದುವರೆಗೆ 1000 ರುಪಾಯಿ ಮಾರಾಟ ದರ ಮೇಲ್ಪಟ್ಟ ವಸ್ತುಗಳಿಗೆ ಮಾತ್ರ ಶೇ.12ರಷ್ಟು ತೆರಿಗೆ ಇತ್ತು. 1000 ರುಪಾಯಿ ಮಾರಾಟ ದರಕ್ಕಿಂತ ಕಡಮೆ ಇದ್ದ ವಸ್ತುಗಳ ಮೇಲಿನ ತೆರಿಗೆಯು ಶೇ.5ರಷ್ಟು ಮಾತ್ರ ಇತ್ತು.
ಸಿಎಂಎಐ ಅಂದಾಜಿನ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ವಹಿವಾಟಾಗುವ ಸಿದ್ದ ಉಡುಪುಗಳ ಪೈಕಿ ಶೇ.80ರಷ್ಟು 1000 ರುಪಾಯಿಗಿಂತ ಕಡಮೆ ಮಾರುಕಟ್ಟೆ ದರ ಇರುವಂತಹವು. ಅಂದರೆ, ಕೇಂದ್ರ ಸರ್ಕಾರ ತೆರಿಗೆ ಪರಿಷ್ಕರಿಸಿರುವುದರಿಂದ ಅದರ ಪರಿಣಾಮ ನೇರವಾಗಿ ಜನಸಾಮಾನ್ಯರ ಮೇಲಾಗಲಿದೆ.

ನೇಯ್ದ ಬಟ್ಟೆಗಳು, ಸಿಂಥೆಟಿಕ್ ನೂಲು, ಪೈಲ್ ಬಟ್ಟೆಗಳು, ಹೊದಿಕೆಗಳು, ಡೇರೆಗಳು, ಮೇಜುಅಲಂಕರಣ ಬಟ್ಟೆ ಪರಿಕರಗಳು, ರಗ್ಗುಗಳು ಮತ್ತಿತರ ವಸ್ತ್ರಗಳು ಸೇರಿದಂತೆ ಎಲ್ಲಾ ಬಟ್ಟೆಗಳ ಮೇಲಿನ ತೆರಿಗೆಯನ್ನು ಶೇ.5ರಿಂದ 12ಕ್ಕೆ ಏರಿಸಲಾಗಿದೆ. ಹಾಗೆಯೇ ಪಾದರಕ್ಷೆಗಳ ಮೇಲಿನ ತೆರಿಗೆಯನ್ನು ಶೇ.5ರಿಂದ 12ಕ್ಕೆ ಏರಿಸಲಾಗಿದೆ. 1000 ರುಪಾಯಿಗಿಂತ ಕಡಮೆ ಮಾರಾಟದರ ಇದ್ದ ಪಾದರಕ್ಷೆಗಳಿಗೆ ಇದುವರೆಗೆ ಶೇ.5ರಷ್ಟು ಮಾತ್ರ ತೆರಿಗೆ ಇದೆ.
ತೆರಿಗೆದರವನ್ನು ಏರಿಸುವ ಕೇಂದ್ರ ಸರ್ಕಾರದ ಕ್ರಮದಿಂದ ನಮಗೆ ಅತೀವ ನಿರಾಶೆಯಾಗಿದೆ ಎಂದು ಭಾರತೀಯ ಜವಳಿ ಉತ್ಪಾದಕರ ಸಂಘವು ಅಸಮಾಧಾನ ವ್ಯಕ್ತಪಡಿಸಿದೆ. ಸಿಎಂಎಐ ಅಲ್ಲದೇ ಉದ್ಯಮದ ಇತರ ಸಂಘಟನೆಗಳೊಂದಿಗೆ ಸೇರಿ ಸರ್ಕಾರ ಮತ್ತು ಜಿಎಸ್ಟಿ ಮಂಡಳಿಗೆ ತೆರಿಗೆ ದರ ಪರಿಷ್ಕರಿಸದಂತೆ ಮನವಿ ಮಾಡಲಾಗಿತ್ತು. ಆದರೆ, ಸರ್ಕಾರವಾಗಲೀ, ಜಿಎಸ್ಟಿ ಮಂಡಳಿಯಾಗಲೀ ನಮ್ಮ ಮನವಿಯನ್ನು ಆಲಿಸಿಲ್ಲ ಎಂದು ಸಿಎಂಎಐ ಅಧ್ಯಕ್ಷ ರಾಜೇಶ್ ಮಸಂದ್ ಹೇಳಿದ್ದಾರೆ.
ಕಚ್ಚಾವಸ್ತುಗಳ ದರ, ಸಾಗಣೆ ಮತ್ತು ವಿತರಣೆ ದರ ಸೇರಿದಂತೆ ಎಲ್ಲಾ ವಿಧದ ಉತ್ಪಾದನಾ ವೆಚ್ಚಗಳು ಹೆಚ್ಚಿವೆ. ಈ ಕಾರಣದಿಂದಾಗಿ ತೆರಿಗೆ ಪರಿಷ್ಕರಿಸುವ ಮುಂಚಿತವಾಗಿಯೇ ಸಿದ್ದ ಉಡುಪುಗಳು ಸೇರಿದಂತೆ ವಿವಿಧ ಬಟ್ಟೆಗಳ ಮೇಲಿನ ದರಗಳು ಶೇ.15-20ರಷ್ಟು ದರ ಏರಿಕೆ ನಿರೀಕ್ಷಿಸಲಾಗಿದೆ. 1000 ರುಪಾಯಿಗಿಂತ ಕೆಳಪಟ್ಟ ದರದ ಸರಕುಗಳ ಮೇಲೂ ತೆರಿಗೆ ಹೇರುವ ನಿರ್ಧಾರದಿಂದ ಜನಸಾಮಾನ್ಯರಿಗೆ ಹೊರೆಯಾಗವುದಷ್ಟೇ ಅಲ್ಲ ಒಟ್ಟಾರೆ ಉದ್ಯಮಕ್ಕೆ ಹಿನ್ನಡೆಯಾಗಲಿದೆ ಎಂದು ಸಿಎಂಎಐ ತಿಳಿಸಿದೆ.

ಜವಳಿ ಉದ್ಯಮದಲ್ಲಿರುವ ತಿರುಗುಮುರುಗಾದ ಸುಂಕ ರಚನೆಯನ್ನು ಸರಿಪಡಿಸುವ ಉತ್ಸಾಹದಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವಾಸ್ತವವಾಗಿ ತಿರುಗುಮುರುಗು ಸುಂಕ ರಚನೆಯು ಉದ್ಯಮದ ಶೇ.15ರಷ್ಟು ಮಾತ್ರ ಇದೆ. ಇದನ್ನು ಸೂಕ್ತ ರೀತಿಯಲ್ಲಿ ಸರಿಪಡಿಸದೇ ನೇರವಾಗಿ ಶೇ.85ರಷ್ಟು ಉದ್ಯಮಕ್ಕೆ ಮಾರಕವಾಗುವ ರೀತಿಯಲ್ಲಿ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದು ಸರಿಯಾದ ಕ್ರಮವಲ್ಲ ಎಂದು ಸಿಎಂಎಐ ಹೇಳಿದೆ. ಪ್ರಾಥಮಿಕ ಹಂತದ ತೆರಿಗೆಗಳಿಗಿಂತ ಅಂತಿಮ ಸಿದ್ದ ಉತ್ಪನ್ನದ ಮೇಲಿನ ತೆರಿಗೆಗಳು ಕಡಮೆಯಾದ ತಿರುವುಮುರುವಾದ ಸುಂಕ ರಚನೆ ಉದ್ಭವಿಸುತ್ತದೆ.